ಬೆಂಗಳೂರು: ಧರ್ಮಸ್ಥಳದ ವಿರುದ್ಧ ಎಐ ವಿಡಿಯೊ ಮಾಡಿ ಸುಳ್ಳು ಆರೋಪ ಹೊರಿಸಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ. ಗೆ ಮತ್ತೊಮ್ಮೆ ದೊಡ್ಡ ಸಂಕಷ್ಟ ಎದುರಾಗಿದೆ. ಸೆಪ್ಟೆಂಬರ್ 4ರಂದು ಬೆಳ್ತಂಗಡಿ ಪೊಲೀಸರು ಆತನ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಶೋಧ ನಡೆಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಗೆ ಎರಡು ಬಾರಿ ಹಾಜರಾಗಿದ್ದರೂ ಸಮೀರ್ ತನಿಖೆಗೆ ಸಮರ್ಪಕವಾಗಿ ಸಹಕರಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಅವರ ನೇತೃತ್ವದ ತಂಡ, ಎಫ್‌ಎಸ್‌ಎಲ್ ವಿಭಾಗದ ತಜ್ಞರೊಂದಿಗೆ ಬೆಂಗಳೂರಿನ ಬನ್ನೇರುಘಟ್ಟದ ಹುಳ್ಳಹಳ್ಳಿಯಲ್ಲಿರುವ ಮನೆಯಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿತು.
ಬೆಳ್ತಂಗಡಿ ನ್ಯಾಯಾಲಯದಿಂದ ಸೆಪ್ಟೆಂಬರ್ 3ರಂದು ಸರ್ಚ್ ವಾರಂಟ್ ಪಡೆದು ಹೋದ ಪೊಲೀಸರು ಸಮೀರ್ ಬಳಕೆಯಲ್ಲಿದ್ದ ಕಂಪ್ಯೂಟರ್ ಮತ್ತು ಮೊಬೈಲ್ ಪರಿಶೀಲನೆ ನಡೆಸಿದ್ದಾರೆ. ಅವನ್ನು ಜಪ್ತಿ ಮಾಡುವ ಸಾಧ್ಯತೆಯೂ ಇದೆ.
ಮೂಲತಃ ಬಳ್ಳಾರಿ ಜಿಲ್ಲೆಯ ಸಮೀರ್ ಎಂ.ಡಿ. ಎಂಜಿನಿಯರಿಂಗ್ ಪದವೀಧರ. ಆತ ‘ದೂತ’ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿ ವಿವಿಧ ವಿಚಾರಗಳ ಕುರಿತು ವಿಡಿಯೊಗಳನ್ನು ಪ್ರಕಟಿಸುತ್ತಿದ್ದಾನೆ. ಕೆಲ ತಿಂಗಳ ಹಿಂದೆ ಸೌಜನ್ಯಾ ಕೊಲೆ ಪ್ರಕರಣದ ಬಗ್ಗೆ ಮಾಡಿದ ಎಐ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ಕೌಲ್‌ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದರ ನಂತರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ಸಮೀರ್ ಬೆಳ್ತಂಗಡಿ ಠಾಣೆಯಲ್ಲಿ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದ. ಆಗಸ್ಟ್ 24ರಂದು 4.5 ಗಂಟೆ ಹಾಗೂ 25ರಂದು 9.5 ಗಂಟೆ, ಒಟ್ಟು 14 ಗಂಟೆಗಳ ಕಾಲ ವಿಚಾರಣೆ ನಡೆದಿತ್ತು. ಆದರೆ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಸಮೀರ್ ವಿಫಲನಾಗಿದ್ದನೆಂದು ಪೊಲೀಸರು ಹೇಳಿದ್ದಾರೆ.
ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದರಿಂದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಗಲಾಟೆ ಸೃಷ್ಟಿಸಿದ್ದರಿಂದ ಸಮೀರ್ ಮೇಲೆ ಇನ್ನಷ್ಟು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.