ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮಹಿಳಾ ಮೀಸಲಾತಿ ವಿವಾದ: ಕಾಂಗ್ರೆಸ್ ವಿರುದ್ಧ ಮಾಳವಿಕಾ ಅವಿನಾಶ್ ಆಕ್ರೋಶ, ಹೋರಾಟಕ್ಕೆ ಸಿ. ಮಂಜುಳಾ ಕರೆ

On: April 18, 2026 4:56 PM
Follow Us:

ಬೆಂಗಳೂರು: ಮಹಿಳಾ ಮೀಸಲು ಮಸೂದೆ ಕುರಿತು ರಾಜ್ಯ ರಾಜಕೀಯದಲ್ಲಿ ವಾಗ್ವಾದ ತೀವ್ರಗೊಂಡಿದ್ದು, ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿವೆ ಎಂದು ರಾಜ್ಯ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಮಹಿಳಾ ಮೀಸಲಾತಿ ವಿಚಾರವು ದಶಕಗಳ ಹೋರಾಟದ ಫಲವಾಗಿದ್ದರೂ, ಅದಕ್ಕೆ ತಡೆ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕಾ ಅವಿನಾಶ್ ಅವರು ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಸುಮಾರು ಏಳು ದಶಕಗಳ ಹೋರಾಟದ ನಂತರ ಮಹಿಳಾ ಮೀಸಲು ಮಸೂದೆ ಜಾರಿಗೆ ಬರಬೇಕಾಗಿದ್ದ ಸಂದರ್ಭದಲ್ಲಿ ಅದನ್ನು ಬೆಂಬಲಿಸದೆ ಕಾಂಗ್ರೆಸ್ ಹಾಗೂ ಅದರ ಮೈತ್ರಿ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ” ಎಂದು ಆರೋಪಿಸಿದರು.

ಮಹಿಳಾ ಮೀಸಲಾತಿ ವಿಷಯದಲ್ಲಿ ಎಲ್ಲ ಪಕ್ಷಗಳ ಒಮ್ಮತ ಅಗತ್ಯವಿದ್ದರೂ, ಕಾಂಗ್ರೆಸ್ ಅಡ್ಡಿಪಡಿಸಿದ ಪರಿಣಾಮ ಮಸೂದೆ ಅಂಗೀಕಾರಕ್ಕೆ ವಿಳಂಬವಾಗಿದೆ ಎಂದು ಅವರು ಹೇಳಿದರು. “ಮಹಿಳಾ ಸಬಲೀಕರಣದ ಈ ಐತಿಹಾಸಿಕ ಅವಕಾಶವನ್ನು ರಾಜಕೀಯ ಕಾರಣಗಳಿಗೆ ಅಡ್ಡಿಪಡಿಸಲಾಗಿದೆ. ಇದನ್ನು ದೇಶದ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಮಾಳವಿಕಾ ಅವಿನಾಶ್ ಅಭಿಪ್ರಾಯಪಟ್ಟರು.

ಅವರು ಮುಂದುವರಿದು, ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಒತ್ತು ನೀಡುತ್ತಿವೆ ಎಂದು ಟೀಕಿಸಿದರು. “ಸಮಾಜವಾದಿ ಪಕ್ಷ, ಡಿಎಂಕೆ ಹಾಗೂ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳಲ್ಲಿ ಕುಟುಂಬದವರೇ ಸಂಸತ್ತಿನಲ್ಲಿ ಅಥವಾ ವಿಧಾನಸಭೆಯಲ್ಲಿ ಸ್ಥಾನ ಪಡೆಯುವ ಪ್ರವೃತ್ತಿ ಇದೆ. ಆದರೆ ಸಾಮಾನ್ಯ ಮಹಿಳೆಯರಿಗೆ ಅವಕಾಶ ನೀಡುವ ವಿಷಯದಲ್ಲಿ ಅಡ್ಡಿ ಉಂಟುಮಾಡಲಾಗುತ್ತಿದೆ” ಎಂದು ಅವರು ಹೇಳಿದರು.

ಮಹಿಳಾ ಮೀಸಲಾತಿ ಜಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವನ್ನು ಪ್ರಶಂಸಿಸಿದ ಅವರು, “ಮಹಿಳಾ ಸಬಲೀಕರಣದ ಬೆಳಕನ್ನು ಪ್ರಧಾನಿ ಮೋದಿ ಅವರು ತೋರಿಸಿದ್ದಾರೆ. ಆದರೆ ಕೆಲವು ಪಕ್ಷಗಳು ಅದನ್ನು ನಂದಿಸಲು ಪ್ರಯತ್ನಿಸುತ್ತಿವೆ” ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕು. ಸಿ. ಮಂಜುಳಾ ಅವರು ಮಹಿಳಾ ವಿರೋಧಿ ನಿಲುವುಗಳ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲು ಮಸೂದೆ ಜಾರಿಯ ನಿರೀಕ್ಷೆಯಲ್ಲಿದ್ದ ಸಂದರ್ಭವನ್ನು ರಾಜಕೀಯ ವಿರೋಧದಿಂದ ನಿರಾಸೆಗೆ ತಿರುಗಿಸಲಾಗಿದೆ ಎಂದು ಹೇಳಿದರು. “ನಾವು ಈ ವಿಷಯವನ್ನು ಸಂಭ್ರಮಾಚರಣೆಯಾಗಿ ನೋಡುತ್ತಿದ್ದೆವು. ಆದರೆ ಈಗ ಅದು ಆಕ್ರೋಶದ ಹೋರಾಟವಾಗಿ ಮಾರ್ಪಟ್ಟಿದೆ” ಎಂದು ಅವರು ಹೇಳಿದರು.

ಮಹಿಳಾ ವಿರೋಧಿ ನಿಲುವುಗಳನ್ನು ಖಂಡಿಸುವ ಬ್ಯಾನರ್ ಹಾಗೂ ಪೋಸ್ಟರ್ ಅನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. “ನಾರಿ ಶಕ್ತಿಗೆ ಅಡ್ಡವಾದ ಕೈಗಳು” ಎಂಬ ಘೋಷಣೆಯೊಂದಿಗೆ ಹೋರಾಟ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.

ಅವರ ಪ್ರಕಾರ, ಇಂದು ಮೈಸೂರು, ಗದಗ, ನೆಲಮಂಗಲ ಮತ್ತು ಕೋಲಾರ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆಯಲಿವೆ. ಮುಂದಿನ ದಿನಗಳಲ್ಲಿ ಬೆಂಗಳೂರು ಮಹಾನಗರದ ಮೂರು ಜಿಲ್ಲೆಗಳಲ್ಲಿ ಹೋರಾಟವನ್ನು ವಿಸ್ತರಿಸಲಾಗುವುದು ಎಂದೂ ಹೇಳಿದರು.

“ಈ ಹೋರಾಟವು ನಿರಂತರವಾಗಿ ನಡೆಯಲಿದೆ. ಮಹಿಳಾ ಮೀಸಲಾತಿಗೆ ತಡೆ ನೀಡಿದ ನಿಲುವುಗಳ ವಿರುದ್ಧ ಜನಜಾಗೃತಿ ಮೂಡಿಸಲಾಗುವುದು” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಉಪಸ್ಥಿತರಿದ್ದರು.

ಮಹಿಳಾ ಮೀಸಲು ಮಸೂದೆ ವಿಚಾರವು ರಾಜ್ಯ ರಾಜಕೀಯದಲ್ಲಿ ಹೊಸ ಸಂಘರ್ಷಕ್ಕೆ ಕಾರಣವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಆರೋಪ–ಪ್ರತ್ಯಾರೋಪಗಳು ತೀವ್ರಗೊಂಡಿವೆ. ಮಹಿಳಾ ಸಬಲೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಈ ರಾಜಕೀಯ ವಾಗ್ವಾದ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ರೂಪ ಪಡೆಯುವ ಸಾಧ್ಯತೆ ಇದೆ.

K.M.Sathish Gowda

Join WhatsApp

Join Now

Facebook

Join Now

Leave a Comment