ಭದ್ರಾವತಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶರು ಹಾಗೂ ವಕೀಲರಿಗೆ ದೊರಕುವ ಗೌರವದಂತೆಯೇ, ಸಾಕ್ಷಿ ಹೇಳಲು ಬರುವ ಕಕ್ಷಿದಾರರಿಗೂ ಗೌರವ ದೊರಕಬೇಕು. ಅದಕ್ಕಾಗಿ ನ್ಯಾಯಾಲಯಗಳಲ್ಲಿ ವಿಟ್ನೆಸ್ ಲಾಂಜ್ ಸ್ಥಾಪನೆ ಅನಿವಾರ್ಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ವಿಐಎಸ್‌ಎಲ್ ಹೆಲಿಪ್ಯಾಡ್ ಮೈದಾನದಲ್ಲಿ ಶನಿವಾರ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ 8ನೇ ದಿನದ ಅಂಗವಾಗಿ ಆಯೋಜಿಸಿದ್ದ ‘ನ್ಯಾಯಾಂಗ ಮತ್ತು ಸಮಾಜ’ ವಿಷಯದ ಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳ ಅಗತ್ಯವಿದೆ ಎಂದು ತಿಳಿಸಿದರು.

ಸಾಕ್ಷಿ ಹೇಳಲು ಬರುವ ಕಕ್ಷಿದಾರರನ್ನು ನ್ಯಾಯಾಲಯದ ಬಾಗಿಲಲ್ಲಿ ನಿಂತು ಮೂರು ಬಾರಿ ಕೂಗಿ ಒಳಗೆ ಕರೆಸಿಕೊಳ್ಳುವ ಪ್ರಕ್ರಿಯೆ ಅವಮಾನಕಾರಿಯಾಗಿದೆ. ಇದರಿಂದ ಅನೇಕ ಸಾಮಾನ್ಯ ನಾಗರಿಕರು ಕೀಳರಿಮೆಗೆ ಒಳಗಾಗುತ್ತಿದ್ದಾರೆ. ವಕೀಲರು ಹಾಗೂ ನ್ಯಾಯಾಧೀಶರಿಗೆ ಲಾಂಜ್ ಸೌಲಭ್ಯವಿರುವಂತೆ, ಸಾಕ್ಷಿಗಳಿಗೆ ಪ್ರತ್ಯೇಕ ವಿಟ್ನೆಸ್ ಲಾಂಜ್ ಇರಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕೇವಲ ನ್ಯಾಯಾಧೀಶರು ಅಥವಾ ವಕೀಲರು ಮಾತ್ರವಲ್ಲ, ಸಾರ್ವಜನಿಕರೂ ತಮ್ಮ ಹಕ್ಕು ಹಾಗೂ ಸೌಲಭ್ಯಗಳಿಗಾಗಿ ಧ್ವನಿ ಎತ್ತಬೇಕು ಎಂದು ಅವರು ಹೇಳಿದರು.
ವ್ಯಾಜ್ಯಗಳಿಂದ ತುಂಬಿರುವ ದೇಶ ಅಥವಾ ಸಮಾಜ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಆದರೆ ವ್ಯಾಜ್ಯಗಳನ್ನು ಸಂಪೂರ್ಣವಾಗಿ ತಪ್ಪಿಸುವುದು ಕೂಡ ಸುಲಭವಲ್ಲ. ಹೀಗಾಗಿ ಅವುಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವುದು ಅತ್ಯಗತ್ಯ. 30ರಿಂದ 40 ವರ್ಷಗಳವರೆಗೆ ವ್ಯಾಜ್ಯಗಳು ನಡೆಯುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಇದೇ ಕಾರಣಕ್ಕೆ ಜನರು ಕೋರ್ಟ್‌ಗೆ ಹೋಗಲು ಹೆದರುತ್ತಿದ್ದಾರೆ. ತಾಲೂಕು ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್‌ವರೆಗೆ ಕೋಟ್ಯಂತರ ಪ್ರಕರಣಗಳು ಬಾಕಿ ಉಳಿದಿರುವುದು ಆತಂಕಕಾರಿ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ರೈತರು ಮತ್ತು ಬಡವರ ಮೇಲಿನ ಪ್ರಕರಣಗಳನ್ನು ಎರಡು ವರ್ಷಗಳೊಳಗೆ ಇತ್ಯರ್ಥಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಿಪಿಸಿಯ ಎರಡು ಕಾನೂನುಗಳಿಗೆ ತಿದ್ದುಪಡಿ ತಂದಿದೆ. ವಿಚಾರಣೆಗೆ ಮೊದಲು ಇಂತಹ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

‘ಸಂವಿಧಾನವೇ ನಮ್ಮ ಏಕೈಕ ಪವಿತ್ರ ಗ್ರಂಥ’
ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅಭಿಮತ
ಕಾರ್ಯಕ್ರಮದಲ್ಲಿ ಮಾತನಾಡಿದ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, ಪ್ರತಿಯೊಬ್ಬರಿಗೂ ಅವರದೇ ಆದ ಧರ್ಮವಿರಬಹುದು. ಅದನ್ನು ಮನೆಯೊಳಗೆ ಆಚರಿಸಿ. ಆದರೆ ಮನೆ ಬಿಟ್ಟು ಹೊರಗೆ ಬಂದಾಗ ದೇಶದ ಸಂವಿಧಾನವೇ ನಮ್ಮ ದೇವರು ಆಗಬೇಕು. ದೇಶಕ್ಕೆ ತಾಯಿಯ ಸ್ಥಾನ ನೀಡಿ, ಉಳಿದ ಎಲ್ಲ ಭೇದಭಾವಗಳನ್ನು ಬಿಟ್ಟುಬಿಡಿ ಎಂದು ಕರೆ ನೀಡಿದರು.
ಅನ್ಯ ಮಾರ್ಗದಲ್ಲಿ ಸಂಪಾದಿಸಿದ ಹಣವನ್ನು ದೇವಸ್ಥಾನ ಅಥವಾ ಮಠಕ್ಕೆ ಅರ್ಪಿಸಿದರೆ ಪಾಪ ತೊಳೆಯುತ್ತದೆ ಎನ್ನುವ ಭ್ರಮೆ ತಪ್ಪು. ಮಾಡಿದ ಕರ್ಮದ ಋಣವನ್ನು ಅದರಿಂದ ತೀರಿಸಲಾಗುವುದಿಲ್ಲ. ಮನೆಯವರು ತಮ್ಮ ದುಡಿಮೆಗೆ ಮೀರಿದ ಐಶಾರಾಮಿ ಜೀವನಶೈಲಿ ಕಂಡಾಗ ಪ್ರಶ್ನೆ ಮಾಡುವ ಧೈರ್ಯ ತೋರಬೇಕು. ಹಾಗೆ ಮಾಡಿದರೆ ಲೋಕಾಯುಕ್ತ, ಲೋಕಪಾಲ್‌ಗಳ ಅಗತ್ಯವೇ ಇರದು ಎಂದು ಹೇಳಿದರು.
ನಮ್ಮ ಧರ್ಮಗ್ರಂಥಗಳು ದೇವಾಲಯಗಳಲ್ಲಿರಲಿ. ಆದರೆ ಸಾರ್ವಜನಿಕ ಜೀವನದಲ್ಲಿ ಸಂವಿಧಾನವೇ ಏಕೈಕ ಪವಿತ್ರ ಗ್ರಂಥವಾಗಬೇಕು. ಆಗ ಸಮಾಜ ಮತ್ತು ನ್ಯಾಯಾಂಗದ ನಡುವಿನ ಸಂಘರ್ಷ ತಾನಾಗಿಯೇ ಕಡಿಮೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

30 ವರ್ಷಗಳ 12 ಪ್ರಕರಣಗಳಿಗೆ ಒಂದೇ ದಿನದಲ್ಲಿ ಅಂತ್ಯ
ಅಶೀರ್ವಚನ ದಯಪಾಲಿಸಿದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಸಮಾಜದಲ್ಲಿ ಹೆಚ್ಚುತ್ತಿರುವ ಅಶಾಂತಿ ಹಾಗೂ ಅವ್ಯವಸ್ಥೆಗೆ ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. ವಾಟ್ಸಾಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಿಗೆ ಸರ್ಕಾರ ಕಡಿವಾಣ ಹಾಕುವ ಕುರಿತು ಗಂಭೀರ ಚಿಂತನೆ ಮಾಡಬೇಕು. ಮಠಪೀಠಗಳು ಇತಿಹಾಸದಿಂದಲೂ ನ್ಯಾಯದಾನ ಮಾಡುವ ಪರಂಪರೆಯನ್ನು ಉಳಿಸಿಕೊಂಡು ಬಂದಿವೆ ಎಂದು ಹೇಳಿದರು.
ತರಳಬಾಳು ಹುಣ್ಣಿಮೆ ಮಹೋತ್ಸವದ ವಿಶೇಷ ಸಂದರ್ಭದಲ್ಲಿ ಭದ್ರಾವತಿ ತಾಲೂಕಿನ ಸ್ಥಳೀಯ, ಜಿಲ್ಲಾ ಹಾಗೂ ಹೈಕೋರ್ಟ್‌ಗಳಲ್ಲಿ ದಾಖಲಾಗಿದ್ದ 30 ವರ್ಷಗಳಷ್ಟು ಹಳೆಯ 12 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಲಾಯಿತು. ಶ್ರೀ ತರಳಬಾಳು ಜಗದ್ಗುರುಗಳು ಅರ್ಜಿದಾರರು, ಪ್ರತಿವಾದಿಗಳು ಹಾಗೂ ಎರಡೂ ಕಡೆಯ ವಕೀಲರನ್ನು ವೇದಿಕೆಗೆ ಕರೆಸಿ, ಸಮಾಧಾನ ಹಾಗೂ ಬುದ್ಧಿವಾದದ ಮೂಲಕ ಒಂದೇ ದಿನದಲ್ಲಿ ಪ್ರಕರಣಗಳಿಗೆ ಅಂತ್ಯ ಹಾಡಿದರು. ಬಳಿಕ ಹೈಕೋರ್ಟ್ ನ್ಯಾಯಮೂರ್ತಿಗಳ ಅನುಮೋದನೆ ಪಡೆದು ಮಹೋತ್ಸವದ ವೇದಿಕೆಯಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.

ಶಿಕ್ಷಣ ಮತ್ತು ಮೌಲ್ಯಗಳ ಕುರಿತು ಚರ್ಚೆ
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸಂವಿಧಾನ ಅತ್ಯಂತ ಮಹತ್ವದ್ದು. ಮಕ್ಕಳಿಗೆ ಬುನಾದಿಯಲ್ಲಿಯೇ ಸಂವಿಧಾನದ ಆಶಯಗಳನ್ನು ತಿಳಿಸಬೇಕು ಎಂಬ ಉದ್ದೇಶದಿಂದ ಶಾಲೆಗಳಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆ ಓದುವ ಕಾರ್ಯವನ್ನು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಜಾತಿ–ಮತಭೇದವಿಲ್ಲದೆ ಸಮಾನ ಶಿಕ್ಷಣ ನೀಡುವ ವ್ಯವಸ್ಥೆ ಬಲಪಡಿಸಬೇಕಿದೆ ಎಂದು ಹೇಳಿದರು.
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಅವರು, ಕೂಡು ಕುಟುಂಬ ವ್ಯವಸ್ಥೆ ಕುಸಿದ ಪರಿಣಾಮ ಮದುವೆಗಳು ಒಪ್ಪಂದಗಳಾಗಿ ಬದಲಾಗುತ್ತಿವೆ. ಅಹಂಭಾವ, ಪ್ರತಿಷ್ಠೆ ಮತ್ತು ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯಿಂದ ಕುಟುಂಬ ಸಂಬಂಧಗಳು ದುರ್ಬಲಗೊಳ್ಳುತ್ತಿವೆ. ತಾಳ್ಮೆ, ತ್ಯಾಗ ಮತ್ತು ಹೊಂದಾಣಿಕೆ ಇದ್ದರೆ ಸಂಸಾರ ಸುಖಕರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ, ಲೋಕಪಾಲ್‌ನ ನ್ಯಾಯಾಂಗ ಸದಸ್ಯ ಲಿಂಗಪ್ಪ ನಾರಾಯಣಸ್ವಾಮಿ, ಶಿವಮೊಗ್ಗ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ್, ನ್ಯಾಯಾಧೀಶೆ ಇಂದಿರಾ, ವಕೀಲರಾದ ಸಂದೀಪ್ ಪಾಟೀಲ್, ಅರುಣ್ ಶ್ಯಾಮ್, ಕೆ.ಬಿ. ವಾಣಿಗೌಡ, ಕೆ.ಆರ್. ರೂಪ ಸೇರಿದಂತೆ ಹಲವರು ಭಾಗವಹಿಸಿದ್ದರು.











