ಶಿವಮೊಗ್ಗ: ಮಾನವನ ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಸಮಗ್ರ ಪರಿಹಾರ ಅಡಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ್ ಅಭಿಪ್ರಾಯಪಟ್ಟರು.
ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾದ ಶಿವಮೊಗ್ಗ ಜಿಲ್ಲಾ 7ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳು ಕೇವಲ ಸಾಹಿತ್ಯವಲ್ಲ, ಮಾನವನ ಬದುಕಿಗೆ ದಿಕ್ಕು ತೋರಿಸುವ ದಾರಿದೀಪಗಳಾಗಿವೆ. ಇಂದಿನ ಸಂಕೀರ್ಣ ಜೀವನದಲ್ಲಿಯೂ ಆ ವಚನಗಳು ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.

ಮಕ್ಕಳಲ್ಲಿ ವಚನ ಸಂಸ್ಕಾರ ಬೆಳೆಸೋಣ: ಡಾ. ಸಿ. ಸೋಮಶೇಖರ್
ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಿಗೆ ವಚನಗಳ ಮಹತ್ವ ಮತ್ತು ಅದರ ಸಾರವನ್ನು ಪರಿಚಯಿಸುವುದು ಅತ್ಯಗತ್ಯವಾಗಿದೆ. ಪೋಷಕರು ಹಾಗೂ ಸಮಾಜ ಒಟ್ಟಾಗಿ ಶರಣ ಸಾಹಿತ್ಯದ ಅರಿವು ಮಕ್ಕಳಲ್ಲಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಈ ಮೂಲಕ ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಬಿತ್ತಬಹುದು ಎಂದು ಅವರು ತಿಳಿಸಿದರು.

ಸಾಮಾಜಿಕ ಕ್ರಾಂತಿ ಇಂದಿಗೂ ಪ್ರಸ್ತುತ: ಬಿ.ವೈ.ರಾಘವೇಂದ್ರ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ ಸಾಮಾಜಿಕ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದೆ. ವಚನ ಸಾಹಿತ್ಯವು ಮನುಕುಲಕ್ಕೆ ಶಕ್ತಿ ತುಂಬಿದ ಮಹತ್ತರ ಸಾಧನವಾಗಿದೆ. ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯಂತಹ ಮಹಾನ್ ಶರಣರ ಭಕ್ತಿ ಈ ನಾಡಿನ ಮಣ್ಣಿನಲ್ಲಿ ನೆಲಸಿದೆ ಎಂದು ಹೇಳಿದರು.

ಸಂಸ್ಕಾರಗಳ ಕೊರತೆ – ಆಧುನಿಕ ಸವಾಲು
ಹಳೆಯ ಕಾಲದಲ್ಲಿ ಪೋಷಕರು ಮಕ್ಕಳಿಗೆ ಬೆಳಗ್ಗೆ-ಸಂಜೆ ವಚನ, ದೇವರನಾಮಗಳ ಮೂಲಕ ಸಂಸ್ಕಾರ ನೀಡುತ್ತಿದ್ದರು. ಆದರೆ ಇಂದಿನ ಯುಗದಲ್ಲಿ ಮಕ್ಕಳಿಗೂ ಪೋಷಕರಿಗೂ ಸಮಯದ ಕೊರತೆ ಉಂಟಾಗಿದೆ. ಮೊಬೈಲ್‌ಗಳಿಗೆ ಮಾತ್ರ ಸಮಯ ಮೀಸಲಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಈ ಸಮ್ಮೇಳನವು ಕೇವಲ ಸಾಹಿತ್ಯಿ ಕಾರ್ಯಕ್ರಮವಲ್ಲ; ಅದು ಸಮಾಜ ಜಾಗೃತಿಗೆ ದಾರಿಯಾಗುವ ಮಹತ್ವದ ಚಳುವಳಿಯಾಗಿದೆ. ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಸಾಗಿಸುವ ಸೇತುವೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಅಹಂಕಾರದಿಂದಲೇ ಅಶಾಂತಿ: ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, “ನಾನು, ನನ್ನದು” ಎಂಬ ಅಹಂಕಾರ, ದ್ವೇಷ ಮತ್ತು ಪ್ರತಿಷ್ಠೆಯನ್ನು ತೊಡೆದು ಹಾಕಿದಾಗ ಸಮಾಜದಲ್ಲಿ ಕಲಹ, ಯುದ್ಧಗಳಿಗೆ ಅವಕಾಶವೇ ಇರುವುದಿಲ್ಲ ಎಂದು ಹೇಳಿದರು.
ವಚನ ಸಾಹಿತ್ಯ – ಬದುಕಿನ ಚೌಕಟ್ಟು
ವಚನ ಸಾಹಿತ್ಯವು ಕೇವಲ ಓದುವುದಕ್ಕೆ ಮಾತ್ರ ಸೀಮಿತವಲ್ಲ; ಅದು ಪ್ರತಿಯೊಬ್ಬರ ಬದುಕಿನ ಚೌಕಟ್ಟಾಗಬೇಕು. ವಚನಗಳ ಮಾರ್ಗದರ್ಶನವನ್ನು ಅನುಸರಿಸಿದರೆ ಜೀವನ ಸುಂದರವಾಗುತ್ತದೆ ಎಂದು ಅವರು ಪೂಜ್ಯ ಗುರುಗಳು ತಿಳಿಸಿದರು.
ಅಂಬೇಡ್ಕರ್ ಕುರಿತು ಸ್ಮರಣೆ
ಇದೇ ವೇಳೆ ಅವರು ಮಹತ್ವದ ವಿಷಯವೊಂದನ್ನು ಸ್ಮರಿಸಿದರು. ಬಸವಾದಿ ಶರಣರ ವಚನಗಳನ್ನು ನಾವು ಜಗತ್ತಿಗೆ ಸಮರ್ಪಕವಾಗಿ ಪರಿಚಯಿಸಿದ್ದರೆ, ಸಂವಿಧಾನ ರಚನೆಯ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಶರಣರ ವಚನಗಳನ್ನು ಉಲ್ಲೇಖಿಸುತ್ತಿದ್ದರು ಎಂದು ಸುತ್ತೂರು ಶ್ರೀ ಅಭಿಪ್ರಾಯಪಟ್ಟರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಅಂಬ್ರಯ್ಯ ಮಠ, ಡಾ. ಧನಂಜಯ ಸರ್ಜಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಮಹಾರುದ್ರ, ಮಾಜಿ ಶಾಸಕ ಎಸ್. ರುದ್ರೇಗೌಡ, ಎಸ್.ಎಸ್. ಜ್ಯೋತಿಪ್ರಕಾಶ್, ಬೆನಕಪ್ಪ, ಪರಮೇಶ್ ವಾಲಿಬಾಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಧ್ವಜಾರೋಹಣ ಸಮಾರಂಭ
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 8.30ಕ್ಕೆ ಧ್ವಜಾರೋಹಣ ನಡೆಯಿತು. ವಿವಿಧ ಧ್ವಜಗಳನ್ನು ಗಣ್ಯರು ನೆರವೇರಿಸಿದರು.

ಶೋಭಾಯಾತ್ರೆಯ ಸಂಭ್ರಮ
ಬೆಳಗ್ಗೆ 9 ಗಂಟೆಗೆ ಉಡುತಡಿಯಿಂದ ಪ್ರಾರಂಭವಾದ ಶೋಭಾಯಾತ್ರೆಯಲ್ಲಿ ಅಕ್ಕಮಹಾದೇವಿ ಜ್ಯೋತಿಯನ್ನು ಭವ್ಯವಾಗಿ ಸ್ವಾಗತಿಸಿ, ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಹೊಸ ಚೈತನ್ಯದ ನಿರೀಕ್ಷೆ
ಪೂಜ್ಯರ ಆಶೀರ್ವಾದದಲ್ಲಿ ಸಮ್ಮೇಳನ ಅರ್ಥಪೂರ್ಣವಾಗಿ ಜರುಗುತ್ತಿದ್ದು, ಶರಣರ ಸಂದೇಶಗಳು ಸಮಾಜದಲ್ಲಿ ಹೊಸ ಚೈತನ್ಯ ಮೂಡಿಸುವ ನಿರೀಕ್ಷೆ ವ್ಯಕ್ತವಾಗಿದೆ.










