ಶಿವಮೊಗ್ಗದ ಹಳೆಯ ತುಂಗಾ ಸೇತುವೆಗೆ 40 ಕೋಟಿ ರೂ., ಭದ್ರಾವತಿ ಸೇತುವೆಗೆ 42 ಕೋಟಿ ರೂ. ವೆಚ್ಚದಲ್ಲಿ ನವೀಕರಣ
ಶಿವಮೊಗ್ಗ, ನ. 5: ಶಿವಮೊಗ್ಗ ಜಿಲ್ಲೆಯಲ್ಲಿ ಬಹುದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ಎರಡು ಪ್ರಮುಖ ಸೇತುವೆಗಳ ಮರುನಿರ್ಮಾಣಕ್ಕೆ ರಾಜ್ಯ ಸರ್ಕಾರ ಮಹತ್ವದ ಅನುಮೋದನೆ ನೀಡಿದೆ. ಶಿವಮೊಗ್ಗ ನಗರದ ಹಳೆಯ ತುಂಗಾ ಸೇತುವೆಯನ್ನು 40 ಕೋಟಿ ರೂ. ವೆಚ್ಚದಲ್ಲಿ ಹಾಗೂ ಭದ್ರಾವತಿ ನಗರದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಸಿದ್ಧಾರೂಢ ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು 42 ಕೋಟಿ ರೂ. ವೆಚ್ಚದಲ್ಲಿ ಮರುನಿರ್ಮಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಒಟ್ಟು 82 ಕೋಟಿ ರೂ. ವೆಚ್ಚದ ಈ ಎರಡು ಯೋಜನೆಗಳು ಜಿಲ್ಲೆಯ ರಸ್ತೆ ಸಂಪರ್ಕ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಮಹತ್ವ ಪಡೆದಿವೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಗುರುವಾರ ನಡೆದ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಈ ಎರಡೂ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.


ಶಿವಮೊಗ್ಗದ ಹಳೆಯ ತುಂಗಾ ಸೇತುವೆಗೆ 40 ಕೋಟಿ ರೂ.
ಶಿವಮೊಗ್ಗ ನಗರದ ಬಾಗಲಕೋಟೆ-ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿ 57ರಲ್ಲಿರುವ ಹಳೆಯ ತುಂಗಾ ಸೇತುವೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಮರುನಿರ್ಮಿಸಲು ಸರ್ಕಾರ ನಿರ್ಧರಿಸಿದೆ.
ಈ ಸೇತುವೆ ನಗರದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿದ್ದು, ಪ್ರತಿನಿತ್ಯ ಅನೇಕ ವಾಹನಗಳು ಹಾಗೂ ಸಾರ್ವಜನಿಕರು ಇದನ್ನು ಬಳಸುತ್ತಿದ್ದಾರೆ. ಸೇತುವೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ 40 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಯೋಜನೆಯಡಿ 292.03 ಮೀಟರ್ ಉದ್ದ ಹಾಗೂ 12 ಮೀಟರ್ ಅಗಲದ ಸೇತುವೆ ನಿರ್ಮಿಸಲಾಗುತ್ತದೆ. ಇದರಿಂದ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವುದರ ಜತೆಗೆ ಶಿವಮೊಗ್ಗ ನಗರದ ರಸ್ತೆ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ.

ಭದ್ರಾವತಿಯಲ್ಲಿ 42 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಪುನರ್ನಿರ್ಮಾಣ
ಭದ್ರಾವತಿ ವಿಧಾನಸಭಾ ಕ್ಷೇತ್ರದ ನಗರಸಭೆ ವ್ಯಾಪ್ತಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಸಿದ್ಧಾರೂಢ ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು 42 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮರುನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಸ್ತುತ ಇರುವ ಸೇತುವೆ ಮಳೆಗಾಲದಲ್ಲಿ ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಹೊರಬಂದಾಗ ಹಲವಾರು ದಿನಗಳ ಕಾಲ ಸಂಪೂರ್ಣ ಮುಳುಗಡೆಯಾಗುತ್ತದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ, ಸೇತುವೆಯ ಅಗಲವೂ ಕಿರಿದಾಗಿರುವುದರಿಂದ ಸುಗಮ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ 210 ಮೀಟರ್ ಉದ್ದ ಹಾಗೂ 19.61 ಮೀಟರ್ ಅಗಲದ ಆರ್ಸಿಸಿ ಡೆಕ್ ಸ್ಲ್ಯಾಬ್ ಸೇತುವೆ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.
ಜಿಲ್ಲೆಯ ಸಂಪರ್ಕ ವ್ಯವಸ್ಥೆಗೆ ಬಲ
ಶಿವಮೊಗ್ಗ ನಗರದ ಹಳೆಯ ತುಂಗಾ ಸೇತುವೆ ಹಾಗೂ ಭದ್ರಾವತಿ ನಗರದ ಸೇತುವೆ ಮರುನಿರ್ಮಾಣಕ್ಕೆ ಒಟ್ಟು 82 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ದೊರೆತಿರುವುದು ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ನಿರ್ಧಾರವಾಗಿದೆ.
ಶಿಥಿಲಗೊಂಡಿರುವ ಸೇತುವೆಗಳ ಬದಲಿಗೆ ಹೊಸ ಸೇತುವೆಗಳ ನಿರ್ಮಾಣದಿಂದ ಸಾರ್ವಜನಿಕರ ಸಂಚಾರ ಸುರಕ್ಷತೆ ಹೆಚ್ಚುವುದರ ಜತೆಗೆ ವಾಹನ ದಟ್ಟಣೆ ಮತ್ತು ಮಳೆಗಾಲದ ಸಂಚಾರ ಸಮಸ್ಯೆಗಳಿಗೆ ಪರಿಹಾರ ದೊರೆಯುವ ನಿರೀಕ್ಷೆಯಿದೆ. ಈ ಎರಡೂ ಯೋಜನೆಗಳು ಪೂರ್ಣಗೊಂಡ ಬಳಿಕ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳ ರಸ್ತೆ ಸಂಪರ್ಕ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗಲಿದೆ.

ಈ ಎರಡೂ ಸೇತುವೆಗಳ ಮರುನಿರ್ಮಾಣಕ್ಕೆ ಸಚಿವ ಸಂಪುಟದ ಅನುಮೋದನೆ ದೊರೆತಿರುವುದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಹಾಗೂ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರ ನಿರಂತರ ಪ್ರಯತ್ನ, ಮುತುವರ್ಜಿ ಮತ್ತು ಸರ್ಕಾರದ ಮಟ್ಟದಲ್ಲಿ ನಡೆಸಿದ ಮನವಿಗಳಿಗೆ ಫಲ ದೊರೆತಂತಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿ ಭಾಗದ ಸಾರ್ವಜನಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಇಬ್ಬರೂ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆದು ಯೋಜನೆಗಳಿಗೆ ಅನುಮೋದನೆ ದೊರಕಿಸಲು ಶ್ರಮಿಸಿದ್ದಾರೆ. ಇದೀಗ ಒಟ್ಟು 82 ಕೋಟಿ ರೂ. ವೆಚ್ಚದ ಎರಡು ಸೇತುವೆ ಕಾಮಗಾರಿಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಜಿಲ್ಲೆಯ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸಂಚಾರದ ಅನುಕೂಲದ ದೃಷ್ಟಿಯಿಂದ ಮಹತ್ವದ ಸಾಧನೆಯಾಗಿದೆ.







