ಸೂಗೂರು (ಶಿವಮೊಗ್ಗ ತಾಲೂಕು): ಗ್ರಾಮೀಣ ಭಾಗದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ಕೇಂದ್ರಬಿಂದುವಾಗಿರುವ ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಲ್ಲ; ಅವು ಜನರನ್ನು ಒಗ್ಗೂಡಿಸುವ ಶಕ್ತಿ ಕೇಂದ್ರಗಳಾಗಿವೆ ಎಂಬುದಕ್ಕೆ ಶಿವಮೊಗ್ಗ ತಾಲೂಕಿನ ಸೂಗೂರು ಗ್ರಾಮ ಮತ್ತೊಮ್ಮೆ ಸಾಕ್ಷಿಯಾಯಿತು. ಗ್ರಾಮದ ಶ್ರೀ ಮೃಡಬಸವೇಶ್ವರ ಸ್ವಾಮಿ ನೂತನ ಕಲ್ಲಿನ ಭವ್ಯ ದೇವಸ್ಥಾನದ ಉದ್ಘಾಟನೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 48ನೇ ದಿನದ ಮಹಾ ಮಂಡಲೋತ್ಸವ, ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.


ಗ್ರಾಮದ ಇತಿಹಾಸದಲ್ಲಿಯೇ ಅಪರೂಪದ ಧಾರ್ಮಿಕ ಉತ್ಸವವಾಗಿ ಗುರುತಿಸಿಕೊಂಡ ಈ ಸಮಾರಂಭದಲ್ಲಿ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ ವಹಿಸಿದ್ದರು.

ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಮಳಲಿ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳು, ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ, ಭಕ್ತರ ಜಯಘೋಷ, ಸಾಂಸ್ಕೃತಿಕ ವೈಭವ ಹಾಗೂ ಸಮಾಜಮುಖಿ ಸಂದೇಶಗಳಿಂದ ಕೂಡಿದ ಈ ಕಾರ್ಯಕ್ರಮವು ಧರ್ಮ ಮತ್ತು ಸಂಸ್ಕೃತಿಯ ಮಹತ್ವವನ್ನು ಮತ್ತೊಮ್ಮೆ ಜನಮಾನಸದಲ್ಲಿ ಬಿತ್ತುವ ಕಾರ್ಯ ಮಾಡಿತು.


ಧರ್ಮ ಮತ್ತು ಪೀಠಗಳ ಶಕ್ತಿ ದೇಶಕ್ಕೆ ಮಾರ್ಗದರ್ಶನ: ಆಯನೂರು ಮಂಜುನಾಥ್
ಧರ್ಮಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಅವರು, “ದೇಶದಾದ್ಯಂತ ವೀರಶೈವ-ಲಿಂಗಾಯತ ಸಮುದಾಯವನ್ನು ಸಂಘಟಿಸುವಲ್ಲಿ ಕಾಶಿ, ಕೇದಾರ, ಶ್ರೀಶೈಲ, ಉಜ್ಜಯಿನಿ ಹಾಗೂ ಬಾಳೆಹೊನ್ನೂರಿನ ರಂಭಾಪುರಿ ಪೀಠಗಳು ಮಹತ್ತರ ಪಾತ್ರ ವಹಿಸುತ್ತಿವೆ. ಹೆಮ್ಮೆಯ ಸಂಗತಿಯೆಂದರೆ, ಈ ಪಂಚಪೀಠಗಳ ಪೀಠಾಧೀಶರು ಕರ್ನಾಟಕ ಮೂಲದವರಾಗಿದ್ದು, ತಮ್ಮ ಆಧ್ಯಾತ್ಮಿಕ ನಾಯಕತ್ವದ ಮೂಲಕ ಇಡೀ ದೇಶಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಸಹ ಧ್ಯಾನ ಹಾಗೂ ಆಧ್ಯಾತ್ಮಿಕ ಚಿಂತನೆಗಾಗಿ ಕೇದಾರ ಪೀಠಕ್ಕೆ ಭೇಟಿ ನೀಡುತ್ತಾರೆ” ಎಂದು ಹೇಳಿದರು.
ಬಾಳೆಹೊನ್ನೂರಿನ ರಂಭಾಪುರಿ ಪೀಠದ 121ನೇ ಜಗದ್ಗುರುಗಳು ಕಳೆದ 35 ವರ್ಷಗಳಿಂದ ಧರ್ಮ, ಸಂಸ್ಕೃತಿ ಹಾಗೂ ಸಾಮಾಜಿಕ ಜಾಗೃತಿಯ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಂತಹ ಮಹಾನ್ ಆಧ್ಯಾತ್ಮಿಕ ನಾಯಕರು ಇಂದು ಸೂಗೂರು ಗ್ರಾಮಕ್ಕೆ ಆಗಮಿಸಿರುವುದು ಗ್ರಾಮಸ್ಥರ ಪುಣ್ಯ ಮತ್ತು ಭಾಗ್ಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ರಂಭಾಪುರಿ ಪೀಠದ ಮೇಲೆ ಅಪಾರ ಭಕ್ತಿ ಹಾಗೂ ಗೌರವ ಹೊಂದಿದ್ದು, ಪೀಠದ 119ನೇ ಜಗದ್ಗುರುಗಳಾದ ವೀರಗಂಗಾಧರೇಶ್ವರ ಮಹಾಸ್ವಾಮೀಜಿಗಳ ಆಶೀರ್ವಾದ ಮತ್ತು ಮಾರ್ಗದರ್ಶನವನ್ನು ಸದಾ ಪಡೆಯುತ್ತಿದ್ದರು. ಇದುವೇ ರಂಭಾಪುರಿ ಪೀಠದ ಆಧ್ಯಾತ್ಮಿಕ ಪ್ರಭಾವ ಹಾಗೂ ಜನಮಾನಸದಲ್ಲಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.
“ಇಂದಿನ ಮೊಬೈಲ್ ಯುಗದಲ್ಲಿ ಮಾನವೀಯ ಮೌಲ್ಯಗಳು, ಹಿರಿಯರ ಮೇಲಿನ ಗೌರವ, ಸಂಸ್ಕಾರಯುತ ಜೀವನಶೈಲಿ ಮತ್ತು ಕುಟುಂಬ ಬಾಂಧವ್ಯಗಳು ನಿಧಾನವಾಗಿ ಕ್ಷೀಣಿಸುತ್ತಿವೆ. ನಾವು ಆಧುನಿಕತೆಯತ್ತ ಸಾಗುತ್ತಿರುವ ಭರದಲ್ಲಿ ನಮ್ಮತನವನ್ನೇ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ದೇವಸ್ಥಾನಗಳು ಕೇವಲ ಪೂಜಾ ಕೇಂದ್ರಗಳಲ್ಲ, ಅವು ಸಮಾಜಕ್ಕೆ ಸಂಸ್ಕಾರ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸುವ ವಿಶ್ವವಿದ್ಯಾಲಯಗಳಾಗಿವೆ.”
“ದೇವಸ್ಥಾನದ ಮೆಟ್ಟಿಲುಗಳು ಅಹಂಕಾರವನ್ನು ತುಳಿದು ವಿನಯದಿಂದ ಬದುಕುವುದನ್ನು ಕಲಿಸುತ್ತವೆ. ಗರ್ಭಗುಡಿಯ ಸಣ್ಣ ಬಾಗಿಲು ಎಂತಹ ಶ್ರೀಮಂತನಾದರೂ ತಲೆಬಾಗಿಯೇ ಪ್ರವೇಶಿಸಬೇಕು ಎಂಬ ಸಂದೇಶ ನೀಡುತ್ತದೆ. ತೆಂಗಿನಕಾಯಿ ಒಡೆಯುವ ಸಂಪ್ರದಾಯವು ಬಾಹ್ಯ ಆಡಂಬರಕ್ಕಿಂತ ಆಂತರಿಕ ಪರಿಶುದ್ಧತೆ ಮುಖ್ಯ ಎಂಬುದನ್ನು ತಿಳಿಸುತ್ತದೆ. ತೆಂಗಿನಕಾಯಿಯ ಹೊರಭಾಗ ಗಟ್ಟಿಯಾಗಿದ್ದರೂ ಅದರ ಒಳಭಾಗ ಶುಭ್ರವಾಗಿರುವಂತೆ ನಮ್ಮ ಮನಸ್ಸೂ ನಿರ್ಮಲವಾಗಿರಬೇಕು” ಎಂದು ವಿವರಿಸಿದರು.
ಅಲ್ಲದೆ, “ಊದಿನಕಡ್ಡಿಯಂತೆ ನಾವು ಸವೆದು ಸಮಾಜಕ್ಕೆ ಸುಗಂಧ ನೀಡಬೇಕು. ಕರ್ಪೂರದಂತೆ ಉರಿದು ಇತರರ ಬದುಕಿಗೆ ಬೆಳಕಾಗಬೇಕು. ಕೇವಲ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿ, ಹೊರಗೆ ಹೋಗಿ ಮತ್ತೊಬ್ಬರಿಗೆ ಕೇಡು ಬಯಸುವ ಮನೋಭಾವ ಹೊಂದಿದ್ದರೆ ಅದು ನಿಜವಾದ ಭಕ್ತಿಯಲ್ಲ. ದೇವರ ಆರಾಧನೆ ಎಂದರೆ ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ” ಎಂದು ಮಾರ್ಮಿಕವಾಗಿ ಹೇಳಿದರು.

ಮೊಬೈಲ್ ಯುಗದಲ್ಲಿ ಸಂಸ್ಕಾರಗಳ ಸಂರಕ್ಷಣೆ ದೊಡ್ಡ ಸವಾಲು: ಡಿ.ಎಸ್. ಅರುಣ್
ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯ ಶಕ್ತಿ ಕುಟುಂಬ ವ್ಯವಸ್ಥೆಯಲ್ಲಿದೆ ಎಂದು ಹೇಳಿದರು. ತಾಯಂದಿರು ಮಕ್ಕಳಿಗೆ ನೀಡುವ ಸಂಸ್ಕಾರಗಳು ದೇಶದ ಭವಿಷ್ಯವನ್ನು ರೂಪಿಸುತ್ತವೆ. ಇಂದು ಭಾರತ ವಿಶ್ವದ ಗಮನ ಸೆಳೆಯುತ್ತಿರುವುದಕ್ಕೆ ಕಾರಣ ಅದರ ಸಂಸ್ಕೃತಿ ಮತ್ತು ಮೌಲ್ಯಗಳ ಶ್ರೀಮಂತ ಪರಂಪರೆಯಾಗಿದೆ ಎಂದು ಅವರು ತಿಳಿಸಿದರು.
“ಇಂದು ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳು ಮಕ್ಕಳ ಬದುಕಿನ ಅವಿಭಾಜ್ಯ ಅಂಗವಾಗುತ್ತಿವೆ. ಒಂದೇ ಮನೆಯಲ್ಲಿ ಎಲ್ಲರೂ ಇದ್ದರೂ ಪರಸ್ಪರ ಮಾತನಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಬುದ್ಧಿವಂತಿಕೆ ಹೆಚ್ಚಾದರೂ ಭಾವನಾತ್ಮಕ ಸಂಬಂಧಗಳು ಕ್ಷೀಣಿಸುತ್ತಿವೆ.”
ಹಿಂದೆ ಮಕ್ಕಳು ಹಿರಿಯರ ಮಾತು ಕೇಳುತ್ತಿದ್ದರು. ಇಂದು ಪೋಷಕರೇ ಮಕ್ಕಳೊಂದಿಗೆ ಮಾತನಾಡಲು ಹಿಂಜರಿಯುವಂತಹ ಪರಿಸ್ಥಿತಿ ಎದುರಾಗಿದೆ. ಇದು ಕುಟುಂಬ ವ್ಯವಸ್ಥೆಗೆ ಅಪಾಯಕಾರಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ತಾಯಂದಿರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ನಮ್ಮ ಇತಿಹಾಸ, ಸಂಸ್ಕೃತಿ, ಪುರಾಣಗಳು ಹಾಗೂ ಧಾರ್ಮಿಕ ಮೌಲ್ಯಗಳನ್ನು ಅವರಿಗೆ ತಿಳಿಸಬೇಕು. ಇಲ್ಲವಾದರೆ ಮುಂದಿನ ಪೀಳಿಗೆ ತನ್ನ ಬೇರುಗಳನ್ನು ಮರೆತುಬಿಡುವ ಅಪಾಯವಿದೆ ಎಂದು ಎಚ್ಚರಿಸಿದರು.

ಧರ್ಮ ಎಂದರೆ ಮಾನವೀಯತೆ ಮತ್ತು ಸಹಬಾಳ್ವೆ: ಪ್ರೊ. ಹಾ.ಮಾ. ನಾಗರಾಜ್
ಮುಖ್ಯ ಉಪನ್ಯಾಸ ನೀಡಿದ ಸಹ್ಯಾದ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಹಾ.ಮಾ. ನಾಗರಾಜ್ ಅವರು ಧರ್ಮದ ನಿಜವಾದ ಅರ್ಥವನ್ನು ವಿಶ್ಲೇಷಿಸಿದರು. ಧರ್ಮ ಎಂದರೆ ಕೇವಲ ಪೂಜೆ-ಪುನಸ್ಕಾರವಲ್ಲ; ಅದು ಮನುಷ್ಯನ ಜೀವನವನ್ನು ಉತ್ತಮಗೊಳಿಸುವ ಮೌಲ್ಯಗಳ ಸಮೂಹವಾಗಿದೆ ಎಂದು ಹೇಳಿದರು.
ಜಗದ್ಗುರು ರೇಣುಕಾಚಾರ್ಯರು ಸಾರಿದ “ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಮನುಷ್ಯ ಮೊದಲು ತನ್ನ ಕುಟುಂಬವನ್ನು, ನೆರೆಹೊರೆಯವರನ್ನು, ಸಮಾಜವನ್ನು ಮತ್ತು ಪ್ರಕೃತಿಯನ್ನು ಪ್ರೀತಿಸಲು ಕಲಿಯಬೇಕು. ಅದುವೇ ನಿಜವಾದ ಧರ್ಮ ಎಂದು ವಿವರಿಸಿದರು. ಇಂದು ಜಗತ್ತಿನ ಅನೇಕ ರಾಷ್ಟ್ರಗಳು ಯುದ್ಧ, ಅಶಾಂತಿ ಮತ್ತು ಹಿಂಸಾಚಾರದಿಂದ ಬಳಲುತ್ತಿವೆ. ಆದರೆ ಭಾರತ ಧರ್ಮ, ಸತ್ಯ, ಸಹನೆ ಮತ್ತು ಅಹಿಂಸೆಯ ತತ್ವಗಳ ಮೂಲಕ ಶಾಂತಿಯ ಮಾರ್ಗವನ್ನು ಜಗತ್ತಿಗೆ ತೋರಿಸುತ್ತಿದೆ ಎಂದರು.
ಕಥೆಗಳು, ಉದಾಹರಣೆಗಳು ಮತ್ತು ಜೀವನ ಮೌಲ್ಯಗಳ ಮೂಲಕ ಅವರು ಸಭಿಕರಿಗೆ ಆಂತರಿಕ ಜ್ಞಾನದ ಮಹತ್ವವನ್ನು ತಿಳಿಸಿದರು. ಹೊರಗಿನ ಸೌಂದರ್ಯಕ್ಕಿಂತ ಒಳಗಿನ ಗುಣ ಮತ್ತು ಜ್ಞಾನವೇ ಮನುಷ್ಯನನ್ನು ಶ್ರೇಷ್ಠನನ್ನಾಗಿಸುತ್ತದೆ ಎಂದು ಹೇಳಿದರು.
“ರಾಜಕಾರಣದಲ್ಲಿ ಧರ್ಮ ಇರಬೇಕು; ಆದರೆ ಧರ್ಮದೊಳಗೆ ರಾಜಕಾರಣ ಇರಬಾರದು”

ಧರ್ಮ ಪ್ರಚಾರದಲ್ಲಿ ಜಗದ್ಗುರುಗಳ ಕೊಡುಗೆ ಅನನ್ಯ; ಮಹಿಳೆಯರ ಭಕ್ತಿ ಶ್ಲಾಘನೀಯ: ಎಸ್.ಎಸ್. ಜ್ಯೋತಿಪ್ರಕಾಶ್
ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ಮಾತನಾಡಿ, “ಶ್ರೀಮದ್ ರಂಭಾಪುರಿ ಜಗದ್ಗುರುಗಳು ವಿಶ್ರಾಂತಿಯನ್ನೂ ಲೆಕ್ಕಿಸದೆ ರಾಜ್ಯದ ಮೂಲೆಮೂಲೆಗಳಿಗೆ ಸಂಚರಿಸುತ್ತಾ ವೀರಶೈವ-ಲಿಂಗಾಯತ ಧರ್ಮದ ತತ್ವಗಳು, ಸಂಸ್ಕಾರ, ಇಷ್ಟಲಿಂಗ ಧಾರಣೆಯ ಮಹತ್ವ ಹಾಗೂ ವಿಭೂತಿಯ ಆಧ್ಯಾತ್ಮಿಕ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ. ಧರ್ಮದ ಬೆಳಕು ಪ್ರತಿಯೊಬ್ಬರ ಮನೆ ಬಾಗಿಲಿಗೂ ತಲುಪಬೇಕು ಎಂಬ ಸಂಕಲ್ಪದೊಂದಿಗೆ ಅವರು ನಿರಂತರವಾಗಿ ಸಮಾಜದ ಮಧ್ಯೆ ಸಂಚರಿಸುತ್ತಿದ್ದಾರೆ” ಎಂದು ಶ್ಲಾಘಿಸಿದರು.
“ನಾವು ಮಠದಲ್ಲೇ ಕುಳಿತುಕೊಂಡರೆ ಭಕ್ತರು ದಾರಿ ತಪ್ಪುವ ಸಾಧ್ಯತೆ ಇದೆ; ಆದ್ದರಿಂದ ನಾವು ಭಕ್ತರ ಮನೆ ಬಾಗಿಲಿಗೆ ತೆರಳಿ ಧರ್ಮದ ಅರಿವು ಮೂಡಿಸಬೇಕು” ಎಂಬ ಜಗದ್ಗುರುಗಳ ಆಶಯದಂತೆ ಇಂದು ಸೂಗೂರು ಗ್ರಾಮಕ್ಕೆ ಆಗಮಿಸಿರುವುದು ನಮ್ಮೆಲ್ಲರ ಸೌಭಾಗ್ಯ ಹಾಗೂ ಪುಣ್ಯಫಲವಾಗಿದೆ ಎಂದು ಹೇಳಿದರು.
ಇಂದಿನ ಧರ್ಮಸಭೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ವಿಶೇಷವಾಗಿ ಗಮನಸೆಳೆಯುವಂತಿತ್ತು. “ಮನೆಯ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ, ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಕ್ತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಧರ್ಮ ಮತ್ತು ಸಂಸ್ಕೃತಿಯ ಮೇಲಿನ ಅವರ ಬದ್ಧತೆಗೆ ಸಾಕ್ಷಿಯಾಗಿದೆ. ಸಮಾಜದಲ್ಲಿ ಧರ್ಮ, ಸಂಸ್ಕಾರ ಮತ್ತು ಕುಟುಂಬ ಮೌಲ್ಯಗಳ ಉಳಿವಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ” ಎಂದು ಅಭಿಪ್ರಾಯಪಟ್ಟರು.
ಜಗದ್ಗುರುಗಳ ಪಾದಸ್ಪರ್ಶ ಮತ್ತು ಆಶೀರ್ವಾದದಿಂದ ಸೂಗೂರು ಗ್ರಾಮವು ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಹಾರೈಸಿದ ಅವರು, ಇಂತಹ ಧರ್ಮಜಾಗೃತಿ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ, ಒಗ್ಗಟ್ಟು ಮತ್ತು ಮೌಲ್ಯಯುತ ಬದುಕಿನ ಅರಿವನ್ನು ಮೂಡಿಸುತ್ತವೆ ಎಂದು ಹೇಳಿದರು.

ಭವ್ಯ ದೇವಸ್ಥಾನ ನಿರ್ಮಾಣದ ಇತಿಹಾಸ ಮತ್ತು ಯುವಶಕ್ತಿಯ ಶ್ರಮ: ಬಿ.ಆರ್. ಮಹೇಶ್
ದೇವಸ್ಥಾನ ನಿರ್ಮಾಣದ ಪ್ರಾಸ್ತಾವಿಕ ನುಡಿಗಳನ್ನಾಡಿದ ಗ್ರಾಮದ ಮುಖಂಡರಾದ ಬಿ.ಆರ್. ಮಹೇಶ್ ಅವರು, “2021ರಲ್ಲಿ ಗ್ರಾಮಸ್ಥರೆಲ್ಲಾ ಒಟ್ಟುಗೂಡಿ ಈ ನಿರ್ಧಾರ ಕೈಗೊಂಡೆವು. ಹಿಂದೆ ಹಂಚಿನ ದೇವಸ್ಥಾನವಿದ್ದಾಗ ಮಳೆಗೆ ಸೋರುತ್ತಿತ್ತು, ಸಿರಿಗೆರೆ ಶ್ರೀಗಳು ನೀಡಿದ ಕಲ್ಪನೆ ಹಾಗೂ ಗ್ರಾಮದ ಹಿರಿಯರ ಸಹಕಾರದಿಂದ ಈ ಬೃಹತ್ ಯೋಜನೆ ಸಾಕಾರಗೊಂಡಿತು” ಎಂದರು.
ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಎಂ.ಜಿ. ಪ್ರಸನ್ನ ಅವರ ಮೂಲಕ ಪ್ರಸ್ತಾವನೆ ಸಲ್ಲಿಸಿದಾಗ, ನಮ್ಮ ಯೋಜನೆಯನ್ನು ಮೆಚ್ಚಿ ಯಡಿಯೂರಪ್ಪನವರು 2 ಕೋಟಿ ರೂಪಾಯಿಗಳ ಭರವಸೆ ನೀಡಿ, ತದನಂತರ ಒಟ್ಟು 1 ಕೋಟಿ ರೂಪಾಯಿ ಸರ್ಕಾರಿ ಅನುದಾನ ಲಭಿಸಿತು. ಕಲ್ಲಿನ ಈ ಭವ್ಯ ದೇವಸ್ಥಾನದ ತಳಪಾಯದ (Foundation) ವೆಚ್ಚವೇ 1 ಕೋಟಿ 30 ಲಕ್ಷ ರೂಪಾಯಿಗಳಾಗಿದ್ದು, ಒಟ್ಟಾರೆ ಸುಮಾರು 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಂದಿರ ನಿರ್ಮಾಣವಾಗಿದೆ.
“ದೇವಸ್ಥಾನದ ಹಿಂಭಾಗದಲ್ಲಿ 20 ಅಡಿ ಆಳ ತೆಗೆದರೂ ಗಟ್ಟಿ ನೆಲ ಸಿಗದಿದ್ದಾಗ, ‘ಡ್ಯಾಮ್ ಪ್ರಾಜೆಕ್ಟ್’ ತಾಂತ್ರಿಕ ಯುವಕನ ಮಾರ್ಗದರ್ಶನದಲ್ಲಿ ಭದ್ರವಾದ ಬೇಸ್ ಸಿದ್ಧಪಡಿಸಲಾಯಿತು. ಮಳೆ ಬರುತ್ತಿದ್ದ ಆ ತೀವ್ರ ಪರಿಸ್ಥಿತಿಯಲ್ಲಿ ಹಳ್ಳಿಯ ನೂರಾರು ಯುವಕರು ರಾತ್ರಿ-ಹಗಲು ಶ್ರಮಿಸಿ ಕಾಂಕ್ರೀಟ್ ಹಾಕಿ ಗೋಡೆ ಕುಸಿಯದಂತೆ ದೇವಸ್ಥಾನವನ್ನು ರಕ್ಷಿಸಿದರು.”
ಗ್ರಾಮದ ಒಂದು ಭಕ್ತರ ತಂಡವೇ ಒಟ್ಟಾಗಿ 75 ಲಕ್ಷ ರೂಪಾಯಿಗಳನ್ನು ನೀಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರ ಮುಕ್ತ ಹಸ್ತದ ಧನಸಹಾಯವನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು. ಅಲ್ಲದೆ, ಶ್ರೀ ರಂಭಾಪುರಿ ಜಗದ್ಗುರುಗಳು, ಮಳಲಿ ಶ್ರೀಗಳು ಹಾಗೂ ಬಿಳಿಕಿ ಶ್ರೀಗಳು ಈ ಪವಿತ್ರ ಕಾರ್ಯಕ್ರಮಕ್ಕೆ ಆಗಮಿಸಿ ಜ್ಞಾನದ ಬೆಳಕನ್ನು ನೀಡಿದ್ದಾರೆ.
ಜಗದ್ಗುರು ಬಸವಣ್ಣನವರ ‘ಇವ ನಮ್ಮವ’ ಎಂಬ ತತ್ವದಂತೆ ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಎಂಬ ಭೇದವನ್ನು ಮರೆತು ಇಡೀ ಸಮುದಾಯ ಒಂದಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.

350 ಕುಟುಂಬಗಳ ಒಗ್ಗಟ್ಟಿನಿಂದ ಮೂಡಿಬಂದ ಧಾರ್ಮಿಕ ವೈಭವ: ಎಸ್. ಜಿ. ಮಲ್ಲಿಕಾರ್ಜುನ
ಸಭೆಯಲ್ಲಿ ಗ್ರಾಮದ ಮುಖಂಡರಾದ ಎಸ್. ಜಿ. ಮಲ್ಲಿಕಾರ್ಜುನ ಅವರು ಮಾತನಾಡಿ, “ಭಕ್ತರಿಂದ ಮಠ, ಮಠದಿಂದ ಭಕ್ತರೇ ಹೊರತು ಬೇರೆ ಯಾರಿಂದಲೂ ಧರ್ಮದ ಉಳಿವು ಸಾಧ್ಯವಿಲ್ಲ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ವೇದವಾಕ್ಯದಂತೆ ನಾವು ಧರ್ಮವನ್ನು ಕಾಪಾಡಬೇಕು. ಇಡೀ ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆಗೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ದಾನ-ಧರ್ಮಗಳ ವಿಷಯದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನವಿದೆ. ಸೂಗೂರು ಗ್ರಾಮವು ಶ್ರೀ ತರಳಬಾಳು ಜಗದ್ಗುರುಗಳನ್ನು ನೀಡಿದ ಪುಣ್ಯಭೂಮಿಯಾಗಿದೆ. ಈ ಜಿಲ್ಲೆಯಲ್ಲಿ ಅಕ್ಕಮಹಾದೇವಿ, ಕುವೆಂಪು ಹಾಗೂ ರಾಜಕೀಯ ಮುತ್ಸದ್ದಿಗಳಾದ ಯಡಿಯೂರಪ್ಪ, ಜಿ.ಎಚ್. ಪಟೇಲ್, ಕಡಿದಾಳು ಮಂಜಪ್ಪನವರಂತಹ ನಾಯಕರು ಜನ್ಮತಾಳಿದ್ದಾರೆ” ಎಂದು ಹೆಮ್ಮೆಯಿಂದ ನುಡಿದರು.
“ದೇವಸ್ಥಾನದ ಆರಂಭಕ್ಕೆ ಆಯನೂರು ಮಂಜುನಾಥ್ ಅವರು ನೆರವು ನೀಡಿದ್ದರು. ನಂತರ ಊರಿನ ಯುವಕ ಎಂ.ಜಿ. ಪ್ರಸನ್ನ ಅವರ ಶ್ರಮದಿಂದ ಸರ್ಕಾರಿ ಅನುದಾನ ದೊರೆಯಿತು. ಇನ್ನುಳಿದಂತೆ ಊರಿನ ಸುಮಾರು 350 ಮನೆತನಗಳ ಬ್ಯಾಸಾಯಗಾರರಿಂದ ಹಾಗೂ ಹೊರಗಿನ ದಾನಿಗಳಿಂದ ಸ್ವಯಂಪ್ರೇರಿತ ಧನಸಹಾಯ ಲಭಿಸಿದೆ.”
ಇದೇ ಸಂದರ್ಭದಲ್ಲಿ ದೇವಸ್ಥಾನದ ಎದುರಿಗಿರುವ ಸುಂದರ ‘ಮೃಡಬಸವೇಶ್ವರ ಸಮುದಾಯ ಭವನ’ ನಿರ್ಮಾಣಕ್ಕಾಗಿ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಸಂಸದರ ನಿಧಿಯ ಅನುದಾನವನ್ನು ನೀಡಿದ್ದು, ಹಳೆಯ ಗ್ರಾಮ ಪಂಚಾಯಿತಿ ಜಾಗವನ್ನು ಬಳಸಿಕೊಂಡು ಸುಂದರ ಸಮುದಾಯ ಭವನವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಧರ್ಮ, ಸಂಸ್ಕೃತಿ ಮತ್ತು ಒಗ್ಗಟ್ಟಿನ ಹೊಸ ಇತಿಹಾಸ ಬರೆದ ಸೂಗೂರು
ಶ್ರೀ ಮೃಡಬಸವೇಶ್ವರ ಸ್ವಾಮಿ ನೂತನ ದೇವಸ್ಥಾನದ 48ನೇ ದಿನದ ಮಹಾ ಮಂಡಲೋತ್ಸವವು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿ ಉಳಿಯಲಿಲ್ಲ. ಅದು ಭಕ್ತಿ, ಧರ್ಮ, ಸಂಸ್ಕೃತಿ, ಸಾಮಾಜಿಕ ಜಾಗೃತಿ, ಯುವಶಕ್ತಿ, ಮಹಿಳಾ ಪಾಲ್ಗೊಳ್ಳುವಿಕೆ ಹಾಗೂ ಸಮುದಾಯದ ಒಗ್ಗಟ್ಟಿನ ಮಹೋತ್ಸವವಾಗಿ ರೂಪುಗೊಂಡಿತು.
ಜಗದ್ಗುರುಗಳ ಆಶೀರ್ವಾದ, ಗ್ರಾಮಸ್ಥರ ಪರಿಶ್ರಮ, ದಾನಿಗಳ ಉದಾರತೆ ಹಾಗೂ ಭಕ್ತರ ನಂಬಿಕೆಯಿಂದ ನಿರ್ಮಾಣಗೊಂಡ ಈ ದೇವಸ್ಥಾನ ಮುಂದಿನ ಪೀಳಿಗೆಗಳಿಗೆ ಧರ್ಮ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಸ್ಫೂರ್ತಿಕೇಂದ್ರವಾಗಿ ಉಳಿಯಲಿದೆ.
ಸೂಗೂರು ಗ್ರಾಮದಲ್ಲಿ ನಡೆದ ಈ ಮಹೋತ್ಸವವು ಗ್ರಾಮೀಣ ಕರ್ನಾಟಕದ ಧಾರ್ಮಿಕ ಜಾಗೃತಿ, ಸಾಮಾಜಿಕ ಏಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಜೀವಂತ ಪ್ರತೀಕವಾಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಗುರುತು ಮೂಡಿಸಿದೆ.










