ಇಂದಿನ ವೇಗದ ಜಗತ್ತಿನಲ್ಲಿ ಜೀವನದ ಭದ್ರತೆ ಎಂದು ಕೇಳಿದಾಗ ಹೆಚ್ಚಿನವರು ಮೊದಲಿಗೆ ನೆನಪಿಸುವುದು — ಹಣ. ಬ್ಯಾಂಕ್ ಖಾತೆಯಲ್ಲಿರುವ ಮೊತ್ತವೇ ಕುಟುಂಬದ ಭವಿಷ್ಯವನ್ನು ಭದ್ರಗೊಳಿಸುವ ಏಕೈಕ ಸಾಧನ ಎಂದು ಪರಿಗಣಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಆದರೆ ವಾಸ್ತವದಲ್ಲಿ, ಹಣದ ಜೊತೆಗೆ ಆರೋಗ್ಯವೂ ಸಮಾನವಾಗಿ ಇದ್ದಾಗ ಮಾತ್ರ ಕುಟುಂಬದ ನೆಮ್ಮದಿ ನೆಲೆಯೂರಲಿದೆ ಎಂಬ ಸತ್ಯವನ್ನು ಹಲವರು ಕಡೆಗಣಿಸುತ್ತಿದ್ದಾರೆ.
ಜೀವನದ ಸಂಚಾರವನ್ನು ರೈಲು ಪ್ರಯಾಣಕ್ಕೆ ಹೋಲಿಕೆ ಮಾಡುವುದಾದರೆ, ಅದು ಅಚ್ಚರಿಯಲ್ಲ. ಹೇಗೆ ರೈಲು ತನ್ನ ಹೋಗಬೇಕಾದ ಸ್ಥಳಕ್ಕೆ ತಲುಪಲು ಎರಡು ಹಳಿಗಳ ಮೇಲೆ ಸಂಪೂರ್ಣ ಅವಲಂಬಿತವಾಗುತ್ತದೆಯೋ, ಮಾನವನ ಬದುಕೂ ಆರೋಗ್ಯ ಮತ್ತು ಹಣ ಎಂಬ ಎರಡು ಬಲವಾದ ಹಳಿಗಳ ಮೇಲೆ ನಿಂತಿದೆ.

ಹಣವಿದ್ದರೂ ಬದುಕಿನ “ಹಳಿ” ಏಕೆ ಜಾರುತ್ತದೆ?
ಬಹುತೇಕ ಕುಟುಂಬಗಳು ತಮ್ಮ ಆರ್ಥಿಕ ಸ್ಥಿತಿಯನ್ನು ನೋಡಿ ನೆಮ್ಮದಿಯಿಂದ ನಗುತ್ತಿರುತ್ತವೆ. “ಬ್ಯಾಂಕ್‌ನಲ್ಲಿ ಹಣ ಇದೆ, ವಿಮೆ ಇದೆ, ಉಳಿತಾಯ ಇದೆ – ನಮಗೆ ಏನೂ ಸಮಸ್ಯೆ ಬರೋದಿಲ್ಲ” ಎಂಬ ನಂಬಿಕೆ ಜನರ ಮನಸ್ಸಿನಲ್ಲಿ ಬೇರು ಬಿಟ್ಟಿದೆ.
ಆದರೆ ಜೀವನ ಯಾವಾಗಲು ಸರಳ ಲೆಕ್ಕಾಚಾರದ ಮೇಲೆ ನಡೆಯುವುದಿಲ್ಲ. ಹಣ ಇರುವುದರಿಂದಲೇ ಎಲ್ಲಾ ದಿಕ್ಕುಗಳು ಭದ್ರವಾಗುವುದಿಲ್ಲ.

ಒಂದು ದಿನ — ಕುಟುಂಬದ ಸದಸ್ಯನೊಬ್ಬರಿಗೆ ಅಥವಾ ನಿಮಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾದರೆ, ಹಣವೇ ನಮ್ಮ ಬದುಕಿನ ಭದ್ರಕವಚ ಎನ್ನುವ ಭ್ರಮೆ ಕ್ಷಣದಲ್ಲಿ ಒಡೆದುಹೋಗುತ್ತದೆ. ಎಷ್ಟು ಹಣ ಇದ್ದರೂ, ಆಸ್ಪತ್ರೆಯ ಬಾಗಿಲು ತಟ್ಟಿದ ಕ್ಷಣದಿಂದ ಬ್ಯಾಂಕ್ ಖಾತೆಯಲ್ಲಿದ್ದ ಮೊತ್ತ ಹಿಮದಂತೆ ಕರಗತೊಡಗುತ್ತದೆ. ಆರೋಗ್ಯ ಸಂಕಷ್ಟ ಬಂದಾಗ ಹಣದ ನಿಜವಾದ ಮೌಲ್ಯ ಮತ್ತು ಅದರ ಮೀತಿಯನ್ನೇ ಅರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ವೈದ್ಯಕೀಯ ವೆಚ್ಚಗಳು, ಚಿಕಿತ್ಸೆ, ಪರೀಕ್ಷೆಗಳು —
ಇವೆಲ್ಲವೂ ಕೆಲವರ ಜೀವನದಲ್ಲಿ ಆರ್ಥಿಕ ಹಳಿಯನ್ನು ಬಲವಂತವಾಗಿ ಬದಲಿಸುವ ಶಕ್ತಿ ಹೊಂದಿವೆ. ಹಣ ಇದ್ದರೂ ಆರೋಗ್ಯ ಕುಸಿದರೆ, ಜೀವನದ ರೈಲು ದಿಕ್ಕು ತಪ್ಪುವುದು ನಿಶ್ಚಿತ.

ಆರೋಗ್ಯ–ಹಣ: ಯಾವುದು ಹೆಚ್ಚು ಮುಖ್ಯ?
ಈ ಪ್ರಶ್ನೆಗೆ ಉತ್ತರ ಹುಡುಕುವಾಗ ಅನೇಕರು ಒಂದು ಮೂಲಭೂತ ಸತ್ಯವನ್ನು ಮರೆತುಬಿಡುತ್ತಾರೆ — ಎರಡೂ ಪರಸ್ಪರ ಅವಲಂಬಿತವಾಗಿವೆ. ಆರೋಗ್ಯ ಇದ್ದರೆ ಹಣ ಸಂಪಾದಿಸಲು ಸಾಧ್ಯ; ಹಣ ಇದ್ದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅವಕಾಶ ಸಿಗುತ್ತದೆ. ಆದರೆ ಇವೆರಡೂ ಕದಲಿದರೆ ಜೀವನದ ಸುಧಾರಿತ ರಚನೆ—ಸಂಬಂಧಗಳು, ನೆಮ್ಮದಿ, ಮನಶಾಂತಿ—ಎಲ್ಲವೂ ಕುಸಿಯುವ ಅಪಾಯ ಎದುರಾಗುತ್ತದೆ.
ಇವತ್ತಿನ ಜೀವನಶೈಲಿಯಲ್ಲಿ ಜನರು ಒಂದನ್ನು ಬಲಪಡಿಸುವ ಹೆಸರಿನಲ್ಲಿ ಮತ್ತೊಂದನ್ನು ಕಡೆಗಣಿಸುವ ಗಂಭೀರ ತಪ್ಪನ್ನು ಮಾಡುತ್ತಾರೆ. ಕೆಲವರು ಆರೋಗ್ಯಕ್ಕಾಗಿ ಸಂಪೂರ್ಣವಾಗಿ ಹಣವನ್ನು ತ್ಯಜಿಸುತ್ತಾರೆ; ಇನ್ನೂ ಕೆಲವರು ಹಣ ಸಂಗ್ರಹಿಸಬೇಕೆಂಬ ಹೊರೆಯಿಂದ ಆರೋಗ್ಯಕ್ಕೆ ಅಗತ್ಯವಾದ ಗಮನ ನೀಡುವುದೇ ಮರೆತುಬಿಡುತ್ತಾರೆ.

ಜೀವನ ಹಳಿಯಿಂದ ಜಾರಬಾರದು — ಹೇಗೆ?
ಜೀವನವೆಂಬ ರೈಲು ನಮ್ಮ ಕೈಯಲ್ಲಿದೆ ಎಂದು ಅನಿಸುತ್ತಿದ್ದರೂ, ಅದರ ಹಳಿಗಳನ್ನು ಸರಿಪಡಿಸದೇ ಬಿಟ್ಟರೆ ಯಾವ ಕ್ಷಣದಲ್ಲಿ ಅದು ಜಾರಿಬಿಡುತ್ತದೋ ಎಂಬ ಭಯ ಸದಾ ಹತ್ತಿರದಲ್ಲೇ ನಿಂತಿದೆ. ವೈದ್ಯರಿಂದ ಹಿಡಿದು ಹಣಕಾಸು ತಜ್ಞರ ತನಕ—ಎಲ್ಲರ ಮಾತು ಒಂದೇ: “ಆರೋಗ್ಯ ಮತ್ತು ಹಣ ಎರಡೂ ಸಮತೋಲದಲ್ಲಿದ್ದಾಗ ಮಾತ್ರ ಜೀವನ ಸುರಕ್ಷಿತವಾಗಿ ಮುಂದುವರೆಯುತ್ತದೆ.”ಈ ಮಾತು ಕೇಳಲು ಸರಳ, ಆದರೆ ಜೀವನದಲ್ಲಿ ಪಾಲಿಸಲು ಅತಿ ಮುಖ್ಯ.
ಹಣಕಾಸಿನ ಶಿಸ್ತು ಮನೆಗೆ ಅಡಿಪಾಯದ ಬಲ. ತಿಂಗಳಾರೂ ಸ್ವಲ್ಪವಾದರೂ ಉಳಿತಾಯ ಮಾಡುವುದು, ತುರ್ತು ನಿಧಿಯನ್ನು ಕಟ್ಟುವ ಸಂಪ್ರದಾಯ, ಕುಟುಂಬಕ್ಕೆ ಸುರಕ್ಷೆ ನೀಡುವ ಆರೋಗ್ಯ ವಿಮೆ, ಮತ್ತು ಖರ್ಚಿನ ಮೇಲೆ ನಿಗಾವಹಿಸುವ ಜವಾಬ್ದಾರಿ — ಇವೆಲ್ಲವೂ ಕಾಣದ ಗೋಡೆಗಳಂತೆ ನಮ್ಮ ಮನೆಯನ್ನೂ, ನಮ್ಮ ಕನಸುಗಳನ್ನೂ ರಕ್ಷಿಸುತ್ತವೆ. ಅನಾರೋಗ್ಯ ಅಥವಾ ಆರ್ಥಿಕ ಆಘಾತ ಬರುವಾಗ ಈ ಗೋಡೆಗಳ ಮೌಲ್ಯವೇ ಹೆಚ್ಚು ಗೋಚರಿಸುತ್ತದೆ.

ಆದರೆ ಹಣ ಮಾತ್ರವಲ್ಲ, ಆರೋಗ್ಯದ ಆರೈಕೆ ಕೂಡ ಜೀವಸಂಕೇತ. ಬೆಳಗಿನ ಗಾಳಿ ತಾಗುವ ನಡೆ, ಪೋಷಕಾಂಶಯುಕ್ತ ಆಹಾರ, ಮನಸ್ಸಿನ ಮೇಲೆ ಕಮ್ಮಿಯಾಗುವ ಒತ್ತಡ, ಸಮಯಕ್ಕೆ ಚಿಕಿತ್ಸೆ — ಇವೆಲ್ಲವೂ ಜೀವನದ ಹಳಿಯ ಕೆಳಗಿನ ಮಣ್ಣು ಗಟ್ಟಿಯಾಗಿರುವಂತದ್ದು. ದೇಹವೂ ಮನಸ್ಸೂ ಬಲವಾಗಿದ್ದರೆ, ಬದುಕು ಯಾವ ಮಳೆಗಾಲದಲ್ಲಿದ್ದರೂ ಜಾರುವುದಿಲ್ಲ.
ಇದರಂತೆ, ಕುಟುಂಬದ ನೆಮ್ಮದಿ ಜೀವನದ ತಾಪಮಾನವನ್ನು ಸಮತೋಲನದಲ್ಲಿಡುವ ಮತ್ತೊಂದು ಶಕ್ತಿ. ಒಗ್ಗಟ್ಟಿನ ಮಾತು, ಪರಸ್ಪರವನ್ನು ಗೌರವಿಸುವ ಹೃದಯ, ಭದ್ರತೆಯ ಭಾವನೆ — ಇವೆಲ್ಲವೂ ಮನೆಯೊಳಗಿನ ಮೃದುವಾದ ಬೆಳಕಿನಂತಿದ್ದು, ಆ ಬೆಳಕಿನ ಕಿರಣ ಕಡಿಮೆಯಾಗತೊಡಗಿದರೆ ಬದುಕೇ ನಿಧಾನವಾಗಿ ಕತ್ತಲಲ್ಲಿ ಮುಳುಗುತ್ತದೆ. ಜೀವನಕ್ಕೆ ಎದುರಾಗುವ ಗಾಳಿ–ಮೋಡಗಳನ್ನು ತಡೆದು ನಿಲ್ಲಿಸುವ ನಂಬಿಕೆಯ ಶಕ್ತಿಯು ಕುಟುಂಬದಲ್ಲೇ ಇದೆ.
ಹಣ, ಆರೋಗ್ಯ, ನೆಮ್ಮದಿ — ಇವು ಸಣ್ಣ ಪದಗಳಲ್ಲ. ಇವು ಜೀವನದ ಮೂರು ಹಳಿಗಳು. ಈ ಮೂವರು ಜಾರದೆ, ಸರಿಯಾಗಿ ಜೋಡಿಸಿಕೊಂಡು ಬಲವಾಗಿದ್ದಾಗ ಮಾತ್ರ ಜೀವನದ ರೈಲು ಸುರಕ್ಷಿತವಾಗಿ ತನ್ನ ಗುರಿಯತ್ತ ಓಡುತ್ತದೆ.
ನಾವು ಹಳಿಗಳನ್ನು ಸರಿಪಡಿಸಿದ್ದರೆ ಸಾಕು—ಜೀವನದ ರೈಲು ಯಾವತ್ತೂ ದಾರಿ ತಪ್ಪುವುದಿಲ್ಲ.
ರೈಲು ಹಳಿಗಳ ಪಾಠ: ಬದುಕಿಗೆ ನೀಡುವ ಸಂದೇಶ
ರೈಲಿನ ಹಳಿಯಲ್ಲಿ ಉಂಟಾಗುವ ಸಣ್ಣ ದೋಷವನ್ನೂ ಸಮಯಕ್ಕೆ ಸರಿಯಾಗಿ ಗಮನಿಸದಿದ್ದರೆ, ಅದು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಇದೇ ಸತ್ಯ ಜೀವನಕ್ಕೂ ಅನ್ವಯಿಸುತ್ತದೆ. ಆರೋಗ್ಯವನ್ನು ಕಡೆಗಣಿಸಿದರೆ ದೇಹವೇ ಅಪಾಯದ ದಿಕ್ಕಿಗೆ ತಳ್ಳುತ್ತದೆ; ಹಣಕಾಸಿನ ನಿರ್ಲಕ್ಷ್ಯ ಮಾಡಿದರೆ ಭವಿಷ್ಯದ ಭದ್ರತೆ ಕುಸಿದುಬಿಡುತ್ತದೆ. ಆದರೆ ಈ ಎರಡೂ ಹಳಿಗಳು—ಆರೋಗ್ಯ ಮತ್ತು ಹಣ—ಸಮತೋಲನದಲ್ಲಿದ್ದಾಗ ಮಾತ್ರ ಕುಟುಂಬದ ಸಂತೋಷ, ಮನಶಾಂತಿ ಮತ್ತು ಭದ್ರತೆ ಗಟ್ಟಿಯಾಗಿ ನಿಂತಿರುತ್ತವೆ. ಬದುಕಿನ ಸಂಚಾರ ಸುರಕ್ಷಿತವಾಗಿರಲು ಈ ಎರಡು ಹಳಿಗಳ ಗಟ್ಟಿತನವೇ ಮುಖ್ಯ.
ಕೊನೆಯದಾಗಿ,..
ಜೀವನದ ರೈಲು ಯಾರನ್ನೂ ಕಾಯುವುದಿಲ್ಲ. ಅದು ಮುಂದುವರೆಯುತ್ತಲೇ ಇರುತ್ತದೆ. ದಾರಿಯಲ್ಲಿ ಯಾವ ತಿರುವು, ಯಾವ ಏರುಪೇರು ನಮ್ಮನ್ನು ಎದುರುಗೊಳ್ಳುತ್ತದೆಯೋ ತಿಳಿಯದು. ಆದರೆ ನಮ್ಮ ಕೈಯಲ್ಲಿರುವುದು ಒಂದೇ — ಆರೋಗ್ಯ ಮತ್ತು ಹಣ ಎಂಬ ಎರಡು ಹಳಿಗಳನ್ನು ಬಲವಾಗಿ ಹಿಡಿದುಕೊಂಡು ಜೀವನದ ಪಯಣವನ್ನು ಸುರಕ್ಷಿತವಾಗಿ ಸಾಗಿಸುವುದು.
ಈ ಎರಡೂ ಸಮತೋಲನದಲ್ಲಿದ್ದರೆ ಜೀವನದ ತಿರುವುಗಳು ನಮ್ಮನ್ನು ಭಯಪಡಿಸಲಾರವು, ಅಲ್ಲವೇ,..

ಆಂಜನೇಯ ಎನ್.ಎಸ್. ನಿಂಬೆಗೊಂದಿ,
(Proprietor)
ಶ್ರೀ ವಿನಾಯಕ ಫೈನಾನ್ಸಿಯಲ್ ಸರ್ವೀಸಸ್, ಬೆಂಗಳೂರು










