ಶಿವಮೊಗ್ಗ: ನಗರದಲ್ಲಿ ಸರಗಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ವಿನೋಬನಗರ ಪೊಲೀಸರು ಮತ್ತೊಮ್ಮೆ ತಮ್ಮ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದ್ದಾರೆ. ಮಹಿಳೆಯರ ಮಾಂಗಲ್ಯ ಸರ ಕಿತ್ತುಕೊಳ್ಳುವ ಹಾಗೂ ಒಂಟಿ ಮನೆ ದರೋಡೆ ಪ್ರಕರಣಗಳಲ್ಲಿ ತೊಡಗಿದ್ದ ಅಂತರ್ ರಾಜ್ಯ ಸರಗಳ್ಳರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
2025ರ ನವೆಂಬರ್ 18ರಂದು ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ 60 ಅಡಿ ರಸ್ತೆ, 16ನೇ ಕ್ರಾಸ್ ಬಳಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ, ಅಪರಿಚಿತ ವ್ಯಕ್ತಿಯೊಬ್ಬ ಹಿಂಬದಿಯಿಂದ ಬಂದು ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು, ಬೈಕ್‌ನಲ್ಲಿ ಕಾಯುತ್ತಿದ್ದ ಸಹಚರನೊಂದಿಗೆ ಪರಾರಿಯಾಗಿದ್ದನು. ಈ ಕುರಿತು ಪೀಡಿತೆ ಶ್ರೀಮತಿ ಹೊನ್ನಮ್ಮ ನೀಡಿದ ದೂರಿನ ಮೇರೆಗೆ ಸಿ.ಆರ್. ನಂ.265/2025, ಕಲಂ 309(4) ಬಿಎನ್‌ಎಸ್ 2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತಾಂತ್ರಿಕ ನಿಗಾ–ತ್ವರಿತ ಕಾರ್ಯಾಚರಣೆ
ಪ್ರಕರಣದ ಗಂಭೀರತೆಯನ್ನು ಮನಗಂಡು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಐಪಿಎಸ್ ಅವರ ನಿರ್ದೇಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ಎ.ಜಿ ಮತ್ತು ರಮೇಶ್, ಉಪಾಧೀಕ್ಷಕರಾದ ಸಂಜೀವ್ ಕುಮಾರ್ ಟಿ ಅವರ ಮಾರ್ಗದರ್ಶನದಲ್ಲಿ, ವಿನೋಬನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ಸಂತೋಷಕುಮಾರ್ ಡಿ.ಕೆ ಅವರ ಉಸ್ತುವಾರಿಯಲ್ಲಿ ತನಿಖೆ ಚುರುಕುಗೊಂಡಿತು. ಪಿಎಸ್ಐ ತಿರುಮಲೇಶ್ ಜಿ ಹಾಗೂ ಸಿಬ್ಬಂದಿಗಳಾದ ರಾಜು ಕೆ, ಚಂದ್ರಾನಾಯ್ಕ ಬಿ, ಮಲ್ಲಪ್ಪ ಎಸ್, ಅರುಣಕುಮಾರ್ ಎನ್ ಕೆ, ಮನುಶಂಕರ ಸೇರಿದಂತೆ ಸಮರ್ಪಿತ ಪೊಲೀಸ್ ಸಿಬ್ಬಂದಿಯ ತಂಡ ಮಾಹಿತಿ ಸಂಗ್ರಹ, ತಾಂತ್ರಿಕ ವಿಶ್ಲೇಷಣೆ ಹಾಗೂ ನಿಗಾ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅರಸು @ ವಲ್ಲರಸು (25), ಕಾಲು @ ಇಬ್ರಾಹಿಂ ಪಾಶಾ, ಕೇಶವನ್ (43) ಹಾಗೂ ಸತೀಶ್ ಕುಮಾರ್ (40) ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇವರು ತಮಿಳುನಾಡು ಮತ್ತು ಬೆಂಗಳೂರು ಮೂಲದವರಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಬಂಧಿತ ಆರೋಪಿತರ ಕಡೆಯಿಂದ 40 ಗ್ರಾಂ ತೂಕದ ಬಂಗಾರದ ಗಟ್ಟಿ ಚಿನ್ನ, 70 ಗ್ರಾಂ ಮಾಂಗಲ್ಯ ಸರ, 60 ಗ್ರಾಂ ಬಂಗಾರದ ಆಭರಣಗಳು ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಎನ್ 250 ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ವಶಪಡಿಸಿಕೊಂಡ ಆಸ್ತಿಯ ಅಂದಾಜು ಮೌಲ್ಯ ಸುಮಾರು ₹25 ಲಕ್ಷ ಆಗಿದೆ.
ಈ ಮಹತ್ವದ ಪತ್ತೆ ಕಾರ್ಯಕ್ಕಾಗಿ ಶಿವಮೊಗ್ಗ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಐಪಿಎಸ್ ಅವರು ಸಂಪೂರ್ಣ ಪೊಲೀಸ್ ತಂಡದ ಕಾರ್ಯಕ್ಷಮತೆ, ಸಮನ್ವಯ ಮತ್ತು ತ್ವರಿತ ಪ್ರತಿಕ್ರಿಯೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನಗರದಲ್ಲಿ ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಗೆ ವಿನೋಬನಗರ ಪೊಲೀಸರ ಈ ಕಾರ್ಯಾಚರಣೆ ಮಾದರಿಯಾಗಿದ್ದು, ಸರಗಳ್ಳರಿಗೆ ಕಠಿಣ ಎಚ್ಚರಿಕೆಯ ಸಂದೇಶವನ್ನು ನೀಡಿದೆ.











