ಶಿವಮೊಗ್ಗ: ನಗರದಲ್ಲಿ ಜನರ ಭದ್ರತೆಗೆ ದಿನರಾತ್ರಿ ಶ್ರಮಿಸುತ್ತಿರುವ ಪೊಲೀಸ್ ಇಲಾಖೆ ಮತ್ತೊಮ್ಮೆ ತಮ್ಮ ವೃತ್ತಿಯ ಮೂಲಕ ಜನಮನ ಗೆದ್ದಿದೆ. ವಿಶೇಷವಾಗಿ, ತುಂಗಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೆ.ಟಿ. ಗುರುರಾಜ್ ಅವರ ನೇತೃತ್ವದ ತಂಡವು, ನಡೆದ ಮನೆಗಳ್ಳತನ ಪ್ರಕರಣವನ್ನು ಅತ್ಯಂತ ವೇಗ ಮತ್ತು ನಿಖರತೆಯಿಂದ ಭೇದಿಸುವ ಮೂಲಕ, ಪೊಲೀಸರು ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವವರಷ್ಟೇ ಅಲ್ಲದೆ, ಜನರ ಆಸ್ತಿಪಾಸ್ತಿಗಳ ನಿಜವಾದ ರಕ್ಷಕರೂ ಹೌದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ತಂಡದ ಕಾರ್ಯಾಚರಣೆಯು ಜನಸಾಮಾನ್ಯರಲ್ಲಿ ಪೊಲೀಸರ ಮೇಲೆ ಇರುವ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.
ಸೆಪ್ಟೆಂಬರ್ 17ರಂದು ಗೊಪಾಲ ಗೌಡ ಬಡಾವಣೆಯ ಸಿ ಬ್ಲಾಕ್‌ನಲ್ಲಿ ನಡೆದ ಹಗಲು ಮನೆಗಳ್ಳತನ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಗುರುರಾಜ್ ಅವರ ತಂಡ, ಸುಳಿವುಗಳ ಕೊರತೆಯ ನಡುವೆಯೂ ನಿಖರ ಕಾರ್ಯತಂತ್ರ ರೂಪಿಸಿ ಆರೋಪಿಯನ್ನು ಪತ್ತೆ ಹಚ್ಚಿತು.
ತನಿಖಾ ತಂಡವು ಅಶ್ರಫ್ ವುಲ್ಲಾ (35), ಆಟೋ ಚಾಲಕ, ವಿಶ್ವೇಶ್ವರನಗರ, ಶಿವಮೊಗ್ಗ ಎಂಬವನನ್ನು ಬಂಧಿಸಿ, ಅವನಿಂದ ಒಟ್ಟು 34,44,500/- ಮೌಲ್ಯದ ಆಸ್ತಿ ವಶಪಡಿಸಿಕೊಂಡಿದೆ. ಇದರಲ್ಲಿ – 22,74,500/- ನಗದು,130 ಗ್ರಾಂ ಬಂಗಾರದ ಆಭರಣ 11,70,000/- 550 ಗ್ರಾಂ ಬೆಳ್ಳಿಯ ಆಭರಣ (₹65,000/-) ಸೇರಿವೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹಾಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಯಶಸ್ಸಿನಲ್ಲಿ ಹೆಚ್.ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ, ಸಿಪಿಸಿಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ರಂಗನಾಥ್, ಹರೀಶ್ ಎಂ.ಜಿ., ಮಹಿಳಾ ಪಿಸಿಗಳಾದ ಅನುಷಾ ಹಾಗೂ ಕುಮಾರಿ ಚೈತ್ರಾ, ತಾಂತ್ರಿಕ ವಿಭಾಗದ ಹೆಚ್.ಸಿ ಇಂದ್ರೇಶ್, ಗುರು, ವಿಜಯ ಮತ್ತು ಚಾಲಕರಾದ ಎ.ಹೆಚ್.ಸಿ ಪುನೀತ್ ಅವರ ನಿಷ್ಠಾವಂತ ಶ್ರಮ ಕೂಡ ಮಹತ್ತರ ಪಾತ್ರವಹಿಸಿದೆ.
ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ. ಕಾರಿಯಪ್ಪ, ರಮೇಶ್ ಕುಮಾರ್ ಹಾಗೂ ಉಪಾಧೀಕ್ಷಕರಾದ ಬಾಬು ಆಂಜನಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯು ಪೊಲೀಸ್ ಇಲಾಖೆಯ ಶ್ರೇಷ್ಠ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಟಿ. ಗುರುರಾಜ್ ಹಾಗೂ ಅವರ ತಂಡದ ಈ ಶ್ರೇಷ್ಠ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಜನರ ಕಣ್ಗಳಲ್ಲಿ ಪೊಲೀಸರ ಭರವಸೆಯ ಚಿತ್ರಣವನ್ನು ಗಟ್ಟಿಗೊಳಿಸಿದ ಗುರುರಾಜ್ ತಂಡದ ಈ ಸಾಧನೆ, ಜಿಲ್ಲೆಯಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ.