ಬೆಂಗಳೂರು: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವನೆಯಿಂದ 12 ಮಕ್ಕಳ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಆರೋಗ್ಯ ಇಲಾಖೆ ಎಚ್ಚರಗೊಂಡಿದೆ. ರಾಜ್ಯದಾದ್ಯಂತ ವಿವಿಧ ಬ್ರ್ಯಾಂಡ್‌ಗಳ ಕಾಫ್ ಸಿರಪ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸುವ ಕಾರ್ಯ ಆರಂಭವಾಗಿದೆ.
ಔಷಧ ನಿಯಂತ್ರಣ ಮತ್ತು ಸರಬರಾಜು ಇಲಾಖೆ ರಾಜ್ಯದ ಫಾರ್ಮಸಿ ಹಾಗೂ ಔಷಧ ಕಂಪನಿಗಳಿಂದ ಮಾದರಿ ಕಲೆಹಾಕುತ್ತಿದ್ದು, ತಪಾಸಣೆ ವರದಿ ಬರುವವರೆಗೆ ಕಠಿಣ ನಿಗಾವಹಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ರಾಜ್ಯ ಆರೋಗ್ಯ ಇಲಾಖೆ ಸಂಯುಕ್ತವಾಗಿ ಮಾರ್ಗಸೂಚಿ ಹೊರಡಿಸಿದ್ದು, ವೈದ್ಯರ ಸಲಹೆ ಇಲ್ಲದೇ ಮಕ್ಕಳಿಗೆ ಯಾವುದೇ ಕಾಫ್ ಸಿರಪ್ ನೀಡಬಾರದು ಎಂದು ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ.

ಪೋಷಕರಿಗೆ ಎಚ್ಚರಿಕೆ ಮತ್ತು ಸಲಹೆ
ಆರೋಗ್ಯ ಇಲಾಖೆ ಪೋಷಕರಿಗೆ ಎಚ್ಚರಿಕೆ ನೀಡಿದ್ದು,ಲ ವೈದ್ಯರ ಸಲಹೆ ಇಲ್ಲದೇ ಯಾವುದೇ ಕಾಫ್ ಸಿರಪ್‌ಗಳನ್ನು ಮಕ್ಕಳಿಗೆ ನೀಡಬಾರದು. ಸಾಮಾನ್ಯ ಕೆಮ್ಮು ಅಥವಾ ಜ್ವರದ ಸಂದರ್ಭದಲ್ಲೂ ಸ್ವಯಂ ಔಷಧೋಪಚಾರದಿಂದ ದೂರವಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇವಲ ವೈದ್ಯರ ಪ್ರಿಸ್ಕ್ರಿಪ್ಷನ್ ಮೇರೆಗೆ ಮಾತ್ರ ಔಷಧಿ ನೀಡುವುದು ಸುರಕ್ಷಿತ ಎಂದು ಇಲಾಖೆ ಮನವಿ ಮಾಡಿದೆ. ಔಷಧಿಗಳ ಪ್ಯಾಕ್ ದಿನಾಂಕ, ಕಂಪನಿ ವಿವರ ಹಾಗೂ ಲಾಟ್ ನಂಬರ್ ಪರಿಶೀಲಿಸುವ ಅಭ್ಯಾಸ ಪೋಷಕರಲ್ಲಿ ಇರಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಸದ್ಯ ರಾಜ್ಯದಲ್ಲಿ ‘ಕೋಲ್ಡ್ರಿಫ್’ ಸಿರಪ್ ಸರಬರಾಜು ನಿಲ್ಲಿಸಲಾಗಿದೆ. ತಮಿಳುನಾಡಿನಲ್ಲಿ ಮಾತ್ರ ಈ ಸಿರಪ್ ಪೂರೈಕೆ ಮುಂದುವರಿದಿದ್ದು, ಇತರ ಕಂಪನಿಗಳ ಉತ್ಪನ್ನಗಳ ಮೇಲೂ ಕಣ್ಣಿಟ್ಟಿದೆ. ಪೋಷಕರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಔಷಧಿ ಬಳಸಬೇಕು ಎಂದು ಅಧಿಕಾರಿಗಳು ವಿನಂತಿಸಿದ್ದಾರೆ.