ದಾವಣಗೆರೆ: ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗಳ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ಸಂದರ್ಭದಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, “ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಕೈಜಾರಿ ಹೋಗುವ ಭೀತಿಯಿಂದ ಮುಖ್ಯಮಂತ್ರಿಗಳಿಗೆ ನಿದ್ರೆ ಬಾರದ ಸ್ಥಿತಿ ನಿರ್ಮಾಣವಾಗಿದೆ” ಎಂದು ಟೀಕಿಸಿದರು. ರಾಜ್ಯದ ಜನಾಭಿಪ್ರಾಯ ಸ್ಪಷ್ಟವಾಗಿ ಬಿಜೆಪಿಯ ಪರ ತಿರುಗುತ್ತಿದೆ ಎಂಬುದು ಉಪಚುನಾವಣೆ ಪ್ರಚಾರದಲ್ಲಿ ಗೋಚರಿಸುತ್ತಿದೆ ಎಂದರು.

“ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಶತಸಿದ್ಧವಾಗಿದೆ. ಯಾವ ಕ್ಷೇತ್ರಕ್ಕೆ ಹೆಚ್ಚು ಗಮನ ಕೊಡಬೇಕು ಎಂಬ ಗೊಂದಲದಲ್ಲೇ ಮುಖ್ಯಮಂತ್ರಿಗಳು ಇದ್ದಾರೆ” ಎಂದು ವಿಜಯೇಂದ್ರ ಹೇಳಿದರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ‘ಹಿಂದುಳಿದವರ ನಡೆ ಬಿಜೆಪಿಯ ಕಡೆ’ ಎಂಬ ಅಭಿಯಾನ ಭರ್ಜರಿಯಾಗಿ ನಡೆಯುತ್ತಿದ್ದು, ಸರ್ವ ಸಮಾಜದ ಬೆಂಬಲ ಬಿಜೆಪಿಗೆ ಸಿಗುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸದಾಸ ಕರಿಯಪ್ಪ ಅವರಿಗೆ ಅಪಾರ ಜನಮನ್ನಣೆ ವ್ಯಕ್ತವಾಗುತ್ತಿದೆ. ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಹಾಗೂ ಪಕ್ಷದ ಪದಾಧಿಕಾರಿಗಳು ಶ್ರಮಪಟ್ಟು ಕೆಲಸ ಮಾಡುತ್ತಿರುವುದರಿಂದ ಈ ಗೆಲುವು ಇನ್ನಷ್ಟು ಬಲವಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮುಂದುವರೆಸಿದ ವಿಜಯೇಂದ್ರ, “ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿಗಳಿಗೆ ಇಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗವಾಗಿದೆ” ಎಂದು ಆರೋಪಿಸಿದರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚಿಕೆ ನಡೆಯುತ್ತಿದೆ ಎಂಬ ಗಂಭೀರ ಆರೋಪವನ್ನೂ ಅವರು ಹೊರಿಸಿದರು.

“‘ಶಾಮನೂರು ಅವರ ನೋಟು, ಬಿಜೆಪಿಗೆ ವೋಟು’ ಎಂಬ ಘೋಷಣೆಗಳು ಜನರಲ್ಲೇ ಕೇಳಿಸುತ್ತಿವೆ. ಆದರೆ ಹಣದಿಂದ ಮತಗಳನ್ನು ಗೆಲ್ಲಲು ಸಾಧ್ಯವಿಲ್ಲ. ಮತದಾರರು ಈಗಾಗಲೇ ಕಮಲದ ಹೂವನ್ನು ಅರಳಿಸುವ ತೀರ್ಮಾನ ಮಾಡಿದ್ದಾರೆ” ಎಂದು ಅವರು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಹಿಂದುಳಿದ ವರ್ಗಗಳ ವಿವಿಧ ನಿಗಮಗಳಿಗೆ 550 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಆದರೆ ಇಂದಿನ ಸರ್ಕಾರ ಕೇವಲ 200-250 ಕೋಟಿ ರೂಪಾಯಿಗಳಷ್ಟೇ ನೀಡುತ್ತಿದೆ ಎಂದು ಟೀಕಿಸಿದರು.
“ಹಿಂದುಳಿದ ವರ್ಗಗಳನ್ನು ಕಾಂಗ್ರೆಸ್ ಕೇವಲ ಮತಬ್ಯಾಂಕಾಗಿ ಬಳಸಿಕೊಳ್ಳುತ್ತಿದೆ. ಜನರು ಇದನ್ನು ಅರಿತು ಪ್ರಾಮಾಣಿಕ ಅಭ್ಯರ್ಥಿಗೆ ಬೆಂಬಲ ನೀಡಬೇಕು” ಎಂದು ಮನವಿ ಮಾಡಿದರು.

ಇದೇ ವೇಳೆ ಜೆಡಿಎಸ್ ಬೆಂಬಲದ ಕುರಿತು ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಪ್ರಚಾರದಲ್ಲಿ ಭಾಗವಹಿಸಿದ್ದು, ಜೆಡಿಎಸ್ ಕಾರ್ಯಕರ್ತರೂ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕೈಜೋಡಿಸಿದ್ದಾರೆ ಎಂದು ಹೇಳಿದರು. ಎರಡೂ ಪಕ್ಷಗಳ ಸಮನ್ವಯದಿಂದ ಬಿಜೆಪಿ ಇನ್ನಷ್ಟು ಬಲಿಷ್ಠವಾಗುತ್ತಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಉಪಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ಗರಿಗೆದರಿದ್ದು, ಎರಡೂ ಕ್ಷೇತ್ರಗಳ ಫಲಿತಾಂಶ ರಾಜ್ಯ ರಾಜಕೀಯದ ಮೇಲೆ ಮಹತ್ತರ ಪರಿಣಾಮ ಬೀರುವ ಸಾಧ್ಯತೆ ಇದೆ.









