ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಬಾಳೆಯೊಳಗಿನ ವಿಶಿಷ್ಟ ಪ್ರಭೇದ “ಕಲ್ಬಾಳೆ” !

On: August 10, 2025 5:39 PM
Follow Us:

ನೀವು ವಿವಿಧ ಜಾತಿಯ ಬಾಳೆಹಣ್ಣುಗಳನ್ನು ತಿಂದಿರುತ್ತೀರಿ. ಆದರೆ ಈ ಕಲ್ಬಾಳೆ ಅಥವಾ ಕಲ್ಲು ಬಾಳೆ ಹಣ್ಣನ್ನ ಕಣ್ಮುಚ್ಚಿ ಬಾಯಿಗೆ ಹಾಕಿರಲು ಸಾದ್ಯವೇ ಇಲ್ಲ ! ಏಕೆಂದರೆ ಇದು ನೋಡಲು ಇತರೆ ಬಾಳೆಹಣ್ಣಿನಂತೆಯೇ ಇದ್ದರೂ ಒಳಗಡೆ ಕಡಲೆಕಾಳು ಗಾತ್ರದ ಕಪ್ಪು ಬೀಜಗಳದ್ದೇ ರಾಶಿ! ಅಲ್ಲದೆ ಈ  ಬಾಳೆ ಗಿಡದಲ್ಲಿ ಗೊನೆ ನೋಡುವುದು ಬರೋಬ್ಬರಿ ಸುಮಾರು ಹನ್ನೆರಡು ವರ್ಷಗಳ ಬೆಳವಣಿಗೆ ನಂತರ! ಹಾಗಾದರೆ ಇದನ್ನು ಇತರೆ ಬಾಳೆಯಂತೆ ಸಮತಟ್ಟು ಪ್ರದೇಶದಲ್ಲಿ ನಾಟಿ ಮಾಡಿ ಆರೈಕೆ ಮಾಡಿ ಬೆಳೆಯುತ್ತಾರಾ? ಖಂಡಿತ ಇಲ್ಲ!

ಪಶ್ಚಿಮ ಘಟ್ಟದ ಚಿಕ್ಕ ಪುಟ್ಟ ಗುಡ್ಡಗ ಇಳಿಜಾರಿನಲ್ಲಿ, ಕಲ್ಲು ಬಂಡೆಗಳ ಸಂದಿಯಲ್ಲಿ ಮಳೆಗಾಲದಲ್ಲಿ ಮಾತ್ರವೇ ಕಾಣ ಸಿಗುವ ಈ ಬಾಳೆ ಸ್ಥಳೀಯ ಜನರಿಗೆ ಅದರ ಎಲೆ ಅತ್ಯಂತ ಉಪಯುಕ್ತ. ಇತರೆ ಬಾಳೆಗಿಡದ ಎಲೆಯಂತೆ ಊಟಕ್ಕೆ ಬಳಸುವ ಈ ಎಲೆ ಸ್ವಲ್ಪ ದಪ್ಪ ಹಾಗೂ ಪ್ಲಾಸ್ಟಿಕ್ ತರಹ ಇರುವುದರಿಂದ ಗಾಳಿ ಮಳೆಗೆ ಹರಿದಿರುವುದಿಲ್ಲ. ಸುಮಾರು 5 – 6ಅಡಿಗಳು ಉದ್ದವಿರುವ ಈ ಬಾಳೆಯಲೆ ಅಗತ್ಯಕ್ಕೆ ತಕ್ಕಂತೆ ಕತ್ತರಿಸಿ ಬಳಸಬಹುದು.

ಹಾಗಾದರೆ ಇದು ಬೆಳೆಯುವ ಸ್ಥಳ ಯಾವುದು?

ಈಗಾಗಲೇ ಹೇಳಿದಂತೆ ಗುಡ್ಡಗಳ ಇಳಿಜಾರಿನಲ್ಲಿ ಕಲ್ಲು ಬಂಡೆಗಳ ಪಕ್ಕದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಚಿಗುರೊಡೆಯುತ್ತದೆ. ಮಳೆಗಾಲ ಮುಗಿದು ಬೇಸಿಗೆ ಬಿಸಿಲಿಗೆ ಒಣಗಿಹೋಗುವ ಈ ಬಾಳೆ ನಿರಂತರ ಸುಮಾರು 12 ಮಳೆಗಾಲಗಳನ್ನು ಕಾಣುತ್ತದೆ. ಇತರೆ ಬಾಳೆಯಂತೆ ಇದಕ್ಕೆ ಕಾಂಡ ಇರುವುದಿಲ್ಲ. ನೆಲಮಟ್ಟದಲ್ಲೇ ಗೊಂಚಲಾಗಿ ಎಲೆ ಬಿಡುವ ಈ ಗಿಡದಲ್ಲಿ ಅಂತಿಮವಾಗಿ 12 ವರ್ಷದ ನಂತರ ಗೊನೆ ಬರುತ್ತದೆ. ಅಲ್ಲಿಗೆ ಅದರ ಆಯುಷ್ಯ ಮುಗಿಯುತ್ತದೆ.

ಸುಮಾರು 50-100 ಕಾಯಿ ಇರುವ ಈ ಗೊನೆಯ ಹಣ್ಣು ರುಚಿ ಇದ್ದರೂ ಅದರಲ್ಲಿ ಅಂಟಿಕೊಂಡಿರುವ  ನೂರಾರು ಬೀಜಗಳಿಂದ ಹಣ್ಣು ತಿನ್ನುವುದು ತ್ರಾಸಕರ. ನೀವು ಈ ಕಲ್ಲುಬಾಳೆ ಗಿಡಗಳನ್ನು ಮಾಸ್ತಿಕಟ್ಟೆ ಸಮೀಪದ ಹುಲಿಕಲ್ ಘಾಟಿಯಲ್ಲಿ ಯಥೇಚ್ಛವಾಗಿ ಕಾಣಬಹುದಾಗಿತ್ತು. ಅದಕ್ಕಾಗಿಯೇ ಈ ಘಾಟಿಯನ್ನು ” ಬಾಳೆ ಬರೆ ಘಾಟಿ” ಎಂದೂ ಕರೆಯಲಾಗುತ್ತದೆ.( ಬರೆ = ಗುಡ್ಡ).ಆದರೆ  ಇತ್ತೀಚಿನ ದಿನಗಳಲ್ಲಿ ಇದರ ಇರುವಿಕೆಯೂ ಕಣ್ಮರೆಯಾಗುತ್ತಿದೆ.

ಮಳೆಗಾಲದಲ್ಲಿ ಹಳ್ಳಿಗಳಲ್ಲಿ  ಬಾಳೆ ಎಲೆ ಊಟಕ್ಕೆ ಬಳಸುತ್ತಿದ್ದ ಜಾಗದಲ್ಲಿ ಅಧುನಿಕತೆಯಿಂದಲೊ ಅನಿವಾರ್ಯತೆಯಿಂದಲೊ ಸ್ಟೀಲ್ ತಟ್ಟೆಗಳು ಕುಳಿತಿವೆ. ಹಾಗಾಗಿ ಕಲ್ಲುಬಾಳೆ ನೆನಪಿನ ಪುಟಗಳತ್ತ ಸೇರುತ್ತಿದೆ. ನೀವು ಮಳೆಗಾಲದಲ್ಲಿ  ಘಟ್ಟದ ತಪ್ಪಲಿಗೆ ಹೋದಾಗ  ಒಮ್ಮೆ ಈ ಬಾಳೆ ಎಲೆಯಲ್ಲಿ ಊಟ ಮಾಡಿ ನೋಡಿ. ಅದರ ಮಜವೇ ಬೇರೆ!

-ತ್ಯಾಗರಾಜ ಮಿತ್ಯಾಂತ, ಶಿವಮೊಗ್ಗ.

K.M.Sathish Gowda

Join WhatsApp

Join Now

Facebook

Join Now

Leave a Comment