ಯುವಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದರಿಂದ, ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಲು ಸಾಧ್ಯ. ಇದು ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕವಾಗುತ್ತದೆ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಬಡವರು, ನಿರ್ಗತಿಕರು, ಮತ್ತು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬಹುದು ಇಂತಹ ಒಂದು ಯುವಕರ ತಂಡ ಶಿವಮೊಗ್ಗದಲ್ಲಿ ಬಸವ ಸಂಗಮ ನೂತನ ಸಂಘಟನೆ ಅಸ್ಥಿತ್ವಕ್ಕೆ ಬಂದಿರುವುದು ನಿಜಕ್ಕೂ ಶ್ಲಾಘನೀಯ.
ಸಾಮಾನ್ಯವಾಗಿ ಯುವಕರು ಅಂದ್ರೆ ಮಜಾ ಮಾಡುವುದು, ಸಮಾಜದ ಬಗ್ಗೆ ಒಂದಿಷ್ಟು ಕಾಳಜಿ ಇರುವುದಿಲ್ಲ, ಅದರಲ್ಲೂ ಆಗ ತಾನೇ ಕಾಲೇಜು ಮುಗಿಸಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರುವ ಕೆಲ ಯುವಕರು ಅವರದ್ದೇ ಆದ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಇನ್ನೂ ಕೆಲವರು ಮುಂದೆ ದುಡಿಯಬೇಕು ಹಣ ಮಾಡಬೇಕು ಅನ್ನುವ ಹಂಬಲದಲ್ಲಿ ಇದ್ದಾರೆ. ಆದರೆ ಈ ಯುವಕರ ತಂಡ ಯಾವುದೇ ಫಲಾಪೇಕ್ಷೆ ಇಲ್ಲದೆ ತಮಗಾದಷ್ಟು ಸಮಾಜಕ್ಕೆ ಒಳ್ಳೆಯ ಕೆಲಸವನ್ನು ಮಾಡಲು ಮುಂದೆ ಬಂದಿರುವುದಕ್ಕೆ ಸ್ವಾಗತ.

ಶಿವಮೊಗ್ಗ: ದಾಸೋಹ ಮತ್ತು ಮಠಮಾನ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶ ಇಟ್ಟುಕೊಂಡು ಬಸವ ಸಂಗಮ ನೂತನ ಸಂಘಟನೆ ಅಸ್ಥಿತ್ವಕ್ಕೆ ಬಂದಿದ್ದು, ಇದರ ಮೊದಲ ಕಾರ್ಯಕ್ರಮವಾಗಿ ಸಿದ್ಧಗಂಗಾ ಮಠದ ವಿದ್ಯಾರ್ಥಿ ನಿಲಯಗಳಲ್ಲಿ ಎಲ್ಲಾ ಜಾತಿ, ಧರ್ಮದ ಮಠದಲ್ಲಿ ಸಾವಿರಾರು ವಿದ್ಯಾರ್ಥಿಳಿಗೆ, ಭಕ್ತರು ಸೇರಿ ಪ್ರತಿ ನಿತ್ಯ 10 ಸಾವಿರ ಮಂದಿ ಮೂರು ಹೊತ್ತು ದಾಸೋಹ ವ್ಯವಸ್ಥೆ ಮಾಡುತ್ತಿರುವುದರಿಂದ ಇದೇ ಆ.16ರಂದು ಸಂಜೆ 4 ಗಂಟೆಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಒಂದು ಲೋಡ್ ಅಕ್ಕಿಯನ್ನು ಕಳುಹಿಸಲಾಗುವುದು ಎಂದು ಸಂಘದ ಅಧ್ಯಕ್ಷ ಚೇತನ್ ಕುಮಾರ್ ದುಮ್ಮಳ್ಳಿ ಅವರು ತಿಳಿಸಿದರು

ಹಲವು ಸಾಮಾಜಿಕ ಉದ್ದೇಶಗಳನ್ನಿಟ್ಟುಕೊಂಡು ವೀರಶೈವ ಲಿಂಗಾಯತರ ಎಲ್ಲಾ ಒಳಪಂಗಡದವರು ಸೇರಿ ಬಸವ ಸಂಗಮ ಎಂಬ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಮುಖ್ಯವಾಗಿ ವೀರಶೈವ, ಲಿಂಗಾಯಿತ ಸೇರಿದಂತೆ ಎಲ್ಲಾ ಒಳಪಂಗಡಗಳನ್ನು ಸಮೀಕರಿಸುವುದು, ನಿರುದ್ಯೋಗ ಸಮಸ್ಯೆಯತ್ತ ಗಮನಹರಿಸುವುದು, ಸಮಾಜದ ವಿದ್ಯಾರ್ಥಿಗಳಿಗೆ ಧನಸಹಾಯ, ಆರೋಗ್ಯದ ಅರಿವು, ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶನ ಹೀಗೆ ಹಲವು ಉದ್ದೇಶಗಳನ್ನು ಸಂಘ ಹೊಂದಿದೆ ಎಂದರು.
ಮೊದಲ ಕಾರ್ಯಕ್ರಮವಾಗಿ ಒಂದು ಲೋಡ್ ಅಕ್ಕಿಯನ್ನು ಆ.16ರ ಸಂಜೆ 4 ಗಂಟೆಗೆ ಗಾಂಧಿ ಪಾರ್ಕ್ ಮುಂಭಾಗದಲ್ಲಿರುವ ಬಸವೇಶ್ವರ ಪ್ರತಿಮೆ ಬಳಿಯಿಂದ ಸಿದ್ದಗಂಗಾ ಮಠಕ್ಕೆ ಕಳುಹಿಸ ಲಾಗುವುದು. ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡುವರು ಹಾಗೂ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು, ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಶ್ರೀಗಳು ದಿವ್ಯಾ ಸಾನಿಧ್ಯ ವಹಿಸಲಿದ್ದಾರೆ .
ಪ್ರಧಾನ ಕಾರ್ಯದರ್ಶಿ ಧ್ರುವ ಕುಮಾರ್, ಪದಾಧಿಕಾರಿಗಳಾದ ಮೋಹನ್ ಪಟೇಲ್, ಮಂಜುನಾಥ,ಆನಂದ,ಅರವಿಂದ, ಅವಿನಾಶ್, ಮಂಗಳಾ ನಾಗೇಂದ್ರ, ಚಂದ್ರು ಇದ್ದರು.
ಒಟ್ಟಾರೆಯಾಗಿ ಕೆಲವು ಯುವಕರು ಇಂತಹ ಕೆಲಸಗಳಿಗೆ ಪಣ ತೊಟ್ಟಿದ್ದು, ಇನಷ್ಟು ಯುವಕರು ಇಂತಹ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲಿ, ಮತ್ತಷ್ಟು ಕೈಗಳು ಸೇರಿದರೆ ಇಂತಹ ಹಲವು ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಸಂದೇಹವಿಲ್ಲ.











