ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಆನಗೋಡಿನಲ್ಲಿ ಇಂದು ಮರುಳಸಿದ್ಧರ ವೈಭವದ ರಥೋತ್ಸವ; ನೂತನ ಶಾಲಾ ಕಟ್ಟಡಕ್ಕೆ ಚಾಲನೆ, ಶ್ರೀ ತರಳಬಾಳು ಜಗದ್ಗುರುಗಳಿಗೆ ಗೌರವ ಸಮರ್ಪಣೆ

On: April 2, 2026 10:28 AM
Follow Us:

ದಾವಣಗೆರೆ ಸಮೀಪದ ಆನಗೋಡು ಗ್ರಾಮ ಇಂದು ಭಕ್ತಿಭಾವ,ಪೂರ್ವಪರಂಪರೆ ಮತ್ತು ಶಿಕ್ಷಣದ ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಶ್ರೀ ಸದ್ಧರ್ಮ ಪೀಠ ಸಂಸ್ಥಾನಾಚಾರ್ಯ ವಿಶ್ವಬಂಧು ಮರುಳಸಿದ್ಧರ ವೈಭವದ ರಥೋತ್ಸವವು ಇಂದು ಭಕ್ತರ ಮಹಾಸಾಗರದ ನಡುವೆ ವಿಜೃಂಭಣೆಯಿಂದ ನಡೆಯಲಿದೆ.

ಈ ಸಂದರ್ಭದಲ್ಲಿ, ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತವಾದ ನೂತನ ಶಾಲಾ-ಕಾಲೇಜು ಕಟ್ಟಡವೂ ಉದ್ಘಾಟನೆಯಾಗುತ್ತಿದ್ದು, ಶ್ರೀ ತರಳಬಾಳು ಜಗದ್ಗುರುಗಳ ಪಾದಪೂಜೆಯ ಮೂಲಕ ಕೃತಜ್ಞತೆ ಸಮರ್ಪಣೆ ನಡೆಯಲಿದೆ.

ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶಿವಶರಣರ ಸಮಕಾಲೀನರಾಗಿದ್ದ ಶ್ರೀ ವಿಶ್ವಬಂಧು ಮರುಳಸಿದ್ಧರು, ಜಾತಿ ಪದ್ಧತಿ, ಮೂಢನಂಬಿಕೆ ಮತ್ತು ಪುರೋಹಿತಶಾಹಿಯ ವಿರುದ್ಧ ಹೋರಾಡಿದ ಮಹಾನ್ ಯೋಗಿ. ಸಮಾನತೆ, ನ್ಯಾಯ ಮತ್ತು ಮಾನವೀಯತೆಯ ಸಂದೇಶವನ್ನು ಸಮಾಜದಲ್ಲಿ ಬಿತ್ತಿದವರು.

ಕೊಲ್ಲಾಪುರದ ಮಹಾಲಕ್ಷ್ಮಿಯ ಮಾಯೆಯನ್ನು ಯುಕ್ತಿಯಿಂದ ಜಯಿಸಿ ಲಿಂಗದೀಕ್ಷೆ ನೀಡಿದ ಮಹಿಮೆಯನ್ನು ಹೊಂದಿದ ಅವರು, ನಂತರ ಸಮಾಜೋದ್ಧಾರಕ್ಕಾಗಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕಗ್ಗಲ್ಲುಪುರದಲ್ಲಿ ಸದ್ಧರ್ಮ ಸಿಂಹಾಸನ ಪೀಠವನ್ನು ಸ್ಥಾಪಿಸಿದರು. ತಮ್ಮ ಶಿಷ್ಯ ಮೂಕಸಿದ್ಧರನ್ನು ಜ್ಞಾನೋದಯಗೊಳಿಸಿ “ತರಳಬಾಳು” ಆಶೀರ್ವಚನ ನೀಡುವ ಮೂಲಕ ತರಳಬಾಳು ಗುರುಪರಂಪರೆಯ ಮೂಲ ಪುರುಷರಾದರು.

ಈ ಪರಂಪರೆಯ ಜ್ಞಾನಜ್ಯೋತಿ ಇಂದಿಗೂ ಸಿರಿಗೆರೆಯನ್ನು ಕೇಂದ್ರವಾಗಿ ದೇಶ-ವಿದೇಶಗಳಲ್ಲಿ ಪ್ರಕಾಶಿಸುತ್ತಿದೆ. ತರಳಬಾಳು ಜಗದ್ಗುರುಗಳ ಸಮಾಜಮುಖಿ ಸೇವೆಗಳಿಂದ ಪೀಠವು ಸುವರ್ಣಯುಗವನ್ನು ಕಾಣುತ್ತಿದೆ.

ಮರುಳಸಿದ್ಧರು ಕೇವಲ ಗುರುಗಳಲ್ಲ, ನಾಡಿನ ಎಲ್ಲಾ ವರ್ಗದ ಜನರ ಮನೆದೇವರಾಗಿದ್ದುದು ವಿಶೇಷ. ಅವರ ಜೀವನದ ಸ್ಮರಣಾರ್ಥವಾಗಿ ನೂರಾರು ದೇವಾಲಯಗಳು ನಿರ್ಮಾಣಗೊಂಡಿದ್ದು, ಪ್ರತಿದಿನವೂ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

ಮರುಳಸಿದ್ಧರ ವಿರುದ್ಧ ಶತ್ರುಗಳು ಮದಗಜವನ್ನು ಬಿಟ್ಟು ದಾಳಿ ನಡೆಸಿದಾಗ, ಅವರು ಆನೆಯ ದಂತವನ್ನು ಮುರಿದು ತಮ್ಮ ತಪಸ್ಸಿನ ಶಕ್ತಿಯನ್ನು ಪ್ರದರ್ಶಿಸಿದರು. ಈ ಘಟನೆಯಿಂದಲೇ ಈ ಪ್ರದೇಶಕ್ಕೆ “ಆನಗೋಡು” ಎಂಬ ಹೆಸರು ಬಂದಿದೆ ಎಂದು ಐತಿಹ್ಯ ಹೇಳುತ್ತದೆ.

ಇದೇ ನೆನಪಿಗಾಗಿ ಇಲ್ಲಿ ಮರುಳಸಿದ್ಧರ ದೇವಾಲಯ ನಿರ್ಮಾಣಗೊಂಡಿದ್ದು, ಇಂದು ನಡೆಯುವ ರಥೋತ್ಸವ ಈ ಪವಿತ್ರ ನೆನಪನ್ನು ಜೀವಂತವಾಗಿರಿಸುತ್ತದೆ.

ಇಂದು ನಡೆಯುವ ಮಹಾರಥೋತ್ಸವವು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪಾವನ ಸಾನ್ನಿಧ್ಯದಲ್ಲಿ ನಡೆಯಲಿದ್ದು, ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ತರಳಬಾಳು ಮಠದ ಇತಿಹಾಸದಲ್ಲಿ ಮಹತ್ತರ ಪಾತ್ರವಹಿಸಿದವರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು. ಗ್ರಾಮೀಣ ಜನತೆಯ ಅಭಿವೃದ್ಧಿಗೆ ಶಿಕ್ಷಣವೇ ಮೂಲವೆಂದು ಅರಿತು, ಮೂಲಸೌಕರ್ಯಗಳಿಲ್ಲದ ಹಳ್ಳಿಗಳಲ್ಲೂ ನೂರಾರು ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದರು.

1965ರಲ್ಲಿ ಆನಗೋಡಿನಲ್ಲಿ ಪ್ರೌಢಶಾಲೆ ಮತ್ತು 1972-73ರಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸಿ, ಸುತ್ತಮುತ್ತಲಿನ 20-30 ಹಳ್ಳಿಗಳ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದರು.

ಪದವಿ ಪೂರ್ವ ಕಾಲೇಜಿಗೆ “ಶ್ರೀ ಜಿ. ಚನ್ನಪ್ಪ ಪದವಿ ಪೂರ್ವ ಕಾಲೇಜು” ಎಂಬ ಹೆಸರು ನೀಡಲಾಗಿದೆ. ಸಮಾಜಸೇವಕ, ನ್ಯಾಯತಜ್ಞ ಹಾಗೂ ಅಭಿವೃದ್ಧಿ ಶಿಲ್ಪಿಯಾಗಿದ್ದ ಚನ್ನಪ್ಪನವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಈ ನಾಮಕರಣ ಮಾಡಲಾಗಿದೆ.

ಪ್ರಸ್ತುತ ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಕಲ್ಪದಿಂದ, ಸುಮಾರು 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಭವ್ಯ ಶಾಲಾ ಕಟ್ಟಡ ನಿರ್ಮಾಣಗೊಂಡಿದೆ.

ಈ ಕಟ್ಟಡದಲ್ಲಿ:

  • 36 ವಿಶಾಲ ತರಗತಿ ಕೊಠಡಿಗಳು
  • ಗ್ರಂಥಾಲಯ
  • ವಿಜ್ಞಾನ ಪ್ರಯೋಗಾಲಯ
  • ವಿಶ್ರಾಂತಿ ಕೋಣೆಗಳು
  • ಪ್ರತ್ಯೇಕ ಶೌಚಾಲಯಗಳು
  • ಸಮಗ್ರ ಮೂಲಸೌಕರ್ಯ

ಇವೆಲ್ಲವೂ ಲಭ್ಯವಿದ್ದು, ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳು ಇಲ್ಲಿ ಆರಂಭಗೊಂಡಿವೆ.

ಇಂದು ಮಧ್ಯಾಹ್ನ 3:30ಕ್ಕೆ ನೂತನ ಕಟ್ಟಡದಲ್ಲಿ ಶ್ರೀ ತರಳಬಾಳು ಜಗದ್ಗುರುಗಳಿಗೆ ಪಾದಪೂಜೆ ನಡೆಯಲಿದ್ದು, ಈ ಮೂಲಕ ಶಿಕ್ಷಣ ಸಂಕೀರ್ಣಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

ಇತಿಹಾಸ ಪ್ರಸಿದ್ಧ, ಭಕ್ತಿ ಮತ್ತು ಶಿಕ್ಷಣದ ಈ ಅಪೂರ್ವ ಸಂಧಿಯನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಆನಗೋಡು ಇಂದು ಧರ್ಮ, ಇತಿಹಾಸ ಮತ್ತು ಶಿಕ್ಷಣದ ತ್ರಿವೇಣಿ ಸಂಗಮವಾಗಿ ರೂಪುಗೊಂಡಿದೆ.

K.M.Sathish Gowda

Join WhatsApp

Join Now

Facebook

Join Now

Read more

ಡಾ. ಶಿವಕುಮಾರ ಸ್ವಾಮೀಜಿ 119ನೇ ಜಯಂತಿ: ಹಸಿದವರಿಗೆ ಅನ್ನ, ಅನಾಥರಿಗೆ ಆಶ್ರಯವಾದ ಸಿದ್ಧಗಂಗಾ – ಸೇವೆ, ಆಧ್ಯಾತ್ಮಿಕ ಪರಂಪರೆಯ ಪ್ರತೀಕ ಎಂದು ದ್ರೌಪದಿ ಮುರ್ಮು ಪ್ರಶಂಸೆ

ಅರಿವಿನ ಬದುಕೇ ಸುಖ–ಶಾಂತಿಯ ದಾರಿ: ಶ್ರೀ ರಂಭಾಪುರಿ ಜಗದ್ಗುರುಗಳು

ಮಹಾವೀರ ಜಯಂತಿ: ಅಹಿಂಸೆಯ ಬೆಳಕು ಹರಡಿದ ಮಹಾನ್ ವ್ಯಕ್ತಿತ್ವ, ತ್ಯಾಗದ ಮೂಲಕ ಜ್ಞಾನೋದಯ ಕಂಡ ಮಹಾನ್ ಯೋಗಿ

ಭಗವಾನ್ ಮಹಾವೀರ ಜಯಂತಿ ಸಂಭ್ರಮ: ನಮ್ಮೂರ ಬಳಗದಿಂದ ಪುಷ್ಪನಮನ ಹಾಗೂ ಸಿಹಿ ವಿತರಣೆ

ಸಿದ್ಧಗಂಗಾ ಸ್ವಾಮೀಜಿ ಸ್ಮರಣೆ: ಜನವರಿ 21ನ್ನು ‘ದಾಸೋಹ ದಿವಸ’ವನ್ನಾಗಿ ಘೋಷಿಸಲು ಸಿಎಂ ಸಿದ್ದರಾಮಯ್ಯರಿಗೆ ಕೇಂದ್ರ ಸಚಿವ ಸೋಮಣ್ಣ ಮನವಿ

“ಕಷ್ಟಗಳು ಜೀವನದಲ್ಲಿ ಪಾಠ ಕಲಿಸಿದರೆ, ನಂಬಿಕೆ ಮನುಷ್ಯನಿಗೆ ಶಕ್ತಿ ತುಂಬುತ್ತದೆ” : ಶ್ರೀ ರಂಭಾಪುರಿ ಜಗದ್ಗುರುಗಳು

Leave a Comment