ಬೆಂಗಳೂರು: ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಸಶಕ್ತವಾಗಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ವಹಿಸಬೇಕಾದ ಕ್ರಮಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಮಹತ್ವದ ಸಲಹೆ ಹಾಗೂ ಸೂಚನೆಗಳನ್ನು ನೀಡಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.
ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರೊಂದಿಗೆ ನಡೆದ ಉನ್ನತ ಮಟ್ಟದ ಸಭೆಯ ನಂತರ, ರಾಜ್ಯ ಬಿಜೆಪಿ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರ ವಿಶ್ವಾಸ ಗಳಿಕೆಗೆ ಸಂಘಟನಾತ್ಮಕ ಶ್ರಮ
ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಸರ್ವಾಂಗೀಣ ವೈಫಲ್ಯಗಳನ್ನು ಜನರೆದುರು ಎತ್ತಿ ತೋರಿಸಬೇಕು. ಬಿಜೆಪಿ ಮಾತ್ರವೇ ರಾಜ್ಯಕ್ಕೆ ಶ್ರೀರಕ್ಷೆಯಾಗಬಲ್ಲ ಅತ್ಯಂತ ವಿಶ್ವಾಸಾರ್ಹ ಪಕ್ಷ ಎಂಬುದನ್ನು ಜನಸಾಮಾನ್ಯರ ಮನಸ್ಸಿನಲ್ಲಿ ಮೂಡಿಸಲು ಪ್ರತಿಯೊಬ್ಬರೂ ಸಂಘಟನಾತ್ಮಕವಾಗಿ ಶ್ರಮಿಸಬೇಕು ಮತ್ತು ಪಕ್ಷಕ್ಕಾಗಿ ಕಟಿಬದ್ಧರಾಗಿ ದುಡಿಯಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ಕರೆ ನೀಡಿದ್ದಾರೆ ಎಂದು ಸಿ.ಟಿ.ರವಿ ವಿವರಿಸಿದರು.
ನಿತಿನ್ ನಬಿನ್ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕರ್ನಾಟಕಕ್ಕೆ ನೀಡಿದ ಮೊದಲ ಅಧಿಕೃತ ಭೇಟಿ ಇದಾಗಿದೆ. ಈ ಸಂದರ್ಭದಲ್ಲಿ ಅವರು ಪಕ್ಷದ ಸಂಸದರು, ಶಾಸಕರು ಮತ್ತು ಜಿಲ್ಲಾಧ್ಯಕ್ಷರ ಮಟ್ಟದ ಪ್ರಮುಖ ಪದಾಧಿಕಾರಿಗಳೊಂದಿಗೆ ಸುದೀರ್ಘ ಸಂವಾದ ನಡೆಸಿದರು.
“ಪಕ್ಷದ ಲಕ್ಷಾಂತರ ಕಾರ್ಯಕರ್ತರ ಅವಿರತ ಪರಿಶ್ರಮದಿಂದಾಗಿ ಇಂದು ದೇಶದ 22ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 400 ಕ್ಕೂ ಹೆಚ್ಚು ಸಂಸದರು ಮತ್ತು 2000 ಕ್ಕೂ ಹೆಚ್ಚು ಶಾಸಕರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಇದು ದೇಶದ ಜನತೆ ನಮ್ಮ ಮೇಲಿಟ್ಟಿರುವ ಅಚಲ ವಿಶ್ವಾಸಕ್ಕೆ ಸಾಕ್ಷಿ. ಇದೇ ನಂಬಿಕೆಯನ್ನು ಮುಂದಿನ ಚುನಾವಣೆಗಳಲ್ಲೂ ಕಾಯ್ದುಕೊಳ್ಳಬೇಕು. ಪ್ರತಿಯೊಬ್ಬ ಮುಖಂಡರು ಮತ್ತು ಶಾಸಕರು ಕಾರ್ಯಕರ್ತರೊಂದಿಗೆ ಆತ್ಮೀಯ ಸಂಬಂಧ ಹೊಂದಿರಬೇಕು. ಜನರೊಂದಿಗೆ ನಿರಂತರ ಸಂವಾದ ನಡೆಸಿ, ಜನಪರ ಕಾರ್ಯಗಳು ಹಾಗೂ ಹೋರಾಟಗಳ ಮೂಲಕವೇ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು,”
– ರಾಷ್ಟ್ರೀಯ ಅಧ್ಯಕ್ಷರ ಕಿವಿಮಾತು ಬಿಚ್ಚಿಟ್ಟ ಸಿ.ಟಿ.ರವಿ

ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಸರಮಾಲೆ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ, ಯಾವ ವಿಶ್ವಾಸದ ಮೇಲೆ ಅಧಿಕಾರಕ್ಕೆ ಬಂದಿತ್ತೋ, ಆ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ಪ್ರಮುಖ ವೈಫಲ್ಯಗಳನ್ನು ಹೇಳಿದರು:
- ವ್ಯಾಪಕ ಭ್ರಷ್ಟಾಚಾರ: ಹಿಂದೆ ಭ್ರಷ್ಟಾಚಾರದ ವಿರುದ್ಧ ದೊಡ್ಡ ಧ್ವನಿಯಲ್ಲಿ ಮಾತನಾಡಿದವರ ಆಡಳಿತದಲ್ಲಿ ಇಂದು ಇಡೀ ಸಚಿವ ಸಂಪುಟವೇ ಭ್ರಷ್ಟಾಚಾರದ ಕೂಪದಲ್ಲಿದೆ. ಬಹುತೇಕ ಸಚಿವರ ಮೇಲೆ ಗಂಭೀರ ಆರೋಪಗಳಿದ್ದು, ಸ್ವತಃ ಮುಖ್ಯಮಂತ್ರಿಗಳೂ ಇದರಿಂದ ಮುಕ್ತರಾಗಿಲ್ಲ.
- ಬೆಲೆ ಏರಿಕೆಯ ಬಿಸಿ: ಜನರ ಬದುಕನ್ನು ಹಸನು ಮಾಡುತ್ತೇವೆ ಎಂದವರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದ್ದಾರೆ.
- ಗ್ಯಾರಂಟಿ ಹೆಸರಿನ ಗೊಂದಲ: ಸರ್ಕಾರ ಕೇವಲ ಪ್ರಚಾರಕ್ಕಾಗಿ ‘ಗ್ಯಾರಂಟಿ’ ಯೋಜನೆಗಳ ಬೆನ್ನ ಬಿದ್ದಿದೆ. ಆದರೆ ಜನರ ಬದುಕಿಗೆ ಯಾವುದೇ ಗ್ಯಾರಂಟಿ ಇಲ್ಲದಂತಾಗಿದೆ.
- ಕಾನೂನು ಸುವ್ಯವಸ್ಥೆ ಕುಸಿತ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಯುವಜನತೆ ಉದ್ಯೋಗವಿಲ್ಲದೆ ಹತಾಶರಾಗಿದ್ದಾರೆ. ಮಹಿಳೆಯರ ನಾಪತ್ತೆ ಪ್ರಕರಣಗಳು ಸಾರ್ವಕಾಲಿಕ ಹೆಚ್ಚಳ ದಾಖಲಿಸಿವೆ.

“ನಾವೇ ಗೆಲ್ಲುತ್ತೇವೆಂಬ ಭ್ರಮೆಯಲ್ಲಿ ಇರಬೇಡಿ” – ಎಚ್ಚರಿಕೆ
ಕಾಂಗ್ರೆಸ್ ಸರ್ಕಾರದ ವೈಫಲ್ಯಗಳೇ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತವೆ ಎಂದು ಸುಮ್ಮನೆ ಕೂರಬಾರದು ಎಂದು ರಾಷ್ಟ್ರೀಯ ಅಧ್ಯಕ್ಷರು ನಾಯಕರಿಗೆ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ನೆರೆಯ ತಮಿಳುನಾಡಿನ ರಾಜಕೀಯ ಪರಿಸ್ಥಿತಿಯನ್ನು ಅವರು ಉದಾಹರಿಸಿದರು.
”ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದ್ದಾಗ, ಅಲ್ಲಿನ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆಯೇ ಅಧಿಕಾರಕ್ಕೆ ಬರಲಿದೆ ಎಂದು ಭಾವಿಸಲಾಗಿತ್ತು. ಆದರೆ ಅನಿರೀಕ್ಷಿತವಾಗಿ ಟಿವಿಕೆ ಪಕ್ಷವು ಮಧ್ಯೆ ಪ್ರವೇಶಿಸಿ ರಾಜಕೀಯ ದಾಳ ಉರುಳಿಸಿತು. ಕರ್ನಾಟಕದ ಬಿಜೆಪಿ ನಾಯಕರೂ ಸಹ ‘ಮುಂದೆ ನಮ್ಮದೇ ಅಧಿಕಾರ’ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಸುಮ್ಮನೆ ಕೂರಬಾರದು. ದೇಶದಲ್ಲಿ ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಗೆ ಒಂದು ಭರವಸೆಯ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಿದ್ದಾರೋ, ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತಕ್ಕೆ ಬಿಜೆಪಿಯೇ ಅತ್ಯುತ್ತಮ ಪರ್ಯಾಯ ಎಂದು ಜನರೇ ಭಾವಿಸುವಂತೆ ನಾವು ಕೆಲಸ ಮಾಡಬೇಕು” ಎಂದು ನಿತಿನ್ ನಬಿನ್ ನಿರ್ದೇಶನ ನೀಡಿದ್ದಾರೆ.

ಆಯಾ ಕ್ಷೇತ್ರಗಳ ಮಟ್ಟದಲ್ಲಿ ‘ಆರೋಪಪಟ್ಟಿ’ ಸಿದ್ಧತೆ
ಕಾಂಗ್ರೆಸ್ ವೈಫಲ್ಯಗಳ ವಿರುದ್ಧ ನಿರಂತರವಾಗಿ ಜಂಟಿಯಾಗಿ (ಟೀಮ್ ವರ್ಕ್) ಹೋರಾಟ ನಡೆಸಬೇಕು. ಮುಂಬರುವ ದಿನಗಳಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಆಡಳಿತ ವೈಫಲ್ಯ, ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳ ಕುರಿತು ಅಧಿಕೃತ ‘ಆರೋಪಪಟ್ಟಿ’ (Charge sheet) ಸಿದ್ಧಪಡಿಸಿ ಜನರ ಮುಂದಿಡಲು ಬೃಹತ್ ಯೋಜನೆ ರೂಪಿಸಲಾಗುತ್ತಿದೆ.
ಕರ್ನಾಟಕವು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲೇ ಅತ್ಯಂತ ಬಲಿಷ್ಠ ಸಾಂಘಿಕ ಶಕ್ತಿ ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಜನಪರ ಹೋರಾಟ ತೀವ್ರಗೊಳಿಸಿದರೆ, ಜನರೇ ನಮಗೆ ಅಧಿಕಾರ ನೀಡುವ ಶಕ್ತಿ ಕೊಡುತ್ತಾರೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.
ಪ್ರಾದೇಶಿಕ ಅಸ್ಮಿತೆ ಹಾಗೂ ರಾಷ್ಟ್ರೀಯ ಸಮಗ್ರತೆ
ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಪಕ್ಷ ಮತ್ತು ಸಾರ್ವಜನಿಕರ ಹಿತರಕ್ಷಣೆಗಾಗಿ ಕೆಲಸ ಮಾಡಲು ಸೂಚಿಸಲಾಗಿದೆ. ರಾಜ್ಯದಲ್ಲಿ ತಲೆಯೆತ್ತುತ್ತಿರುವ ಆರಾಜಕ ಶಕ್ತಿಗಳ ಬಗ್ಗೆಯೂ ನಿಗಾ ಇಡಬೇಕಿದೆ. ಕರ್ನಾಟಕದ ವಿಶಿಷ್ಟ ಪ್ರಾದೇಶಿಕ ಅಸ್ಮಿತೆಯ ಜೊತೆಗೆ ರಾಷ್ಟ್ರದ ಗೌರವ ಮತ್ತು ಸಮಗ್ರತೆಗೆ ಧಕ್ಕೆಯಾಗದಂತೆ ಸಮತೋಲನ ಕಾಯ್ದುಕೊಂಡು ಕೆಲಸ ಮಾಡಲು ರಾಷ್ಟ್ರೀಯ ಅಧ್ಯಕ್ಷರು ಮಾರ್ಗದರ್ಶನ ನೀಡಿದ್ದಾರೆ ಎಂದರು.
ಮುಂಬರುವ ಉಪಚುನಾವಣೆಗಳೇ ಮೊದಲ ಗುರಿ
ರಾಷ್ಟ್ರೀಯ ಅಧ್ಯಕ್ಷರ ಮುಂದಿನ ಮೂರು ದಿನಗಳ ಕರ್ನಾಟಕ ಪ್ರವಾಸದ ಅವಧಿಯಲ್ಲಿ ಪಕ್ಷದ ಬಲವರ್ಧನೆ ಕುರಿತು ಮತ್ತಷ್ಟು ವಿಸ್ತೃತ ಚರ್ಚೆಗಳು ನಡೆಯಲಿವೆ. ಸದ್ಯಕ್ಕೆ ಎದುರಾಗಲಿರುವ ವಿಧಾನ ಪರಿಷತ್ ಚುನಾವಣೆ, ವಿಧಾನಸಭೆ ಉಪಚುನಾವಣೆಗಳು ಹಾಗೂ ಸ್ಥಳೀಯ ಸಂಸ್ಥೆಗಳ (ಜಿಬಿಎ) ಚುನಾವಣೆಗಳ ಕಡೆಗೆ ಹೆಚ್ಚಿನ ಗಮನ ಹರಿಸಲು ಸೂಚಿಸಲಾಗಿದ್ದು, ಗೆಲುವಿಗಾಗಿ ವಿಶೇಷ ಕಾರ್ಯತಂತ್ರ ರೂಪಿಸಲು ಕೋರ್ ಕಮಿಟಿ ಸಭೆಯಲ್ಲಿ ಅವಲೋಕನ ನಡೆಸಲಾಗುವುದು ಎಂದು ಸಿ.ಟಿ.ರವಿ ಮಾಹಿತಿ ನೀಡಿದರು.
ಕಾಂಗ್ರೆಸ್‌ಗೆ ‘ವಿರೋಧಿಸುವ ಸಿಂಡ್ರೋಮ್’ ಕಾಡುತ್ತಿದೆ!
ಇದೇ ಸಂದರ್ಭದಲ್ಲಿ ಎಸ್‌ಐಆರ್ (SIR) ವಿಚಾರವಾಗಿ ಕಾಂಗ್ರೆಸ್ ನಾಯಕರ ನಡೆಯನ್ನು ಸಿ.ಟಿ.ರವಿ ತೀವ್ರವಾಗಿ ವ್ಯಂಗ್ಯವಾಡಿದರು. “ಕಾಂಗ್ರೆಸ್ ಪಕ್ಷಕ್ಕೆ ಎಲ್ಲವನ್ನೂ ಕಣ್ಣು ಮುಚ್ಚಿ ವಿರೋಧಿಸುವ ದೊಡ್ಡ ಕಾಯಿಲೆ (ಸಿಂಡ್ರೋಮ್) ಅಂಟಿಕೊಂಡಿದೆ. ಹಿಂದೆ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಎಸ್‌ಐಆರ್ ರಚನೆಯಾದರೆ ಅದು ಸಂವಿಧಾನಬದ್ಧ ಮತ್ತು ಸರಿ ಎನ್ನುವ ಕಾಂಗ್ರೆಸ್, ಅದೇ ಕ್ರಮವನ್ನು ಬಿಜೆಪಿ ಸರ್ಕಾರ ಕೈಗೊಂಡರೆ ತಪ್ಪು ಎನ್ನುತ್ತದೆ. ಕಾಂಗ್ರೆಸ್‌ನ ಇಂತಹ ಸಂವಿಧಾನ ವಿರೋಧಿ ಮತ್ತು ದ್ವಂದ್ವ ನಿಲುವುಗಳನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ,” ಎಂದು ಅವರು ಟೀಕಿಸಿದರು.






