ದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರು ಸೋಲಿನ ಕಾರಣಗಳ ಕುರಿತು ಪರಾಮರ್ಶೆ ನಡೆಸುತ್ತಿದ್ದಾರೆ. ಬಿಹಾರ ಫಲಿತಾಂಶದ ನಂತರ ರಾಜ್ಯದಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದರೂ, ಈಗಾಗಲೇ ಅಂತಹ ಯಾವುದೇ ರಾಜಕೀಯ ಬೆಳವಣಿಗೆಗಳ ಸೂಚನೆ ಕಾಣಿಸಿಲ್ಲ. ಬದಲಿಗೆ, ಕರ್ನಾಟಕದಲ್ಲಿ ಸಚಿವ ಸಂಪುಟ ಪುನರ್‌ರಚನೆ ಮಾಡಲು ಹೈಕಮಾಂಡ್ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಬಿಹಾರ ಚುನಾವಣೆ ಸಂದರ್ಭದಲ್ಲಿ ನಿಗದಿತ ಸಮಯ ಸಿಕ್ಕಿರಲಿಲ್ಲದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ರಾಹುಲ್ ಗಾಂಧಿಯನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಆದರೆ ದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಇಂದು ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಕುರಿತಂತೆ ಚರ್ಚೆ ನಡೆಸಿದ್ದಾರೆ. ಸಂಪುಟ ಪುನರ್‌ರಚನೆ ಪ್ರಸ್ತಾವನೆಗೆ ರಾಹುಲ್ ಗಾಂಧಿ ಹಸಿರು ನಿಶಾನೆ ತೋರಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಸೋಮವಾರ ಮತ್ತೆ ಭೇಟಿ ಮಾಡಿ ಸಂಪುಟ ಬದಲಾವಣೆ ಕುರಿತ ಅಂತಿಮ ಚರ್ಚೆ ನಡೆಸಲು ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ 8 ರಿಂದ 12 ಹೊಸ ಸಚಿವರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ. 15 ರಿಂದ 17 ಮಂದಿ ಹಾಲಿ ಸಚಿವರಿಗೆ ಸ್ಥಾನ ಕಳೆದುಕೊಳ್ಳುವ ಶಾಕ್ ಎದುರಾಗಬಹುದು ಎಂದು ಪಕ್ಷದ ಒಳವಲಯ ಹೇಳಿದೆ. ಜಾತಿ ಸಮೀಕರಣದ ಆಧಾರದ ಮೇಲೆ ಸಂಪುಟ ಪುನರ್‌ರಚನೆ ಮಾಡುವ ಸಾಧ್ಯತೆಯೂ ಇದೆ. ಈಡಿಗ ಸಮುದಾಯದ ಸಚಿವ ಮಧು ಬಂಗಾರಪ್ಪ ಸ್ಥಾನ ಕಳೆದುಕೊಳ್ಳಲಿರುವ ಸಾಧ್ಯತೆ ಇದ್ದು, ಅದೇ ಸಮುದಾಯದ ಬಿ.ಕೆ. ಹರಿಪ್ರಸಾದ್ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಲಾಗಬಹುದು ಎಂದು ಊಹಿಸಲಾಗಿದೆ. ಲಿಂಗಾಯತ ಸಮುದಾಯದ ಶಿವಾನಂದ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಶರಣ್ ಪ್ರಕಾಶ್ ಪಾಟೀಲ್ ಮತ್ತು ಶರಣಬಸಪ್ಪ ದರ್ಶನಾಪುರರನ್ನು ಸಂಪುಟದಿಂದ ಕೈಬಿಡುವ ಚರ್ಚೆಯೂ ಜೋರಾಗಿದೆ.
ಸಂಪುಟ ಸೇರುವ ಯತ್ನದಲ್ಲಿ ಸಚಿವಾಕಾಂಕ್ಷಿಗಳ ಒತ್ತಡ ಹೆಚ್ಚುತ್ತಿದ್ದು, ಸಂಪುಟ ಕಾದಿರುವವರ ಪಟ್ಟಿಯು ದೊಡ್ಡದಾಗಿದೆ. ಬೆಳೂರು ಗೋಪಾಲಕೃಷ್ಣ, ಬಿ.ಕೆ. ಹರಿಪ್ರಸಾದ್, ಎನ್‌ಎ ಹ್ಯಾರಿಸ್, ಸಲೀಂ ಅಹಮದ್, ಆರ್.ವಿ. ದೇಶಪಾಂಡೆ, ನಾಗೇಂದ್ರ, ಬಿ.ಕೆ. ಸಂಗಮೇಶ್, ನರೇಂದ್ರ ಸ್ವಾಮಿ, ಶರತ್ ಬಚ್ಚೇಗೌಡ, ಎಂ. ಕೃಷ್ಣಪ್ಪ, ಮಾಗಡಿ ಬಾಲಕೃಷ್ಣ, ಲಕ್ಷ್ಮಣ ಸವದಿ, ಎಸ್. ಪೊನ್ನಣ್ಣ, ರಿಜ್ವಾನ್ ಅರ್ಷದ್, ಶಿವಲಿಂಗೇಗೌಡ, ರೂಪಕಲಾ ಶಶಿಧರ್, ಮಾಲೂರು ನಂಜೇಗೌಡ ಸೇರಿದಂತೆ ಹಲವರು ಸಚಿವ ಸ್ಥಾನಕ್ಕಾಗಿ ತಮ್ಮ ಲಾಬಿ ಬಲಪಡಿಸಿದ್ದಾರೆ. ಒಂದೆಡೆ ಕೆಲವರು ಸಿಎಂ ಸಿದ್ದರಾಮಯ್ಯ ಬಳಿ ಒತ್ತಡ ತರುತ್ತಿದ್ದರೆ, ಇನ್ನೂ ಕೆಲವರು ಡಿಸಿಎಂ ಡಿ.ಕೆ. ಶಿವಕುಮಾರ್ ಮುಖಾಂತರ ಒತ್ತಡ ನಿರ್ಮಿಸುತ್ತಿದ್ದಾರೆ. ಹಿರಿಯ ಶಾಸಕರು ನೇರವಾಗಿ ಹೈಕಮಾಂಡ್ ಬಾಗಿಲೂ ತಟ್ಟುತ್ತಿದ್ದಾರೆ.
ಸಂಪುಟದಿಂದ ಹೊರಗುಳಿಯುವ ಭಯದಲ್ಲಿರುವ ಕೆಲ ಸಚಿವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ದೆಹಲಿಯಲ್ಲಿ ಖರ್ಗೆ ಭೇಟಿಗೆ ಧಾವಿಸಿರುವ ಮಾಹಿತಿ ದೊರಕಿದೆ. ಪೌರಾಡಳಿತ ಸಚಿವ ರಹೀಂ ಖಾನ್, ಈಶ್ವರ ಖಂಡ್ರೆ ಸೇರಿದಂತೆ ಕೆಲ ಸಚಿವರು ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನವಾಗಿ ಖರ್ಗೆ ಅವರಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಂಪುಟ ಪುನರ್‌ರಚನೆ ವರ್ಷಾಂತ್ಯ ಅಥವಾ ಸಂಕ್ರಾಂತಿ ವೇಳೆಗೆ ಅಂತಿಮವಾಗಬಹುದು ಎಂದು ಮೂಲಗಳು ಹೇಳುತ್ತಿವೆ. ಈ ಮೂಲಕ ರಾಜ್ಯ ಕಾಂಗ್ರೆಸ್ ರಾಜಕೀಯ ಚಟುವಟಿಕೆ ಸಂಪೂರ್ಣವಾಗಿ ದೆಹಲಿಗೇ ಶಿಫ್ಟ್ ಆಗಿರುವುದು ಸ್ಪಷ್ಟವಾಗಿದೆ.





