ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸತ್ಯದ ಪಥದಲ್ಲಿ ನಡೆದರೆ ದೈವಶಕ್ತಿ ನಮ್ಮ ಜೊತೆ: ಶ್ರೀ ರಂಭಾಪುರಿ ಜಗದ್ಗುರುಗಳು

On: March 23, 2026 9:34 PM
Follow Us:

ಹಾವೇರಿ: ಆಧುನಿಕ ಕಾಲಘಟ್ಟದಲ್ಲಿ ಮಾನವನ ಜೀವನದಲ್ಲಿ ಶಾಂತಿ ಮತ್ತು ತೃಪ್ತಿ ಕಾಣುವುದು ಕಷ್ಟವಾಗುತ್ತಿದೆ. ಬದುಕಿನಲ್ಲಿ ಸ್ಪರ್ಧೆ, ಸಂಘರ್ಷಗಳು ದಿನನಿತ್ಯ ಹೆಚ್ಚುತ್ತಿವೆ. ಒಂದು ಕಡೆ ವೈಜ್ಞಾನಿಕ ಪ್ರಗತಿ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಸಂಸ್ಕೃತಿ ಮತ್ತು ಮೌಲ್ಯಗಳು ಕ್ಷೀಣಿಸುತ್ತಿರುವುದು ವಿಷಾದನೀಯ. ನಮ್ಮ ನಡೆ-ನುಡಿಗಳು ಯಾವಾಗಲೂ ಸತ್ಯದ ಪರವಾಗಿರಬೇಕು. ಸುಳ್ಳಿನೊಂದಿಗೆ ದುಷ್ಟಶಕ್ತಿಗಳು ಇದ್ದರೂ, ಸತ್ಯದ ಜೊತೆ ದೈವಶಕ್ತಿ ಸದಾ ಇರುತ್ತದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಹಾವೇರಿ ಜಿಲ್ಲೆಯ ನೆಗಳೂರು ಸಂಸ್ಥಾನ ಹಿರೇಮಠದ ಆವರಣದಲ್ಲಿ ನಡೆದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ವೀರಶೈವ ಪಂಚಸೂತ್ರಗಳ ಪ್ರವಚನ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಪರಶಿವನ ಪಂಚಮುಖಗಳಿಂದ ಅವತಾರಗೊಂಡ ಪಂಚಾಚಾರ್ಯರು ಮಾನವಕುಲಕ್ಕೆ ಅಮೂಲ್ಯವಾದ ಆಧ್ಯಾತ್ಮಿಕ ಚಿಂತನೆಗಳನ್ನು ನೀಡಿದ್ದಾರೆ. ಯುಗಯುಗಗಳಿಂದಲೂ ಸಮಾಜದ ಎಲ್ಲಾ ವರ್ಗಗಳಿಗೂ ಆತ್ಮಜ್ಞಾನ ಮತ್ತು ಪರಮಾತ್ಮನ ಅನುಸಂಧಾನದ ಮಾರ್ಗವನ್ನು ತೋರಿಸುತ್ತಾ ಬಂದಿದ್ದಾರೆ. ವೀರಶೈವ ಧರ್ಮವು ಸರ್ವಜನಾಂಗದ ಕಲ್ಯಾಣವನ್ನು ಬಯಸುವ ಧರ್ಮವಾಗಿದ್ದು, ಅದರಲ್ಲಿ ಆದರ್ಶ ಮೌಲ್ಯಗಳು ತುಂಬಿವೆ ಎಂದು ಅವರು ತಿಳಿಸಿದರು.

ವೀರಶೈವ ಧರ್ಮದ ಇತಿಹಾಸ ಹಾಗೂ ಪರಂಪರೆ ಅಪಾರವಾಗಿದೆ. ರೇಣುಕಾಚಾರ್ಯರಿಂದ ಪ್ರತಿಪಾದಿತವಾದ ಶಿವಾದ್ವೈತ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಈ ಹಿನ್ನೆಲೆಯಲ್ಲಿ “ವೀರಶೈವ ಪಂಚಸೂತ್ರೀಯ ಪ್ರವಚನ” ಗ್ರಂಥವು ಮಹತ್ವಪೂರ್ಣ ಕೃತಿಯಾಗಿದ್ದು, ಅದರ ಮೂಲಕ ಸಿದ್ಧಾಂತಗಳ ವಿಶ್ಲೇಷಣೆಯನ್ನು ವಿವರವಾಗಿ ಪರಿಚಯಿಸಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಉಜ್ಜಯಿನಿ, ಶ್ರೀ ಶ್ರೀಶೈಲ ಹಾಗೂ ಶ್ರೀ ಕಾಶಿ ಜಗದ್ಗುರುಗಳು, “ಸತ್ಯವು ಮಾನವನನ್ನು ಉದ್ಧಾರ ಮಾಡುತ್ತದೆ. ಮಾನವನು ತನ್ನ ಮನಸ್ಸನ್ನು ಶುದ್ಧವಾಗಿಟ್ಟುಕೊಂಡರೆ ಜೀವನದಲ್ಲಿ ಅನೇಕ ಮಾರ್ಗಗಳು ತೆರೆದಿಡುತ್ತವೆ. ಮಾನಸಿಕ ಸ್ಥಿತಿಯೇ ಸುಖ–ದುಃಖಗಳಿಗೆ ಮೂಲ ಕಾರಣವಾಗುತ್ತದೆ,” ಎಂದು ತಿಳಿಸಿದರು.

ಕಾರ್ಯಕ್ರಮವನ್ನು ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಿ ಮಾತನಾಡಿ, ಅಧರ್ಮಕ್ಕೆ ಅನೇಕ ದಾರಿಗಳಿದ್ದರೂ ಧರ್ಮಕ್ಕೆ ಒಂದೇ ದಾರಿ ಇದೆ. ಸಮಾಜದಲ್ಲಿ ಒಗ್ಗಟ್ಟು, ನಿರ್ಮಾಣಾತ್ಮಕ ಚಿಂತನೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಕರೆ ನೀಡಿದರು.

ಅಮೆರಿಕದ ಚಿಕಾಗೋ ಮೂಲದ ಚಿಂತಕ ರವಿ ಹಂಜ ಅವರು “ವೀರಶೈವ ಪಂಚಸೂತ್ರೀಯ ಪ್ರವಚನ” ಗ್ರಂಥವನ್ನು ಬಿಡುಗಡೆ ಮಾಡಿ, ಶಿವಶಕ್ತಿ ಸೃಷ್ಟಿಯ ಮೂಲವಾಗಿದ್ದು, ಮಾನವನೊಳಗಿನ ಚೈತನ್ಯವನ್ನು ಜಾಗೃತಗೊಳಿಸುವುದೇ ಧರ್ಮದ ಉದ್ದೇಶ ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು, ಈ ಮಹೋತ್ಸವವು ಭಕ್ತರ ಪುಣ್ಯಫಲವಾಗಿದ್ದು, ಸಮಾಜಕ್ಕೆ ಧರ್ಮದ ಸಂದೇಶ ನೀಡುವ ಮಹತ್ವದ ವೇದಿಕೆಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಪಂಡಿತರು ಹಾಗೂ ಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಈ ಮಹೋತ್ಸವವು ಧರ್ಮ, ಸತ್ಯ ಮತ್ತು ಮಾನವೀಯ ಮೌಲ್ಯಗಳ ಸಾರವನ್ನು ಜನತೆಗೆ ತಲುಪಿಸಿದ ಮಹತ್ವದ ಆಧ್ಯಾತ್ಮಿಕ ವೇದಿಕೆಯಾಗಿದ್ದು, ಭಕ್ತರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿತು.

K.M.Sathish Gowda

Join WhatsApp

Join Now

Facebook

Join Now

Leave a Comment