ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಚಿಕ್ಕಮಗಳೂರು: ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೂ ಶ್ರೀ ಬಸವೇಶ್ವರ ಜಯಂತಿ ಸಂಭ್ರಮ; ‘ಅರಿವಿನ ಜಾಗೃತಿಗೆ ಧರ್ಮದ ಅವಶ್ಯಕತೆ’ — ಶ್ರೀ ರಂಭಾಪುರಿ ಜಗದ್ಗುರುಗಳು

On: May 27, 2026 8:13 PM
Follow Us:

ಚಿಕ್ಕಮಗಳೂರು: “ಜೀವನದಲ್ಲಿ ಅರಿವಿನ ಜಾಗೃತಿಯನ್ನು ಮೂಡಿಸಲು ಧರ್ಮದ ಅವಶ್ಯಕತೆಯಿದೆ. ಗುರುದರ್ಶನ ಪುಣ್ಯದ ಫಲವಾಗಿದ್ದು, ಅವರ ಅನುಗ್ರಹ ಮತ್ತು ಸತ್ಸಂಗದಿಂದ ಮಾತ್ರ ಸಂಸಾರದ ಬಂಧನದಿಂದ ಮುಕ್ತಿ ಹೊಂದಲು ಸಾಧ್ಯ,” ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ’ ಹಾಗೂ ಭಕ್ತಿ ಭಂಡಾರಿ ‘ಶ್ರೀ ಬಸವೇಶ್ವರ ಜಯಂತಿ’ ಅಂಗವಾಗಿ ನಡೆದ ಜನಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ರಂಭಾಪುರಿ ಜಗದ್ಗುರುಗಳು, “ಲೌಕಿಕ ಸಂಬಂಧಗಳು ಕಾಲದ ಹೊಳೆಯಲ್ಲಿ ಸವೆದು ಹೋಗಬಹುದು, ಆದರೆ ಗುರು-ಶಿಷ್ಯರ ಸಂಬಂಧ ಶಾಶ್ವತವಾದದ್ದು. ನೋವಿನ ಬದುಕಿಗೆ ಬೆಳಕಾಗಿ ಮಾರ್ಗದರ್ಶನ ನೀಡುವವರು ಗುರು. ವೀರಶೈವ ಧರ್ಮವೆಂಬ ವೃಕ್ಷಕ್ಕೆ ಜಗದ್ಗುರು ರೇಣುಕಾಚಾರ್ಯರು ಮೂಲ ಬೇರಾದರೆ, ಬಸವಣ್ಣನವರಂತಹ ಶರಣರು ಆ ವೃಕ್ಷದ ಫಲ ಪುಷ್ಪಗಳಿದ್ದಂತೆ. ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶಿವಪಥವನ್ನು ಅರಿಯಲು ಗುರುಪಥವೇ ಮೊದಲ ಮೆಟ್ಟಿಲು ಎಂದು ಸಾರಿದ ಬಸವಣ್ಣನವರು, ಕಾಯಕದ ಮೂಲಕವೇ ಕೈಲಾಸವನ್ನು ಕಾಣುವ ಮಾರ್ಗವನ್ನು ತೋರಿಸಿಕೊಟ್ಟರು,” ಎಂದು ವಿವರಿಸಿದರು.

​ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಹೆಚ್.ಡಿ. ತಮ್ಮಯ್ಯ ಅವರು, “ತಂದೆ ಮೆಚ್ಚಿದರೆ ಮಗನಿಗೆ ಶ್ರೇಯಸ್ಸು, ಗುರು ಮೆಚ್ಚಿದರೆ ಶಿಷ್ಯನಿಗೆ ಸದ್ಗತಿ ದೊರೆಯುತ್ತದೆ. ಗುರುದೇವನ ಕರುಣೆಗೆ ಸಮಾನವಾದದ್ದು ಮತ್ತೊಂದಿಲ್ಲ, ಅದು ಜೀವನದ ದೊಡ್ಡ ಆಸ್ತಿ,” ಎಂದು ಬಣ್ಣಿಸಿದರು.

ಬೆಳ್ಳೂಗುಂದ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಭಕ್ತಿ ಭಂಡಾರಿ ಶ್ರೀ ಬಸವೇಶ್ವರರು ಸಮಾಜದ ಕೆಡುಕುಗಳನ್ನು ಮೆಟ್ಟಿ ನಿಂತು, ಒಳಿತಿನ ಕಡೆಗೆ ಸಾಗಲು ಸ್ಫೂರ್ತಿಯಾದ ಮಹಾಪುರುಷರು. ಪ್ರತಿಯೊಬ್ಬರೂ ಬದುಕಿಗೆ ಒಂದು ಗುರಿ ಮತ್ತು ಗುರುವನ್ನು ಹೊಂದುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು,” ಎಂದರು.

ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಅಹಿಂಸೆಯಿಂದ ಹಿಡಿದು ಧ್ಯಾನದವರೆಗಿನ ದಶಧರ್ಮ ಸೂತ್ರಗಳು ಮಾನವನ ಜೀವನ ವಿಕಾಸಕ್ಕೆ ಬುನಾದಿ. ಭೌತಿಕ ಜೀವನದ ಯಶಸ್ಸಿಗೆ ರೇಣುಕಾಚಾರ್ಯರ ತತ್ವ ಚಿಂತನೆಗಳು ಇಂದಿಗೂ ದಾರಿದೀಪವಾಗಿವೆ,” ಎಂದು ಅಭಿಪ್ರಾಯಪಟ್ಟರು.

​ಟ್ರಸ್ಟ್‌ನ ಉಪಾಧ್ಯಕ್ಷ ಜೆ.ಬಿ. ಸುದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೂರ್ಯನ ಬೆಳಕಿಗೆ ಕಮಲ ಅರಳುವಂತೆ, ಗುರುವಿನ ಕರುಣೆಗೆ ಆತ್ಮ ಅರಳುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ ನಡೆಯಿತು ಮತ್ತು ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯರು 16 ಜನ ವಿದ್ಯಾರ್ಥಿಗಳಿಗೆ ಶಿವದೀಕ್ಷೆ ಹಾಗೂ ಮಂತ್ರೋಪದೇಶ ನೀಡಿದರು. ಸಮಾರಂಭದಲ್ಲಿ ರೇಣುಕಾಚಾರ್ಯ ಟ್ರಸ್ಟ್‌ನ ಪದಾಧಿಕಾರಿಗಳಾದ ಯು.ಎಂ. ಬಸವರಾಜು, ಎಂ.ಡಿ. ಪುಟ್ಟಸ್ವಾಮಿ, ಎಸ್.ಎಂ. ದೇವಣ್ಣಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಶಿವಮೊಗ್ಗ: ಸೆಪ್ಟೆಂಬರ್‌ನಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಅದ್ದೂರಿ ‘ಶ್ರೀ ವೀರಭದ್ರೇಶ್ವರ ಜಯಂತೋತ್ಸವ’; ಶ್ರೀಶೈಲ ಜಗದ್ಗುರುಗಳಿಗೆ ಆಮಂತ್ರಣ

​ಧರ್ಮದ ಹಾದಿಯಲ್ಲಿ ಶ್ರಮ ಸಂಸ್ಕೃತಿ ಅಳವಡಿಸಿಕೊಂಡಾಗ ಬದುಕು ಉಜ್ವಲ: ಶ್ರೀ ರಂಭಾಪುರಿ ಜಗದ್ಗುರುಗಳು

ಶಿವಮೊಗ್ಗದಲ್ಲಿ ಐತಿಹಾಸಿಕ ಅಡ್ಡಪಲ್ಲಕ್ಕಿ ಮಹೋತ್ಸವ ಯಶಸ್ವಿಗೊಳಿಸಿದ ಸಮಾಜದ ಅಪ್ರತಿಮ ಕಣ್ಣುಗಳು ಸಿ.ಎಸ್. ಷಡಾಕ್ಷರಿ ಹಾಗೂ ಬಳ್ಳೇಕೆರೆ ಸಂತೋಷ್

​”ಇತಿಹಾಸ ಬದಲಿಸಲಾಗದು, ಮೂಲ ಮರೆಯದಿರಿ: ಸೌಹಾರ್ದತೆ ಮತ್ತು ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಶಿವಮೊಗ್ಗದಲ್ಲಿ ಪಂಚಪೀಠಗಳ ಜಗದ್ಗುರುಗಳ ಪಂಚಸೂತ್ರ ನುಡಿಗಳು”

ಶಿವಮೊಗ್ಗದ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮಜಾಗೃತಿ ಸಮಾವೇಶದಲ್ಲಿ ಸದ್ದು ಮಾಡಿದ ಆಯನೂರು ಮಂಜುನಾಥ್ ಹೇಳಿಕೆ: “ನಾನು ಒಪ್ಪಿಕೊಳ್ಳುವ ಏಕೈಕ ನಾಯಕ ಬಿ.ಎಸ್. ಯಡಿಯೂರಪ್ಪ ಮಾತ್ರ”

“ವಿಶ್ವ ಅಶಾಂತಿಗೆ ಬಸವತತ್ವವೇ ಔಷಧ”: ಜರ್ಮನಿಯ ನೆಲದಲ್ಲಿ ವಿಶ್ವಶಾಂತಿಯ ಸಂದೇಶ ಸಾರಿದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ

Leave a Comment