ಇವರು ಬರೇ ಕಳ್ಳರಲ್ಲ, ಜನರ ಜೀವ ತೆಗೆಯುವವರು!!
ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಜೋರಾಗಿ ನಡೆದರೂ, ಕೆಲವು ಅನಾಹುತಕಾರಿ ಘಟನೆಗಳು ಜನರ ಸುರಕ್ಷತೆಯ ಮೇಲೆ ಗಂಭೀರ ಪ್ರಶ್ನೆ ಎತ್ತುತ್ತಿವೆ. ವಿಶೇಷವಾಗಿ ಮಳೆಗಾಲದ ಸಂದರ್ಭಗಳಲ್ಲಿ ರಸ್ತೆ ಮೇಲೆ ಹರಿಯುವ ನೀರು ಸುಗಮವಾಗಿ ಬಾಕ್ಸ್ ಚರಂಡಿಗಳಿಗೆ ಸೇರಲು ಅನೇಕ ಕಡೆಗಳಲ್ಲಿ ಚಿಕ್ಕಚಿಕ್ಕ ಚೇಂಬರ್‌ಗಳನ್ನು ನಿರ್ಮಿಸಲಾಗಿದೆ.
ಈ ಚೇಂಬರ್‌ಗಳಿಗೆ ಕಸಗಳು ಒಳಹೋಗದಂತೆ ಹಾಗೂ ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಜಾಲರಿ ಹೊಂದಿದ ಕಬ್ಬಿಣದ ಮುಚ್ಚಳಗಳನ್ನು ಅಳವಡಿಸಲಾಗಿತ್ತು. ಆದರೆ ಇತ್ತೀಚೆಗೆ ಈ ಕಬ್ಬಿಣದ ಮುಚ್ಚಳಗಳ ಮೇಲೆ ಕಳ್ಳರ ಕಣ್ಣಪ್ಪಳಿಸಿದ್ದು, ಅವುಗಳನ್ನು ಕಿತ್ತು ಕಬ್ಬಿಣ ಗುಜರಿಗೆ ಮಾರಾಟ ಮಾಡುವ ದುಷ್ಕೃತ್ಯ ನಗರದಲ್ಲಿ ಹೆಚ್ಚಾಗುತ್ತಿದೆ.

ಸಾರ್ವಜನಿಕ ಆಸ್ತಿಯ ಕಳ್ಳತನದಿಂದ ಹೆಚ್ಚುತ್ತಿರುವ ಅಪಾಯದ ಪರಿಸ್ಥಿತಿ
ಇದು ಕೇವಲ ಸಾರ್ವಜನಿಕ ಆಸ್ತಿಯ ಕಳ್ಳತನವಲ್ಲ; ಜನರ ಜೀವದೊಂದಿಗೆ ನಡೆಯುವ ಅಪಾಯಕಾರಿ ಆಟವಾಗಿದೆ. ರಸ್ತೆ ಪಕ್ಕದಲ್ಲಿರುವ ಈ ಚೇಂಬರ್‌ಗಳು ಮುಚ್ಚಳವಿಲ್ಲದೆ ಬಾಯಿತೆರೆಯುತ್ತಿದ್ದು, ಪಾದಚಾರಿಗಳಿಗೆ ಭಾರೀ ಅಪಾಯ ಉಂಟುಮಾಡುತ್ತಿವೆ. ಮಳೆ ಬಂದಾಗ ಈ ಗುಂಡಿಗಳು ನೀರಿನಿಂದ ತುಂಬಿ ಕಾಣಿಸದೇ ಹೋಗುವುದರಿಂದ ಅಪಘಾತಗಳ ಸಂಭವ ಹೆಚ್ಚಾಗಿದೆ.
ಮಹಾನಗರ ಪಾಲಿಕೆ ಎದುರಿನಲ್ಲೇ ಗಂಭೀರ ಸುರಕ್ಷತಾ ಕೊರತೆ
ನಗರದ ಮಹಾನಗರ ಪಾಲಿಕೆ ಕಚೇರಿ ಎದುರಿನ ರಸ್ತೆಯಲ್ಲೇ ಸುಮಾರು 20ಕ್ಕೂ ಹೆಚ್ಚು ಇಂತಹ ಮುಚ್ಚಳವಿಲ್ಲದ ಚೇಂಬರ್‌ಗಳು ಕಂಡುಬರುತ್ತಿದ್ದು, ಇಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಪ್ರತಿದಿನ ಸಂಚರಿಸುತ್ತಿದ್ದಾರೆ. ಇಂತಹ ಸ್ಥಳಗಳಲ್ಲಿ ಯಾವುದೇ ಕ್ಷಣದಲ್ಲಾದರೂ ದುರ್ಘಟನೆ ಸಂಭವಿಸುವ ಸಾಧ್ಯತೆ ಇದೆ.
ಬೀದಿದೀಪ ಕಂಬಗಳ ಬಳಿ ವಿದ್ಯುತ್ ಅಪಾಯದ ಪರಿಸ್ಥಿತಿ
ಇದಷ್ಟೇ ಅಲ್ಲದೆ, ನಗರದ ಅನೇಕ ಬೀದಿದೀಪ ಕಂಬಗಳ ಕೆಳಭಾಗದಲ್ಲಿರುವ ಮುಚ್ಚಳಗಳೂ ಕಳ್ಳತನವಾಗಿದ್ದು, ಅವುಗಳೊಳಗಿನ ವಿದ್ಯುತ್ ತಂತಿಗಳು ಹೊರಗೆ ಬಿದ್ದು ಜೀವಾಪಾಯವನ್ನು ಆಹ್ವಾನಿಸುತ್ತಿವೆ. ಈ ನಿರ್ಲಕ್ಷ್ಯದಿಂದ ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

ಕಠಿಣ ಕಾನೂನು ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
ಸಾರ್ವಜನಿಕ ಆಸ್ತಿಗಳನ್ನು ಕದ್ದುಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. ರೈಲ್ವೇ ಇಲಾಖೆಯಲ್ಲಿ ಇರುವಂತೆ ಕಠಿಣ ಶಿಕ್ಷೆಗಳನ್ನು ವಿಧಿಸುವ ವ್ಯವಸ್ಥೆ ರೂಪಿಸಬೇಕಾಗಿದೆ. ಸಾಮಾನ್ಯ ಕಳ್ಳತನ ಮತ್ತು ಜನರ ಜೀವಕ್ಕೆ ಅಪಾಯ ಉಂಟುಮಾಡುವ ಕೃತ್ಯಗಳ ನಡುವೆ ಸ್ಪಷ್ಟ ವ್ಯತ್ಯಾಸ ಇರಬೇಕು.
ಚಪ್ಪಲಿ ಕಳ್ಳತನವಾದರೆ ಅದನ್ನು ಸಣ್ಣ ವಿಷಯವೆಂದು ಮನ್ನಿಸಬಹುದು. ಆದರೆ ನಿರ್ಲಕ್ಷ್ಯದಿಂದ ಅಥವಾ ಕಳ್ಳತನದಿಂದ ಒಬ್ಬರ ಜೀವ ಕಳೆದುಹೋದರೆ ಅದನ್ನು ಯಾವ ರೀತಿಯಲ್ಲೂ ಸಮರ್ಥಿಸಲಾಗದು.
ಜನರ ಸುರಕ್ಷತೆ ಅತಿ ಮುಖ್ಯ. ಆದ್ದರಿಂದ ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಂಡು ಈ ಅಪಾಯಕಾರಿಯ ಪರಿಸ್ಥಿತಿಗೆ ಕಡಿವಾಣ ಹಾಕಬೇಕಾಗಿದೆ.
ವರದಿ: ತ್ಯಾಗರಾಜ ಮಿತ್ಯಾಂತ, ಶಿವಮೊಗ್ಗ










