ನವದೆಹಲಿ, ನವೆಂಬರ್ 17: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ, ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಕುರಿತು ಮನವಿ ಪತ್ರ ಸಲ್ಲಿಸಿದರು. ರಾಜ್ಯಕ್ಕೆ ತುರ್ತುವಾಗಿ ಅಗತ್ಯವಿರುವ ಏಮ್ಸ್ (AIIMS) ಸ್ಥಾಪನೆ, ಕಬ್ಬು ಬೆಲೆ ಪರಿಷ್ಕರಣೆ, ಪ್ರವಾಹ ಪರಿಹಾರ ವಿತರಣೆಯ ವೇಗ ಹಾಗೂ ಪ್ರಮುಖ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವಂತೆ ಅವರು ಪ್ರಧಾನಿಯವರಿಗೆ ಮನವಿ ಮಾಡಿದರು.
ಸಿದ್ದರಾಮಯ್ಯ ಅವರು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡುವಂತೆ ಒತ್ತಾಯಿಸಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ಆರೋಗ್ಯ ಮೂಲಸೌಕರ್ಯದಲ್ಲಿ ಹಿಂದುಳಿದಿರುವುದರಿಂದ ರಾಷ್ಟ್ರೀಯ ಮಟ್ಟದ ರೆಫರೆಲ್ ವೈದ್ಯಕೀಯ ಕೇಂದ್ರ ಅತ್ಯವಶ್ಯಕವಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ವಿವರವಾದ ಯೋಜನಾ ವರದಿ ಸಲ್ಲಿಸಿರುವುದನ್ನೂ ಮನವಿ ಪತ್ರದಲ್ಲಿ ಸ್ಮರಿಸಲಾಗಿದೆ.
ನೀರಾವರಿ ಯೋಜನೆಗಳ ವಿಷಯದಲ್ಲಿ ಸಮತೋಲನ ಅಣೆಕಟ್ಟು ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ 2023–24ರಲ್ಲಿ ಘೋಷಿಸಿದ ₹5,300 ಕೋಟಿ ಬಿಡುಗಡೆ, ಜೊತೆಗೆ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ–2 ಗೆ ಸಂಬಂಧಿಸಿದ ಗೆಜೆಟ್ ಅಧಿಸೂಚನೆ ದಶಕದಿಂದ ಬಾಕಿ ಇರುವುದರಿಂದ ಅದನ್ನು ತಕ್ಷಣ ಹೊರಡಿಸಲು ಸಿಎಂ ಸಚಿವ ಸಂಪುಟದ ಮಟ್ಟದಲ್ಲಿ ಮಧ್ಯಪ್ರವೇಶ ಕೋರುತ್ತಿದ್ದಾರೆ. ಕಳಸಾ–ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ–ಧಾರವಾಡ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸಲು ಅರಣ್ಯ ಹಾಗೂ ವನ್ಯಜೀವಿ ಇಲಾಖೆಯಿಂದ ಬಾಕಿ ಇರುವ ಸಮಸ್ಯೆಗಳನ್ನು ಬೇಗನೆ ಇತ್ಯರ್ಥ ಮಾಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ 14.5 ಲಕ್ಷ ಹೆಕ್ಟೇರ್ ಕೃಷಿಭೂಮಿ ಹಾನಿಗೊಳಗಾಗಿದ್ದು, 19 ಲಕ್ಷ ರೈತರು ನಷ್ಟವನ್ನು ಅನುಭವಿಸಿದ್ದಾರೆ. ಸಾವಿರಾರು ಮನೆಗಳು, ಶಾಲೆಗಳು, ರಸ್ತೆಗಳು ಹಾನಿಯಾಗಿರುವ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ನಿಧಿಯಿಂದ ₹2,136 ಕೋಟಿ ಪರಿಹಾರವನ್ನು ರಾಜ್ಯ ಸರ್ಕಾರ ಕೋರಿದೆ. ಇದರಲ್ಲಿ ಇನ್‌ಪುಟ್ ಸಬ್ಸಿಡಿಗಾಗಿ ₹614.90 ಕೋಟಿ ಹಾಗೂ ಸಾರ್ವಜನಿಕ ಮೂಲಸೌಕರ್ಯ ಪುನರ್ ನಿರ್ಮಾಣಕ್ಕೆ ₹1,521.67 ಕೋಟಿ ಪರಿಹಾರ ಬಿಡುಗಡೆ ಮಾಡುವಂತೆ ಸಿಎಂ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಪರಿಹರಿಸಲು ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವಂತೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಪ್ರಧಾನಿಗೆ ಮನವಿ ಮಾಡಿಕೊಂಡಿದ್ದು, ರಾಜ್ಯದ ಕೃಷಿ ವಲಯಕ್ಕೆ ಇದು ಬಹುಮುಖ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





