ಭದ್ರಾವತಿ: ವ್ಯಕ್ತಿಯೋರ್ವರಿಗೆ ನಕಲಿ ಬಂಗಾರ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪದ ಮೇರೆಗೆ, ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸರು ಆಗಸ್ಟ್ 13 ರಂದು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದ ನಿವಾಸಿ ಯಲ್ಲಪ್ಪ ಯಾನೆ ಮಾರಪ್ಪ (48) ಹಾಗೂ ಕರಿಬಸಪ್ಪ (48) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳಿಬ್ಬರು ದೂರುದಾರರಾದ ರಾಯಭಾಗ್ ತಾಲೂಕಿನ ಮುಗಳಖೋಡ್ ಗ್ರಾಮದ ನಿವಾಸಿ, ಚಾಲಕ ವೃತ್ತಿಯ ಮಾರುತಿ ಭೀಮ್ ಶ್ರೀ ಎಂಬುವರಿಗೆ ಅಸಲಿ ಬಂಗಾರ ನೀಡುವುದಾಗಿ ನಂಬಿಸಿದ್ದರು. ನಂತರ ಲಕ್ಷಾಂತರ ರೂಪಾಯಿ ಪಡೆದು, ನಕಲಿ ಬಂಗಾರ ನೀಡಿ ವಂಚಿಸಿದ್ದರು. ಈ ಕುರಿತಂತೆ ದೂರುದಾರರು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬಂಧಿತರಿಂದ 5,05,000 ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ನಾಗರಾಜ್ ಕೆ ಆರ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಶಿವಪ್ರಸಾದ್ ಎಂ, ಸಬ್ ಇನ್ಸ್’ಪೆಕ್ಟರ್ ಗಳಾದ ರಮೇಶ್, ಸಿಬ್ಬಂದಿಗಳಾದ ಹೆಚ್ ಸಿ ಅಣ್ಣಪ್ಪ ಪ್ರಸನ್ನ, ಪ್ರಕಾಶ್ ನಾಯ್ಕ್, ಮಂಜುನಾಥ್, ಪಿಸಿಗಳಾದ ವಿಶ್ವನಾಥ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.