ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಪ್ರಸ್ತಾಪಕ್ಕೆ ವಿರೋಧ: ಮಧ್ಯ ಕರ್ನಾಟಕದ ಕೇಂದ್ರಬಿಂದು ಶಿವಮೊಗ್ಗದಲ್ಲೇ ಪೀಠ ಸ್ಥಾಪಿಸಲು ರೈತ ಸಂಘ ಹಾಗೂ ವಕೀಲರ ಒಕ್ಕೂಟ ಆಗ್ರಹ
ಶಿವಮೊಗ್ಗ: ಕರಾವಳಿ ಜಿಲ್ಲೆಗಳ ಅನುಕೂಲಕ್ಕಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ (Circuit Bench) ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ಮಧ್ಯ ಕರ್ನಾಟಕದ ಕೇಂದ್ರಬಿಂದುವಾಗಿರುವ ಶಿವಮೊಗ್ಗದಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿ ಜಿಲ್ಲಾ ವಕೀಲರ ಸಂಘ ಆರಂಭಿಸಿರುವ ಅನಿರ್ದಿಷ್ಟಾವಧಿ ಬೃಹತ್ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ವಕೀಲರ ಭವನದ ಮುಂಭಾಗ ನಡೆಯುತ್ತಿರುವ ಈ ಪ್ರತಿಭಟನೆಗೆ ಜಿಲ್ಲೆಯ ವಿವಿಧ ನಾಗರಿಕ ಮತ್ತು ಪ್ರಗತಿಪರ ಸಂಘಟನೆಗಳು ಸಾಥ್ ನೀಡಿದ್ದು, ಇಂದು ಧರಣಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ ಅವರು ಭಾಗವಹಿಸಿ ರೈತ ಸಮುದಾಯದ ಪರವಾಗಿ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
“ಮಂಗಳೂರು ಪೀಠದ ಪ್ರಸ್ತಾಪ ಅವೈಜ್ಞಾನಿಕ”: ಹೆಚ್.ಆರ್. ಬಸವರಾಜಪ್ಪ
ಪ್ರತಿಭಟನಾ ನಿರತ ವಕೀಲರನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಹೆಚ್.ಆರ್. ಬಸವರಾಜಪ್ಪ ಅವರು ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
”ನ್ಯಾಯಕ್ಕಾಗಿ ಅಲೆಯುವ ಸಾಮಾನ್ಯ ಜನರಿಗೆ, ಅದರಲ್ಲೂ ಮುಖ್ಯವಾಗಿ ಹಗಲಿರುಳು ದುಡಿಯುವ ರೈತರಿಗೆ ನ್ಯಾಯಾಲಯದ ಕಲಾಪಗಳು ಕೈಗೆಟುಕುವ ದೂರದಲ್ಲಿರಬೇಕು. ಶಿವಮೊಗ್ಗದಿಂದ ಮಂಗಳೂರಿಗೆ ಇರುವ ಭೌಗೋಳಿಕ ಪರಿಸ್ಥಿತಿ ಮತ್ತು ಘಾಟಿ ರಸ್ತೆಗಳ ಸಂಚಾರ ಅತ್ಯಂತ ಕಠಿಣವಾಗಿದೆ. ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಕರಾವಳಿಯ ಮಂಗಳೂರು ಪೀಠಕ್ಕೆ ಜೋಡಿಸಲು ಹೊರಟಿರುವುದು ತೀರಾ ಅವೈಜ್ಞಾನಿಕ ಕ್ರಮ. ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಈ ನ್ಯಾಯಸಮ್ಮತ ಹೋರಾಟಕ್ಕೆ ನಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ” ಎಂದು ಅವರು ಸ್ಪಷ್ಟಪಡಿಸಿದರು.

ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಅಚಲ ನಿರ್ಧಾರ
ಇತ್ತೀಚೆಗಷ್ಟೇ ಮಂಗಳೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ಅನುಮತಿ ಕೋರಿ ಮುಖ್ಯಮಂತ್ರಿಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವುದು ಈ ಇಡೀ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ನಡೆಗೆ ಶಿವಮೊಗ್ಗದ ವಕೀಲರು ತೀವ್ರ ಆಕ್ಷೇಪ ಎತ್ತಿದ್ದಾರೆ.
ಒಂದು ವೇಳೆ ಮಂಗಳೂರಿನಲ್ಲಿ ಪೀಠ ಸ್ಥಾಪನೆಯಾದರೂ, ಯಾವುದೇ ಕಾರಣಕ್ಕೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪ್ರಕರಣಗಳನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸಬಾರದು. ಮಧ್ಯ ಕರ್ನಾಟಕದ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರಿನ ಜನರಿಗೆ ಅನುಕೂಲವಾಗುವಂತೆ ಶಿವಮೊಗ್ಗ ನಗರದಲ್ಲೇ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕು ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಹಿರಿಯ ವಕೀಲ ಕೆ. ಬಸಪ್ಪಗೌಡ ಹಾಗೂ ವಕೀಲರ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರ ಒತ್ತಾಯಿಸಿದ್ದಾರೆ.
ಈ ಬೃಹತ್ ಧರಣಿಯಲ್ಲಿ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು, ಪ್ರಮುಖ ಪದಾಧಿಕಾರಿಗಳು, ಹಿರಿಯ ನ್ಯಾಯವಾದಿಗಳು ಹಾಗೂ ರೈತ ಸಂಘದ ಪ್ರಮುಖ ಮುಖಂಡರು, ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್, ನಾಗರಿಕ ಹಿತರಕ್ಷಣಾ ವೇದಿಕೆ ಸೇರಿದಂತೆ ನೂರಾರು ಜನ ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.









