ಬೆಂಗಳೂರು, ಏ.15: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಪ್ರಸಿದ್ಧ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಗುರು ಭೈರವೈಕ್ಯ ಮಂದಿರವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಾವಿರಾರು ಭಕ್ತರ ಹರ್ಷೋದ್ಘಾರಗಳ ಮಧ್ಯೆ ಭವ್ಯವಾಗಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಠದ ಆವರಣದಲ್ಲಿ ಭಕ್ತಿಭಾವ, ಸಂಭ್ರಮ ಮತ್ತು ಗೌರವದ ವಾತಾವರಣ ನಿರ್ಮಾಣವಾಗಿತ್ತು.
ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.
ಕ್ಷೇತ್ರಕ್ಕೆ ಆಗಮಿಸಿದ ಕೂಡಲೇ ಅವರು ಆದಿಚುಂಚನಗಿರಿ ಮಠದ ಪೂರ್ವ ಪೀಠಾಧ್ಯಕ್ಷರಾದ ಪದಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆಗೆ ನಮಸ್ಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗೋರಕ್ಷನಾಥರು ತಪಸ್ಸು ಮಾಡಿದ ಜ್ವಾಲಾಪೀಠ ಹಾಗೂ ಕಾಲಭೈರವೇಶ್ವರ ಸ್ವಾಮಿ ಸನ್ನಿಧಿಗಳಿಗೆ ಭೇಟಿ ನೀಡಿ ದರ್ಶನ ಪಡೆದರು.
ಲೋಕಾರ್ಪಣೆ ನಂತರ ನಡೆದ ವೇದಿಕಾ ಕಾರ್ಯಕ್ರಮದಲ್ಲಿ “ಸೌಂದರ್ಯ ಲಹರಿ” ಮತ್ತು “ಶಿವಮಹಿಮ್ನಾಹಃ ಸ್ತೋತ್ರಂ” ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಹೆಚ್.ಡಿ.ದೇವೇಗೌಡ, ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ನರೇಂದ್ರ ಮೋದಿ ಅವರು ಮಾತನಾಡಿ, ಆದಿಚುಂಚನಗಿರಿ ಕ್ಷೇತ್ರದ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳ ಮಹತ್ವವನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಮಠದ ವತಿಯಿಂದ ಪ್ರಧಾನಿಗೆ ಮೈಸೂರು ಅರಸರ ಪರಂಪರೆಯನ್ನು ಪ್ರತಿಬಿಂಬಿಸುವ ವಿಶೇಷ ಮೈಸೂರು ಪೇಟವನ್ನು ತೊಡಿಸಿ ಗೌರವಿಸಲಾಯಿತು. ಬನಾರಸ್ ಸೀರೆ ಹಾಗೂ ಚಿನ್ನದಿಂದ ಅಲಂಕರಿಸಲಾದ ಈ ಪೇಟದಲ್ಲಿ ಮೈಸೂರಿನ ರಾಜಲಾಂಛನವಾದ ಗಂಡಬೇರುಂಡ ಚಿಹ್ನೆ ಅಳವಡಿಸಲಾಗಿತ್ತು.
ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಭಕ್ತರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿತ್ತು.
ಮಂದಿರದ ವೈಶಿಷ್ಟ್ಯಗಳು: ಶ್ರೀಗುರು ಭೈರವೈಕ್ಯ ಮಂದಿರವು ಮಠದ 71ನೇ ಯತಿ ಪದಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಐಕ್ಯಸ್ಥಳವಾಗಿದ್ದು, ಅವರ ಪ್ರತಿಮೆಯನ್ನು ಒಳಗೊಂಡಿದೆ. ಸ್ವಾಮೀಜಿಗಳ ಗದ್ದುಗೆ ಇರುವ ಸ್ಥಳದಲ್ಲೇ ಈ ಮಂದಿರ ನಿರ್ಮಾಣವಾಗಿದ್ದು, ಇದು ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಕನಸಿನ ಯೋಜನೆಯಾಗಿದೆ.
ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಮಂದಿರವು ಹೊಯ್ಸಳ, ಚಾಲುಕ್ಯ, ಚೋಳ ಹಾಗೂ ಗಂಗ ಕಾಲದ ಶಿಲ್ಪಕಲೆಯ ಅದ್ಭುತ ಸಂಯೋಜನೆಯಾಗಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ವಾಸ್ತುಶಿಲ್ಪ ಕೃತಿಯು ಭಕ್ತರ ಜೊತೆಗೆ ಪ್ರವಾಸಿಗರನ್ನೂ ಆಕರ್ಷಿಸುವ ಮಹತ್ವದ ಆಧ್ಯಾತ್ಮಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
ಈ ಲೋಕಾರ್ಪಣಾ ಸಮಾರಂಭವು ಧಾರ್ಮಿಕ ಭಕ್ತಿ, ಸಾಂಸ್ಕೃತಿಕ ವೈಭವ ಹಾಗೂ ರಾಜಕೀಯ ಗಣ್ಯರ ಸಾನ್ನಿಧ್ಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಸ್ಮರಣೀಯ ಘಟನೆಯಾಗಿ ಉಳಿದಿದೆ.





