ಶಿವಮೊಗ್ಗ: ದೇವರಿಗೆ ಮಾಡುವ ಪೂಜೆ ಕೇವಲ ಹೂವು, ಪತ್ರೆ, ಅಭಿಷೇಕ, ಧೂಪ, ದೀಪಗಳಿಗೆ ಸೀಮಿತವಾಗಬಾರದು. ನಮ್ಮ ಆಲೋಚನೆ, ನಡವಳಿಕೆ, ದುಡಿಮೆ ಮತ್ತು ಬದುಕಿನ ಪ್ರತಿಯೊಂದು ಹೆಜ್ಜೆಯೂ ಪರಿಶುದ್ಧವಾಗಿರಬೇಕು. ನಾವು ಮಾಡುವ ಪ್ರಾಮಾಣಿಕ ಕಾಯಕವೇ ದೇವರ ಪೂಜೆಯಾಗಬೇಕು. ಅಂತರಂಗದ ಶುದ್ಧತೆ, ನೈತಿಕ ಮೌಲ್ಯಗಳು ಹಾಗೂ ಮಾನವೀಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಭಕ್ತಿ ಸಾಕಾರವಾಗುತ್ತದೆ ಎಂಬ ಬಸವಾದಿ ಶರಣರ ಸಂದೇಶವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಕರೆ ನೀಡಿದರು.
ಶಿವಮೊಗ್ಗ ತಾಲ್ಲೂಕಿನ ತಮ್ಮಡಿಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವಕೇಂದ್ರ, ಶಿವಮೊಗ್ಗ, ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು, ಅರಳಿಕಟ್ಟೆ ಅನುಭವ ಮಂಟಪ–7 ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿಂತನ ಕಾರ್ತಿಕದ 14ನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಕ್ಕಳಿಗೆ ಇಂಗ್ಲಿಷ್ ರೈಮ್ಸ್ಗಿಂತ ಕನ್ನಡ ವಚನಗಳನ್ನು ಕಲಿಸಿ
ಇಂದಿನ ಶಿಕ್ಷಣ ಮತ್ತು ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿ ಪೋಷಕರು ವಿಶೇಷ ಗಮನ ನೀಡಬೇಕಾದ ಅಗತ್ಯವಿದೆ. ಮಕ್ಕಳಿಗೆ ಇಂಗ್ಲಿಷ್ ರೈಮ್ಸ್ ಮತ್ತು ಪದ್ಯಗಳನ್ನು ಕಲಿಸುವುದರ ಜತೆಗೆ ನಮ್ಮ ನೆಲದ ಸಂಸ್ಕೃತಿ, ಭಾಷೆ, ಪರಂಪರೆ ಹಾಗೂ ಮೌಲ್ಯಗಳನ್ನು ಪ್ರತಿಬಿಂಬಿಸುವ ಕನ್ನಡ ವಚನಗಳನ್ನು ಕಲಿಸಬೇಕು. ಮಕ್ಕಳ ಬಾಯಲ್ಲಿ ನಮ್ಮ ಶರಣರ ವಚನಗಳು ಮೊಳಗಬೇಕು. ಆಗ ಅವರಲ್ಲಿ ಸಂಸ್ಕಾರ, ಮಾನವೀಯತೆ ಮತ್ತು ಸಮಾನತೆಯ ಭಾವನೆ ಸಹಜವಾಗಿ ಬೆಳೆಯುತ್ತದೆ ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.
ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ವಿರೋಧವಿಲ್ಲ. ಆದರೆ ಆ ಶಿಕ್ಷಣದ ಜತೆಗೆ ನಮ್ಮ ನೆಲದ ಸತ್ವವನ್ನು ಪರಿಚಯಿಸುವ ಜವಾಬ್ದಾರಿಯೂ ಇರಬೇಕು. ಮಕ್ಕಳಿಗೆ ‘ರೈನ್ ರೈನ್ ಗೋ ಅವೇ’ ಎಂಬ ಪದ್ಯ ಕಲಿಸುವ ಬದಲು ‘ಉಯ್ಯೋ ಉಯ್ಯೋ ಮಳೆರಾಯ, ಹೂವಿನ ತೋಟಕ್ಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ, ಬಾಳೆಯ ತೋಟಕ್ಕೆ ನೀರಿಲ್ಲ‘ ಎಂಬ ನಮ್ಮ ಪರಿಸರ ಮತ್ತು ಕೃಷಿ ಬದುಕಿಗೆ ಹತ್ತಿರವಾದ ಪದ್ಯಗಳನ್ನು ಕಲಿಸಬೇಕು ಎಂದು ಹಾಸ್ಯಭರಿತವಾಗಿ ಶ್ರೀಗಳು ವಿವರಿಸಿದರು.
ಕನ್ನಡದ ವಚನ ಸಾಹಿತ್ಯದಲ್ಲಿ ಬದುಕಿಗೆ ದಾರಿದೀಪವಾಗುವ ಅನೇಕ ಮೌಲ್ಯಗಳಿವೆ. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ‘ ಎಂಬ ಬಸವಣ್ಣನವರ ವಚನವನ್ನು ಪ್ರತಿಯೊಬ್ಬರೂ ಮಕ್ಕಳಿಗೆ ಕಲಿಸಬೇಕು. ಕನಕದಾಸರ ‘ಕುಲ ಕುಲ ಕುಲವೆಂದು ಬಡಿದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ‘ ಎಂಬ ಸಂದೇಶವನ್ನು ತಿಳಿಸಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವ ಬದಲು ಎಲ್ಲರೂ ಒಂದೇ ಎಂಬ ಸಮಾನತೆಯ ಭಾವನೆ ಮಕ್ಕಳಲ್ಲಿ ಬೆಳೆಸಬೇಕು. ಇಂತಹ ಸಂಸ್ಕಾರ ಪಡೆದ ಮಕ್ಕಳು ನಾಳೆ ಸಮಾಜದ ಆಸ್ತಿಯಾಗುತ್ತಾರೆ ಎಂದರು.

ಪೂಜೆ ದೇವರಿಗಾಗಿ ಅಲ್ಲ, ಭಕ್ತನ ಅಂತರಂಗದ ಸಂತೃಪ್ತಿಗಾಗಿ
ಪೂಜೆ ಎಂದರೆ ದೇವರ ಮೇಲಿನ ಭಕ್ತಿಯನ್ನು ಅಭಿವ್ಯಕ್ತಿಪಡಿಸುವ ಒಂದು ವಿಧಾನ. ದೇವರಿಗೆ ಅಲಂಕಾರ, ಅಭಿಷೇಕ, ಧೂಪ, ದೀಪ, ನೈವೇದ್ಯಗಳ ಅಗತ್ಯವಿಲ್ಲ. ಆದರೆ ಭಕ್ತನಿಗೆ ತನ್ನ ಆರಾಧ್ಯ ದೈವವನ್ನು ಅಲಂಕರಿಸಿ ಕಣ್ತುಂಬಿಕೊಳ್ಳುವ ಆಸೆ ಇರುತ್ತದೆ. ತಾಯಿ ತನ್ನ ಮಗುವಿಗೆ ವಿವಿಧ ವೇಷಭೂಷಣಗಳನ್ನು ತೊಡಿಸಿ ಸಂತೋಷಪಡುವಂತೆ, ಭಕ್ತನು ದೇವರಿಗೆ ಅಭಿಷೇಕ, ಪುಷ್ಪಾರ್ಚನೆ, ಧೂಪ, ದೀಪಗಳನ್ನು ಅರ್ಪಿಸಿ ಆನಂದಿಸುತ್ತಾನೆ. ಹೀಗಾಗಿ ಪೂಜೆ ದೇವರ ಅಗತ್ಯಕ್ಕಿಂತ ಭಕ್ತನ ಅಂತರಂಗದ ಭಾವನೆಯ ಅಭಿವ್ಯಕ್ತಿಯಾಗಿದೆ ಎಂದು ಬಸವಕೇಂದ್ರ ಶ್ರೀಗಳು ವಿಶ್ಲೇಷಿಸಿದರು.
ದೇವರಿಗೆ ನಾವು ಏನನ್ನು ಅರ್ಪಿಸಲು ಸಾಧ್ಯ? ಈ ಭೂಮಿಯ ಮೇಲೆ ನಮಗೆ ದೊರೆತಿರುವ ಎಲ್ಲವೂ ಪ್ರಕೃತಿಯ ಕೊಡುಗೆ. ಹೂವು, ನೀರು, ಗಂಧ, ವಿಭೂತಿ, ನೈವೇದ್ಯ ಎಲ್ಲವೂ ದೇವರು ಕೊಟ್ಟಿರುವ ಪ್ರಕೃತಿಯ ಸಂಪತ್ತಿನಿಂದಲೇ ಬಂದಿರುವಂಥವು. ಹೀಗಿರುವಾಗ ದೇವರಿಗೆ ನಾವೇನೋ ಹೊಸದಾಗಿ ಕೊಡುಗೆ ನೀಡುತ್ತಿದ್ದೇವೆ ಎಂಬ ಅಹಂಕಾರ ಸಲ್ಲದು ಎಂದು ದಾಸಿಮಯ್ಯನವರ ವಚನವನ್ನು ಉಲ್ಲೇಖಿಸಿದರು.
‘ಎಲೆ ಪೈರು ಐದದಿರೆ, ಸುರಿಯುವ ಮಳೆ ಸುರಿಯದಿರೆ, ಅವರೇತರಲ್ಲಿ ನೀಡುವರಯ್ಯ ರಾಮನಾಥ‘ ಎಂಬ ವಚನದ ಮೂಲಕ ಮನುಷ್ಯನ ಬದುಕು ಪ್ರಕೃತಿಯ ಅನುಗ್ರಹದ ಮೇಲೆ ನಿಂತಿದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದರು.

ಒಲವಿಲ್ಲದ ಪೂಜೆ ಕೇವಲ ಪ್ರದರ್ಶನ
ಇತ್ತೀಚಿನ ದಿನಗಳಲ್ಲಿ ದೂರದರ್ಶನ ಹಾಗೂ ಇತರ ಮಾಧ್ಯಮಗಳಲ್ಲಿ ನೋಡುವ ಆಚರಣೆಗಳನ್ನು ಯಾವುದೇ ವಿವೇಚನೆಯಿಲ್ಲದೆ ಮನೆಗಳಿಗೆ ತಂದುಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ನಮ್ಮ ಸಂಪ್ರದಾಯ ಮತ್ತು ಶರಣರ ತತ್ವಗಳನ್ನು ಮರೆತು ಇತರರು ಮಾಡುತ್ತಾರೆ ಎಂಬ ಕಾರಣಕ್ಕೆ ಆಚರಣೆಗಳನ್ನು ಅನುಸರಿಸುವುದು ನಿಜವಾದ ಭಕ್ತಿಯಲ್ಲ. ಭಕ್ತಿಯಲ್ಲಿ ಪ್ರೀತಿ, ನಿಷ್ಠೆ ಮತ್ತು ಅಂತರಂಗದ ಶುದ್ಧತೆ ಇರಬೇಕು.
ಬಸವಣ್ಣನವರ ‘ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ, ಆ ಪೂಜೆಯು ಆ ಮಾಟವು ಚಿತ್ರದ ರೂಹು ಕಾಣಿರಣ್ಣಾ, ಚಿತ್ರದ ಕಬ್ಬು ಕಾಣಿರಣ್ಣಾ’ ಎಂಬ ವಚನವನ್ನು ವಿವರಿಸಿದ ಸ್ವಾಮೀಜಿ, ಚಿತ್ರದ ಮಗುವನ್ನು ಮುದ್ದಾಡಿದರೆ ನಿಜವಾದ ಮಗುವನ್ನು ಮುದ್ದಾಡಿದ ಸಂತೃಪ್ತಿ ಸಿಗುವುದಿಲ್ಲ. ಕಬ್ಬಿನ ಚಿತ್ರವನ್ನು ನೋಡಿದರೆ ಸಿಹಿಯ ರುಚಿ ಸಿಗುವುದಿಲ್ಲ. ಅದೇ ರೀತಿ ಅಂತರಂಗದಲ್ಲಿ ನಿಷ್ಠೆ ಮತ್ತು ಪ್ರೀತಿ ಇಲ್ಲದೆ ಮಾಡುವ ಪೂಜೆಯಿಂದ ದೇವರ ಒಲವು ದೊರೆಯುವುದಿಲ್ಲ ಎಂದರು.
ಕೋಪ, ದ್ವೇಷ, ಅಸೂಯೆ, ಅಹಂಕಾರಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ದೇವರಿಗೆ ಅಭಿಷೇಕ, ಪುಷ್ಪಾರ್ಚನೆ ಮಾಡಿದರೆ ಅದಕ್ಕೆ ಅರ್ಥವಿಲ್ಲ. ‘ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ, ಪಾಪಿ ಪುಷ್ಪವನೇರಿಸಿದರೆ ಮಸೆದ ಅಲುಗಿನ ಗಾಯ’ ಎಂಬ ಶರಣರ ವಚನವನ್ನು ಉಲ್ಲೇಖಿಸಿ, ಮೊದಲು ನಮ್ಮ ಮನಸ್ಸನ್ನು ಶುದ್ಧಗೊಳಿಸಿಕೊಳ್ಳಬೇಕು. ನಮ್ಮ ನಡವಳಿಕೆ ಸರಿಯಾಗಿದ್ದಾಗ ಮಾತ್ರ ಪೂಜೆಗೆ ನಿಜವಾದ ಅರ್ಥ ಬರುತ್ತದೆ ಎಂದು ಶ್ರೀಗಳು ಹೇಳಿದರು.

ಹೊಲದ ಉಳುಮೆಯ ಜತೆಗೆ ಅಂತರಂಗವನ್ನೂ ಹದಗೊಳಿಸಿಕೊಳ್ಳಿ
ಬಸವಣ್ಣನವರ ದೃಷ್ಟಿಯಲ್ಲಿ ಪೂಜೆ ಎಂದರೆ ದಿನಕ್ಕೆ ಐದು ಅಥವಾ ಹತ್ತು ನಿಮಿಷ ದೇವರ ಮುಂದೆ ಕುಳಿತು ಮಾಡುವ ಆಚರಣೆಯಲ್ಲ. ಮನುಷ್ಯನ ಇಡೀ ಬದುಕೇ ದೇವರ ಪೂಜೆಯಾಗಬೇಕು. ಹೊಲದಲ್ಲಿ ರೈತ ಉಳುಮೆ ಮಾಡುವಂತೆ ತನ್ನ ಹೃದಯವೆಂಬ ಹೊಲವನ್ನೂ ಹದಗೊಳಿಸಿಕೊಳ್ಳಬೇಕು. ಹೊಲದಲ್ಲಿನ ಕಳೆಗಳನ್ನು ಕಿತ್ತುಹಾಕುವಂತೆ ಮನಸ್ಸಿನಲ್ಲಿರುವ ಕೆಟ್ಟ ಗುಣಗಳನ್ನು ತೆಗೆದುಹಾಕಬೇಕು. ಮಣ್ಣಿನ ಹೆಂಟೆಗಳನ್ನು ಒಡೆಯುವಂತೆ ಅಜ್ಞಾನ, ಭ್ರಮೆ ಮತ್ತು ಭಯದ ಗೋಡೆಗಳನ್ನು ಕೆಡವಬೇಕು. ಹೃದಯದಲ್ಲಿ ಜ್ಞಾನದ ಬೀಜ ಬಿತ್ತಿ, ಅದಕ್ಕೆ ಸದ್ವಿಚಾರಗಳ ನೀರುಣಿಸಿ ಬೆಳೆಸಬೇಕು ಎಂದು ಕೃಷಿ ಬದುಕಿನ ಉದಾಹರಣೆಗಳ ಮೂಲಕ ಆಧ್ಯಾತ್ಮಿಕ ತತ್ವವನ್ನು ಸರಳವಾಗಿ ವಿವರಿಸಿದರು.
ನಮ್ಮ ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮಗಳು ಮನುಷ್ಯನನ್ನು ಹಲವು ಬಾರಿ ತಪ್ಪು ದಾರಿಯತ್ತ ಕೊಂಡೊಯ್ಯುತ್ತವೆ. ಹೊಲಕ್ಕೆ ದನಕರುಗಳು ನುಗ್ಗಿ ಬೆಳೆ ಹಾಳು ಮಾಡದಂತೆ ಬೇಲಿ ಹಾಕುವ ರೀತಿಯಲ್ಲಿ, ನಮ್ಮ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಲು ಸಮತೆ ಮತ್ತು ಸೈರಣೆ ಎಂಬ ಬೇಲಿಯನ್ನು ನಿರ್ಮಿಸಿಕೊಳ್ಳಬೇಕು. ಆಗ ಮಾತ್ರ ಅಂತರಂಗದ ಜ್ಞಾನದ ಬೆಳೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಲ್ಲಮಪ್ರಭುದೇವರ ‘ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ, ಅಗೆದು ಕಳೆದನಯ್ಯಾ ಭ್ರಾಂತಿನ ಬೇರ‘ ಎಂಬ ವಚನವನ್ನು ಉಲ್ಲೇಖಿಸಿ, ದೇಹವನ್ನು ತೋಟವನ್ನಾಗಿ, ಮನಸ್ಸನ್ನು ಗುದ್ದಲಿಯನ್ನಾಗಿ ಮಾಡಿಕೊಂಡು ಅಜ್ಞಾನವೆಂಬ ಬೇರುಗಳನ್ನು ಕಿತ್ತುಹಾಕಿ, ಬ್ರಹ್ಮಜ್ಞಾನದ ಬೀಜ ಬಿತ್ತುವ ಸಾಧನೆಯೇ ನಿಜವಾದ ಆಧ್ಯಾತ್ಮಿಕ ಬದುಕು ಎಂದು ತಿಳಿಸಿದರು.

ಕಣ್ಣು, ಕೈ, ಕಾಲುಗಳ ಶುದ್ಧತೆಯೇ ನಿಜವಾದ ಪೂಜೆ
ಬಸವಣ್ಣನವರ ‘ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವಾ !
ಅಂಗವಿದ್ಯೆಯನೊಲ್ಲ;
ಕಣ್ಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ;
ಕೈಯ ತೊಳೆದಲ್ಲದೆ ಮುಟ್ಟಲೀಯ;
ಕಾಲ ತೊಳೆದಲ್ಲದೆ ಹೊದ್ದಲೀಯ!
ಇಂತೀ ಸರ್ವಾಂಗ ತಲೆದೊಳೆದ ಕಾರಣ,
ಕೂಡಲಸಂಗಮದೇವನೆನ್ನ ಕೂಡಿಕೊಂಡನವ್ವಾ!‘ ಎಂಬ ವಚನದ ಮೂಲಕ ನಿಜವಾದ ಶುದ್ಧತೆಯ ಅರ್ಥವನ್ನು ವಿವರಿಸಿದರು.
ಕಣ್ಣಿನಲ್ಲಿರುವ ಕಸ ಎಂದರೆ ಕೇವಲ ಧೂಳಲ್ಲ. ಕೋಪ, ದ್ವೇಷ, ವ್ಯಂಗ್ಯ, ಕೆಟ್ಟ ದೃಷ್ಟಿ ಮತ್ತು ಅಸೂಯೆಗಳಿಂದ ಕಣ್ಣುಗಳನ್ನು ಮುಕ್ತಗೊಳಿಸಬೇಕು. ಪ್ರತಿಯೊಬ್ಬರನ್ನೂ ಪ್ರೀತಿ, ವಾತ್ಸಲ್ಯ ಮತ್ತು ಮಾನವೀಯತೆಯಿಂದ ನೋಡುವ ದೃಷ್ಟಿ ನಮ್ಮದಾಗಬೇಕು.
ಕೈಗಳ ಶುದ್ಧತೆ ಎಂದರೆ ನೀರಿನಿಂದ ಕೈ ತೊಳೆಯುವುದಷ್ಟೇ ಅಲ್ಲ. ಪ್ರಾಮಾಣಿಕ ದುಡಿಮೆಯಿಂದ ಬದುಕಬೇಕು. ಅನ್ಯಾಯದ ಮಾರ್ಗದಲ್ಲಿ ಸಂಪಾದಿಸಿದ ಸಂಪತ್ತನ್ನು ಮುಟ್ಟಬಾರದು. ನಮ್ಮ ದುಡಿಮೆಯಿಂದ ಬಂದದ್ದನ್ನೇ ಬಳಸಿಕೊಂಡು ಬದುಕುವ ನಿಷ್ಠೆ ಇರಬೇಕು. ಕಾಲುಗಳ ಶುದ್ಧತೆ ಎಂದರೆ ಹೋಗಬಾರದ ಸ್ಥಳಗಳಿಗೆ ಹೋಗದೆ, ತಪ್ಪು ಚಟುವಟಿಕೆಗಳಿಂದ ದೂರವಿದ್ದು, ಸನ್ಮಾರ್ಗದಲ್ಲಿ ನಡೆಯುವುದು. ಹೀಗೆ ನಮ್ಮ ಇಡೀ ದೇಹ, ಮನಸ್ಸು ಮತ್ತು ನಡವಳಿಕೆ ಶುದ್ಧವಾಗಿದ್ದಾಗ ದೇವರ ಒಲವು ದೊರೆಯುತ್ತದೆ ಎಂದರು.
ಮನುಷ್ಯನ ಎದೆಯ ಮೇಲೆ ಇಷ್ಟಲಿಂಗವನ್ನು ಧರಿಸುವುದರ ಹಿಂದೆಯೂ ಮಹತ್ವದ ಉದ್ದೇಶವಿದೆ. ಮನಸ್ಸು ತಪ್ಪು ದಾರಿಯಲ್ಲಿ ಸಾಗುವಾಗ ಎದೆಯ ಮೇಲಿರುವ ಲಿಂಗವನ್ನು ನೋಡಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ನಡೆ, ನುಡಿ, ಆಹಾರ, ವಿಚಾರ ಮತ್ತು ವರ್ತನೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಷ್ಟಲಿಂಗವು ಕೇವಲ ಧಾರ್ಮಿಕ ಸಂಕೇತವಲ್ಲ, ಅದು ಪ್ರತಿಕ್ಷಣವೂ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುವ ಆತ್ಮಸಾಕ್ಷಿಯ ಸಂಕೇತವಾಗಿದೆ ಎಂದು ಶ್ರೀಗಳು ಹೇಳಿದರು.

ಶುದ್ಧ ಮನಸ್ಸಿದ್ದರೆ ಎಲ್ಲೆಡೆ ದೇವರ ದರ್ಶನ
ಕುರುಬ ಬಲ್ಲಾಳೇಶನ ಪ್ರಸಂಗವನ್ನು ವಿವರಿಸಿದ ಶ್ರೀಗಳು, ಲಿಂಗದರ್ಶನ ಮಾಡದೆ ಊಟ ಮಾಡುವುದಿಲ್ಲ ಎಂಬ ವ್ರತ ಹೊಂದಿದ್ದ ಅವರು ಕಾಡಿನಲ್ಲಿ ಕುರಿ ಮೇಯಿಸುತ್ತಿದ್ದಾಗ ಲಿಂಗಕ್ಕಾಗಿ ಹುಡುಕಾಡಿದರು. ಎಲ್ಲಿಯೂ ಲಿಂಗ ಸಿಗದಿದ್ದಾಗ ಕುರಿಯ ಗೊರಸಿನ ಗುರುತನ್ನೇ ಲಿಂಗವೆಂದು ಭಾವಿಸಿ ಭಕ್ತಿಯಿಂದ ಪೂಜಿಸಿದರು. ಅವರ ನಿಷ್ಕಲ್ಮಶ ಭಕ್ತಿಗೆ ಶಿವನೇ ಒಲಿದ ಎಂಬ ಪ್ರಸಂಗವು ಭಕ್ತಿಯ ಮಹತ್ವವನ್ನು ಸಾರುತ್ತದೆ. ದೇವರನ್ನು ಕಾಣಲು ಆಡಂಬರಕ್ಕಿಂತ ಶುದ್ಧ ಮನಸ್ಸು ಮುಖ್ಯ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.
ಅಮರಶಿಲ್ಪಿ ಜಕಣಾಚಾರಿ ಅವರ ಶಿಲ್ಪಕಲೆಯ ನಿಷ್ಠೆಯನ್ನು ವಿವರಿಸಿದ ಅವರು, ಕಲ್ಲಿನಲ್ಲಿ ಅಡಗಿರುವ ದೇವರ ರೂಪವನ್ನು ಹೊರತರುವ ಕೆಲಸವನ್ನಷ್ಟೇ ತಾನು ಮಾಡುತ್ತಿದ್ದೇನೆ ಎಂಬ ವಿನಯ ಅವರಲ್ಲಿತ್ತು. ಶಿಲ್ಪಿಯ ಕಾಯಕದಲ್ಲಿ ಭಕ್ತಿ ಮತ್ತು ಶ್ರದ್ಧೆ ಬೆರೆತಾಗ ಸಾಮಾನ್ಯ ಕಲ್ಲೂ ಅದ್ಭುತ ಕಲಾಕೃತಿಯಾಗುತ್ತದೆ. ಇತ್ತೀಚೆಗೆ ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರ ವಿನಯವನ್ನೂ ಉಲ್ಲೇಖಿಸಿ, ನಿಜವಾದ ಸಾಧಕರಿಗೆ ತಮ್ಮ ಕಾಯಕದ ಬಗ್ಗೆ ಅಹಂಕಾರವಿರುವುದಿಲ್ಲ. ಶ್ರದ್ಧೆ, ನಿಷ್ಠೆ ಮತ್ತು ಪರಿಶುದ್ಧ ಮನಸ್ಸಿನಿಂದ ಮಾಡಿದ ಕೆಲಸವೇ ದೇವರ ಸೇವೆಯಾಗುತ್ತದೆ ಎಂದರು.

ಮನುಷ್ಯ ಜನ್ಮದ ಸಾರ್ಥಕತೆ ಶಿವಜ್ಞಾನದಲ್ಲಿ
ಮಡಿವಾಳ ಮಾಚಿದೇವರ ‘ವಾಯು ಗುಣವ ಸರ್ಪ ಬಲ್ಲುದು, ಮಧುರದ ಗುಣವ ಇರುವೆ ಬಲ್ಲುದು, ಗೋತ್ರದ ಗುಣವ ಕಾಗೆ ಬಲ್ಲುದು, ವೇಳೆಯ ಗುಣವ ಕೋಳಿ ಬಲ್ಲುದು‘ ಎಂಬ ವಚನವನ್ನು ಉಲ್ಲೇಖಿಸಿದ ಅವರು, ಪ್ರಾಣಿ-ಪಕ್ಷಿಗಳು ತಮ್ಮ ಸಹಜ ಗುಣಗಳನ್ನು ಬಿಟ್ಟುಕೊಡುವುದಿಲ್ಲ. ಆದರೆ ಮನುಷ್ಯ ಮಾತ್ರ ತನ್ನಲ್ಲಿ ಇರಬೇಕಾದ ಮಾನವೀಯ ಗುಣಗಳನ್ನು ಮರೆತು ಬದುಕುತ್ತಿದ್ದಾನೆ ಎಂದು ವಿಷಾದಿಸಿದರು.
ಹಾವು ಗಾಳಿಯ ಗುಣವನ್ನು ಅರಿತಿದೆ. ಇರುವೆ ಸಿಹಿಯ ಗುಣವನ್ನು ಗುರುತಿಸುತ್ತದೆ. ಕಾಗೆ ತನ್ನ ಬಳಗವನ್ನು ಗುರುತಿಸುತ್ತದೆ. ಕೋಳಿ ಸಮಯಕ್ಕೆ ಸರಿಯಾಗಿ ಕೂಗುತ್ತದೆ. ಇಷ್ಟೆಲ್ಲ ಸಹಜ ಗುಣಗಳನ್ನು ಹೊಂದಿರುವ ಜೀವಿಗಳ ನಡುವೆ ಮನುಷ್ಯನಿಗೆ ಮಾತ್ರ ಜ್ಞಾನ, ವಿವೇಕ ಮತ್ತು ದೇವರನ್ನು ಅರಿಯುವ ಸಾಮರ್ಥ್ಯವಿದೆ. ಅಂತಹ ಮನುಷ್ಯ ಜನ್ಮ ಪಡೆದ ಮೇಲೆ ಶಿವಜ್ಞಾನವನ್ನು ಅರಿತು ಸಾರ್ಥಕ ಬದುಕು ಕಟ್ಟಿಕೊಳ್ಳದಿದ್ದರೆ ಆ ಜನ್ಮಕ್ಕೆ ಅರ್ಥವೇ ಇರುವುದಿಲ್ಲ ಎಂದು ಮಡಿವಾಳ ಮಾಚಿದೇವರ ವಚನದ ಆಶಯವನ್ನು ವಿವರಿಸಿದರು.

ನೈತಿಕ ಬದುಕೇ ನಿತ್ಯದ ನೇಮ
ಶರಣೆ ಸತ್ಯಕ್ಕನ ‘ಅರ್ಚನೆ ಪೂಜನೆ ನೇಮವಲ್ಲ;
ಮಂತ್ರ ತಂತ್ರ ನೇಮವಲ್ಲ;
ಧೂಪ ದೀಪಾರತಿ ನೇಮವಲ್ಲ;
ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ.
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ.’
ಎಂಬ ವಚನವನ್ನು ಉಲ್ಲೇಖಿಸಿದ ಅವರು, ದೇವರ ಪೂಜೆಯಲ್ಲಿ ಕೆಲವು ಆಚರಣೆಗಳು ತಪ್ಪಿದರೂ ಪರವಾಗಿಲ್ಲ. ಆದರೆ ಜೀವನದಲ್ಲಿ ಸತ್ಯ, ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳು ತಪ್ಪಬಾರದು. ಪರರ ಸಂಪತ್ತಿಗೆ ಆಸೆಪಡದೆ, ಪರಸ್ತ್ರೀಯನ್ನು ಬಯಸದೆ, ಪರದೈವಗಳನ್ನು ನಿಂದಿಸದೆ, ಇತರರಿಗೆ ನೋವುಂಟು ಮಾಡದೆ ಬದುಕುವುದೇ ನಿಜವಾದ ಧಾರ್ಮಿಕ ನೇಮವಾಗಿದೆ ಎಂದು ಶ್ರೀಗಳು ಹೇಳಿದರು.

ಹಿರಿಯರ ಅನುಭವ ಮಕ್ಕಳಿಗೆ ಬದುಕಿನ ಪಾಠವಾಗಲಿ
ಇಂದಿನ ಮಕ್ಕಳಿಗೆ ಕಂಪ್ಯೂಟರ್, ತಂತ್ರಜ್ಞಾನ ಮತ್ತು ಆಧುನಿಕ ಶಿಕ್ಷಣದ ಜ್ಞಾನ ಅಗತ್ಯ. ಆದರೆ ಅದರ ಜತೆಗೆ ಜೀವನದ ಅನುಭವವೂ ಬೇಕು. ಗ್ರಾಮದ ಹಿರಿಯರ ಬಳಿ ಅಪಾರವಾದ ಬದುಕಿನ ಜ್ಞಾನವಿದೆ. ಅವರ ಅನುಭವವನ್ನು ಮಕ್ಕಳಿಗೆ ಪರಿಚಯಿಸಬೇಕು. ಪ್ರತಿಯೊಂದು ಕುಟುಂಬವೂ ಮಕ್ಕಳನ್ನು ಹಿರಿಯರೊಂದಿಗೆ ಕೂರಿಸಿ ಅವರ ಬದುಕಿನ ಅನುಭವಗಳನ್ನು ಕೇಳುವ ಅಭ್ಯಾಸ ಬೆಳೆಸಬೇಕು. ಹಿರಿಯರು ಮಕ್ಕಳಿಗೆ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಸಬಲ್ಲರು ಎಂದು ಸಲಹೆ ನೀಡಿದರು.
ತಮ್ಮಡಿಹಳ್ಳಿ ಗ್ರಾಮದಲ್ಲಿ ಚಿಂತನ ಕಾರ್ತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ ಬಸವಕೇಂದ್ರ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಅಭಿನಂದಿಸಿದರು. ಕಾರ್ಯಕ್ರಮದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗರಾಜ್ ಸೇರಿದಂತೆ ಎಲ್ಲರ ಸೇವೆಯನ್ನು ಬಸವಕೇಂದ್ರ ಶ್ರೀಗಳು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಮತ್ತು ಯುವಕರು ಒಟ್ಟಾಗಿ ನಡೆಸಿದ ಭಜನಾ ಕಾರ್ಯಕ್ರಮದ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಸ್ವಾಮೀಜಿ, ಹಿರಿಯರೊಂದಿಗೆ ಯುವಕರು ಸೇರಿ ಭಜನೆ ಮಾಡುತ್ತಿರುವುದು ಸಂತಸದ ಸಂಗತಿ. ಇಂತಹ ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಬೇಕು. ಭಜನೆ, ವಚನ ಗಾಯನ ಮತ್ತು ಶರಣರ ವಿಚಾರಧಾರೆಗಳು ಗ್ರಾಮೀಣ ಬದುಕಿನ ಅವಿಭಾಜ್ಯ ಭಾಗವಾಗಬೇಕು ಎಂದು ಶ್ರೀಗಳು ಕರೆ ನೀಡಿದರು.

ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ಮತ್ತು ಅಂತರಂಗದ ಶುದ್ಧತೆಯ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪೂಜೆ ಕೇವಲ ಆಚರಣೆಯಾಗದೆ ಬದುಕಿನ ಭಾಗವಾಗಬೇಕು. ನಾವು ಮಾಡುವ ಪ್ರತಿಯೊಂದು ಪ್ರಾಮಾಣಿಕ ಕೆಲಸವೂ ದೇವರಿಗೆ ಅರ್ಪಣೆಯಾಗಬೇಕು. ಆಗ ಮಾತ್ರ ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಆಶಯ ಸಾಕಾರಗೊಳ್ಳುತ್ತದೆ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಮ್ಮಡಿಹಳ್ಳಿಯ ಸಮಾಜದ ಮುಖಂಡರಾದ ಗುರುಲಿಂಗಪ್ಪ ಟಿ.ಕೆ. ವಹಿಸಿದ್ದರು. ಉಪನ್ಯಾಸಕರಾದ ಡಾ. ಬಿ. ಭಾಗ್ಯಲಕ್ಷ್ಮಿ ಶಿವಮೊಗ್ಗ, ಲವಕುಮಾರಸ್ವಾಮಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಚ್. ಬಸವರಾಜು, ತಮ್ಮಡಿಹಳ್ಳಿಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ನಾಗರಾಜ್, ಬೆನವಳ್ಳಿ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.










