ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕೇವಲ ಲಾಭದಾಸೆ ಬೇಡ, ಬಡವರ ಪ್ರಗತಿಗಾಗಿ ಬ್ಯಾಂಕುಗಳು ಶ್ರಮಿಸಲಿ: ಸಾಲ ನೀಡಿಕೆಯಲ್ಲಿ ಜವಾಬ್ದಾರಿಯ ಜತೆಗೆ ಸಮಾಜ ಕಟ್ಟುವ ಸಂಸ್ಕಾರವೂ ಬೆಳೆಯಲಿ – ಶ್ರೀ ತರಳಬಾಳು ಜಗದ್ಗುರುಗಳು

On: May 24, 2026 8:27 PM
Follow Us:

ಮಲೇಬೆನ್ನೂರು: “ಸಾಲ ಕೊಡುವ ಮತ್ತು ಪಡೆಯುವ ವ್ಯವಹಾರವು ಸಮಾಜದಲ್ಲಿ ಆದಿ-ಅನಾದಿ ಕಾಲದಿಂದಲೂ ನಡೆದುಬಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ರಾಜ-ಮಹಾರಾಜರ ಆಳ್ವಿಕೆಯ ಕಾಲದಲ್ಲಿಯೂ ಸಾಲ ನೀಡಿ, ಅದನ್ನು ಬಡ್ಡಿ ಸಮೇತ ವಸೂಲಿ ಮಾಡುವ ಪದ್ಧತಿ ಜಾರಿಯಲ್ಲಿತ್ತು. ಆದರೆ ಇಂದಿನ ಆಧುನಿಕ ದಿನಗಳಲ್ಲಿ ಕೇವಲ ಲಾಭದ ಆಸೆಗಾಗಿ ಬ್ಯಾಂಕುಗಳು, ಸಹಕಾರಿ ಸಂಘಗಳು ಹಾಗೂ ಸ್ವಸಹಾಯ ಸಂಘಗಳು ಜನ್ಮತಾಳುತ್ತಿವೆ. ಇಂತಹ ಹಣಕಾಸು ಸಂಸ್ಥೆಗಳು ಕೇವಲ ಲಾಭದ ಕಡೆಗೆ ಗಮನ ಹರಿಸದೆ, ಆರ್ಥಿಕವಾಗಿ ಹಿಂದುಳಿದ ಅನ್ನದಾತರು, ಬಡವರು ಮತ್ತು ಸಣ್ಣ ವ್ಯಾಪಾರಿಗಳಿಗೆ ಸೌಜನ್ಯದಿಂದ ಸಾಲ ನೀಡಿ, ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು” ಎಂದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕಿವಿಮಾತು ಹೇಳಿದರು.

​ಹೊಳೆಸಿರಿಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಮಲೆಬೆನ್ನೂರಿನ ಶಿವ ವಿವಿಧೋದ್ದೇಶ ಸಹಕಾರ ಸಂಘ’ದ ಶಾಖಾ ಕಚೇರಿಯ ಸುಸಜ್ಜಿತ ಕಟ್ಟಡವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.

12ನೇ ಶತಮಾನದ ಜಗದ್ಜ್ಯೋತಿ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿ ಮಾತನಾಡಿದ ಶ್ರೀಗಳು, “ಸಾಲವನ್ನು ಕೊಡುವಾಗ ಅತ್ಯಂತ ಎಚ್ಚರಿಕೆಯಿಂದ ನೀಡಬೇಕು. ಕೊಡು-ಕೊಳ್ಳುವ ಉತ್ತಮ ಆರ್ಥಿಕ ಸ್ಥಿತಿಯುಳ್ಳ ಅರ್ಹ ವ್ಯಕ್ತಿಗಳಿಗೆ ಸಾಲ ನೀಡಿದಾಗ ಮಾತ್ರ ಹಣಕಾಸು ಸಂಸ್ಥೆಗಳು ಸುಸ್ಥಿರವಾಗಿ ಉಳಿದುಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಸಂಸ್ಥೆಗಳು ದಿವಾಳಿಯಾಗುವುದರಲ್ಲಿ ಯಾವುದೇ ಎರಡು ಮಾತಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಹಕಾರ ಸಂಘದ ಪದಾಧಿಕಾರಿಗಳು ಸಾಲ ಮಂಜೂರು ಮಾಡುವಾಗ ತಮ್ಮ ಹೊಣೆಗಾರಿಕೆಯನ್ನು ಮರೆಯಬಾರದು. ಸಾಲ ಪಡೆಯುವವರಿಂದ ಸಂಸ್ಥೆಯಲ್ಲಿ ಸೂಕ್ತ ಠೇವಣಿ ಇರಿಸಿಕೊಂಡು, ನಿಯಮಾನುಸಾರ ಸಾಲ ನೀಡಬೇಕು” ಎಂದು ಎಚ್ಚರಿಸಿದರು.

📌 ಶ್ರೀ ಜಗದ್ಗುರುಗಳ ಸಂದೇಶ

“ಒಂದು ಕಾಲದಲ್ಲಿ ‘ಕೊಟ್ಟವನು ಕೋಡಂಗಿ, ಇಸ್ಕೊಂಡವನು ವೀರಭದ್ರ’ ಎನ್ನುವ ಗಾದೆ ಮಾತಿತ್ತು. ಆದರೆ ಇಂದು ಕಾಲ ಬದಲಾಗಿದೆ. ಸಹಕಾರಿ ಸಂಘ ಹಾಗೂ ಬ್ಯಾಂಕುಗಳಲ್ಲಿ ಸಾಲ ಪಡೆದು ಉದ್ದೇಶಪೂರ್ವಕವಾಗಿ ಮರುಪಾವತಿ ಮಾಡದವರಿಗೆ ಸರ್ಕಾರವು ಕಠಿಣ ಕಾನೂನುಗಳ ಮೂಲಕ ತಕ್ಕ ಪಾಠ ಕಲಿಸುತ್ತಿದೆ. ಗ್ರಾಹಕರು ತಾವು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿದರೆ ಗ್ರಾಹಕರಿಗೂ ಅನುಕೂಲವಾಗುತ್ತದೆ ಮತ್ತು ಬ್ಯಾಂಕ್ ಕೂಡ ಲಾಭದಲ್ಲಿ ಮುನ್ನಡೆಯುತ್ತದೆ.”

— ಶ್ರೀ ತರಳಬಾಳು ಜಗದ್ಗುರುಗಳು

ಇದೇ ಸಂದರ್ಭದಲ್ಲಿ, ಶಿವ ವಿವಿಧೋದ್ದೇಶ ಸಹಕಾರ ಸಂಘವು ಇದುವರೆಗೆ 18 ಕೋಟಿ ರೂ.ಗಳಿಗೂ ಅಧಿಕ ಹಣಕಾಸು ವ್ಯವಹಾರ ನಡೆಸಿ, 2 ಕೋಟಿ ರೂ.ಗಳ ಉಳಿತಾಯ ನಿಧಿ ಹೊಂದಿರುವುದಕ್ಕೆ ಜಗದ್ಗುರುಗಳು ತೀವ್ರ ಸಂತಸ ವ್ಯಕ್ತಪಡಿಸಿ, ಸಂಸ್ಥೆಯ ಪ್ರಗತಿಯನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಶ್ರೀಗಳು, ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಕೇವಲ ಭೌತಿಕ ವಿದ್ಯಾಭ್ಯಾಸ ನೀಡಿದರೆ ಸಾಲದು, ಅದರೊಂದಿಗೆ ನೈತಿಕತೆ, ಮಾನವೀಯ ಮೌಲ್ಯಗಳು ಹಾಗೂ ಉತ್ತಮ ಸಂಸ್ಕಾರಗಳನ್ನು ಕಲಿಸಬೇಕಿದೆ. ಸಮಾಜದಲ್ಲಿ ಒಳ್ಳೆಯ ಭಾವನೆಯನ್ನು ಬಿತ್ತಲು ಪ್ರತಿಯೊಬ್ಬರೂ ಮುಂದಾಗಬೇಕು. ಇದೇ ಗ್ರಾಮದ ಹೆಮ್ಮೆಯ ಪುತ್ರ, ಕಾರ್ಗಿಲ್ ಯುದ್ಧದ ವೀರ ಯೋಧ ಕರ್ನಲ್ ರವೀಂದ್ರನಾಥ್ ಅವರ ಶೌರ್ಯ, ಸಾಹಸ ಹಾಗೂ ದೇಶಪ್ರೇಮದ ಗಾಥೆಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು. ಭಾರತವು ಇಡೀ ಜಗತ್ತಿಗೆ ಶ್ರೇಷ್ಠ ಸಂಸ್ಕೃತಿಯನ್ನು ಧಾರೆ ಎರೆದ ಮಹಾನ್ ದೇಶ ಎಂದು ಹೆಮ್ಮೆಯಿಂದ ಹೇಳಿದರು.

​ಕಾರ್ಯಕ್ರಮವನ್ನು ಉದ್ಘಾಟಿಸಿದ ಹರಿಹರ ಕ್ಷೇತ್ರದ ಶಾಸಕ ಬಿ.ಪಿ. ಹರೀಶ್ ಅವರು ಮಾತನಾಡಿ, “ಸಹಕಾರ ಸಂಘಗಳು ಗ್ರಾಮೀಣ ಭಾಗದ ಮತ್ತು ಆರ್ಥಿಕವಾಗಿ ಹಿಂದುಳಿದ ಅನ್ನದಾತರಿಗೆ, ಕೃಷಿ ಕಾರ್ಮಿಕರಿಗೆ ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ಅವರ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸುತ್ತಿವೆ. ಶಿವ ವಿವಿಧೋದ್ದೇಶ ಸಹಕಾರ ಸಂಘವು ಪಾರದರ್ಶಕ ವ್ಯವಹಾರ ನಡೆಸಿ, ನಿರಂತರ ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿರುವುದು ಇಡೀ ತಾಲೂಕಿಗೆ ಹೆಮ್ಮೆಯ ವಿಷಯ” ಎಂದರು.

​ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಡಾ. ಬಿ. ಚಂದ್ರಶೇಖರ್ ಅವರು ಮಾತನಾಡಿ, “ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರುಗಳಾದ ದಿವಂಗತ ಹೆಚ್.ಜಿ. ಗುರುಸಿದ್ದಪ್ಪ ಹಾಗೂ ದಿವಂಗತ ಗೌಡ್ರ ಸಿದ್ದಬಸಪ್ಪನವರು ಹಾಕಿಕೊಟ್ಟ ದಿವ್ಯ ಮಾರ್ಗದರ್ಶನದಲ್ಲಿ ನಮ್ಮ ಸಂಸ್ಥೆ ಮುನ್ನಡೆಯುತ್ತಿದೆ. ಜಾತಿ-ಮತ ಭೇದವಿಲ್ಲದೆ ಎಲ್ಲಾ ಸಮುದಾಯಗಳ ಜನರ ಸಂಕಷ್ಟಗಳಿಗೆ ಸ್ಪಂದಿಸಿ, ತ್ವರಿತವಾಗಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಪ್ರಸ್ತುತ ಸಂಘವು 3.5 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದೆ. 2019 ರಲ್ಲಿ ಹೊಳೆಸಿರಿಗೆರೆ ಗ್ರಾಮದ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ನಮ್ಮ ಶಾಖೆಯು, ಇಂದು ಕೇವಲ ಕೆಲವೇ ವರ್ಷಗಳಲ್ಲಿ 5 ಗುಂಟೆ ಸ್ವಂತ ಜಾಗದಲ್ಲಿ ಸುಸಜ್ಜಿತ ನೂತನ ಕಟ್ಟಡವನ್ನು ಹೊಂದಲು ಸಾಧ್ಯವಾಗಿದೆ. ಇದಕ್ಕೆ ಸಂಸ್ಥೆಯ ಎಲ್ಲಾ ಷೇರುದಾರರು, ಗ್ರಾಹಕರು ಹಾಗೂ ದಾನಿಗಳ ನಿರಂತರ ಸಹಕಾರವೇ ಕಾರಣ” ಎಂದು ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ, ಮುಂಬರುವ ದಿನಗಳಲ್ಲಿ ಸರ್ವರ ಸಹಕಾರದೊಂದಿಗೆ ಕುಂಬಳೂರು ಗ್ರಾಮದ ಬಳಿ ಇರುವ ಸಂಘದ ಸ್ವಂತ ಜಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸುಸಜ್ಜಿತ ‘ಕಲ್ಯಾಣ ಮಂಟಪ’ ನಿರ್ಮಿಸುವ ಹಿರಿಯ ಆಶಯವನ್ನು ಹೊಂದಿದ್ದೇವೆ ಎಂದು ಅವರು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರ ಮುಖಂಡರಾದ ಎನ್.ಜಿ. ನಾಗನಗೌಡ್ರು, ಮಾಜಿ ಶಾಸಕ ಎಸ್. ರಾಮಪ್ಪ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಮಾಜಿ ಸದಸ್ಯರಾದ ಬಿ.ಎಂ. ವಾಗೀಶಸ್ವಾಮಿ, ಎಂ. ನಾಗೇಂದ್ರಪ್ಪ, ಹರಿಹರ ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಅಮರಾವತಿ ಮಹದೇವಪ್ಪ ಗೌಡ್ರು, ಉಪಾಧ್ಯಕ್ಷ ಹಲಸಬಾಳು ಶಿವಾನಂದಪ್ಪ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಬಿಜೆಪಿ ಗೆಲುವಿಗೆ ರಾಷ್ಟ್ರೀಯ ಅಧ್ಯಕ್ಷರು ಕೊಟ್ಟ ಆ ‘ಒಂದು’ ಎಚ್ಚರಿಕೆ ಏನು? ಸಿ.ಟಿ.ರವಿ ಬಿಚ್ಚಿಟ್ಟ ಸೀಕ್ರೆಟ್!

‘ದಿಲ್ಲಿ ಕೈ’ಗೆ ಎಟಿಎಂ ಆದ ಕರ್ನಾಟಕ: ಕಾಂಗ್ರೆಸ್ ಸರ್ಕಾರದಿಂದ ಜನತೆಗೆ ವಿಶ್ವಾಸದ್ರೋಹ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ವಾಗ್ದಾಳಿ

ಅನುಭವ ಮಂಟಪದ ಸಮಾನತೆಯ ಆಶಯ ಸಾಕಾರಗೊಳ್ಳಲಿ: ರಾಜ್ಯಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ವೀರಶೈವ ಲಿಂಗಾಯತರಿಗೆ ಅವಕಾಶ ನೀಡುವಂತೆ ಪ್ರದೀಪ್ ಕಂಕಣವಾಡಿ ಒತ್ತಾಯ

​ಕೇಂದ್ರದ ಕಡೆ ಬೆರಳು ಮಾಡುವ ಮುನ್ನ ನಿಮ್ಮ ಆಡಳಿತದ ವೈಫಲ್ಯ ನೋಡಿ: ಕಾಂಗ್ರೆಸ್‌ಗೆ ಬಿ.ವೈ. ವಿಜಯೇಂದ್ರ ಎಚ್ಚರಿಕೆ

ರಾಜ್ಯ ಬಿಜೆಪಿಯಲ್ಲಿ ಸಂಘಟನಾ ಸಂಚಲನ: ನಾಳೆ ಬೆಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಎಂಟ್ರಿ!

ಸಿರಿಗೆರೆ ಶ್ರೀ ತರಳಬಾಳು ಜಗದ್ಗುರುಗಳ ದರ್ಶನ ಪಡೆದ ಶಾಸಕ ಸಮರ್ಥ ಶಾಮನೂರು: ‘ಪೂಜ್ಯರ ಹಿತವಚನಗಳೇ ನನ್ನ ಜನಸೇವೆಯ ದಾರಿದೀಪ’

Leave a Comment