ಶಿವಮೊಗ್ಗ: ಸತ್ಯ, ಶುದ್ಧ ಕಾಯಕ ಹಾಗೂ ಪಾರದರ್ಶಕತೆಯ ತತ್ವಗಳ ಮೇಲೆ ನೂರು ವರ್ಷಗಳ ಹಿಂದೆ ರೂಪಗೊಂಡ ಶಿವಮೊಗ್ಗದ ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘವು ಇಂದು ಮಹಾವೃಕ್ಷವಾಗಿ ಬೆಳೆದು ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶ್ಲಾಘಿಸಿದ್ದಾರೆ.
ನಗರದ ಕುವೆಂಪು ರಂಗಮಂದಿರದಲ್ಲಿ ಅತ್ಯಂತ ಸಡಗರದಿಂದ ಆಯೋಜಿಸಲಾಗಿದ್ದ ಸಂಘದ ಶತಮಾನೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವ ತತ್ವದ ವಿಜಯೋತ್ಸವ
”1925 ರಲ್ಲಿ ಕೇವಲ 40 ಜನ ಸದಸ್ಯರೊಂದಿಗೆ ನಗರದ ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನದಲ್ಲಿ ಆರಂಭವಾದ ಈ ಸಂಸ್ಥೆ ಇಂದು ನೂರು ವರ್ಷಗಳ ಸುದೀರ್ಘ ಇತಿಹಾಸ ಬರೆದಿದೆ. ಇದು ಕೇವಲ ಒಂದು ಸಹಕಾರ ಸಂಘದ ಸಾಧನೆಯಲ್ಲ; ಇದು ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳಿಗೆ ಸಿಕ್ಕ ಶತಮಾನದ ವಿಜಯೋತ್ಸವ,” ಎಂದು ಯಡಿಯೂರಪ್ಪ ಬಣ್ಣಿಸಿದರು. ಬ್ರಿಟಿಷರ ಕಾಲದಲ್ಲೇ ನೊಂದಣಿಯಾಗಿ, ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಸಾರ್ವಜನಿಕರಿಗೆ ಸಾರ್ಥಕ ಸೇವೆ ನೀಡುತ್ತಾ ಬಂದಿರುವ ಈ ಸಂಸ್ಥೆಯ ಸಾಧನೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು

ಮಲೆನಾಡಿನ ಜನರ ಆರ್ಥಿಕ ಶಕ್ತಿ
ಬ್ಯಾಂಕಿಂಗ್ ವ್ಯವಸ್ಥೆ ಇನ್ನೂ ಹಳ್ಳಿಗಳಿಗೆ ಸರಿಯಾಗಿ ತಲುಪದ, ಸಾಮಾನ್ಯ ಜನರಿಗೆ ಬ್ಯಾಂಕ್‌ಗಳ ದರ್ಶನವೇ ಅಪರೂಪವಾಗಿದ್ದ ಕಾಲದಲ್ಲೇ ಈ ಸಂಸ್ಥೆ ಜನರ ಮನೆಬಾಗಿಲಿಗೆ ಆರ್ಥಿಕ ಭದ್ರತೆಯನ್ನು ತಂದೊಪ್ಪಿಸಿತು. ದಿವಂಗತ ಜಿ.ಸಿ. ಮಹಾಲಿಂಗಪ್ಪನವರ ದೂರದೃಷ್ಟಿ ಮತ್ತು ಅಂದಿನ ಹಿರಿಯರ ಅವಿರತ ಪರಿಶ್ರಮದಿಂದಾಗಿ ಮಲೆನಾಡು ಹಾಗೂ ಶಿವಮೊಗ್ಗ ಭಾಗದ ಸಣ್ಣ ವ್ಯಾಪಾರಿಗಳು, ರೈತರು ಮತ್ತು ಮಧ್ಯಮ ವರ್ಗದವರ ಕಷ್ಟದ ಕಾಲದಲ್ಲಿ ಈ ಸಂಘ ಕೈಹಿಡಿದು ನಡೆಸಿದೆ. ವೀರಶೈವ ಸಮಾಜ ಸೇರಿದಂತೆ ಸಮಗ್ರ ಸಮಾಜದ ಆರ್ಥಿಕ ಏಳಿಗೆಗೆ ಈ ಸಂಸ್ಥೆ ಭದ್ರ ಬುನಾದಿಯಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ನೆನೆದರು.

ಹಿರಿಯರ ಸ್ಮರಣೆ ಅತ್ಯಂತ ಶ್ಲಾಘನೀಯ
ಸಹಕಾರ ಕ್ಷೇತ್ರದಲ್ಲಿ ‘ಎಲ್ಲರಿಗೂ ಒಬ್ಬರು, ಒಬ್ಬರಿಗಾಗಿ ಎಲ್ಲರು’ ಎಂಬ ತತ್ವವಿದೆ. ಅದನ್ನು ಈ ಸಂಸ್ಥೆ ಅಕ್ಷರಶಃ ಪಾಲಿಸಿದೆ. ಇಂದು ಶತಮಾನೋತ್ಸವದ ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ಏಳಿಗೆಗೆ ಶ್ರಮಿಸಿದ ಮಾಜಿ ಅಧ್ಯಕ್ಷರನ್ನು ಹಾಗೂ ಹಿರಿಯ ಆಡಳಿತ ಮಂಡಳಿಯ ಸದಸ್ಯರನ್ನು ಗೌರವಿಸುತ್ತಿರುವುದು ಅತ್ಯಂತ ಶ್ಲಾಘನೀಯ ಸಂಗತಿ, ಎಂದ ಯಡಿಯೂರಪ್ಪ, “ಮರ ಬೃಹತ್ತಾಗಿ ಬೆಳೆದರೂ ಅದರ ಬೇರಿಗೆ ನೀರೆರೆದವರನ್ನು ಮರೆಯಬಾರದು. ಆ ಕೃತಜ್ಞತಾ ಭಾವವೇ ಈ ಸಂಸ್ಥೆಯನ್ನು ಮುಂದಿನ ನೂರು ವರ್ಷಗಳ ಕಾಲ ಕಾಪಾಡುತ್ತದೆ,” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಘದ ಹಾಲಿ ಅಧ್ಯಕ್ಷರಾದ ಬಳ್ಳೇಕೆರೆ ಸಂತೋಷ್ ಅವರ ನೇತೃತ್ವದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಇಡೀ ಸಹಕಾರಿ ಬಂಧುಗಳಿಗೆ ಅವರು ಅಭಿನಂದನೆಗಳನ್ನು ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆದು, ಇಡೀ ನಾಡಿನ ಸಹಕಾರ ಕ್ಷೇತ್ರಕ್ಕೆ ದಿಕ್ಸೂಚಿಯಾಗಲಿ ಹಾಗೂ ಶ್ರೀ ಬಸವೇಶ್ವರರ ಆಶೀರ್ವಾದ ಸದಾ ಸಂಸ್ಥೆಯ ಮೇಲಿರಲಿ ಎಂದುಬಿ.ಎಸ್. ಯಡಿಯೂರಪ್ಪ ಅವರು ಆಶಿಸಿದರು.

ದಿವ್ಯ ಸಾನ್ನಿಧ್ಯ ಮತ್ತು ಗಣ್ಯರ ಉಪಸ್ಥಿತಿ
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಬಾಳೆಹೊನ್ನೂರು ಪೀಠದ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಹಾಗೂ ಉತ್ತರಪ್ರದೇಶದ ವಾರಾಣಸಿಯ ಕಾಶಿ ಪೀಠದ ಶ್ರೀಮತ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ವಿದ್ಯಾವಾಚಸ್ಪತಿ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂಸದರಾದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ, ಮಾಜಿ ಸಂಸದರು ಹಾಗೂ ಮಾಜಿ ಶಾಸಕರಾದ ಆಯನೂರು ಮಂಜುನಾಥ್,ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಳ್ಳೇಕೆರೆ ಸಂತೋಷ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷರಾದ ಎಸ್.ಕೆ. ಮರಿಯಪ್ಪ, ಶಿವಮೊಗ್ಗ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಟಿ.ವಿ. ಶ್ರೀನಿವಾಸ್, ಶಿವಮೊಗ್ಗ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್, ಗೌರವ ಕಾರ್ಯದರ್ಶಿಗಳಾದ ಎಸ್.ಪಿ. ದಿನೇಶ್ ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.






