ಬೆಂಗಳೂರು, ನ.18: ಕರ್ನಾಟಕವನ್ನು ನಾವೀನ್ಯತೆ ಹಾಗೂ ಡೀಪ್‌ಟೆಕ್ ಕ್ಷೇತ್ರಗಳ ಜಾಗತಿಕ ತಾಣವನ್ನಾಗಿಸುವ ದೊಡ್ಡ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಜಂಟಿಯಾಗಿ ಆಯೋಜಿಸಿರುವ 28ನೇ ‘ಬೆಂಗಳೂರು ಟೆಕ್ ಸಮ್ಮಿಟ್’ ಅನ್ನು ಮಂಗಳವಾರ ಉದ್ಘಾಟಿಸಿದ ಅವರು, ಸರ್ಕಾರದ ಸ್ಪಷ್ಟ ನೀತಿಗಳು, ಸುಗಮ ಅನುಮತಿಗಳು, ಕೌಶಲ್ಯವಂತ ಮಾನವ ಸಂಪನ್ಮೂಲ, ಉತ್ತಮ ಮೂಲಸೌಕರ್ಯ ಹಾಗೂ ಪೂರಕ ವಾತಾವರಣಗಳಿಂದ ಕರ್ನಾಟಕವು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಅವರ ಹೇಳಿಕೆಯ ಪ್ರಕಾರ, ಈ ವರ್ಷದ ತಂತ್ರಜ್ಞಾನ ಶೃಂಗಸಭೆಯಲ್ಲಿ ಮೂರು ಮಹತ್ವದ ನೀತಿಗಳಿಗೆ ರೂಪ ನೀಡಲಾಗಿದೆ. 2025–2030ರ ಅವಧಿಗೆ ಅನ್ವಯವಾಗುವ ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ, ಬಾಹ್ಯಾಕಾಶ ತಂತ್ರಜ್ಞಾನ ನೀತಿ, ಹಾಗೂ ಸ್ಟಾರ್ಟ್ಅಪ್ ನೀತಿಗಳನ್ನು ರಚಿಸಿರುವುದು ರಾಜ್ಯದ ತಂತ್ರಜ್ಞಾನ ಪ್ರಗತಿಯಲ್ಲೊಂದು ಐತಿಹಾಸಿಕ ಹೆಜ್ಜೆಯಾಗಿದೆ. ದತ್ತಾಂಶ ಆಧಾರಿತ ಹಾಗೂ ಭವಿಷ್ಯಮುಖಿ ತಂತ್ರಜ್ಞಾನ ಬೆಳವಣಿಗೆಗೆ ಅನುಕೂಲವಾಗುವ ಐಟಿ ನೀತಿಯಿಂದ ರಾಜ್ಯವನ್ನು ಜಾಗತಿಕ ನಾವೀನ್ಯತೆ ಮತ್ತು ಡೀಪ್‌ಟೆಕ್ ಕೇಂದ್ರವನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ. ಅದೇ ರೀತಿ, ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–30ರಿಂದ 2034ರೊಳಗೆ ಕರ್ನಾಟಕವನ್ನು ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಂಶೋಧನೆಯ ಪ್ರಮುಖ ಕೇಂದ್ರವನ್ನಾಗಿ ನಿರ್ಮಿಸುವ ದೃಷ್ಟಿಯನ್ನು ಸರ್ಕಾರ ಮುಂದಿಟ್ಟಿದೆ. ಜೊತೆಗೆ ಹೊಸ ಸ್ಟಾರ್ಟ್ಅಪ್ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ ಬಂಡವಾಳ ನೆರವು, ಮಾರುಕಟ್ಟೆ ಅವಕಾಶಗಳು, ಕೌಶಲ್ಯಾಭಿವೃದ್ಧಿ ಮತ್ತು ಮೂಲಸೌಕರ್ಯ ನಿರ್ಮಾಣದ ಮೂಲಕ 25,000 ಸ್ಟಾರ್ಟ್ಅಪ್‌ಗಳ ಸ್ಥಾಪನೆಗೆ ಸರ್ಕಾರ ಸಹಕಾರ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಸಮ್ಮಿಟ್ ಕರ್ನಾಟಕದ ತಂತ್ರಜ್ಞಾನ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಪ್ರದರ್ಶಿಸುವ ವೇದಿಕೆಯಾಗಿ ಬೆಳೆಯುತ್ತಿದ್ದು, ಕಳೆದ ಮೂರು ದಶಕಗಳಲ್ಲಿ ಬೆಂಗಳೂರಿನಲ್ಲಿ ಜರುಗುತ್ತಿರುವ ಈ ಶೃಂಗಸಭೆ ಅಂತಾರಾಷ್ಟ್ರೀಯ ನವೋದ್ಯಮ, ಸಂಶೋಧನೆ ಮತ್ತು ತಂತ್ರಜ್ಞಾನ ಸಹಭಾಗಿತ್ವಕ್ಕೆ ಬಲ ನೀಡಿರುವುದನ್ನು ಸಿಎಂ ಹೆಮ್ಮೆಯಿಂದ ಉಲ್ಲೇಖಿಸಿದರು. ಈ ಬಾರಿ “ಭವಿಷ್ಯೀಕರಣಗೊಳ್ಳಿ – ಅಜ್ಞಾತವನ್ನು ರೂಪಿಸುವುದು, ಊಹಿಸಲಾಗದುದನ್ನು ಅಳೆಯುವುದು” ಎಂಬ ಧ್ಯೇಯವಾಕ್ಯದಡಿ ನಡೆಯುತ್ತಿರುವ ಸಮ್ಮೇಳನದಲ್ಲಿ 600ಕ್ಕೂ ಹೆಚ್ಚು ಜಾಗತಿಕ ಭಾಷಣಕಾರರು, 1200ಕ್ಕೂ ಹೆಚ್ಚು ಪ್ರದರ್ಶಕರು, 60ಕ್ಕೂ ಹೆಚ್ಚು ರಾಷ್ಟ್ರಗಳ ನಿಯೋಗಗಳು ಹಾಗೂ ಸಾವಿರಾರು ಪರಿಣತರು ಭಾಗವಹಿಸುತ್ತಿದ್ದಾರೆ. ಮುಂದಿನ ದಶಕಗಳ ತಂತ್ರಜ್ಞಾನ ರೂಪುರೇಷೆಗಳನ್ನು ಚರ್ಚಿಸಿ ಜಾಗತಿಕ ಮಟ್ಟದ ಪರಿಹಾರಗಳನ್ನು ಕರ್ನಾಟಕದಿಂದಲೇ ಒದಗಿಸುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಡೀಪ್ ಸೈನ್ಸ್ ಹಾಗೂ ಸುಧಾರಿತ ಎಂಜಿನಿಯರಿಂಗ್ ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಕೃತಕ ಬುದ್ಧಿಮತ್ತೆ (AI), ಸೈಬರ್ ಭದ್ರತೆ, ದತ್ತಾಂಶ ವಿಜ್ಞಾನ, ಅನಿಮೇಶನ್ ಹಾಗೂ ರೋಬೋಟಿಕ್ಸ್ ವಲಯಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕ್ವಾಂಟಮ್ ತಂತ್ರಜ್ಞಾನಕ್ಕೆ ಕುರಿತು ಮಾರ್ಗಸೂಚಿಗಳನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎಂದು ಸಿಎಂ ಸಿದ್ದರಾಮಯ್ಯ ನೆನಪಿಸಿದರು. ‘ಬಿಯಾಂಡ್ ಬೆಂಗಳೂರು’ ಉಪಕ್ರಮದ ಮೂಲಕ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಮೊದಲಾದ ಟೈರ್–2 ನಗರಗಳಲ್ಲಿ ನವೋದ್ಯಮ ಕ್ಲಸ್ಟರ್‌ಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ.
ತಂತ್ರಜ್ಞಾನ ಬಳಕೆ ಕೇವಲ ಆರ್ಥಿಕ ಪ್ರಗತಿಗಲ್ಲ, ಅದು ಸಾಮಾಜಿಕ ಒಳಿತು, ಆರ್ಥಿಕ ನ್ಯಾಯ, ಸುಸ್ಥಿರ ಅಭಿವೃದ್ಧಿ ಮತ್ತು ಸಮಗ್ರ ಸಮೃದ್ಧಿ ನೀಡಬೇಕೆಂಬ ವಿಶ್ವಾಸವನ್ನು ಸರ್ಕಾರ ಪುನರುಚ್ಚರಿಸಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಾಗಲಿ, ಜಾಗತಿಕ ಹೂಡಿಕೆಗಳಾಗಲಿ, ಸ್ಟಾರ್ಟ್ಅಪ್ ಪರಿಸರವಿರಲಿ—ಎಲ್ಲ ಕ್ಷೇತ್ರಗಳಿಗೂ ಕರ್ನಾಟಕವೇ ಅತ್ಯುತ್ತಮ ತಾಣ ಎಂದು ಸಿಎಂ ಕರೆ ನೀಡಿದರು. ವಿಶೇಷವಾಗಿ ಏಐ, ಕ್ವಾಂಟಮ್ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ಹಾಗೂ ಹಸಿರು ತಂತ್ರಜ್ಞಾನ ವ್ಯಾಪ್ತಿಯಲ್ಲಿ ಇರುವ ಅಪಾರ ಬಂಡವಾಳ ಅವಕಾಶಗಳನ್ನು ಬಳಸಿಕೊಂಡು ಮಾನವ ಹಿತಕ್ಕಾಗಿ ಎಲ್ಲರೂ ಒಟ್ಟಾಗಿ ಕೈ ಜೋಡಿಸಬೇಕೆಂದು ಈ ಸಂಧರ್ಭದಲ್ಲಿ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡರು.





