ಶಿವಮೊಗ್ಗ, ನ.27: ಬದುಕಿನ ಹಾದಿಯಲ್ಲಿ ಸುರಿಸುವ ಪ್ರತಿಯೊಂದು ಹನಿ ಬೆವರಿಗೂ ಒಂದು ಸಾರ್ಥಕತೆಯಿದೆ. ಪ್ರಾಮಾಣಿಕ ಪರಿಶ್ರಮ, ಅಚಲ ಶ್ರದ್ಧೆ ಮತ್ತು ನಿರಂತರ ಪ್ರಯತ್ನದಿಂದ ಕಟ್ಟಿದ ಬದುಕು ಎಂದಿಗೂ ವ್ಯರ್ಥವಾಗುವುದಿಲ್ಲ. ಕ್ಷಣಿಕ ಸುಖಕ್ಕಿಂತ ಶಾಶ್ವತ ನೆಮ್ಮದಿಯನ್ನು ನೀಡುವುದು ಸತ್ಕಾರ್ಯಗಳ ಮೂಲಕ ರೂಪಿಸಿಕೊಂಡ ಜೀವನ. ಮನುಷ್ಯನ ಬದುಕಿಗೆ ನಿಜವಾದ ಮೌಲ್ಯ ಬರುವುದು ಆತನ ನಡವಳಿಕೆ, ಕಾಯಕನಿಷ್ಠೆ ಮತ್ತು ಧರ್ಮಾಚರಣೆಯಿಂದ. ಶ್ರಮದ ಹಾದಿಯಲ್ಲಿ ಸಾಗುವವರಿಗೆ ಯಶಸ್ಸು ಮಾತ್ರವಲ್ಲ, ಬದುಕಿನ ಸಾರ್ಥಕತೆಯೂ ದೊರೆಯುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶಯ ವ್ಯಕ್ತಪಡಿಸಿದರು.
ತಾಲೂಕಿನ ತ್ಯಾವರೆಕೊಪ್ಪದಲ್ಲಿ ಶುಕ್ರವಾರ ನಡೆದ ಧರ್ಮಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯನ ಬದುಕಿಗೆ ಅನ್ನ, ನೀರು ಮತ್ತು ಗಾಳಿಯಷ್ಟೇ ಶಾಂತಿ, ನೆಮ್ಮದಿ ಹಾಗೂ ಧಾರ್ಮಿಕ ಅರಿವಿನ ಅವಶ್ಯಕತೆಯೂ ಇದೆ. ಧರ್ಮದ ಪರಿಪಾಲನೆ, ಆದರ್ಶಗಳ ಅನುಸರಣೆ ಮತ್ತು ಸತ್ಕಾರ್ಯಗಳ ಮೂಲಕ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ಕೇವಲ ಮಾತುಗಳಿಂದ ಬದುಕಿನಲ್ಲಿ ಬದಲಾವಣೆ ಸಾಧ್ಯವಿಲ್ಲ. ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಬದ್ಧತೆ ಇರಬೇಕು. ನಿರಂತರ ಪ್ರಯತ್ನವೇ ಸಾಧನೆಯ ಮೆಟ್ಟಿಲಾಗಿದ್ದು, ಪರಿಶ್ರಮದ ಫಲವೇ ಶಾಶ್ವತ ಸುಖ ಮತ್ತು ನೆಮ್ಮದಿಗೆ ದಾರಿಯಾಗುತ್ತದೆ ಎಂದರು.
ಸಿ.ಎಚ್. ಬಾಳನಗೌಡರ ಕ್ರಿಯಾಶೀಲ ವ್ಯಕ್ತಿತ್ವ, ಸಮಾಜಮುಖಿ ಚಿಂತನೆ ಹಾಗೂ ನಿರಂತರ ಪ್ರಯತ್ನಗಳನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ಮಳಲಿ ಸಂಸ್ಥಾನ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ದುಗ್ಗಿ-ಕಡೆನಂದಿಹಳ್ಳಿ ಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು.
ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ ಸಂಸ್ಥಾಪಕ ವಿಘ್ನೇಶ್ವರ ಸೋಲಾಪುರ ಹಾಗೂ ಮರುಳಸಿದ್ಧಸ್ವಾಮಿ ವೇದಿಕೆಯ ಗಣ್ಯರು ಉಪಸ್ಥಿತರಿದ್ದರು.
ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ ಅವರು ಸರ್ವರನ್ನು ಸ್ವಾಗತಿಸಿದರು. ಡಾ. ಗುರುಪಾದಯ್ಯ ಸಾಲಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಮೊಗ್ಗದ ಶಾಂತಾ ಆನಂದ್ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ಕಾರುಣ್ಯ ನಿವಾಸದಲ್ಲಿ ಇಷ್ಟಲಿಂಗಾರ್ಚನೆ ನೆರವೇರಿಸಿ, ಆಗಮಿಸಿದ್ದ ಭಕ್ತರಿಗೆ ಶುಭ ಹಾರೈಸಿದರು.









