ಸಿಂದಗಿ: ಮಾನವ ಜೀವನದ ಉಜ್ವಲ ಭವಿಷ್ಯಕ್ಕಾಗಿ ಧರ್ಮಾಚರಣೆ ಮತ್ತು ಜೀವನ ಮೌಲ್ಯಗಳ ಪಾಲನೆ ಅತ್ಯಂತ ಅಗತ್ಯವಾಗಿದೆ. ಧರ್ಮ–ಸಂಸ್ಕೃತಿ ಉಳಿಯಬೇಕಾದರೆ ಪ್ರತಿಯೊಬ್ಬರೂ ಆತ್ಮಚಿಂತನೆ ಹಾಗೂ ಆಧ್ಯಾತ್ಮಿಕ ಜ್ಞಾನವನ್ನು ಸಂಪಾದಿಸಬೇಕು. ಆಧ್ಯಾತ್ಮ ಜ್ಞಾನದಿಂದಲೇ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಪಡೆಯಲು ಸಾಧ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ಸೋಮವಾರ ತಾಲ್ಲೂಕಿನ ಖೈನೂರು ಗ್ರಾಮದಲ್ಲಿ ನಡೆದ ಶ್ರೀ ಗೊಲ್ಲಾಳೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ರಥೋದ್ಘಾಟನಾ ಧರ್ಮ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಪುರಷಾರ್ಥ ಸಾಧನೆಯೇ ಬದುಕಿನ ಸಾರ್ಥಕತೆ: ಡಾ. ವೀರಸೋಮೇಶ್ವರ ಜಗದ್ಗುರು
ಪ್ರತಿಯೊಬ್ಬ ಮಾನವನ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರಷಾರ್ಥಗಳಲ್ಲಿ ಕನಿಷ್ಠ ಒಂದಾದರೂ ಸಾಧಿಸದಿದ್ದರೆ ಜೀವನ ವ್ಯರ್ಥವಾಗುತ್ತದೆ ಎಂದು ಜಗದ್ಗುರುಗಳು ತಿಳಿಸಿದರು. ಮಾನವನಿಗೆ ಬೇಕಾಗಿರುವುದು ಸಂಪತ್ತು ಮತ್ತು ಭೌತಿಕ ಸೌಕರ್ಯ ಮಾತ್ರವಲ್ಲ; ಆ ಸಂಪತ್ತನ್ನು ಧರ್ಮಪಾಲನೆಯ ಮೂಲಕವೇ ಅರ್ಥಪೂರ್ಣವಾಗಿ ಉಪಯೋಗಿಸಬೇಕು ಎಂದು ಹೇಳಿದರು.
ವೀರಶೈವ ಧರ್ಮದಲ್ಲಿ ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ ದಶವಿಧ ಧರ್ಮಸೂತ್ರಗಳು ಸಮಾಜ ಹಿತವನ್ನು ಕಾಪಾಡುವ ದಾರಿದೀಪಗಳಾಗಿವೆ. ಅವರ ಬೋಧಿಸಿದ ತತ್ವಸಿದ್ಧಾಂತಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಲ್ಲ; ಬದುಕಿಗೆ ಬೆಳಕು ತರುವ ಮಾರ್ಗದರ್ಶನಗಳಾಗಿವೆ. ಇದೇ ದಾರಿಯಲ್ಲಿ ಶರಣರು ನಡೆದು ಉನ್ನತ ಜೀವನ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಅಡ್ಡ ಪಲ್ಲಕ್ಕಿ ಮಹೋತ್ಸವ – ಐತಿಹಾಸಿಕ ಕ್ಷಣ
ಖೈನೂರು ಗ್ರಾಮದಲ್ಲಿ ಪಂಚಪೀಠಗಳಲ್ಲಿ ಮೊದಲನೆಯದಾದ ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳನ್ನು ಅಡ್ಡ ಪಲ್ಲಕ್ಕಿ ಮಹೋತ್ಸವದ ಮೂಲಕ ಭವ್ಯವಾಗಿ ಬರಮಾಡಿಕೊಂಡು, ನೂತನ ರಥವನ್ನು ಉದ್ಘಾಟಿಸಿರುವುದು ಐತಿಹಾಸಿಕ ಘಟನೆ ಎಂದು ಹೇಳಿದರು. ಗ್ರಾಮಸ್ಥರ ಗುರುಭಕ್ತಿ ಮತ್ತು ದೈವಭಕ್ತಿ ಸದಾಕಾಲವೂ ಸ್ಮರಣೀಯವಾಗಿರುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಉತ್ಸವದ ಅಂಗವಾಗಿ ಶ್ರೀ ಗೊಲ್ಲಾಳೇಶ್ವರ ಲಿಂಗಕ್ಕೆ ಪೂಜೆ ಸಲ್ಲಿಸಿ, ನಂತರ ನೂತನವಾಗಿ ನಿರ್ಮಾಣಗೊಂಡ ಭವ್ಯ ರಥಕ್ಕೆ ಪೂಜೆ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥದ ನಿರ್ಮಾಣ ಶೈಲಿ ಹಾಗೂ ಅಲಂಕಾರ ಭಕ್ತರಲ್ಲಿ ಭಕ್ತಿ–ಭಾವನೆಗಳನ್ನು ಮೂಡಿಸಿತು.

ಧರ್ಮ ಸಮಾರಂಭಕ್ಕೆ ಸಾನ್ನಿಧ್ಯ
ಮಾಗಣಗೇರಿ ಬೃಹನ್ಮಠದ ಡಾ. ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಧರ್ಮ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಸಿಂದಗಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿ ಧರ್ಮೋಪದೇಶ ನೀಡಿದರು.
ಈ ಅಪೂರ್ವ ಧಾರ್ಮಿಕ ಸಮಾರಂಭದಲ್ಲಿ ಆಲಮೇಲ ಹಿರೇಮಠ, ಯಂಕಂಚಿ ಹಿರೇಮಠ, ಮಾಗಣಗೇರಿ ಹಿರೇಮಠ, ಮಳೆಗೇರಿ ಹಿರೇಮಠ, ಸಿಂದಗಿ ಆದಿಶೇಷ ಹಿರೇಮಠ ಸೇರಿದಂತೆ ಹಲವು ಮಠಗಳ ಶ್ರೀಗಳು ಭಾಗವಹಿಸಿದ್ದರು. ಖೈನೂರು ಹಿರೇಮಠದ ಶಾಂತಯ್ಯ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು.
ಗೊಲ್ಲಾಳಪ್ಪಗೌಡ ಪಾಟೀಲ, ಶಿವಶರಣಪ್ಪ ಸಿರಿ, ಚಂದ್ರಶೇಖರ ಪುರಾಣಿಕ, ಜೆರಟಗಿ ಸಿದ್ಧೇಶ್ವರ ಶಾಸ್ತ್ರಿಗಳು ಸೇರಿದಂತೆ ಗಣ್ಯರು ಹಾಜರಿದ್ದರು.

ಗುರುಭಕ್ತಿ–ದೈವಭಕ್ತಿಯಿಂದ ಗ್ರಾಮದಲ್ಲಿ ಐತಿಹಾಸಿಕ ಮಹೋತ್ಸವ
ಸಮಾರಂಭಕ್ಕೂ ಮುನ್ನ ಗ್ರಾಮ ಹೊರಭಾಗದಿಂದ ದೇವಾಲಯದವರೆಗೆ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮೆರವಣಿಗೆ ಭವ್ಯವಾಗಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಆಶೀರ್ವಾದ ಪಡೆದರು. ಆಗಮಿಸಿದ ಎಲ್ಲಾ ಸದ್ಭಕ್ತರಿಗೆ ನಿರಂತರ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಪೂಜಾ ಹಿರೇಮಠ ನೆರವೇರಿಸಿದರು.
ಧರ್ಮ–ಆಧ್ಯಾತ್ಮದ ಮಹತ್ವವನ್ನು ಸಾರಿದ ಈ ಸಮಾರಂಭ ಭಕ್ತರಲ್ಲಿ ನೂತನ ಚೈತನ್ಯ ಮೂಡಿಸಿದಂತಾಯಿತು.











