ಬಂಕಾಪುರ : ಮಾನವ ಜೀವನದ ಉನ್ನತಿ ಹಾಗೂ ಶ್ರೇಯಸ್ಸಿಗೆ ಆದರ್ಶ ಚಿಂತನೆಗಳು ಅತ್ಯಂತ ಅಗತ್ಯ. ಮಹಾತ್ಮರು ಮತ್ತು ತಪಸ್ವಿಗಳ ಚಿಂತನೆಗಳು ಜನಸಾಮಾನ್ಯರ ಬದುಕಿಗೆ ದಿಕ್ಕು ತೋರಿಸುವ ಆಶಾಕಿರಣಗಳಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಅವರು ಮಂಗಳವಾರ ಅರಳೇಳೆ ಕಟ್ಟಿಮನಿ ಹಿರೇಮಠದಲ್ಲಿ ಲಿಂಗೈಕ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳ ಲಿಂಗ ಬೆಳಕಿನ 52ನೇ ವರ್ಷದ ಪುಣ್ಯಸ್ಮರಣೋತ್ಸವ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾನವ ಜೀವನದಲ್ಲಿ ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಾಧಿಸದಿದ್ದರೆ ಜೀವನ ಸಾರ್ಥಕವಾಗದು. ಸಂಪತ್ತು ಮತ್ತು ಇಹಲೋಕ ಸುಖಗಳ ಹಿಂದೆ ಓಡುವ ಮಾನವ, ಧರ್ಮವೇ ಮೂಲ ಎಂಬ ಸತ್ಯವನ್ನು ಮರೆಯುತ್ತಿರುವುದು ವಿಷಾದಕರ ಎಂದು ಜಗದ್ಗುರುಗಳು ಹೇಳಿದರು. ಅಹಿಂಸೆ, ಧ್ಯಾನ, ತ್ಯಾಗದಂತಹ ದಶಧರ್ಮ ಸೂತ್ರಗಳನ್ನು ಜಗತ್ತಿಗೆ ಬೋಧಿಸಿದವರು ಜಗದ್ಗುರು ರೇಣುಕಾಚಾರ್ಯರು ಎಂದರು.
ವಿಶ್ವಬಂಧುತ್ವ ಸಾರಿದ ವೀರಶೈವ ಧರ್ಮದ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದವರು ಲಿಂಗೈಕ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು. ಅವರ ಸಾತ್ವಿಕ ಮಾರ್ಗದರ್ಶನದಲ್ಲಿ ಅನೇಕ ಭಕ್ತರು ಶಾಂತಿ–ಸಂತೋಷಪೂರ್ಣ ಜೀವನ ನಡೆಸಿದ್ದಾರೆ ಎಂದು ಸ್ಮರಿಸಿದರು.
ಪರಮಪೂಜ್ಯ ಲಿಂಗೈಕ್ಯ ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಹಾಗೂ ಹಲವಾರು ಮಹಾನೀಯ ಶಿವಾಚಾರ್ಯರು ಶ್ರೀ ರುದ್ರಮುನಿ ಸ್ವಾಮಿಗಳಿಗೆ ನೀಡಿದ ಗೌರವ ಮತ್ತು ಕೀರ್ತಿಯನ್ನು ನಾಡು ಎಂದಿಗೂ ಮರೆಯದು ಎಂದು ಹೇಳಿದರು. ಇಂದಿನ ಪೀಠಾಧ್ಯಕ್ಷರಾದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಅದೇ ಮಾರ್ಗದಲ್ಲಿ ಭಕ್ತರಿಗೆ ದಾರಿ ತೋರಿಸುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಳೇಳೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಿ ಮಾತನಾಡಿ, ಮಾನವನ ಉದಾತ್ತ ಬದುಕಿಗೆ ಧರ್ಮವೇ ದಿಕ್ಕುಸೂಚಿ. ಧರ್ಮಮಾರ್ಗದಲ್ಲಿ ನಡೆದರೆ ಶಾಂತಿ ಮತ್ತು ಸುಖ ಸ್ವಯಂ ದೊರೆಯುತ್ತದೆ ಎಂದು ತಿಳಿಸಿದರು. ವೀರಶೈವ ಧರ್ಮದ ಸಂಸ್ಕೃತಿ ಮತ್ತು ಗುರುಪರಂಪರೆಯನ್ನು ಬೆಳೆಸುವಲ್ಲಿ ಲಿಂಗೈಕ್ಯ ಶ್ರೀ ರುದ್ರಮುನಿ ಸ್ವಾಮಿಗಳ ಕೊಡುಗೆ ಅಪಾರ ಎಂದು ಹೇಳಿದರು.
52ನೇ ವರ್ಷದ ಲಿಂಗ ಬೆಳಕಿನ ಸಮಾರಂಭಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದು ಹೆಮ್ಮೆಯ ಸಂಗತಿ ಎಂದರು. ಈ ಸಂದರ್ಭದಲ್ಲಿ ವಿಮಲ ರೇಣುಕ ಮುಕ್ತಿಮಠದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜ್ಞಾನ–ಕ್ರಿಯೆ–ಸಂವೇದನಾಶೀಲತೆಯ ಸಮನ್ವಯವೇ ವೀರಶೈವ ಧರ್ಮದ ಸಾರ. ಗಂಡು–ಹೆಣ್ಣು, ಉಚ್ಚ–ನೀಚ, ಬಡ–ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರ ಶ್ರೇಯಸ್ಸನ್ನೇ ವೀರಶೈವ ಧರ್ಮ ಬಯಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಶಿವಾಚಾರ್ಯರು, ಗಣ್ಯರು, ದಾನಿಗಳು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ಬಂಕಾಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಲಿಂಗೈಕ್ಯ ಶ್ರೀ ರುದ್ರಮುನಿ ಶಿವಾಚಾರ್ಯರ ಭವ್ಯ ಭಾವಚಿತ್ರದ ಮೆರವಣಿಗೆ ನಡೆಯಿತು. ನಂತರ ಭಕ್ತರಿಗೆ ಅನ್ನದಾಸೋಹವನ್ನು ಆಯೋಜಿಸಲಾಗಿತ್ತು.











