ಬೆಂಗಳೂರು: ವೀರಶೈವ ಲಿಂಗಾಯತ ಸಮಾಜದ ಆರ್ಥಿಕ, ಸಾಮಾಜಿಕ ಮತ್ತು ವ್ಯವಹಾರಿಕ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿ ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್ವರ್ಕ್ ಬೆಂಗಳೂರು ವತಿಯಿಂದ ಭವ್ಯ ಕಾರ್ಯಗಾರವು ರಾಜಾಜಿನಗರದ ವೆಸ್ಟ್ ಫೋರ್ಟ್ ಹೋಟೆಲ್ನಲ್ಲಿ ಯಶಸ್ವಿಯಾಗಿ ನಡೆಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ರಿಯಲ್ ಎಸ್ಟೇಟ್ ವೃತ್ತಿಪರರು, ಉದ್ಯಮಿಗಳು ಮತ್ತು ಯುವಜನತೆ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ನೆಟ್ವರ್ಕಿಂಗ್ ಹಾಗೂ ಜ್ಞಾನ ಹಂಚಿಕೆಯ ಮಹತ್ವವನ್ನು ಪಡೆದುಕೊಂಡರು.

ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್ವರ್ಕ್ ಸ್ಥಾಪನೆಗೆ ದಯಾನಂದ್ ಮೆಚ್ಚುಗೆ
ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ರಿಯಲ್ ಎಸ್ಟೇಟ್ ಕ್ಷೇತ್ರದ ಖ್ಯಾತ ಉದ್ಯಮಿಯಾಗಿರುವ ಡಿಎಸ್ ಮ್ಯಾಕ್ಸ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎಸ್.ಪಿ. ದಯಾನಂದ್ ಅವರು ಮಾತನಾಡಿ, ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್ವರ್ಕ್ ಅನ್ನು ಸ್ಥಾಪಿಸಿರುವ ಪ್ರದೀಪ್ ಕಂಕಣವಾಡಿ ಅವರ ಕಾರ್ಯವನ್ನು ಮನಪೂರ್ವಕವಾಗಿ ಪ್ರಶಂಸಿಸಿದರು. “ನಮ್ಮ ಸಮಾಜದ ರಿಯಲ್ ಎಸ್ಟೇಟ್ ವೃತ್ತಿಪರರು ಮೇಲ್ಮಟ್ಟಕ್ಕೆ ಬರಬೇಕು ಎಂಬ ಉದ್ದೇಶದಿಂದ ರೂಪುಗೊಂಡಿರುವ ಈ ನೆಟ್ವರ್ಕ್ ಅತ್ಯಂತ ಶ್ಲಾಘನೀಯ ಪ್ರಯತ್ನ. ಇಂತಹ ಸಂಘಟಿತ ವೇದಿಕೆ ಸಮಾಜದ ಆರ್ಥಿಕ ಶಕ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆ,” ಎಂದು ಅವರು ಹೇಳಿದರು.

ಪ್ರದೀಪ್ ಕಂಕಣವಾಡಿ ಸಂಘಟನಾ ಶಕ್ತಿಗೆ ಪ್ರಶಂಸೆ
ಇದೇ ವೇಳೆ, ಪ್ರದೀಪ್ ಕಂಕಣವಾಡಿ ಅವರು ವೀರಶೈವ ಲಿಂಗಾಯತ ಸಂಘಟನೆ ವೇದಿಕೆಯ ಮೂಲಕ ಸಮಾಜಕ್ಕಾಗಿ ನಡೆಸಿರುವ ಅನೇಕ ಕಾರ್ಯಕ್ರಮಗಳನ್ನು ಸ್ಮರಿಸಿದ ಅವರು, “ಸಮಾಜದ ಪ್ರತಿಯೊಂದು ಕಾರ್ಯಕ್ರಮವನ್ನೂ ಅರ್ಥಪೂರ್ಣವಾಗಿ, ಮನಮುಟ್ಟುವ ರೀತಿಯಲ್ಲಿ ಆಯೋಜಿಸುವ ಸಾಮರ್ಥ್ಯ ಪ್ರದೀಪ್ ಅವರಲ್ಲಿದೆ. ವಿಶೇಷವಾಗಿ ದೆಹಲಿಯಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಜಯಂತಿ ಉತ್ಸವವು ಅಪೂರ್ವ ಸಾಧನೆ. 250ಕ್ಕೂ ಹೆಚ್ಚು ಸ್ವಾಮೀಜಿಗಳನ್ನು, ಕೇಂದ್ರ ಮತ್ತು ರಾಜ್ಯದ ಗಣ್ಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿದ ಶಕ್ತಿ ಪ್ರದೀಪ್ ಅವರಿಗೆ ಮಾತ್ರ ಇದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಧನೆಯ ಹಾದಿ: ಸಣ್ಣ ಆರಂಭದಿಂದ ದೊಡ್ಡ ಯಶಸ್ಸು
ತಮ್ಮ ವೈಯಕ್ತಿಕ ಜೀವನ ಪಯಣವನ್ನು ಹಂಚಿಕೊಂಡ ದಯಾನಂದ್ ಅವರು, “ನಾನು 2004ರಲ್ಲಿ ಬೆಂಗಳೂರಿಗೆ ಬಂದಾಗ ಯಾವುದೋ ಒಂದು ಕೆಲಸ ಮಾಡಬೇಕು ಎಂಬ ಕನಸಷ್ಟೇ ಇತ್ತು. ಆದರೆ ಕೆಲಸ ಸಿಗುವುದು ಕಷ್ಟವಾಯಿತು. ಭಾಷೆಯೂ ಅಡ್ಡಿಯಾಯಿತು. ಇಂಗ್ಲಿಷ್ ತಿಳಿಯದೆ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ ತಾಳ್ಮೆ, ಪರಿಶ್ರಮ ಮತ್ತು ನಿಷ್ಠೆಯಿಂದ ಕೆಲಸ ಮುಂದುವರಿಸಿದೆ. 2007ರಲ್ಲಿ ಕೇವಲ 16 ಮನೆಗಳ ಸಣ್ಣ ಪ್ರಾಜೆಕ್ಟ್ ಮೂಲಕ ಆರಂಭಿಸಿದ ನನ್ನ ಪ್ರಯಾಣ, ಇಂದು ಸಾವಿರಾರು ಮನೆಗಳ ನಿರ್ಮಾಣದ ಮಟ್ಟಕ್ಕೆ ತಲುಪಿದೆ. 2024ರೊಳಗೆ 45,000ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ಮಾರಾಟ ಮಾಡಿದ್ದೇವೆ; ಇನ್ನೂ 25,000ಕ್ಕೂ ಹೆಚ್ಚು ಮನೆಗಳು ನಿರ್ಮಾಣ ಹಂತದಲ್ಲಿವೆ,” ಎಂದು ಹೇಳಿದರು.

ನಿಷ್ಠೆ ಇದ್ದರೆ ರಿಯಲ್ ಎಸ್ಟೇಟ್ನಲ್ಲಿ ಯಶಸ್ಸು ಸಾಧ್ಯ
“ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಹೆಚ್ಚಿನ ವಿದ್ಯಾಭ್ಯಾಸ ಅಥವಾ ಭಾಷಾ ಜ್ಞಾನ ಅನಿವಾರ್ಯವಲ್ಲ. ನಿಷ್ಠೆ, ಧೈರ್ಯ ಮತ್ತು ಪರಿಶ್ರಮ ಇದ್ದರೆ ಯಾರಾದರೂ ಈ ಕ್ಷೇತ್ರದಲ್ಲಿ ಸಾಧಿಸಬಹುದು. ಇದು ದೇಶದ ಅತ್ಯಂತ ದೊಡ್ಡ ಉದ್ಯಮಗಳಲ್ಲಿ ಒಂದು; ಸಾವಿರಾರು ಮಂದಿಗೆ ಉದ್ಯೋಗ ನೀಡುವ ಸಾಮರ್ಥ್ಯ ಹೊಂದಿದೆ,” ಎಂದು ಅವರು ಹೇಳಿದರು.
ಹೂಡಿಕೆಯಲ್ಲಿ ಎಚ್ಚರಿಕೆ ಮತ್ತು ಜಾಣ್ಮೆ ಅಗತ್ಯ
ಈ ಸಂದರ್ಭದಲ್ಲಿ ಹೂಡಿಕೆ ಕುರಿತಾಗಿ ಮಾತನಾಡಿದ ಅವರು, “ಈ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡುವಾಗ ಎಚ್ಚರಿಕೆ ಅತ್ಯಂತ ಮುಖ್ಯ. ಪ್ರತಿಯೊಂದು ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಂಡು ಮಾತ್ರ ಮುಂದುವರೆಯಬೇಕು. ತ್ವರಿತ ಲಾಭದ ಆಸೆಯಿಂದ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಾರದು. ತಾಳ್ಮೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಶ್ಚಿತವಾಗಿ ಸಿಗುತ್ತದೆ,” ಎಂದು ಸಲಹೆ ನೀಡಿದರು.
ತಂದೆ-ತಾಯಿಯ ಪ್ರೋತ್ಸಾಹವೇ ಯಶಸ್ಸಿನ ಮೂಲ
ತಮ್ಮ ಜೀವನದಲ್ಲಿ ತಂದೆ-ತಾಯಿಯ ಪಾತ್ರವನ್ನು ಸ್ಮರಿಸಿದ ಅವರು, “ನಮ್ಮನ್ನು ಪ್ರೋತ್ಸಾಹಿಸಿದವರು, ನಮ್ಮನ್ನು ಬೆಳೆಸಿದವರನ್ನು ಎಂದಿಗೂ ಮರೆಯಬಾರದು. ಅವರ ಆಶೀರ್ವಾದವೇ ನಮ್ಮ ಯಶಸ್ಸಿನ ಮೂಲ,” ಎಂದು ಭಾವನಾತ್ಮಕವಾಗಿ ಹೇಳಿದರು.
ಇದೇ ವೇಳೆ, ಹೊಸದಾಗಿ ಈ ಕ್ಷೇತ್ರಕ್ಕೆ ಪ್ರವೇಶಿಸುವವರಿಗೆ ಸಲಹೆ ನೀಡಿದ ಅವರು, “ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗದೆ, ಇತರ ಜಿಲ್ಲೆಗಳಲ್ಲೂ ರಿಯಲ್ ಎಸ್ಟೇಟ್ ಅವಕಾಶಗಳು ಅಪಾರವಾಗಿವೆ. ಕಡಿಮೆ ಹೂಡಿಕೆಯಲ್ಲಿ ಕೂಡ ಉತ್ತಮವಾಗಿ ಆರಂಭಿಸಬಹುದು. ಧೈರ್ಯದಿಂದ ಮುಂದೆ ಬಂದರೆ ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಸಾಧ್ಯ,” ಎಂದು ಹೇಳಿದರು.
ನೆಟ್ವರ್ಕ್ ಶಕ್ತಿ: ಸಹಕಾರದಿಂದ ಸಮೂಹ ಬೆಳವಣಿಗೆ
“ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್ವರ್ಕ್ ಒಂದು ಶಕ್ತಿಯುತ ವೇದಿಕೆ. ಇಲ್ಲಿ ಪ್ರತಿಯೊಬ್ಬರ ಅನುಭವ, ಜ್ಞಾನ ಮತ್ತು ಸಂಪರ್ಕಗಳು ಪರಸ್ಪರ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಬೆಳವಣಿಗೆ ಸಾಧ್ಯ. ನಾನು ಕೂಡ ಈ ಪ್ರಯತ್ನಕ್ಕೆ ಸಂಪೂರ್ಣ ಸಹಕಾರ ನೀಡಲು ಸದಾ ಸಿದ್ಧನಿದ್ದೇನೆ,” ಎಂದು ಭರವಸೆ ನೀಡಿದರು.
ಈ ಮೂಲಕ ದಯಾನಂದ್ ಅವರ ಮಾತುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿದವು.

ಸಂಘಟನೆಯ ಅಗತ್ಯತೆ: ಪ್ರದೀಪ್ ಕಂಕಣವಾಡಿ ದೃಷ್ಟಿಕೋನ
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಪ್ರದೀಪ್ ಕಂಕಣವಾಡಿ ಮಾತನಾಡಿ, “ವೀರಶೈವ ಲಿಂಗಾಯತ ಸಮಾಜವು ದೇಶದ ದೊಡ್ಡ ಹಾಗೂ ಪ್ರಭಾವಶಾಲಿ ಸಮಾಜಗಳಲ್ಲಿ ಒಂದು. ಆದರೆ ಈ ಸಮಾಜದ ಅನೇಕರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ, ಪರಸ್ಪರ ಸಂಪರ್ಕದ ಕೊರತೆಯಿಂದಾಗಿ ಸಮೂಹ ಶಕ್ತಿಯನ್ನು ಬಳಸಿಕೊಳ್ಳಲಾಗುತ್ತಿಲ್ಲ. ಈ ಅಂತರವನ್ನು ನಿವಾರಿಸಲು ಹಾಗೂ ಎಲ್ಲರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಬೆಳವಣಿಗೆಗೆ ದಾರಿ ತೋರಿಸಲು ಈ ನೆಟ್ವರ್ಕ್ ಸ್ಥಾಪನೆಯಾಯಿತು” ಎಂದು ಹೇಳಿದರು.
ಒಂದು ವರ್ಷದಲ್ಲಿ ವಿಸ್ತರಣೆ: ನೆಟ್ವರ್ಕ್ ಬೆಳವಣಿಗೆಯ ಹಾದಿ
ಒಂದು ವರ್ಷದ ಹಿಂದೆ ಬಸವೇಶ್ವರ ನಗರದಲ್ಲಿ ಆರಂಭವಾದ ಈ ನೆಟ್ವರ್ಕ್ ಇಂದು ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸುತ್ತಿದ್ದು, ಪ್ರತಿವಾರ ಹಾಗೂ ಪ್ರತಿ ತಿಂಗಳ ಸಭೆಗಳ ಮೂಲಕ ಸದಸ್ಯರ ನಡುವೆ ಸಂಪರ್ಕ ವೃದ್ಧಿಸುತ್ತಿದೆ. ಫೆಬ್ರವರಿಯಲ್ಲಿ ನಡೆದ ರಾಷ್ಟ್ರಮಟ್ಟದ ಕಾರ್ಯಕ್ರಮದ ಮೂಲಕ ಸಮಾಜದ ರಿಯಲ್ ಎಸ್ಟೇಟ್ ವೃತ್ತಿಪರರನ್ನು ಗುರುತಿಸಿ, ಒಗ್ಗೂಡಿಸುವ ಕಾರ್ಯಕ್ಕೆ ಮತ್ತಷ್ಟು ವೇಗ ಸಿಕ್ಕಿದೆ.

ರಿಯಲ್ ಎಸ್ಟೇಟ್ ನೆಟ್ವರ್ಕ್ ಮೂಲಕ ರಾಜಕೀಯ ಹಾಗೂ ವೃತ್ತಿಪರ ಬೆಳವಣಿಗೆಗೆ ಒತ್ತು – ಎಸ್.ಎಸ್. ಜ್ಯೋತಿಪ್ರಕಾಶ್ ಅಭಿಪ್ರಾಯ
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಭಾಗವಹಿಸಿ ಮಾತನಾಡಿದ ಶಿವಮೊಗ್ಗದ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರು ಹಾಗೂ ಮಾಜಿ ಸೂಡಾ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್ ಅವರು, ರಿಯಲ್ ಎಸ್ಟೇಟ್ ನೆಟ್ವರ್ಕ್ ಜೊತೆಗೆ ರಾಜಕೀಯವಾಗಿ ಹಾಗೂ ವೃತ್ತಿಪರವಾಗಿ ಬೆಳೆಯಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಪ್ರದೀಪ್ ಕಂಕಣವಾಡಿ ಅವರ ಸಮಾಜ ಒಗ್ಗೂಡಿಸುವ ಪ್ರಯತ್ನ ಶ್ಲಾಘನೀಯವಾಗಿದ್ದು, ಇಂತಹ ವೇದಿಕೆಗಳು ಸಮಾಜದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ಜಿಲ್ಲಾ ನೆಟ್ವರ್ಕ್ ಘಟಕ ರಚನೆ: ನಾಯಕತ್ವಕ್ಕೆ ಹೊಸ ಬಲ
ಬೆಂಗಳೂರು ಜಿಲ್ಲಾ ಘಟಕದ ಸ್ಥಾಪನೆಯೊಂದಿಗೆ ಗುರುಪ್ರಸಾದ್ ಆರಾಧ್ಯ ಅವರನ್ನು ಅಧ್ಯಕ್ಷರಾಗಿ, ಆಂಜನೇಯ ಎನ್.ಎಸ್.ನಿಂಬೇಗೊಂದಿ, ಎಚ್.ಆರ್. ಈರೇಶ್, ಮಧುಸೂದನ್ ಮತ್ತು ಚನ್ನಮಲ್ಲ ಸ್ವಾಮಿ, ನರೇಂದ್ರ ಕರಡೇರ್ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಇವರ ನೇತೃತ್ವದಲ್ಲಿ ಬಿಜಿನೆಸ್ ಮೀಟ್ ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇ —
- ರಿಯಲ್ ಎಸ್ಟೇಟ್ ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವುದು
- ಹೊಸ ವ್ಯಾಪಾರ ಅವಕಾಶಗಳನ್ನು ಗುರುತಿಸಲು ಅವಕಾಶ ಕಲ್ಪಿಸುವುದು
- ಜ್ಞಾನ ಹಂಚಿಕೆ ಹಾಗೂ ಪರಸ್ಪರ ಸಹಕಾರವನ್ನು ಹೆಚ್ಚಿಸುವುದು
- ಯುವಜನತೆಯನ್ನು ಸ್ವಾವಲಂಬನೆಯ ದಿಕ್ಕಿನಲ್ಲಿ ಪ್ರೇರೇಪಿಸುವುದು
- ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದು

ಸಮಾಜದ ಒಗ್ಗಟ್ಟಿನಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಸ ದಿಕ್ಕು: ಗುರುಪ್ರಸಾದ್ ಆರಾಧ್ಯ ಬೆಂಗಳೂರು ಜಿಲ್ಲಾಧ್ಯಕ್ಷರು
ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್ವರ್ಕ್ನ ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಗುರುಪ್ರಸಾದ್ ಅವರು ಮಾತನಾಡಿ, ನಮ್ಮ ವೀರಶೈವ ಲಿಂಗಾಯತ ಸಮಾಜವು ದೊಡ್ಡದು. ಬೆಂಗಳೂರಿನಲ್ಲಿ ನಮ್ಮ ಸಮಾಜದ ಅನೇಕರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರೂ, ಪರಸ್ಪರ ಪರಿಚಯ ಮತ್ತು ಮಾಹಿತಿ ಹಂಚಿಕೆ ಕೊರತೆಯಿದೆ ಎಂದು ಹೇಳಿದರು. ಈ ಹಿನ್ನೆಲೆ, ನಮ್ಮ ಸಮಾಜದವರನ್ನು ಒಗ್ಗೂಡಿಸಿ ಸಂಘಟಿತವಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಸ್ಥಾಪಕ ಅಧ್ಯಕ್ಷರಾದ ಪ್ರದೀಪ್ ಕಂಕಣವಾಡಿ ಅವರ ನೇತೃತ್ವದಲ್ಲಿ ಈ ರಿಯಲ್ ಎಸ್ಟೇಟ್ ನೆಟ್ವರ್ಕ್ ರೂಪುಗೊಂಡಿದ್ದು, ಸಮಾಜದ ಪ್ರತಿಯೊಬ್ಬರೂ ಸ್ವಾವಲಂಬಿಯಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅವಕಾಶ ಕಲ್ಪಿಸುತ್ತಿದೆ. ಈ ನೆಟ್ವರ್ಕ್ ನಮ್ಮ ಕೈಬಲವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಸಂಘಟನೆಯನ್ನು ಬಲಪಡಿಸಿ, ಪರಸ್ಪರ ಸಹಕಾರದ ಮೂಲಕ ಮುಂದೆ ಸಾಗೋಣ ಎಂದು ಅವರು ಕರೆ ನೀಡಿದರು.
ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಗುರುತಿನ ಸವಾಲು: ಎನ್.ಎಸ್. ಆಂಜನೇಯ ನಿಂಬೇಗೊಂದಿ
ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್ವರ್ಕ್ನ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರಾದ ಎನ್. ಎಸ್. ಆಂಜನೇಯ ಅವರು ಮಾತನಾಡಿ, ನಾವು ಶಿವಮೊಗ್ಗದಿಂದ ಬೆಂಗಳೂರಿಗೆ ಬಂದಿದ್ದು ಸುಮಾರು ಇಪ್ಪತ್ತು ವರ್ಷಗಳಾಗಿದೆ. ಈ ಅವಧಿಯಲ್ಲಿ ನಮ್ಮ ವೀರಶೈವ ಲಿಂಗಾಯತ ಸಮಾಜದಲ್ಲಿ ಸರಿಯಾಗಿ ಗುರುತಿಸಿಕೊಳ್ಳುವುದು ಕೂಡ ಕಷ್ಟವಾಗಿರುವ ಪರಿಸ್ಥಿತಿ ಇದೆ ಎಂದು ಹೇಳಿದರು.
ಸಮಾಜದ ಏಕತೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಪ್ರದೀಪ್ ಕಂಕನವಾಡಿಯವರ ಪ್ರಯತ್ನಗಳಿಗೆ ಎನ್.ಎಸ್. ಆಂಜನೇಯ ಶ್ಲಾಘನೆ
ಇಂತಹ ಸಂದರ್ಭದಲ್ಲಿ ನಮ್ಮ ಸಮಾಜದ ಯುವಜನತೆಯನ್ನು ಸಂಘಟಿಸಿ, ವ್ಯವಹಾರಿಕವಾಗಿ ಬಲಪಡಿಸುವ ಉದ್ದೇಶದಿಂದ ಪ್ರದೀಪ್ ಕಂಕಣವಾಡಿಯವರು ಮುಂದೆ ಬಂದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ನಮ್ಮ ಸಮಾಜದವರು ಪರಸ್ಪರ ಗುರುತಿಸಿಕೊಂಡು ಬೆಂಬಲಿಸುವುದು ಅಗತ್ಯವಾಗಿದೆ. ಈ ರಿಯಲ್ ಎಸ್ಟೇಟ್ ನೆಟ್ವರ್ಕ್ ಮೂಲಕ ಸಮಾಜವನ್ನು ಸಂಘಟಿಸುವ ಕಾರ್ಯವನ್ನು ಕೈಗೊಂಡಿರುವ ಪ್ರದೀಪ್ ಕಂಕಣವಾಡಿಯವರಲ್ಲಿ ‘ದೀಪ’ದಂತಹ ಬೆಳಕು ಇದೆ, ‘ಕಂಕಣ’ದ ಬಲವಿದೆ. ಈ ದೀಪದಿಂದ ಸಮಾಜಕ್ಕೆ ದಾರಿ ತೋರಿಸುವ, ಮಾರ್ಗದರ್ಶನ ನೀಡುವ ಹಾಗೂ ಆರ್ಥಿಕವಾಗಿ ಬೆಳೆಯುವ ನಿಟ್ಟಿನಲ್ಲಿ ಕಂಕಣ ತೊಟ್ಟಿರುವ ಪ್ರದೀಪ್ ಕಂಕನವಾಡಿಯವರಿಗೆ ನಾವು ಎಲ್ಲರೂ ಬೆಂಬಲವಾಗಿ ನಿಲ್ಲೋಣ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರು ತಮ್ಮ ಪರಿಚಯ, ವೃತ್ತಿ ಹಾಗೂ ಅನುಭವಗಳನ್ನು ಹಂಚಿಕೊಂಡು, ಈ ನೆಟ್ವರ್ಕ್ ತಮ್ಮ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಒಗ್ಗಟ್ಟಿನ ಮೂಲಕ ದೊಡ್ಡ ಮಟ್ಟದ ಸಾಧನೆ ಸಾಧ್ಯವೆಂಬ ನಂಬಿಕೆಯನ್ನು ವ್ಯಕ್ತಪಡಿಸಿದರು.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಂಘಟನೆ, ಮಾರ್ಕೆಟಿಂಗ್ ಹಾಗೂ ಕಾನೂನು ಅರಿವಿಗೆ ಪ್ರಾಯೋಗಿಕ ಮಾರ್ಗದರ್ಶನ – ಸಂತೋಷ್ ಕೊಟ್ಲಿ ಕಾರ್ಯಾಗಾರ
ಇದೇ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಬಳಿ ಬರುವ ನೈಬರ್ ವುಡ್ ರೆಸಾರ್ಟ್ ನಲ್ಲಿ ನಡೆದ ಕಾರ್ಯಾಗಾರದಲ್ಲಿ ಹುಬ್ಬಳ್ಳಿಯ ಸಂತೋಷ್ ಕೊಟ್ಲಿ ಅವರು ರಿಯಲ್ ಎಸ್ಟೇಟ್ ಕ್ಷೇತ್ರದ ಸಂಘಟನೆ, ಮಾರ್ಕೆಟಿಂಗ್, ಕಾನೂನು ಅರಿವು, ರೇರಾ ಕಾಯ್ದೆ, ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಹೂಡಿಕೆ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ನೆಟ್ವರ್ಕ್ ವಿಸ್ತರಣೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಪ್ರಾಯೋಗಿಕ ಮಾರ್ಗದರ್ಶನ ನೀಡಿದರು.

ಆರ್ಥಿಕ ಸಬಲೀಕರಣದ ಶಕ್ತಿಯುತ ವೇದಿಕೆ
ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್ವರ್ಕ್ ಕೇವಲ ಒಂದು ಸಂಘಟನೆಯಲ್ಲ — ಇದು ಸಮಾಜದ ಆರ್ಥಿಕ ಶಕ್ತಿಯನ್ನು ಒಗ್ಗೂಡಿಸುವ, ಯುವಕರಿಗೆ ದಾರಿ ತೋರಿಸುವ ಹಾಗೂ ಹೊಸ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವ ಶಕ್ತಿಯುತ ವೇದಿಕೆಯಾಗಿದೆ.

ಪ್ರದೀಪ್ ಕಂಕಣವಾಡಿ ಅವರ ದೂರ ದೃಷ್ಟಿಯಿಂದ ರಾಜ್ಯವ್ಯಾಪಿ ವಿಸ್ತರಣೆಗೆ ಸಜ್ಜಾಗಿರುವ ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್ವರ್ಕ್
ಪ್ರದೀಪ್ ಕಂಕಣವಾಡಿ ಅವರ ದೂರದೃಷ್ಟಿ, ಸಂಘಟನಾ ಸಾಮರ್ಥ್ಯ ಮತ್ತು ಸಮಾಜ ಒಗ್ಗೂಡಿಸುವ ಮನೋಭಾವದಿಂದ ಈ ನೆಟ್ವರ್ಕ್ ರಾಜ್ಯದ ಪ್ರತಿಯೊಂದು ಮೂಲೆಯಲ್ಲೂ ವಿಸ್ತರಿಸುವ ಭರವಸೆ ಮೂಡಿದೆ. ಸಮಾಜದ ಪ್ರತಿಯೊಬ್ಬ ಸದಸ್ಯನನ್ನೂ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ವ್ಯವಹಾರಿಕವಾಗಿ ಬೆಳೆಸುವ ಉದ್ದೇಶದಿಂದ ಹುಟ್ಟಿಕೊಂಡಿರುವ ಈ ನೆಟ್ವರ್ಕ್ ಭವಿಷ್ಯದಲ್ಲಿ ಮಹತ್ತರ ಸಾಧನೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಪ್ರದೀಪ್ ಕಂಕಣವಾಡಿ, ಬೆಂಗಳೂರು ಜಿಲ್ಲಾ ಅಧ್ಯಕ್ಷ ಗುರುಪ್ರಸಾದ್, ಉಪಾಧ್ಯಕ್ಷರುಗಳಾದ ಆಂಜನೇಯ ಎನ್.ಎಸ್., ಎಚ್.ಆರ್. ಈರೇಶ್, ಮಧುಸೂದನ್, ಚನ್ನಮಲ್ಲ ಸ್ವಾಮಿ, ನರೇಂದ್ರ ಕರಡೇರ್, ಛಾಯ ಕಿರಣ್, ಪೂಜಾ ಮೆಣಸಿನಕಾಯಿ (ಹುಬ್ಬಳ್ಳಿ), ಮಾರೇಗೌಡ ಪಾಟೀಲ್ (ರಾಯಚೂರು), ಪ್ರದೀಪ್ (ತುಮಕೂರು), ಸಂಗಮೇಶ್ ಪಾಟೀಲ್ (ಬಾಗಲಕೋಟೆ) ಸೇರಿದಂತೆ ಇತರರು ಉಪಸ್ಥಿತರಿದ್ದರು.





