ಬೆಂಗಳೂರು: ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ಅಪಾರ ಸೇವಾ ಪರಂಪರೆಯನ್ನು ಶಾಶ್ವತವಾಗಿ ಸ್ಮರಿಸುವ ಉದ್ದೇಶದಿಂದ, ಅವರ ಆರಾಧನಾ ದಿನವಾದ ಜನವರಿ 21ನ್ನು ರಾಜ್ಯದಲ್ಲಿ ‘ದಾಸೋಹ ದಿವಸ’ವಾಗಿ ಅಧಿಕೃತವಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಸಲ್ಲಿಸಿದ್ದಾರೆ.
ಶಿವಕುಮಾರ ಮಹಾಸ್ವಾಮಿಜಿಗಳ ಆರಾಧನಾ ದಿನದ ಸ್ಮರಣೆ
ಈ ಕುರಿತು ಸವಿಸ್ತಾರ ಪತ್ರ ಬರೆದಿರುವ ಅವರು, 2019ರ ಜನವರಿ 21ರಂದು ಮಹಾಸ್ವಾಮಿಜಿಗಳು ಇಹಲೋಕ ತ್ಯಜಿಸಿದ ಸಂದರ್ಭವನ್ನು ಸ್ಮರಿಸಿ, ಆ ಸಂದರ್ಭದಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದರು ಎಂಬುದನ್ನು ಉಲ್ಲೇಖಿಸಿದ್ದಾರೆ.

ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳು ತಮ್ಮ ಜೀವನವನ್ನೇ ಬಡವರು, ಅನಾಥರು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅರ್ಪಿಸಿಕೊಂಡ ಮಹಾನ್ ತಪಸ್ವಿಗಳಾಗಿದ್ದು, ಸಿದ್ಧಗಂಗಾ ಮಠದಲ್ಲಿ ಅವರು ಆರಂಭಿಸಿದ ಅನ್ನದಾಸೋಹ ಯೋಜನೆ ಲಕ್ಷಾಂತರ ಬಡ ಮಕ್ಕಳ ಬದುಕಿಗೆ ಬೆಳಕಾಯಿತು. “ಬಡವರ ಮಕ್ಕಳು ಬಡವರಾಗಿಯೇ ಉಳಿಯಬಾರದು” ಎಂಬ ಮಹತ್ತರ ಆಶಯದೊಂದಿಗೆ ಆರಂಭವಾದ ಈ ದಾಸೋಹ ಪರಂಪರೆ, ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ದೇಶದ ಮಟ್ಟದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಪ್ರೇರಣೆಯಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ಅವರು 2020ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾಸ್ವಾಮಿಜಿಗಳ ಸ್ಮರಣಾರ್ಥ ಜನವರಿ 21ನ್ನು ‘ದಾಸೋಹ ದಿವಸ’ವಾಗಿ ಆಚರಿಸುವುದಾಗಿ ಘೋಷಣೆ ಮಾಡಿದ್ದುದನ್ನು ಉಲ್ಲೇಖಿಸಿ, ಆ ಘೋಷಣೆ ಇನ್ನೂ ಜಾರಿಗೆ ಬರದೇ ಇರುವುದನ್ನು ವಿಷಾದಿಸಿದ್ದಾರೆ.

ಇದೇ ವಿಚಾರವಾಗಿ 2025ರ ಜನವರಿ 25ರಂದು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನಿರಾಶಾದಾಯಕವಾಗಿದೆ ಎಂದು ಅವರು ತಿಳಿಸಿದ್ದಾರೆ. ಸಂಬಂಧಿತ ಹಿಂದಿನ ಪತ್ರದ ಪ್ರತಿಯನ್ನೂ ಈ ಮನವಿಗೆ ಲಗತ್ತಿಸಲಾಗಿದೆ ಎಂದು ತಿಳಿಸಿದ್ದಾರೆ.

ಶ್ರೀಮಠದ ದಾಸೋಹ ಪರಂಪರೆ, ಮಹಾಸ್ವಾಮಿಜಿಗಳ ದೂರದೃಷ್ಟಿ, ಬಡವರ ಮೇಲಿನ ಕಾಳಜಿ ಹಾಗೂ ತ್ರಿವಿಧ ದಾಸೋಹದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಜನವರಿ 21ನ್ನು ‘ದಾಸೋಹ ದಿವಸ’ವಾಗಿ ಅಧಿಕೃತವಾಗಿ ಜಾರಿಗೆ ತಂದು, ಮಹಾನ್ ಸಂತನ ಸೇವೆಯನ್ನು ಗೌರವಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರು ದಿನಾಂಕ 23-03-2026ರಂದು ಮನವಿ ಮಾಡಿದ್ದಾರೆ.













