ಶಿವಮೊಗ್ಗ, ಸೆಪ್ಟೆಂಬರ್ 08: ಇನ್ನೇನು 15 ದಿನಗಳಲ್ಲಿ ಹಸೆಮಣೆ ಏರಿ ಹೊಸ ಜೀವನ ಆರಂಭಿಸಬೇಕಿದ್ದ ಯುವತಿಯೊಬ್ಬಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದುರ್ಘಟನೆ ಶಿವಮೊಗ್ಗದಲ್ಲಿ ಆಘಾತ ಮೂಡಿಸಿದೆ.
ಮಲವಗೊಪ್ಪದ ಬಳಿಯ ಸಕ್ಕರೆ ಫ್ಯಾಕ್ಟರಿ–ಹಾಥಿನಗರ ರಸ್ತೆ ಮಧ್ಯೆ ಇಂದು ಬೆಳಿಗ್ಗೆ 9.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ದುಮ್ಮಳ್ಳಿಯಿಂದ ಶಿವಮೊಗ್ಗಕ್ಕೆ ಸಹೋದರ ಸಂತೋಷ್ ಜೊತೆಗೆ ಬೈಕ್‌ನಲ್ಲಿ ಬರುತ್ತಿದ್ದ ಕವಿತಾ (26), ಎದುರಿನಿಂದ ಬಂದ ಬೋಟಿ ಮಾರಾಟಗಾರನ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಬಿದ್ದುಹೋಗಿದೆ. ಸಂತೋಷ್ ಫುಟ್‌ಪಾತ್ ಕಡೆ ಬಿದ್ದರೆ, ಕವಿತಾ ರಸ್ತೆ ಮಧ್ಯೆ ಬಿದ್ದಳು.

ಅಷ್ಟರಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಖಾಸಗಿ ಬಸ್ ಕವಿತಾಳ ಮೇಲೆ ಹರಿದುಕೊಂಡು ಹೋಗಿದ್ದು, ಆಕೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಳು. ನಿಶ್ಚಿತಾರ್ಥ ಮುಗಿಸಿ ಮದುವೆ ಸಡಗರಕ್ಕೆ ಸಿದ್ಧವಾಗಿದ್ದ ಯುವತಿಯ ಜೀವ ಕಣ್ಣೆದುರೇ ಹಾರಿ ಹೋಗಿರುವುದು ಕುಟುಂಬ ಹಾಗೂ ಬಂಧುಬಳಗವನ್ನು ಕಂಗಾಲುಮಾಡಿದೆ.
ಸಂಜೆಯ ಹೊತ್ತಿಗೆ ಸಂಭ್ರಮಕ್ಕಾಗಿ ಸಿಂಗರಿಸಬೇಕಿದ್ದ ಮನೆಯಲ್ಲಿ ಈಗ ಅಳಲು ಮತ್ತು ಕಣ್ಣೀರು ಮಾತ್ರ. ಹಸೆಮಣೆ ಏರಬೇಕಿದ್ದ ವಧು ಮಸಣ ಕಡೆಗಿನ ದುಃಖದ ವಿಚಾರ ಹೃದಯ ಕಲುಕುವಂತಾಗಿದೆ.
ಘಟನೆಯ ನಂತರ ಬೋಟಿ ಮಾರಾಟ ಮಾಡುತ್ತಿದ್ದ ದ್ವಿಚಕ್ರ ವಾಹನ ಚಾಲಕ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.