ಸರ್ವರಿಗೂ ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು.
ನಾಗರ ಪಂಚಮಿ ಭಾರತದಲ್ಲಿ ಹಿಂದೂಗಳು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸುವ ವಿಶೇಷ ಹಬ್ಬ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗದೇವರನ್ನು ಪೂಜಿಸುವ ಸಂಪ್ರದಾಯವಿದೆ. ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಕಿವಿಗಳಿಗೆ ಒಳ್ಳೆಯ ವಿಚಾರಗಳನ್ನು ಆಲಿಸುವುದು, ಭಕ್ತಿ ಮತ್ತು ಆಧ್ಯಾತ್ಮದತ್ತ ಒಲವು ತೋರುವುದು, ಗುಡಿ-ಗೋಪುರ ಹಾಗೂ ದೇವಾಲಯಗಳಿಗೆ ಭೇಟಿ ನೀಡುವುದು, ಸಾಧು-ಸಂತರು ಮತ್ತು ಗುರುಗಳಿಗೆ ನಮಿಸುವುದು ಸೇರಿದಂತೆ ಧಾರ್ಮಿಕ ಚಟುವಟಿಕೆಗಳು ಗರಿಗೆದರಿಸುತ್ತವೆ.
ನಾಗರ ಪಂಚಮಿ ಹಬ್ಬದಲ್ಲಿ ಭಕ್ತರು, ವಿಶೇಷವಾಗಿ ಮಹಿಳೆಯರು, ದೇವಾಲಯಗಳಿಗೆ ತೆರಳಿ ನಾಗದೇವರನ್ನು ಪೂಜಿಸುತ್ತಾರೆ. ಕೆಲವೆಡೆ ಮನೆಯಲ್ಲಿಯೇ ನಾಗದೇವರ ಮಣ್ಣಿನ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ಹಾಲು, ಹೂವು, ಅರಿಶಿಣ, ಕುಂಕುಮ ಹಾಗೂ ಅಕ್ಕಿಯನ್ನು ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಹುತ್ತಗಳು ನಾಗರಹಾವುಗಳ ವಾಸಸ್ಥಾನವೆಂಬ ನಂಬಿಕೆಯಿರುವುದರಿಂದ ಹಲವು ಪ್ರದೇಶಗಳಲ್ಲಿ ಹುತ್ತಗಳಿಗೂ ವಿಶೇಷ ಪೂಜೆ ಸಲ್ಲಿಸುವ ಪದ್ಧತಿಯಿದೆ.

ನಮ್ಮ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ನಾಗರ ಪಂಚಮಿಗೆ ವಿಶಿಷ್ಟವಾದ ಸಾಂಸ್ಕೃತಿಕ ಮೆರುಗಿದೆ. ತವರಿಗೆ ಬಂದ ಹೆಣ್ಣು ಮಕ್ಕಳು, ಅಕ್ಕಪಕ್ಕದವರು ಹಾಗೂ ಬಂಧು-ಬಳಗದವರು ಒಂದೆಡೆ ಸೇರಿ ಜೋಕಾಲಿ ಆಡಿ, ಹಾಡುಗಳನ್ನು ಹಾಡುತ್ತಾ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾರೆ. ತಾಯಂದಿರ ಕೈ ರುಚಿಯ ವಿವಿಧ ಬಗೆಯ ಉಂಡೆ, ಸಿಹಿ ಹಾಗೂ ಖಾದ್ಯಗಳನ್ನು ಸವಿಯುತ್ತಾ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಇಲ್ಲಿನ ವಿಶೇಷ ಸಂಪ್ರದಾಯವಾಗಿದೆ.
ನಾಗರ ಪಂಚಮಿಯ ಹಿಂದಿರುವ ಪೌರಾಣಿಕ ಕಥೆ
ನಾಗರ ಪಂಚಮಿಯ ಆಚರಣೆಗೆ ಸಂಬಂಧಿಸಿದಂತೆ ದ್ವಾಪರಯುಗದ ಪ್ರಸಿದ್ಧ ಪೌರಾಣಿಕ ಕಥೆಯೊಂದಿದೆ.
ಅರ್ಜುನನ ಮಗ ಅಭಿಮನ್ಯು. ಅಭಿಮನ್ಯುವಿನ ಮಗ ಪರೀಕ್ಷಿತ. ಧರ್ಮರಾಯನ ಕಾಲಾನಂತರ ಭರತಖಂಡವನ್ನು ಆಳಿದ ಚಕ್ರವರ್ತಿ ಪರೀಕ್ಷಿತ. ದ್ವಾಪರಯುಗದ ಅಂತ್ಯದಲ್ಲಿ ಕಲಿಪುರುಷನ ಪ್ರಭಾವದಿಂದ ಪರೀಕ್ಷಿತನು ಮೃಗಬೇಟೆಗೆ ತೆರಳುತ್ತಾನೆ. ಬೇಟೆಯಾಡುತ್ತಾ ಆಯಾಸಗೊಂಡ ಆತ ಸಮೀಪದಲ್ಲಿದ್ದ ಶಮೀಕ ಮುನಿಗಳ ಆಶ್ರಮಕ್ಕೆ ತೆರಳಿ ನೀರನ್ನು ಕೇಳುತ್ತಾನೆ. ಆಗ ಶಮೀಕ ಮುನಿಗಳು ಧ್ಯಾನದಲ್ಲಿ ಮಗ್ನರಾಗಿದ್ದು, ಪರೀಕ್ಷಿತನ ಮಾತಿಗೆ ಪ್ರತಿಕ್ರಿಯಿಸುವುದಿಲ್ಲ.

ಇದರಿಂದ ಕುಪಿತನಾದ ಪರೀಕ್ಷಿತನು ಕಲಿಯ ಪ್ರೇರಣೆಯಿಂದ ಮುನಿಯ ಮೇಲೆ ಅಪಚಾರ ಮಾಡುತ್ತಾನೆ. ಸಮೀಪದಲ್ಲಿದ್ದ ಸತ್ತ ನಾಗರಹಾವನ್ನು ಮುನಿಯ ಕೊರಳಿಗೆ ಹಾಕಿ ಅರಮನೆಗೆ ಹಿಂದಿರುಗುತ್ತಾನೆ.
ಸ್ವಲ್ಪ ಸಮಯದ ನಂತರ ಕುಶ ಸಮಿಧೆಗಳನ್ನು ತರಲು ಹೊರಗೆ ಹೋಗಿದ್ದ ಶಮೀಕ ಮುನಿಗಳ ಪುತ್ರ ಶೃಂಗಿ ಮುನಿಯು ಆಶ್ರಮಕ್ಕೆ ಹಿಂದಿರುಗುತ್ತಾನೆ. ತಂದೆಯ ಕೊರಳಲ್ಲಿದ್ದ ಸತ್ತ ಹಾವನ್ನು ಕಂಡು ಕೋಪಗೊಂಡ ಆತ, “ಈ ಕೃತ್ಯ ಮಾಡಿದವನು ಏಳು ದಿನಗಳೊಳಗೆ ತಕ್ಷಕನಿಂದ ಕಚ್ಚಲ್ಪಟ್ಟು ಮರಣ ಹೊಂದಲಿ” ಎಂದು ಶಪಿಸುತ್ತಾನೆ.
ಧ್ಯಾನದಿಂದ ಎಚ್ಚೆತ್ತ ಶಮೀಕ ಮುನಿಗೆ ತಮ್ಮ ಮಗನು ಧರ್ಮಿಷ್ಠನಾದ ಪರೀಕ್ಷಿತ ಚಕ್ರವರ್ತಿಯನ್ನು ಶಪಿಸಿರುವುದು ತಿಳಿದು ದುಃಖವಾಗುತ್ತದೆ. ತಮ್ಮ ಶಿಷ್ಯನೊಬ್ಬನನ್ನು ಪರೀಕ್ಷಿತನ ಬಳಿಗೆ ಕಳುಹಿಸಿ ಶಾಪದ ವಿಷಯ ತಿಳಿಸಿ, ಸೂಕ್ತ ಪರಿಹಾರಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡುತ್ತಾರೆ.
ತನ್ನ ತಪ್ಪಿನ ಅರಿವಾದ ಪರೀಕ್ಷಿತನು ಮುನಿಗೆ ಮಾಡಿದ ಅಪಚಾರಕ್ಕಾಗಿ ಪಶ್ಚಾತ್ತಾಪಪಡುತ್ತಾನೆ. ಶಾಪದಿಂದ ತನ್ನ ಮರಣ ನಿಶ್ಚಿತವೆಂದು ಅರಿತ ಆತ, ಜೀವನದ ಕೊನೆಯ ಏಳು ದಿನಗಳನ್ನು ಭಗವಂತನ ಕಥಾ ಶ್ರವಣ ಹಾಗೂ ಭಜನೆಯಲ್ಲಿಯೇ ಕಳೆಯಲು ನಿರ್ಧರಿಸುತ್ತಾನೆ. ಅವನ ಇಚ್ಛೆಯಂತೆ ಶುಕಮುನಿಗಳು ಭಾಗವತ ಪುರಾಣದ ಕಥೆಗಳನ್ನು ಹೇಳುತ್ತಾರೆ. ಪರೀಕ್ಷಿತನು ತನ್ನ ರಾಣಿ ಇರಾವತಿಯೊಂದಿಗೆ ದೇವರ ಭಜನೆ ಮಾಡುತ್ತಾ ಆ ಏಳು ದಿನಗಳನ್ನು ಕಳೆಯುತ್ತಾನೆ.
ಇತ್ತ ಶೃಂಗಿ ಮುನಿಯ ಶಾಪದಂತೆ ಪರೀಕ್ಷಿತನನ್ನು ಕಚ್ಚಬೇಕಾದ ತಕ್ಷಕನಿಗೆ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ. ಆದರೂ ಮುನಿಯ ಶಾಪವನ್ನು ನೆರವೇರಿಸಬೇಕಾಗಿತ್ತು. ಪರೀಕ್ಷಿತನಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಅರಮನೆಯೊಳಗೆ ಯಾರೂ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕಾವಲು ಹಾಕಲಾಗಿತ್ತು.
ತಕ್ಷಕನು ಒಂದು ಉಪಾಯ ಕಂಡುಕೊಳ್ಳುತ್ತಾನೆ. ಪರಿಚಾರಕರು ಅರಸನಿಗೆ ಹಣ್ಣುಗಳನ್ನು ಕೊಂಡೊಯ್ಯುತ್ತಿರುವುದನ್ನು ಗಮನಿಸಿದ ಆತ, ಚಿಕ್ಕ ಹುಳುವಿನ ರೂಪದಲ್ಲಿ ಹಣ್ಣಿನೊಳಗೆ ಸೇರಿಕೊಳ್ಳುತ್ತಾನೆ. ಪರೀಕ್ಷಿತನು ಹಣ್ಣನ್ನು ಕತ್ತರಿಸಿದಾಗ ಅದರೊಳಗಿದ್ದ ಹುಳು ತಕ್ಷಕನೆಂಬುದು ಆತನಿಗೆ ಅರಿವಾಗುತ್ತದೆ. ನಂತರ ತಕ್ಷಕನು ತನ್ನ ನಿಜರೂಪ ಪಡೆದು ಪರೀಕ್ಷಿತನನ್ನು ಕಚ್ಚುತ್ತಾನೆ. ಪರೀಕ್ಷಿತನು ಮರಣ ಹೊಂದುತ್ತಾನೆ.
ಮರಣದ ಮುನ್ನ ಪರೀಕ್ಷಿತನು ತನ್ನ ರಾಣಿ ಇರಾವತಿಗೆ ಮಗ ಜನಮೇಜಯನನ್ನು ಬೆಳೆಸಿ, ರಾಜ್ಯಭಾರಕ್ಕೆ ಸಿದ್ಧಗೊಳಿಸುವಂತೆ ತಿಳಿಸುತ್ತಾನೆ. ತನ್ನ ಮರಣಕ್ಕೆ ತಕ್ಷಕನೇ ಕಾರಣ ಎಂಬ ವಿಷಯವನ್ನು ಮಗನಿಗೆ ತಿಳಿಸಬಾರದು. ನಾಗಕುಲದ ಮೇಲೆ ದ್ವೇಷ ಬೆಳೆಸುವುದು ಒಳ್ಳೆಯದಲ್ಲ ಎಂದು ಸಲಹೆ ನೀಡಿ ಪ್ರಾಣ ತ್ಯಜಿಸುತ್ತಾನೆ.

ಜನಮೇಜಯನ ಸರ್ಪಯಾಗ
ಪರೀಕ್ಷಿತನ ಮರಣದ ನಂತರ ಆತನ ಮಗ ಜನಮೇಜಯನು ಚಕ್ರವರ್ತಿಯಾಗುತ್ತಾನೆ. ತನ್ನ ತಂದೆಯ ಸಾವಿನ ನಿಜವಾದ ಕಾರಣ ಆತನಿಗೆ ತಿಳಿದಿರುವುದಿಲ್ಲ. ಮುಂದೆ ಉತ್ತಂಕ ಎಂಬ ವಟುವಿನ ಮೂಲಕ ಪರೀಕ್ಷಿತನ ಮರಣದ ರಹಸ್ಯ ಜನಮೇಜಯನಿಗೆ ತಿಳಿಯುತ್ತದೆ.
ತನ್ನ ತಂದೆಯ ಮರಣಕ್ಕೆ ತಕ್ಷಕನೇ ಕಾರಣ ಎಂದು ತಿಳಿದ ಜನಮೇಜಯನು ಕೋಪಗೊಂಡು ಸಂಪೂರ್ಣ ನಾಗಕುಲವನ್ನೇ ನಾಶಪಡಿಸುವ ಸಂಕಲ್ಪ ಮಾಡುತ್ತಾನೆ. ಇದಕ್ಕಾಗಿ ಬೃಹತ್ ಯಾಗಶಾಲೆಯನ್ನು ನಿರ್ಮಿಸಿ ಋಷಿ-ಮುನಿಗಳು ಹಾಗೂ ಬ್ರಾಹ್ಮಣರನ್ನು ಆಹ್ವಾನಿಸಿ ಸರ್ಪಯಾಗವನ್ನು ಪ್ರಾರಂಭಿಸುತ್ತಾನೆ.
ಯಾಗದ ಮಂತ್ರೋಚ್ಛಾರಣೆಯ ಪರಿಣಾಮವಾಗಿ ಒಂದೊಂದೇ ನಾಗಗಳು ಯಜ್ಞಕುಂಡಕ್ಕೆ ಬಿದ್ದು ಆಹುತಿಯಾಗತೊಡಗುತ್ತವೆ. ಅನೇಕ ನಾಗ ಸಂತತಿಗಳು ನಾಶವಾಗುತ್ತವೆ. ತಕ್ಷಕನನ್ನು ದೇವೇಂದ್ರನು ರಕ್ಷಿಸುತ್ತಿರುವುದು ತಿಳಿದಾಗ ಪುರೋಹಿತರು ದೇವೇಂದ್ರ ಸಹಿತ ತಕ್ಷಕನು ಯಜ್ಞಕುಂಡಕ್ಕೆ ಬರುವಂತೆ ಮಂತ್ರೋಚ್ಛಾರಣೆ ಮಾಡುತ್ತಾರೆ.
ಇನ್ನೇನು ತಕ್ಷಕನು ಯಜ್ಞಕುಂಡಕ್ಕೆ ಬೀಳಬೇಕು ಎನ್ನುವಷ್ಟರಲ್ಲಿ ಆಸ್ತೀಕ ಎಂಬ ವಟುವು ಆಗಮಿಸಿ ಯಾಗವನ್ನು ನಿಲ್ಲಿಸುವಂತೆ ಜನಮೇಜಯನಿಗೆ ಮನವಿ ಮಾಡುತ್ತಾನೆ.
ಆಸ್ತೀಕನು ಜನಮೇಜಯನಿಗೆ ಸತ್ಯವನ್ನು ತಿಳಿಸುತ್ತಾನೆ. “ತಕ್ಷಕನಿಗೆ ವೈಯಕ್ತಿಕವಾಗಿ ಯಾವುದೇ ತಪ್ಪಿಲ್ಲ. ಮುನಿಯ ಶಾಪವೇ ಪರೀಕ್ಷಿತನ ಮರಣಕ್ಕೆ ಕಾರಣ. ಮುನಿಯ ಶಾಪಕ್ಕೂ ಪರೀಕ್ಷಿತ ಮಾಡಿದ ಅಪಚಾರವೇ ಕಾರಣ. ಪರೀಕ್ಷಿತನ ಆ ವರ್ತನೆಗೂ ಕಲಿಯ ಪ್ರೇರಣೆಯೇ ಕಾರಣ. ಇವೆಲ್ಲವೂ ಕಾಲದ ಮಹಿಮೆ. ಆದ್ದರಿಂದ ನಾಗಕುಲದ ಮೇಲೆ ದ್ವೇಷ ಸಾಧಿಸುವುದು ಸರಿಯಲ್ಲ” ಎಂದು ಮನವರಿಕೆ ಮಾಡುತ್ತಾನೆ.
ಆಸ್ತೀಕನ ಮಾತಿನಿಂದ ಮನಪರಿವರ್ತನಗೊಂಡ ಜನಮೇಜಯನು ಸರ್ಪಯಾಗವನ್ನು ನಿಲ್ಲಿಸುತ್ತಾನೆ. ತಕ್ಷಕನನ್ನು ಕ್ಷಮಿಸುತ್ತಾನೆ. ಹೀಗೆ ಆಸ್ತೀಕನು ನಾಗಕುಲವನ್ನು ಸಂಪೂರ್ಣ ನಾಶವಾಗುವುದರಿಂದ ರಕ್ಷಿಸುತ್ತಾನೆ.
ಆಸ್ತೀಕನಿಂದ ತಮ್ಮ ಕುಲ ಉಳಿದಿದ್ದಕ್ಕೆ ಸಂತಸಗೊಂಡ ತಕ್ಷಕನು, “ಆಸ್ತೀಕ, ಆಸ್ತೀಕ, ಆಸ್ತೀಕ” ಎಂದು ಮೂರು ಬಾರಿ ಸ್ಮರಿಸುವವರಿಗೆ ನಾಗದೋಷ ತಟ್ಟದಿರಲಿ ಎಂದು ವರ ನೀಡಿದನೆಂಬ ಪ್ರತೀತಿ ಇದೆ.
ಜನಮೇಜಯನು ಸರ್ಪಯಾಗವನ್ನು ನಿಲ್ಲಿಸಿದ ದಿನವೇ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ ಎಂದು ಪೌರಾಣಿಕ ನಂಬಿಕೆ. ಈ ದಿನವನ್ನೇ ನಾವು ನಾಗರ ಪಂಚಮಿಯಾಗಿ ಆಚರಿಸುತ್ತೇವೆ.

ನಾಗದೇವರ ಆರಾಧನೆ
ನಾಗರ ಪಂಚಮಿಯಂದು ಅಷ್ಟಕುಲ ನಾಗಗಳಾದ ಅನಂತ (ಶೇಷ), ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ, ಕುಲೀಕ, ಕಾರ್ಕೋಟಕ ಹಾಗೂ ಶಂಖಪಾಲರನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.
ನಾಗದೇವರಿಗೆ ಅರಿಶಿಣ, ಕುಂಕುಮ, ಅಕ್ಕಿ ಹಾಗೂ ಹೂವುಗಳನ್ನು ಅರ್ಪಿಸಲಾಗುತ್ತದೆ. ಹಾಲು, ತುಪ್ಪ ಮತ್ತು ಸಕ್ಕರೆಯನ್ನು ನೈವೇದ್ಯವಾಗಿ ಸಮರ್ಪಿಸುವ ಸಂಪ್ರದಾಯವೂ ಇದೆ. ಪೂಜೆ ಪೂರ್ಣಗೊಂಡ ಬಳಿಕ ನಾಗದೇವರಿಗೆ ಆರತಿ ಬೆಳಗಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಹಾವಾಡಿಗರಿಗೆ ದಾನ ನೀಡುವ ಪದ್ಧತಿಯೂ ಕಂಡುಬರುತ್ತದೆ. ಪೂಜೆಯ ಅಂತ್ಯದಲ್ಲಿ ನಾಗರ ಪಂಚಮಿಯ ಪೌರಾಣಿಕ ಕಥೆಯನ್ನು ಶ್ರವಣ ಮಾಡುವ ಮೂಲಕ ಆಚರಣೆಯನ್ನು ಸಂಪನ್ನಗೊಳಿಸಲಾಗುತ್ತದೆ.
ನಾಗರ ಪಂಚಮಿ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಪ್ರಕೃತಿ, ಜೀವಜಾಲ ಮತ್ತು ಮಾನವ ಬದುಕಿನ ನಡುವಿನ ಸಂಬಂಧವನ್ನು ನೆನಪಿಸುವ ಹಬ್ಬವೂ ಹೌದು. ನಾಗರಹಾವು ಸೇರಿದಂತೆ ಎಲ್ಲ ಜೀವಿಗಳನ್ನು ಗೌರವದಿಂದ ಕಾಣಬೇಕು ಎಂಬ ಸಂದೇಶವನ್ನು ಈ ಆಚರಣೆ ಸಾರುತ್ತದೆ.
ಉತ್ತರ ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ನಾಗರ ಪಂಚಮಿ ಕೌಟುಂಬಿಕ ಹಾಗೂ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ತವರಿಗೆ ಬಂದ ಹೆಣ್ಣು ಮಕ್ಕಳು ಜೋಕಾಲಿ ಆಡಿ, ಹಾಡುಗಳನ್ನು ಹಾಡಿ, ಬಂಧು-ಬಳಗದೊಂದಿಗೆ ಬೆರೆತು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ವಿವಿಧ ಬಗೆಯ ಉಂಡೆ, ಸಿಹಿ ಹಾಗೂ ಖಾದ್ಯಗಳನ್ನು ತಯಾರಿಸಿ ಪರಸ್ಪರ ಹಂಚಿಕೊಳ್ಳುವ ಮೂಲಕ ಹಬ್ಬದ ಸಡಗರ ಮತ್ತಷ್ಟು ಹೆಚ್ಚುತ್ತದೆ.
ಹೀಗೆ ಭಕ್ತಿ, ಪೌರಾಣಿಕ ಪರಂಪರೆ, ಕುಟುಂಬದ ಬಾಂಧವ್ಯ, ಪ್ರಕೃತಿಯ ಮೇಲಿನ ಗೌರವ ಹಾಗೂ ಸಾಂಸ್ಕೃತಿಕ ಸಂಭ್ರಮವನ್ನು ತನ್ನೊಳಗೆ ಹೊಂದಿರುವ ನಾಗರ ಪಂಚಮಿ ನಾಡಿನ ದೊಡ್ಡ ಹಬ್ಬವಾಗಿದೆ.
ಬನ್ನಿ, ನಾಗರ ಪಂಚಮಿಯನ್ನು ಭಕ್ತಿ-ಭಾವದಿಂದ ಆಚರಿಸೋಣ. ನಾಗದೇವರನ್ನು ಪೂಜಿಸಿ, ಕುಟುಂಬದೊಂದಿಗೆ ವಿವಿಧ ಬಗೆಯ ಉಂಡೆ ಹಾಗೂ ಸಿಹಿ ಖಾದ್ಯಗಳನ್ನು ಸವಿದು ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳೋಣ.
ಲೇಖನ: ಸಂತೋಷ್ ಬಿದರಗಡ್ಡೆ
ಶಿಕ್ಷಕ ಹಾಗೂ ಸಾಹಿತಿ











