ಬಸವಣ್ಣನವರ ಬದುಕು ಪ್ರಾಮಾಣಿಕತೆ, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಶ್ರೇಷ್ಠ ಮಾದರಿ – ಕಾಯಕದ ಪ್ರತಿಫಲವನ್ನಷ್ಟೇ ಅನುಭವಿಸುವ ಸಂಕಲ್ಪ ಪ್ರತಿಯೊಬ್ಬರಲ್ಲೂ ಇರಲಿ: ಬಸವಕೇಂದ್ರ ಶ್ರೀಗಳು
ಶಿವಮೊಗ್ಗ: ಅಧಿಕಾರದ ಆಸೆಗಾಗಿ ಮೌಲ್ಯಗಳನ್ನು ಮಾರಿಕೊಳ್ಳುವವರು ಹೆಚ್ಚಾಗುತ್ತಿರುವ ಇಂದಿನ ಸಮಾಜದಲ್ಲಿ ಭ್ರಷ್ಟಾಚಾರವನ್ನು ಕೇವಲ ರಾಜಕಾರಣಿಗಳ ತಲೆಗೆ ಕಟ್ಟಿಹಾಕಿ ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಎರಡು ರೂಪಾಯಿ ಉಳಿಸಿಕೊಳ್ಳಲು ಬಿಲ್ ಪಡೆಯದೆ ವ್ಯವಹರಿಸುವ ಸಾಮಾನ್ಯ ವ್ಯಕ್ತಿಯಿಂದ ಹಿಡಿದು, ಮತದಾನದ ಸಂದರ್ಭದಲ್ಲಿ ಆಮಿಷಗಳಿಗೆ ಒಳಗಾಗುವ ಮತದಾರರವರೆಗೆ ಪ್ರತಿಯೊಬ್ಬರ ಸಣ್ಣಪುಟ್ಟ ತಪ್ಪುಗಳೂ ವ್ಯವಸ್ಥೆಯ ದೊಡ್ಡ ಭ್ರಷ್ಟಾಚಾರಕ್ಕೆ ನೀರೆರೆಯುತ್ತಿವೆ. ಸಮಾಜವನ್ನು ಬದಲಾಯಿಸುವ ಮೊದಲು ನಮ್ಮೊಳಗಿನ ಅಂತಃಸಾಕ್ಷಿಯನ್ನು ಎಚ್ಚರಿಸಿಕೊಳ್ಳಬೇಕು. ಪ್ರಾಮಾಣಿಕತೆಯನ್ನು ಬದುಕಿನ ಉಸಿರಾಗಿಸಿಕೊಂಡು, ನೈತಿಕತೆಯನ್ನು ಪ್ರತಿಯೊಂದು ನಡೆ-ನುಡಿಯಲ್ಲೂ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. 12ನೇ ಶತಮಾನದಲ್ಲಿಯೇ ಇಂತಹ ಉನ್ನತ ನೈತಿಕ ಬದುಕಿಗೆ ಮಾದರಿಯಾದವರು ವಿಶ್ವಗುರು ಬಸವಣ್ಣನವರು ಎಂದು ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಶಿವಮೊಗ್ಗ ನಗರದ ಶರಣ ಸಂಪದ, ಸ್ವಾಮಿ ವಿವೇಕಾನಂದ ಬಡಾವಣೆಯ ಸೇವಾರ್ಥಿಗಳಾದ ವೀರಮ್ಮ, ಎಂ.ಜಿ. ಹಾಲೇಶಪ್ಪ ಮತ್ತು ಕುಟುಂಬದವರು, ಬಸವಕೇಂದ್ರ, ಶಿವಮೊಗ್ಗ ಹಾಗೂ ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು ಆಶ್ರಯದಲ್ಲಿ ಆಯೋಜಿಸಿದ್ದ 20ನೇ ವರ್ಷದ ಚಿಂತನ ಕಾರ್ತಿಕದ 15ನೇ ದಿನದ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧರ್ಮದ ಆಚರಣೆಗಿಂತ ನೈತಿಕ ಬದುಕು ಮುಖ್ಯ
ಚಿಂತನ ಕಾರ್ತಿಕ ಕಾರ್ಯಕ್ರಮವನ್ನು ತಮ್ಮ ಮನೆಯ ಆವರಣದಲ್ಲಿ ಆಯೋಜಿಸಲು ಮುಂದೆ ಬಂದ ವೀರಮ್ಮ, ಹಾಲೇಶಪ್ಪ ಹಾಗೂ ಕುಟುಂಬದವರ ಸೇವಾಭಾವವನ್ನು ಪ್ರಶಂಸಿಸಿದ ಬಸವಕೇಂದ್ರ ಶ್ರೀಗಳು, ರುದ್ರೇಶ್ ಮತ್ತು ಮಂಜು ಅವರು ಚಿಂತನ ಕಾರ್ತಿಕ ಕಾರ್ಯಕ್ರಮವನ್ನು ತಮ್ಮ ಹೊಸ ಮನೆಯ ಆವರಣದಲ್ಲಿ ಆಯೋಜಿಸಲು ಆಸಕ್ತಿ ತೋರಿದಾಗ ಆರಂಭದಲ್ಲಿ ತಾವು ಒಪ್ಪಿಗೆ ನೀಡಿರಲಿಲ್ಲ. ಹಿಂದಿನ ವರ್ಷವೂ ಕಾರ್ಯಕ್ರಮವನ್ನು ಆಯೋಜಿಸಿದ್ದೀರಿ, ಈ ವರ್ಷ ಬೇಡ ಎಂದು ಹೇಳಿದ್ದೆ. ಆದರೆ, ಹೊಸ ಮನೆಯಲ್ಲಿ ಈವರೆಗೆ ನಾಲ್ಕು ಜನರನ್ನು ಕರೆದು ಊಟ ಮಾಡಿಸಿಲ್ಲ. ಸ್ವಾಮಿ ಕಾರ್ಯವೂ ಆಗಬೇಕು, ಸ್ವಕಾರ್ಯವೂ ಆಗಬೇಕು. ಚಿಂತನ ಕಾರ್ತಿಕದ ಮೂಲಕ ಮನೆಯ ಶಾಂತಿ ಕಾರ್ಯವನ್ನೂ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಅವರು ಒತ್ತಾಯಿಸಿದಾಗ ಒಪ್ಪಿಗೆ ನೀಡಬೇಕಾಯಿತು ಎಂದರು.

ಸಾಮಾನ್ಯವಾಗಿ ಗೃಹಪ್ರವೇಶ ಮತ್ತಿತರ ಶುಭಕಾರ್ಯಗಳಿಗೆ ಸಾಕಷ್ಟು ಹಣ ಖರ್ಚು ಮಾಡಲಾಗುತ್ತದೆ. ಆದರೆ, ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸಿ, ಇಷ್ಟಲಿಂಗ ಪೂಜೆ, ಪಾದಪೂಜೆ ಹಾಗೂ ದಾಸೋಹದ ಮೂಲಕ ಮನೆಯ ಶುಭಕಾರ್ಯವನ್ನೂ ಅರ್ಥಪೂರ್ಣವಾಗಿ ಆಚರಿಸಬಹುದು ಎಂಬುದನ್ನು ಈ ಕುಟುಂಬ ತೋರಿಸಿಕೊಟ್ಟಿದೆ. ಭಕ್ತರು ತಮ್ಮ ಭಕ್ತಿಯಿಂದ ನೀಡುವುದನ್ನು ಸ್ವೀಕರಿಸುವುದೇ ದಾಸೋಹದ ಪರಂಪರೆ. ಅದನ್ನು ವಸೂಲಿಯ ರೂಪಕ್ಕೆ ತೆಗೆದುಕೊಂಡು ಹೋಗಬಾರದು. ಈ ಕುಟುಂಬದ ಸಂಸ್ಕಾರ, ಭಕ್ತಿ ಮತ್ತು ಸೇವಾಮನೋಭಾವ ಶ್ಲಾಘನೀಯ ಎಂದು ಹೇಳಿದರು.
ಹಾಲೇಶಪ್ಪನವರು ಭಾವುಕ ಜೀವಿ. ಅವರ ಪತ್ನಿ ಹಾಗೂ ಕುಟುಂಬದ ಸದಸ್ಯರೆಲ್ಲರೂ ಉತ್ತಮ ಸಂಸ್ಕಾರ ಹೊಂದಿದವರು. ಮಂಜು ಅವರ ಜೀವನದ ಆರಂಭದ ದಿನಗಳನ್ನು ಸ್ಮರಿಸಿದ ಶ್ರೀಗಳು, ಶಿವಮೊಗ್ಗಕ್ಕೆ ಹೊಸದಾಗಿ ಬಂದಿದ್ದ ಸಂದರ್ಭದಲ್ಲಿ ಹಾಲೇಶಪ್ಪನವರು ತಮ್ಮ ಮಗನಿಗೆ ಬೆಂಗಳೂರಿನಲ್ಲಿ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಕಲ್ಪಿಸಿಕೊಡಲು ಸಹಾಯ ಕೇಳಿದ್ದರು. ಆಗ ಒಂದು ಆಹ್ವಾನ ಪತ್ರಿಕೆಯ ಹಿಂಭಾಗದ ಕಾಗದದಲ್ಲಿ ವಿದ್ಯಾರ್ಥಿಗೆ ಜಯದೇವ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಕಲ್ಪಿಸಿಕೊಡುವಂತೆ ಬರೆದು ಸಹಿ ಮಾಡಿ ಕಳುಹಿಸಿಕೊಟ್ಟಿದ್ದೆ. ಆ ಚಿಕ್ಕ ಶಿಫಾರಸು ಪತ್ರವೇ ಮಂಜು ಅವರ ಮುಂದಿನ ಶಿಕ್ಷಣಕ್ಕೆ ನೆರವಾಯಿತು. ವಿದ್ಯಾರ್ಥಿನಿಲಯದಲ್ಲಿ ಓದಿ, ಉತ್ತಮ ಸಂಪರ್ಕ ಬೆಳೆಸಿಕೊಂಡು, ಹಲವು ಸವಾಲುಗಳನ್ನು ಎದುರಿಸಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇಂದು ಕರ್ನಾಟಕ ಸರ್ಕಾರದಲ್ಲಿ ಉತ್ತಮ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರುದ್ರೇಶ್ ಅವರಿಗೂ ರಾಜಕೀಯದ ಆಸಕ್ತಿ ಇದೆ. ಆದರೆ, ಹಣ ಖರ್ಚು ಮಾಡಿಕೊಂಡು ರಾಜಕೀಯಕ್ಕೆ ಪ್ರವೇಶಿಸುವ ಅಗತ್ಯವಿಲ್ಲ. ಉತ್ತಮವಾಗಿ ಕೃಷಿ, ತೋಟಗಾರಿಕೆ ಮಾಡಿಕೊಂಡು ಸ್ವಾವಲಂಬಿಯಾಗಿ ಬದುಕಿದರೆ ರಾಜಕಾರಣಿಗಳೇ ನಿಮ್ಮ ಬಳಿಗೆ ಬರುತ್ತಾರೆ ಎಂದು ಸಲಹೆ ನೀಡಿದರು.

ಭ್ರಷ್ಟಾಚಾರಕ್ಕೆ ಮತದಾರರೂ ಹೊಣೆ
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳ ಬಗ್ಗೆ ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ. ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ ಎಂದು ಜನರು ದೂರುತ್ತಾರೆ. ಆದರೆ, ರಾಜಕಾರಣಿಗಳು ಭ್ರಷ್ಟರಾಗಲು ಕಾರಣ ಯಾರು ಎಂಬ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಬೇಕು. ಅವರನ್ನು ಆಯ್ಕೆ ಮಾಡಿ ಅಧಿಕಾರಕ್ಕೆ ಕಳುಹಿಸುವವರು ಮತದಾರರೇ ಅಲ್ಲವೇ? ಎಂದು ಬಸವಕೇಂದ್ರ ಶ್ರೀಗಳು ಪ್ರಶ್ನಿಸಿದರು.
ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುವಾಗ ಟಿಕೆಟ್ ಪಡೆಯಲು ಬೇಕಾದಷ್ಟು ಹಣ ನೀಡದೆ, ಉಳಿದ ಹಣವನ್ನು ಕೊಡದೆ ಟಿಕೆಟ್ ಇಲ್ಲದಿದ್ದರೂ ಪರವಾಗಿಲ್ಲ ಎಂದು ಹೇಳುವ ಪ್ರಯಾಣಿಕನೂ ಭ್ರಷ್ಟಾಚಾರಕ್ಕೆ ಕೈಜೋಡಿಸಿದಂತೆಯೇ. ಔಷಧಿ ಅಂಗಡಿಯಲ್ಲಿ ಬಿಲ್ ಪಡೆದರೆ ಹತ್ತು ರೂಪಾಯಿ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಬಿಲ್ ಬೇಡವೆಂದು ಹೇಳುವ ಗ್ರಾಹಕನೂ ತಪ್ಪು ಮಾಡುತ್ತಿದ್ದಾನೆ. ಇಲ್ಲಿ ಒಬ್ಬರು ತೆರಿಗೆ ತಪ್ಪಿಸುತ್ತಾರೆ, ಮತ್ತೊಬ್ಬರು ಅದಕ್ಕೆ ಸಹಕರಿಸುತ್ತಾರೆ. ಹೀಗೆ ಸಣ್ಣಪುಟ್ಟ ಭ್ರಷ್ಟಾಚಾರಗಳಿಗೆ ಸಮಾಜವೇ ಅವಕಾಶ ಮಾಡಿಕೊಡುತ್ತಿದೆ. ಇಂತಹವರೇ ದೊಡ್ಡ ಮಟ್ಟದ ಭ್ರಷ್ಟಾಚಾರವನ್ನು ಪ್ರಶ್ನಿಸುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.
ರಾಜಕಾರಣಿಗಳು ಮಾತ್ರವಲ್ಲ, ಮತದಾರರೂ ಸುಧಾರಣೆಯಾಗಬೇಕು. ಎರಡು ಕೈ ಸೇರಿದಾಗಲೇ ಚಪ್ಪಾಳೆ ಎಂಬಂತೆ ಸಾರ್ವಜನಿಕ ಜೀವನದಲ್ಲಿರುವವರು ಮತ್ತು ಅವರನ್ನು ಆಯ್ಕೆ ಮಾಡುವವರು ಇಬ್ಬರೂ ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕು. ಸಮಾಜದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡಾಗ ಮಾತ್ರ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯ ಎಂದರು.

ಬಸವಣ್ಣನವರ ಬದುಕೇ ನೈತಿಕತೆಯ ವಿಶ್ವವಿದ್ಯಾಲಯ
ರಾಜಕೀಯ ಮತ್ತು ಸಾರ್ವಜನಿಕ ಬದುಕಿನಲ್ಲಿ ನೈತಿಕತೆಯನ್ನು ಹೇಗೆ ಪಾಲಿಸಬೇಕು ಎಂಬುದಕ್ಕೆ ವಿಶ್ವಗುರು ಬಸವಣ್ಣನವರ ಜೀವನವೇ ಅತ್ಯುತ್ತಮ ಉದಾಹರಣೆ. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರೂ ಅಧಿಕಾರ, ಸಂಪತ್ತು ಮತ್ತು ವೈಯಕ್ತಿಕ ಸುಖಕ್ಕಾಗಿ ಅವರು ಎಂದಿಗೂ ತಮ್ಮ ತತ್ವಗಳನ್ನು ಬಿಟ್ಟುಕೊಡಲಿಲ್ಲ. ತಮ್ಮ ದುಡಿಮೆಯ ಪ್ರತಿಫಲವನ್ನಷ್ಟೇ ಅನುಭವಿಸಬೇಕು ಎಂಬ ದೃಢ ನಿಲುವು ಅವರದ್ದಾಗಿತ್ತು ಎಂದು ಹೇಳಿದರು.
ಬಸವಣ್ಣನವರ ವಿರುದ್ಧ ಅವರ ಕಾಲದಲ್ಲಿಯೇ ಅನೇಕ ಆರೋಪಗಳು ಕೇಳಿಬಂದಿದ್ದವು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದುಕೊಂಡು ಆತನನ್ನು ಓಲೈಸುತ್ತಾ ಬದುಕುತ್ತಿದ್ದಾರೆ ಎಂಬ ಟೀಕೆಗಳೂ ಇದ್ದವು. ಇದಕ್ಕೆ ಬಸವಣ್ಣನವರು ತಮ್ಮ ವಚನದ ಮೂಲಕವೇ ಉತ್ತರ ನೀಡಿದ್ದಾರೆ.
‘ಹೊತ್ತಾರೆ ಎದ್ದು, ಕಣ್ಣ ಹೊಸೆಯುತ್ತ,
ಎನ್ನ ಒಡಲಿಂಗೆ, ಎನ್ನ ಒಡವೆಗೆ, ಎನ್ನ ಮಡದಿ ಮಕ್ಕಳಿಗೆಂದು ಕುದಿದೆನಾದಡೆ,
ಎನ್ನ ಮನಕ್ಕೆ ಮನವೇ ಸಾಕ್ಷಿ!
‘ಆಸನೇ ಶಯನೇ ಯಾನೇ ಸಂಪರ್ಕೇ ಸಹಭೋಜನೇ |ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ’ ಎಂಬ ಶ್ರುತಿಯ ಬಸವಣ್ಣನೋದುವನು ಎಂಬರು.
ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳಿತಿರ್ದು ಓಲೈಸಿಹನೆಂದು ನುಡಿವರಯ್ಯಾ ಪ್ರಮಥರು.
ಕೊಡುವೆನುತ್ತರವನವರಿಗೆ:
ಹೊಲೆಯ ಹೊಲೆಯರ ಮನೆಯ ಹೊಕ್ಕು ಸಲೆ ಕೈಕೂಲಿಯ ಮಾಡಿಯಾದರೆಯೂ
ನಿಮ್ಮ ನಿಲವಿಂಗೆ ಕುದಿವೆನಲ್ಲದೆ, ಎನ್ನ ಒಡಲಿಗೆ ಕುದಿದೆನಾದಡೆ ತಲೆದಂಡ ಕೂಡಲಸಂಗಮದೇವಾ.’
ಎಂಬ ವಚನದ ಮೂಲಕ ವೈಯಕ್ತಿಕ ಆಸೆ, ಕುಟುಂಬದ ಸುಖ ಹಾಗೂ ಹೊಟ್ಟೆಪಾಡಿಗಾಗಿ ಅಧಿಕಾರಸ್ಥರನ್ನು ಓಲೈಸುವ ಅಗತ್ಯ ತನಗಿಲ್ಲ. ತನ್ನ ಅಂತಃಸಾಕ್ಷಿಯೇ ತನ್ನ ನಡವಳಿಕೆಗೆ ಸಾಕ್ಷಿ ಎಂದು ಸಾರಿದ್ದಾರೆ.
ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರೂ ಆತನ ಸಂಪತ್ತನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಳ್ಳಲಿಲ್ಲ. ಅಧಿಕಾರದ ಸ್ಥಾನದಲ್ಲಿರುವುದರಿಂದಲೇ ವ್ಯಕ್ತಿಯ ನೈತಿಕತೆ ಸಾಬೀತಾಗುವುದಿಲ್ಲ. ಆ ಅಧಿಕಾರವನ್ನು ಯಾವ ಉದ್ದೇಶಕ್ಕೆ ಬಳಸುತ್ತಾನೆ ಎಂಬುದೇ ಮುಖ್ಯ. ಬಡವರ ಮನೆಗೆ ಹೋಗಿ ಕೈಕೂಲಿ ಮಾಡಿ ಬದುಕಬೇಕಾದರೂ ಸರಿ, ತನ್ನ ಸ್ವಾಭಿಮಾನ ಮತ್ತು ಪ್ರಾಮಾಣಿಕತೆಯನ್ನು ಬಿಟ್ಟುಕೊಡುವುದಿಲ್ಲ ಎಂಬುದು ಬಸವಣ್ಣನವರ ನಿಲುವಾಗಿತ್ತು ಎಂದರು.

ಬಿಜ್ಜಳನ ಭಂಡಾರ ನನಗೇಕೆ ಎಂದ ಬಸವಣ್ಣ
ಬಸವಣ್ಣನವರು ಬಿಜ್ಜಳನ ಭಂಡಾರವನ್ನು ಬಳಸಿಕೊಂಡು ಜಂಗಮರಿಗೆ ದಾಸೋಹ ಮಾಡುತ್ತಿದ್ದರು ಎಂಬ ಆರೋಪಗಳೂ ಕೇಳಿಬಂದಿದ್ದವು. ಆದರೆ, ಇದಕ್ಕೆ ಅವರು ನೀಡಿದ ಉತ್ತರ ಅತ್ಯಂತ ಅರ್ಥಪೂರ್ಣವಾಗಿದೆ.
‘ಊರ ಮುಂದೆ ಹಾಲ ಹಳ್ಳ ಹರಿಯುತ್ತಿರಲು,
ಒರೆಯಾವಿನ ಬೆನ್ನಲಿ ಹೋಗಲದೇಕಯ್ಯಾ?
ಲಜ್ಜೆಗೆಡಲೇಕೆ? ನಾನು ಗೆಡಲೇಕೆ?
ಕೂಡಲಸಂಗನ ಶರಣರು ಉಳ್ಳನ್ನಕ್ಕರ
ಬಿಜ್ಜಳನ ಭಂಡಾರವೆನಗೇಕಯ್ಯಾ?’
ಎಂಬ ವಚನದ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಊರ ಮುಂದೆ ಹಾಲಿನ ಹಳ್ಳವೇ ಹರಿಯುತ್ತಿರುವಾಗ ಬೇರೆಯವರ ಮನೆಯ ಹಸುವಿನ ಕೆಚ್ಚಲಿಗೆ ಕೈಹಾಕಿ ಒದೆಯಿಸಿಕೊಳ್ಳುವ ಅಗತ್ಯವೇನು? ಅದೇ ರೀತಿ ಶರಣರು ತಮ್ಮ ಕಾಯಕದ ಪ್ರತಿಫಲವನ್ನು ಮಹಾಮನೆಯ ದಾಸೋಹಕ್ಕೆ ಅರ್ಪಿಸುತ್ತಿರುವಾಗ ಬಿಜ್ಜಳನ ಭಂಡಾರದ ಹಣವನ್ನು ಬಳಸಿಕೊಳ್ಳುವ ಅಗತ್ಯವೇನು ಎಂಬುದು ಬಸವಣ್ಣನವರ ಪ್ರಶ್ನೆಯಾಗಿತ್ತು.
ಇಂದಿನ ಮಠಗಳಲ್ಲಿ ಭಕ್ತರು ಅಕ್ಕಿ, ಬೇಳೆ, ಬೆಲ್ಲ, ಧಾನ್ಯ ಹಾಗೂ ಹಣವನ್ನು ಭಕ್ತಿಯಿಂದ ನೀಡುತ್ತಾರೆ. ಅವುಗಳನ್ನು ಒಟ್ಟುಗೂಡಿಸಿ ಪ್ರಸಾದ ಸಿದ್ಧಪಡಿಸಿ ಭಕ್ತರೇ ಸೇವಿಸುತ್ತಾರೆ. ಅದನ್ನು ಮಠದ ಪ್ರಸಾದ ಎಂದು ಗೌರವಿಸುತ್ತಾರೆ. ಇದೇ ರೀತಿಯಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರ ಮಹಾಮನೆಗೆ ಶರಣರು ತಮ್ಮ ಕಾಯಕದ ಒಂದು ಭಾಗವನ್ನು ದಾಸೋಹಕ್ಕಾಗಿ ಅರ್ಪಿಸುತ್ತಿದ್ದರು. ಅದರಿಂದಲೇ ನಿತ್ಯ ದಾಸೋಹ ನಡೆಯುತ್ತಿತ್ತು. ಬಿಜ್ಜಳನ ಭಂಡಾರದ ಕವಡೆ ಕಾಸನ್ನೂ ಮುಟ್ಟದೆ ಶರಣರ ಸಹಕಾರದಿಂದ ದಾಸೋಹ ನಡೆಸಿದ ಬಸವಣ್ಣನವರ ನೈತಿಕ ನಿಲುವು ಇಂದಿಗೂ ಅನುಕರಣೀಯವಾಗಿದೆ ಎಂದು ಶ್ರೀಗಳು ವಿವರಿಸಿದರು.
ಅಂತಃಸಾಕ್ಷಿಗೆ ವಿರುದ್ಧವಾಗಿ ಬದುಕಬಾರದು
ಮನುಷ್ಯನಿಗೆ ನೈತಿಕ ಪ್ರಜ್ಞೆ ಎನ್ನುವುದು ಅತ್ಯಂತ ಮುಖ್ಯ. ಹೊರಜಗತ್ತಿನ ಮುಂದೆ ನಾವು ಎಷ್ಟೇ ಪ್ರಾಮಾಣಿಕರೆಂದು ತೋರಿಸಿಕೊಂಡರೂ ರಾತ್ರಿ ಮಲಗಿದಾಗ ನಮ್ಮ ಅಂತಃಸಾಕ್ಷಿ ನಮ್ಮನ್ನು ಪ್ರಶ್ನಿಸಬೇಕು. ತಪ್ಪು ಮಾಡಿದಾಗ ಒಳಮನಸ್ಸು ಚುಚ್ಚುವಂತಿರಬೇಕು. ಅಂತಹ ಜಾಗೃತ ಅಂತಃಸಾಕ್ಷಿ ಇದ್ದರೆ ಯಾರೂ ಅಡ್ಡದಾರಿ ಹಿಡಿಯುವುದಿಲ್ಲ ಎಂದರು.
ಬಸವಣ್ಣನವರ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ. ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ. ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ‘ ಎಂಬ ವಚನದ ಆಶಯವನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
‘ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ,
ಅನ್ನದೊಳಗೊಂದಗುಳ ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ,
ಕೂಡಲಸಂಗಮದೇವಾ.’
ಎಂಬ ವಚನವನ್ನು ಉಲ್ಲೇಖಿಸಿದ ಶ್ರೀಗಳು, ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತನ್ನು ಕೂಡಿಡಬಾರದು ಎಂಬ ಬಸವಣ್ಣನವರ ಸಂಕಲ್ಪವನ್ನು ವಿವರಿಸಿದರು.
ಬಂಗಾರದ ಶುದ್ಧತೆಯನ್ನು ಪರೀಕ್ಷಿಸಲು ಒರೆಹಚ್ಚುವಾಗ ಕಲ್ಲಿನ ಮೇಲೆ ಉಳಿಯುವ ಅಲ್ಪ ಪ್ರಮಾಣದ ಬಂಗಾರವನ್ನೂ ನಾಳೆಗಾಗಿ ಉಳಿಸಿಕೊಳ್ಳುವುದಿಲ್ಲ. ಬಟ್ಟೆಯಲ್ಲಿ ಒಂದು ಎಳೆಯನ್ನೂ, ಅನ್ನದಲ್ಲಿ ಒಂದು ಅಗುಳನ್ನೂ ಅಗತ್ಯಕ್ಕಿಂತ ಹೆಚ್ಚಾಗಿ ಸಂಗ್ರಹಿಸಿಕೊಳ್ಳುವುದಿಲ್ಲ ಎಂಬಷ್ಟು ಸರಳ ಮತ್ತು ಪರಿಶುದ್ಧ ಜೀವನ ಅವರದ್ದಾಗಿತ್ತು. ಇಂತಹ ಆದರ್ಶ ಬದುಕು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ ಎಂದರು.
ಕಳ್ಳನನ್ನೂ ಕಾಯಕದ ಹಾದಿಗೆ ತಂದ ಬಸವಣ್ಣ
ಬಸವಣ್ಣನವರ ಮನೆಗೆ ಕಳ್ಳನೊಬ್ಬ ಕಳವು ಮಾಡಲು ಬಂದ ಪ್ರಸಂಗವನ್ನು ವಿವರಿಸಿದ ಶ್ರೀಗಳು, ನೀಲಲೋಚನೆಯವರ ಮೈಮೇಲಿದ್ದ ಬಂಗಾರದ ಸರವನ್ನು ಕಳ್ಳ ಕದ್ದುಕೊಂಡು ಓಡುತ್ತಿದ್ದಾಗ ಸೈನಿಕರು ಆತನನ್ನು ಹಿಡಿದು ಬಸವಣ್ಣನವರ ಮುಂದೆ ನಿಲ್ಲಿಸಿದರು. ಆಗ ಬಸವಣ್ಣನವರು ಕಳ್ಳನನ್ನು ಶಿಕ್ಷಿಸುವ ಬದಲು ತಮ್ಮ ಪತ್ನಿಯನ್ನೇ ಪ್ರಶ್ನಿಸಿದರು.
‘ಒಡನಿರ್ದ ಸತಿಯೆಂದು ನಚ್ಚಿರ್ದೆನಯ್ಯಾ,
ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯಾ.
ಅಯ್ಯಾ, ನಮ್ಮಯ್ಯನ ಕೈನೊಂದಿತು,
ತೆಗೆದು ಕೊಡಾ ಎಲೆ ಚಂಡಾಲಗಿತ್ತಿ,
ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಡೆ
ಕೂಡಲಸಂಗಮದೇವನಲ್ಲದೆ ಆರೂ ಇಲ್ಲ.’
ಎಂಬ ವಚನದ ಮೂಲಕ ಕಳ್ಳನನ್ನೂ ದೇವರ ರೂಪದಲ್ಲಿ ಕಂಡರು.
ನಾನು ಬಂಗಾರ, ಬಟ್ಟೆ, ಆಹಾರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಇಟ್ಟುಕೊಳ್ಳುವುದಿಲ್ಲ ಎಂದು ಸಂಕಲ್ಪ ಮಾಡಿರುವಾಗ, ನೀನು ಬಂಗಾರದ ಸರವನ್ನು ಧರಿಸಿರುವುದು ಏಕೆ? ಅದನ್ನು ತೆಗೆದುಕೊಂಡು ಹೋಗಲು ಬಂದವನಿಗೆ ಕೊಟ್ಟುಬಿಡು ಎಂಬ ಅರ್ಥದಲ್ಲಿ ಪತ್ನಿಗೆ ಹೇಳಿದ ಬಸವಣ್ಣನವರ ನಿಲುವು ಅವರ ನೈತಿಕ ಶುದ್ಧತೆಯನ್ನು ತೋರಿಸುತ್ತದೆ.
ತನ್ನನ್ನು ಕಳ್ಳನೆಂದು ಕರೆಯುವ ಬದಲು ದೇವರೆಂದು ಗೌರವಿಸಿದ ಬಸವಣ್ಣನವರ ನಡೆ ಕಳ್ಳನ ಮನಸ್ಸನ್ನು ಪರಿವರ್ತಿಸಿತು. ಇನ್ನು ಮುಂದೆ ಕಳವು ಮಾಡುವುದಿಲ್ಲ, ದುಡಿದು ಬದುಕಲು ಅವಕಾಶ ಮಾಡಿಕೊಡಿ ಎಂದು ಆತ ಬೇಡಿಕೊಂಡನು. ನಂತರ ಕಾಯಕದ ಹಾದಿ ಹಿಡಿದ ಆ ವ್ಯಕ್ತಿ ಕನ್ನದ ಮಾರಿತಂದೆ ಎಂಬ ಹೆಸರಿನಿಂದ ಪ್ರಸಿದ್ಧನಾದನೆಂದು ಶರಣರ ಪರಂಪರೆಯಲ್ಲಿ ವಿವರಿಸಲಾಗುತ್ತದೆ.
ಕನ್ನದ ಮಾರಿತಂದೆಯ ವಚನದ ಮೂಲಕವೂ ಈ ಪರಿವರ್ತನೆಯ ಮಹತ್ವವನ್ನು ತಿಳಿಯಬಹುದು. ತಪ್ಪು ಮಾಡಿದವನನ್ನು ಕೇವಲ ಶಿಕ್ಷಿಸುವುದಕ್ಕಿಂತ ಆತನಲ್ಲಿ ಪಶ್ಚಾತ್ತಾಪ ಮೂಡಿಸಿ ಸರಿಯಾದ ದಾರಿಗೆ ತರುವುದೇ ನಿಜವಾದ ಮಾನವೀಯತೆ ಎಂಬುದನ್ನು ಬಸವಣ್ಣನವರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟರು ಎಂದು ಬಸವಕೇಂದ್ರ ಶ್ರೀಗಳು ಹೇಳಿದರು.
ನೈತಿಕವಾಗಿ ಶುದ್ಧವಾಗಿದ್ದರೆ ಯಾರ ಭಯವೂ ಇರುವುದಿಲ್ಲ
‘ವ್ಯಾಧನೊಂದು ಮೊಲನ ತಂದಡೆ ಸಲುವ ಹಾಗಕ್ಕೆ ಬಿಲಿವರಯ್ಯಾ. ನೆಲನಾಳ್ದನ ಹೆಣನೆಂದರೆ ಒಂದಡಕೆಗೆ ಕೊಂಬವರಿಲ್ಲ, ನೋಡಯ್ಯಾ! ಮೊಲನಿಂದ ಕರಕಷ್ಟ ನರನ ಬಾಳುವೆ! ಸಲೆನಂಬೋ ನಮ್ಮ ಕೂಡಲಸಂಗಮದೇವನ’
ಎಂಬ ವಚನವನ್ನು ಉಲ್ಲೇಖಿಸಿದ ಶ್ರೀಗಳು, ಮನುಷ್ಯನಿಗೆ ನಿಜವಾದ ಮೌಲ್ಯ ಇರುವುದು ಬದುಕಿರುವಾಗಲೇ. ಬದುಕಿರುವಾಗ ಸಮಾಜಕ್ಕೆ ಉಪಯುಕ್ತವಾದ ಕೆಲಸ ಮಾಡಿ, ನೈತಿಕವಾಗಿ ಶುದ್ಧವಾಗಿ ಬದುಕಿದಾಗ ಮಾತ್ರ ಗೌರವ ದೊರೆಯುತ್ತದೆ ಎಂದರು.
‘ಆರು ಮುನಿದು ನಮ್ಮನೇನ ಮಾಡುವರು?
ಊರು ಮುನಿದು ನಮ್ಮನೆಂತು ಮಾಡುವರು?
ನಮ್ಮ ಕುನ್ನಿಗೆ ಕೂಸ ಕೊಡಬೇಡ;
ನಮ್ಮ ಸೊಣಗಂಗೆ ತಳಿಗೆಯನಿಕ್ಕಬೇಡ!
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ,
ನಮಗೆ ನಮ್ಮ ಕೂಡಲಸಂಗಯ್ಯನುಳ್ಳನ್ನಕ್ಕ?’
ಎಂಬ ಬಸವಣ್ಣನವರ ವಚನವು ಆತ್ಮವಿಶ್ವಾಸ ಮತ್ತು ನೈತಿಕ ದೃಢತೆಯ ಮಹತ್ವವನ್ನು ಸಾರುತ್ತದೆ.
ನಾವು ಪ್ರಾಮಾಣಿಕವಾಗಿ ಬದುಕುತ್ತಿದ್ದೇವೆ ಎಂಬ ಆತ್ಮವಿಶ್ವಾಸವಿದ್ದಾಗ ಯಾರೇ ವಿರೋಧಿಸಿದರೂ ಭಯಪಡುವ ಅಗತ್ಯವಿಲ್ಲ. ಆನೆಯ ಮೇಲೆ ಸಾಗುವವನನ್ನು ನಾಯಿಗಳು ಕಚ್ಚಲು ಸಾಧ್ಯವೇ? ಅದೇ ರೀತಿ ನೈತಿಕವಾಗಿ ಗಟ್ಟಿಯಾಗಿರುವ ವ್ಯಕ್ತಿಯನ್ನು ಹೊರಗಿನ ಟೀಕೆಗಳು ಕುಗ್ಗಿಸಲಾರವು ಎಂದರು.
ಇಡೀ ದೇಶದ ಭ್ರಷ್ಟಾಚಾರವನ್ನು ನಾನೊಬ್ಬನೇ ನಿರ್ಮೂಲನೆ ಮಾಡುತ್ತೇನೆ ಎಂದು ದೊಡ್ಡ ಪ್ರತಿಜ್ಞೆ ಮಾಡುವ ಅಗತ್ಯವಿಲ್ಲ. ನಾನು ಭ್ರಷ್ಟನಾಗುವುದಿಲ್ಲ, ಸುಳ್ಳು ಹೇಳುವುದಿಲ್ಲ, ದುಷ್ಟನಾಗುವುದಿಲ್ಲ, ಅನ್ಯಾಯ ಮಾಡುವುದಿಲ್ಲ ಎಂಬ ಸಣ್ಣ ಸಂಕಲ್ಪಗಳನ್ನು ಪ್ರತಿಯೊಬ್ಬರೂ ಮಾಡಿಕೊಳ್ಳಬೇಕು. ಜನರಿಂದಲೇ ದೇಶ ನಿರ್ಮಾಣವಾಗುತ್ತದೆ. ಜನರು ನೈತಿಕವಾಗಿ ಶುದ್ಧರಾದರೆ ದೇಶವೂ ಸಮೃದ್ಧವಾಗುತ್ತದೆ ಎಂಬ ಜಾನ್ ರಸ್ಕಿನ್ ಅವರ ಚಿಂತನೆಯೂ ಇದೇ ಆಶಯವನ್ನು ಸಾರುತ್ತದೆ ಎಂದು ಶ್ರೀಗಳು ಹೇಳಿದರು.
ಕನಕದಾಸರ ಚಿಂತನೆಯಲ್ಲೂ ಸಮಾನತೆಯ ಸಂದೇಶ
ಬಸವಣ್ಣನವರ ಜೊತೆಗೆ ಕನಕದಾಸರ ಜಯಂತಿಯನ್ನೂ ಕಾರ್ಯಕ್ರಮದಲ್ಲಿ ಆಚರಿಸಿರುವುದು ಸಂತಸದ ಸಂಗತಿ. ಬಸವಣ್ಣನವರ ನಂತರ ಜನಸಾಮಾನ್ಯರ ನಾಲಿಗೆಯಲ್ಲಿ ಹೆಚ್ಚು ಕೇಳಿಬರುವ ಮಹಾನ್ ದಾರ್ಶನಿಕ ಮತ್ತು ಕವಿಗಳಲ್ಲಿ ಕನಕದಾಸರು ಪ್ರಮುಖರು. ಅವರ ಕೀರ್ತನೆಗಳು ಸಮಾಜಕ್ಕೆ ಮಾನವೀಯತೆ, ಸಮಾನತೆ ಮತ್ತು ಭಕ್ತಿಯ ಸಂದೇಶ ನೀಡುತ್ತವೆ ಎಂದರು.
‘ನಾವು ಕುರುಬರು ನಮ್ಮ ದೇವರು ಬೀರಯ್ಯ, ಕಾವ ನಮ್ಮಜ್ಜ ನರಕುರಿಯ ಹಿಂಡುಗಳ‘ ಎಂಬ ಕನಕದಾಸರ ಕೀರ್ತನೆಯನ್ನು ಉಲ್ಲೇಖಿಸಿದ ಬಸವಕೇಂದ್ರ ಶ್ರೀಗಳು ಅವರು, ಶಿವನನ್ನು ಪಶುಪತಿ ಎಂದು ಕರೆಯುವಂತೆ ನಮ್ಮನ್ನು ಕಾಯುವ ದೇವರನ್ನು ಬೀರಪ್ಪನೆಂದು ಕರೆಯುವ ಮೂಲಕ ತಮ್ಮ ಸಮುದಾಯದ ಬದುಕು ಮತ್ತು ನಂಬಿಕೆಯನ್ನು ಕನಕದಾಸರು ಕಾವ್ಯದಲ್ಲಿ ಅಭಿವ್ಯಕ್ತಿಸಿದ್ದಾರೆ ಎಂದು ವಿವರಿಸಿದರು.
‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ, ಹುಟ್ಟಿದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ,
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟು ಕಾಣಿಸಬಂತು ಹಿರಿದೆನು ಕಿರಿದೆನು, ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜಾ.’
ಎಂಬ ಅವರ ಕೀರ್ತನೆಯು ಜಾತಿ ಅಹಂಕಾರಕ್ಕೆ ನೀಡಿದ ಪ್ರಬಲ ಉತ್ತರವಾಗಿದೆ.
84 ಲಕ್ಷ ಜೀವರಾಶಿಗಳ ಪರಿಕಲ್ಪನೆಯನ್ನು ಉಲ್ಲೇಖಿಸಿ, ಮನುಷ್ಯನ ಜನ್ಮಕ್ಕಿಂತ ಮೊದಲು ಎಷ್ಟೋ ಜೀವ ರೂಪಗಳಲ್ಲಿ ಜನಿಸಿ ಬಂದಿದ್ದೇವೆ ಎಂಬ ತಾತ್ವಿಕ ಚಿಂತನೆಯನ್ನು ಕನಕದಾಸರು ಮುಂದಿಡುತ್ತಾರೆ. ಇಂತಹ ಸಂದರ್ಭದಲ್ಲಿ ಜಾತಿ, ಕುಲದ ಹೆಸರಿನಲ್ಲಿ ಶ್ರೇಷ್ಠ-ಕನಿಷ್ಠ ಎಂಬ ಭೇದಭಾವ ಮಾಡುವುದು ಅರ್ಥಹೀನ. ಮನುಷ್ಯನಾಗಿ ಹುಟ್ಟಿದ ಮೇಲೆ ಇನ್ನೊಬ್ಬ ಮನುಷ್ಯನನ್ನು ಗೌರವಿಸಿ, ಘನತೆಯಿಂದ ಬದುಕುವುದನ್ನು ಕಲಿಯಬೇಕು ಎಂದು ಶ್ರೀಗಳು ಹೇಳಿದರು.
ಸಂಕಷ್ಟದಲ್ಲೂ ಆತ್ಮಬಲ ಕಳೆದುಕೊಳ್ಳದವನೇ ಶ್ರೇಷ್ಠ
ಕನಕದಾಸರ ರಾಮಧಾನ್ಯ ಚರಿತೆಯ ರಾಗಿ ಮತ್ತು ಅಕ್ಕಿಯ ಕಥೆಯನ್ನು ವಿವರಿಸಿದ ಬಸವಕೇಂದ್ರ ಶ್ರೀಗಳು, ಶ್ರೇಷ್ಠತೆಯ ಭ್ರಮೆ ಮನುಷ್ಯನನ್ನು ಹೇಗೆ ಕಾಡುತ್ತದೆ ಎಂಬುದನ್ನು ಈ ಕಥೆ ತಿಳಿಸುತ್ತದೆ. ರಾಗಿ ಮತ್ತು ಅಕ್ಕಿಯ ನಡುವಿನ ಶ್ರೇಷ್ಠತೆಯ ವಿವಾದದಲ್ಲಿ ರಾಗಿಯು ತನ್ನ ಆತ್ಮಬಲವನ್ನು ಕಾಪಾಡಿಕೊಂಡರೆ, ಅಕ್ಕಿಯು ಸಂಕಷ್ಟವನ್ನು ಎದುರಿಸಲಾಗದೆ ತನ್ನ ಗುಣವನ್ನು ಕಳೆದುಕೊಳ್ಳುತ್ತದೆ ಎಂಬ ಕಥೆಯ ಆಶಯವನ್ನು ವಿವರಿಸಿದರು.
ಬಾಹ್ಯ ರೂಪ, ಸ್ಥಾನಮಾನ, ಜಾತಿ ಅಥವಾ ಸಂಪತ್ತಿನಿಂದ ಶ್ರೇಷ್ಠತೆ ನಿರ್ಧಾರವಾಗುವುದಿಲ್ಲ. ಎಂತಹ ಕಠಿಣ ಸಂದರ್ಭ ಎದುರಾದರೂ ಆತ್ಮಬಲ, ಆತ್ಮವಿಶ್ವಾಸ ಮತ್ತು ಜೀವನೋತ್ಸಾಹವನ್ನು ಕಳೆದುಕೊಳ್ಳದೆ ನೈತಿಕವಾಗಿ ಬದುಕುವ ವ್ಯಕ್ತಿಯೇ ನಿಜವಾದ ಶ್ರೇಷ್ಠ ವ್ಯಕ್ತಿ. ಬಸವಣ್ಣ, ಅಲ್ಲಮಪ್ರಭು ಹಾಗೂ ಕನಕದಾಸರ ಚಿಂತನೆಗಳನ್ನು ಅರ್ಥಮಾಡಿಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಚಿಂತನ ಕಾರ್ತಿಕಕ್ಕೆ ಸಹಕರಿಸಿದವರಿಗೆ ಅಭಿನಂದನೆ
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಜನರ ಶಿಸ್ತು ಮತ್ತು ಆಸಕ್ತಿಯನ್ನು ಶ್ರೀಗಳು ಪ್ರಶಂಸಿಸಿದರು. ಹಿಂದಿನ ವರ್ಷ ಸುಮಾರು 2,000 ಜನರು ಭಾಗವಹಿಸಿದ್ದರು. ಈ ಬಾರಿ ಸಂಖ್ಯೆಯನ್ನು ಕಡಿಮೆಗೊಳಿಸಿ ಕಾರ್ಯಕ್ರಮ ನಡೆಸುವ ಉದ್ದೇಶವಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಗಂಭೀರವಾಗಿ ಉಪನ್ಯಾಸ ಆಲಿಸಿರುವುದು ಸಂತಸದ ಸಂಗತಿ. ಇಂತಹ ಆಸಕ್ತಿಯೇ ಚಿಂತನ ಕಾರ್ತಿಕದ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕೆ. ಭಾಸ್ಕರ್ ಅವರ ಅಧ್ಯಯನಶೀಲತೆ ಮತ್ತು ಬಸವಣ್ಣನವರ ನೈತಿಕ ಪ್ರಜ್ಞೆ ಕುರಿತು ನೀಡಿದ ಅರ್ಥಪೂರ್ಣ ಉಪನ್ಯಾಸವನ್ನು ಪ್ರಶಂಸಿಸಿದರು. ಸುಮಾರು 20 ವರ್ಷಗಳ ಹಿಂದೆ ಏಲೇಶ್ವರದ ಕೇತಯ್ಯನಂತಹ ಅಪರೂಪದ ವಿಷಯಗಳ ಕುರಿತು ಅಧ್ಯಯನ ಮಾಡಿ ಉಪನ್ಯಾಸ ನೀಡುತ್ತಿದ್ದ ಭಾಸ್ಕರ್ ಅವರು ಚಿಂತನ ಕಾರ್ತಿಕದ ಬೆಳವಣಿಗೆಗೆ ನಿರಂತರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಮೇಜರ್ ಎಚ್. ಶಿವಲಿಂಗಪ್ಪ ಅವರು ಆರೋಗ್ಯದ ಅಸ್ವಸ್ಥತೆಯ ನಡುವೆಯೂ ವಚನದ ಮೂಲಕ ಅರ್ಥಪೂರ್ಣ ಅಧ್ಯಕ್ಷೀಯ ನುಡಿಗಳನ್ನಾಡಿದ್ದಾರೆ. ಹಿಂದಿ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಅವರು, ಎನ್ಸಿಸಿ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ ಅಪರೂಪದ ವಿದ್ವಾಂಸರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೀರಶೈವ ಲಿಂಗಾಯತ ಮಹಾಸಭಾದ ಶಿವಮೊಗ್ಗ ಮಹಾನಗರ ಘಟಕದ ಅಧ್ಯಕ್ಷ ಎಚ್.ಕೆ. ರಾಜಶೇಖರ್ ಅವರ ಸಂಘಟನಾ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಸಮಾಜದ ಬಗ್ಗೆ ಇರುವ ಕಾಳಜಿಯನ್ನು ಶ್ಲಾಘಿಸಿದರು. ಬಸವಣ್ಣನವರ ಕುರಿತು ಅಪಪ್ರಚಾರ ನಡೆದಾಗ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬ ಅವರ ಕಳಕಳಿಯನ್ನು ಉಲ್ಲೇಖಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಎಡವಾಲದ ಭಜನಾ ತಂಡದವರು ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಬಸವಣ್ಣನವರ ಭಾವಚಿತ್ರದೊಂದಿಗೆ ಕನಕದಾಸರ ಭಾವಚಿತ್ರವನ್ನೂ ಇರಿಸಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಚಿಂತನ ಕಾರ್ತಿಕ ಕಾರ್ಯಕ್ರಮವನ್ನು ಆಯೋಜಿಸಿದ ವೀರಮ್ಮ, ಎಂ.ಜಿ. ಹಾಲೇಶಪ್ಪ, ರುದ್ರೇಶ್, ಮಂಜು ಹಾಗೂ ಕುಟುಂಬದ ಸದಸ್ಯರು, ಬಸವಕೇಂದ್ರದ ಪದಾಧಿಕಾರಿಗಳು, ಶ್ರೀ ಬಸವತತ್ವ ಪೀಠದವರು, ಉಪನ್ಯಾಸಕರು ಮತ್ತು ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ ಶ್ರೀಗಳು, ಬಸವಾದಿ ಶರಣರ ಆಶೀರ್ವಾದದಿಂದ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.








