ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

​ನಾಗಸಮುದ್ರ ರೈತ ಗೋಲಿಬಾರ್‌ಗೆ 44 ವರ್ಷ:“ಗುಂಡಿಗೆ ಹೆದರಿ ಓಡುವವರಲ್ಲ ರೈತರು; ರಕ್ತ ಕೊಟ್ಟೂ ಸಂಘಟನೆ ಉಳಿಸಿದ್ದೇವೆ” — ಹೆಚ್.ಆರ್. ಬಸವರಾಜಪ್ಪ

On: May 25, 2026 5:03 PM
Follow Us:

ಭದ್ರಾವತಿ: ಕಳೆದ 1982ರ ಮೇ 25ರಂದು ಭದ್ರಾವತಿ ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಅಂದಿನ ಕ್ರೂರ ಸರ್ಕಾರದ ದರ್ಪಕ್ಕೆ ಬಲಿಯಾದ ಅನ್ನದಾತರ 44ನೇ ವರ್ಷದ ಹುತಾತ್ಮ ದಿನಾಚರಣೆಯ ಸಂದರ್ಭದಲ್ಲಿ ರೈತ ಶಕ್ತಿ ಮತ್ತೊಮ್ಮೆ ಘರ್ಜಿಸಿದೆ. ನಾಗಸಮುದ್ರದ ಹುತಾತ್ಮರ ಸ್ಮಾರಕದ ಬಳಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಹಸಿರು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅವರು, “ಗುಂಡಿಗೆ ಹೆದರಿ ಓಡುವವರಲ್ಲ ರೈತರು; ರಕ್ತ ಕೊಟ್ಟೂ ನಮ್ಮ ಹಸಿರು ಸಂಘಟನೆಯನ್ನು ಉಳಿಸಿಕೊಂಡು ಬಂದಿದ್ದೇವೆ” ಎಂದು ಅಂದಿನ ಆಡಳಿತಗಾರರ ಅಟ್ಟಹಾಸದ ವಿರುದ್ಧ ಆಕ್ರೋಶ ಹೊರಹಾಕಿದರು.

1982ರ ಮೇ 25ರಂದು ಭದ್ರಾವತಿ ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ನಡೆದ ಪೊಲೀಸ್ ಗೋಲಿಬಾರಿಯಲ್ಲಿ ಸನ್ಯಾಸಿಕೊಡಮಗ್ಗಿಯ ಬಸವನಗೌಡ, ನಾಗಸಮುದ್ರದ ವಯೋವೃದ್ಧ ಮಲ್ಲಪ್ಪ ಹಾಗೂ ಬಾಲಕ ನಟರಾಜ್ ಸೇರಿದಂತೆ ಮೂವರು ರೈತರು ಹುತಾತ್ಮರಾಗಿದ್ದರು. ರೈತರ ಹಕ್ಕುಗಳಿಗಾಗಿ ನಡೆದ ಆ ದುರಂತ ಘಟನೆಗೆ ಇಂದು 44 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಗಸಮುದ್ರದಲ್ಲಿರುವ ಹುತಾತ್ಮರ ಸ್ಮಾರಕದ ಬಳಿ ಭಾವಪೂರ್ಣವಾಗಿ ಹುತಾತ್ಮ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅವರು, ಹುತಾತ್ಮರ ಸ್ಮರಣೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. “ರೈತರ ಹಕ್ಕುಗಳಿಗಾಗಿ ನಡೆದ ಹೋರಾಟಗಳು ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿವೆ. ನಾಗಸಮುದ್ರ ಗೋಲಿಬಾರ್ ಕೇವಲ ಒಂದು ಘಟನೆ ಅಲ್ಲ; ಅದು ರೈತರ ಬದುಕು, ಹಕ್ಕು ಹಾಗೂ ಅಸ್ತಿತ್ವಕ್ಕಾಗಿ ನಡೆದ ತ್ಯಾಗದ ಸಂಕೇತ,” ಎಂದು ಅವರು ಹೇಳಿದರು.

​ಅಂದು ಅಧಿಕಾರದ ಮದದಲ್ಲಿದ್ದ ಕಾಂಗ್ರೆಸ್ ಸರ್ಕಾರ ರೈತರ ಧ್ವನಿಯನ್ನು ಹತ್ತಿಕ್ಕಲು ನಡೆಸಿದ ಸಂಚನ್ನು ಬಯಲು ಮಾಡಿದ ಹೆಚ್.ಆರ್. ಬಸವರಾಜಪ್ಪ, “ಅಪ್ರತಿಮವಾಗಿ ಬೆಳೆಯುತ್ತಿದ್ದ ರೈತ ಸಂಘಟನೆಯನ್ನು ಸದೆಬಡಿಯಲು ಅಂದಿನ ಸರ್ಕಾರ ‘ರೈತ ಕಾರ್ಮಿಕ ಸಂಘ’ ಎಂಬ ಪರ್ಯಾಯ ಕೂಸನ್ನು ಹುಟ್ಟುಹಾಕಲು ಯತ್ನಿಸಿತ್ತು. ಸರ್ಕಾರದ ಈ ಒಡೆದು ಆಳುವ ಕುತಂತ್ರದ ವಿರುದ್ಧ ನಾಗಸಮುದ್ರದ ಕಲಿಗಳು ಸಿಡಿದೆದ್ದಿದ್ದರು. ಇಡೀ ರಸ್ತೆಯನ್ನೇ ಬಂದ್ ಮಾಡಿ ಸರ್ಕಾರದ ವಿರುದ್ಧ ಯುದ್ಧ ಸಾರಿದ್ದರು. ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಮೊದಲು ಅಶ್ರುವಾಯು ಬಿಟ್ಟರು. ಕಣ್ಣುಗಳು ಉರಿದು ರಕ್ತದಂತಾಗುತ್ತಿದ್ದರೂ ಅನ್ನದಾತರು ಇಂಚೂ ಕದಲದೆ ಹೋರಾಡುತ್ತಿದ್ದಾಗ, ಹೇಡಿ ಪೊಲೀಸರು ಯಾವುದೇ ಮುನ್ಸೂಚನೆ ಇಲ್ಲದೆ ನೇರವಾಗಿ ರೈತರ ಎದೆಗೆ ಗುಂಡಿಕ್ಕಲು ಆರಂಭಿಸಿದರು” ಎಂದು ಗುಡುಗಿದರು.

​ಅಂದಿನ ಕರಾಳ ಹತ್ಯಾಕಾಂಡವನ್ನು ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟ ಅವರು, “ಪೊಲೀಸರ ಗುಂಡಿನ ದಾಳಿಗೆ ಬಾಲಕ ನಟರಾಜ್ ಕಣ್ಣೆದುರೇ ರಕ್ತದ ಮಡುವಿನಲ್ಲಿ ಕುಸಿದು ಬಿದ್ದ. ಬಾಯಾರಿ ಒದ್ದಾಡುತ್ತಿದ್ದ ಆ ಬಾಲಕನಿಗೆ ಕನಿಷ್ಠ ನೀರು ಕುಡಿಸಲು ಧಾವಿಸಿದ ನಾಗಸಮುದ್ರದ ವಯೋವೃದ್ಧ ಮಲ್ಲಪ್ಪ ಹಾಗೂ ಸನ್ಯಾಸಿಕೊಡಮಗ್ಗಿ ಬಸವನಗೌಡ ಅವರ ಮೇಲೂ ಈ ರಾಕ್ಷಸ ಪೊಲೀಸರು ದಯೆ ಇಲ್ಲದೆ ಗುಂಡು ಹಾರಿಸಿದರು. ಒಬ್ಬರಿಗೊಬ್ಬರು ನೆರವಾಗಲು ಹೋದ ಆ ಮೂವರೂ ಅಪ್ರತಿಮ ವೀರರನ್ನು ಅಂದಿನ ಸರ್ಕಾರ ನಡುರಸ್ತೆಯಲ್ಲೇ ಬಲಿಪಡೆಯಿತು” ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇವಲ ನಾಗಸಮುದ್ರ ಮಾತ್ರವಲ್ಲ, ರಾಜ್ಯದಾದ್ಯಂತ ತಮ್ಮ ಹಕ್ಕುಗಳಿಗಾಗಿ ಹೋರಾಡಿ ಇದುವರೆಗೆ 156 ಅಮಾಯಕ ರೈತರು ಹುತಾತ್ಮರಾಗಿದ್ದಾರೆ ಎಂದು ಅವರು ಸರ್ಕಾರದ ರಕ್ತಪಿಪಾಸು ನೀತಿಯನ್ನು ಖಂಡಿಸಿದರು.

“ಕೇವಲ ಭದ್ರಾವತಿ ಮಾತ್ರವಲ್ಲದೆ ನರಗುಂದ, ನವಲಗುಂದ, ನಿಪ್ಪಾಣಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ನಡೆದ ಇಂತಹ ಹತ್ತಾರು ಸರಣಿ ಗೋಲಿಬಾರ್‌ಗಳಲ್ಲಿ ಇದುವರೆಗೆ ಒಟ್ಟು 156 ಜನ ರೈತರು ತಮ್ಮ ಹಕ್ಕುಗಳಿಗಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ” ಎಂದು ನೆನಪಿಸಿಕೊಂಡರು. ಇಂದು ನಾವು ಅನುಭವಿಸುತ್ತಿರುವ ರೈತ ಸೌಲಭ್ಯಗಳ ಹಿಂದೆ ಇಂತಹ ನೂರಾರು ಹೋರಾಟಗಾರರ ರಕ್ತವಿದೆ ಎಂದು ಹೆಚ್.ಆರ್.ಬಸವರಾಜಪ್ಪ ತಿಳಿಸಿದರು.

ಹುತಾತ್ಮರ ಸ್ಮಾರಕದ ಬಳಿ ರೈತರು ಹಾಗೂ ಸಂಘಟನೆಯ ಪದಾಧಿಕಾರಿಗಳು ಮೌನಾಚರಣೆ ನಡೆಸಿ, ರೈತರ ಹಕ್ಕುಗಳಿಗಾಗಿ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪ ಮಾಡಿದರು.

​ಈ ಸಂದರ್ಭದಲ್ಲಿ ಹಸಿರು ಶಾಲು ಧರಿಸಿದ ನೂರಾರು ರೈತ ಸಂಘದ ಮುಖಂಡರು, ತಾಲೂಕು ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮತ್ತು ನಾಗಸಮುದ್ರ ಗ್ರಾಮದ ಹಿರಿಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹುತಾತ್ಮರಿಗೆ ಗೌರವ ಸಮರ್ಪಿಸಿದರು. ಅಮಾಯಕ ರೈತರ ಬಲಿದಾನದ ಈ ದಿನ ಇಂದಿಗೂ ತಾಲೂಕಿನ ರೈತ ಹೋರಾಟದ ಇತಿಹಾಸದಲ್ಲಿ ಒಂದು ಮರೆಯಲಾಗದ ಕರಾಳ ಅಧ್ಯಾಯವಾಗಿ ಉಳಿದಿದೆ.

ಈ ವರ್ಷ ಮೇ 26ರಂದು ಕೇವಲ 20 ನಿಮಿಷ ಸುರಿದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ ಭಾರೀ ಅನಾಹುತ ಸಂಭವಿಸಿದೆ. ಅಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ 32 ಹಳ್ಳಿಗಳಲ್ಲಿ ಸುಮಾರು 11,35,686 ಅಡಿಕೆ ಮರಗಳು, 6,200 ತೆಂಗಿನ ಮರಗಳು, 6,235 ಬಾಳೆಗಿಡಗಳು, 34 ಮಾವಿನ ಮರಗಳು ಹಾಗೂ 583 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ ಎಂದು ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಹೊಳೆಹೊನ್ನೂರು, ಕೂಡ್ಲಿಗೆರೆ, ಹೊಳಲೂರು ಹೋಬಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅಡಿಕೆ, ತೆಂಗು, ಬಾಳೆ ಬೆಳೆಗಳಿಗೆ ಮತ್ತು ಮನೆಗಳಿಗೆ ತೀವ್ರ ಹಾನಿಯಾಗಿದೆ. ಇನ್ನೂ ಅನೇಕ ಗ್ರಾಮಗಳಲ್ಲಿ ಸಮಗ್ರ ಸಮೀಕ್ಷೆ ಕಾರ್ಯ ಪೂರ್ಣಗೊಂಡಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಎಲ್ಲಾ ಹಾನಿಗೊಳಗಾದ ಪ್ರದೇಶಗಳಲ್ಲಿ ಸಮಗ್ರ ಸಮೀಕ್ಷೆ ನಡೆಸಿ ನೈಜ ವರದಿ ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿ (SDRF) ಮಾರ್ಗಸೂಚಿಗಳ ಪ್ರಕಾರ ಅಡಿಕೆ ಹಾಗೂ ತೆಂಗಿನ ಮರಗಳಿಗೆ ಕೇವಲ ಅಲ್ಪ ಪ್ರಮಾಣದ ಪರಿಹಾರ ಮಾತ್ರ ನೀಡಲಾಗುತ್ತಿದೆ. ಬಾಳೆ, ಮಾವು ಹಾಗೂ ಮನೆ ಹಾನಿಗೂ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. “ರೈತರು ವರ್ಷಪೂರ್ತಿ ದುಡಿದು ಬೆಳೆ ಬೆಳೆಸುತ್ತಾರೆ. ಆದರೆ ಪ್ರಕೃತಿ ವಿಕೋಪದಿಂದ ಎಲ್ಲವನ್ನೂ ಕಳೆದುಕೊಂಡಾಗ ಸಿಗುತ್ತಿರುವ ಪರಿಹಾರ ಮೊತ್ತ ಅತ್ಯಂತ ತೀರಾ ಕಡಿಮೆ. ಇದು ಸಂಕಷ್ಟದಲ್ಲಿರುವ ರೈತರಿಗೆ ನೆರವಿಗಿಂತ ನಿರ್ಲಕ್ಷ್ಯದ ಸಂಕೇತವಾಗಿ ಪರಿಣಮಿಸಿದೆ,” ಎಂದು ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಆದ್ದರಿಂದ ಈ ಬಾರಿ ಸಂಭವಿಸಿರುವ ಪ್ರಕೃತಿ ವಿಕೋಪವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತುರ್ತು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು. ಕನಿಷ್ಠ ಒಂದು ಎಕರೆಗೆ 1 ಲಕ್ಷ ರೂ. ಪರಿಹಾರ ಹಾಗೂ ಮನೆ ಹಾನಿಗೆ ಹಿಂದೆ ನೀಡಿದ ಮಾದರಿಯಲ್ಲಿ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಇದೇ ವೇಳೆ ಪ್ರಸ್ತುತ ಜಾರಿಯಲ್ಲಿರುವ NDRF ಹಾಗೂ SDRF ಮಾರ್ಗಸೂಚಿಗಳನ್ನು ಕನಿಷ್ಠ 20 ಪಟ್ಟು ಹೆಚ್ಚಳ ಮಾಡಿ ರೈತರಿಗೆ ವಾಸ್ತವಿಕ ಪರಿಹಾರ ದೊರಕುವಂತೆ ತಿದ್ದುಪಡಿ ಮಾಡಬೇಕೆಂದೂ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಟಿ.ಎಂ. ಚಂದ್ರಪ್ಪ ಮತ್ತು ಹಿಟ್ಟೂರು ರಾಜು, ಮಹಿಳಾ ಸಂಚಾಲಕರಾದ ಭಾಗ್ಯ ರಾಘವೇಂದ್ರ, ಜಿಲ್ಲಾಧ್ಯಕ್ಷರಾದ ಕೆ. ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷರಾದ ಪಿ. ಶೇಖರಪ್ಪ ಹಾಗೂ ಡಿ.ಎಸ್. ಜಯಣ್ಣ, ಜಿಲ್ಲಾ ಹಸಿರು ಸೇನೆ ಸಂಚಾಲಕರಾದ ಎಂ.ಡಿ. ನಾಗರಾಜ್, ಶಿವಮೊಗ್ಗ ತಾಲೂಕು ಅಧ್ಯಕ್ಷರಾದ ಸಿ. ಚಂದ್ರಪ್ಪ, ಭದ್ರಾವತಿ ತಾಲೂಕು ಅಧ್ಯಕ್ಷರಾದ ಜಿ.ಎನ್. ಪಂಚಾಕ್ಷರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಬಿ. ಹನುಮಂತಪ್ಪ ಹಾಗೂ ತಾಲೂಕು ಪದಾಧಿಕಾರಿಗಳಾದ ಮಂಜಪ್ಪ, ಘೋರಪಡೆ ನಾಗರಾಜ್, ಭೋಜರಾಜ್ ಜಗನಾಥ್, ರವಿ, ಮಲ್ಲೇಶಪ್ಪ, ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

​”ಭಾರತದ ಯುವಶಕ್ತಿಗೆ ಮೋದಿಯವರೇ ಭರವಸೆ”: ನಿತಿನ್ ನಬಿನ್

ಶಿವಮೊಗ್ಗ ಹೈಕೋರ್ಟ್ ಪೀಠ ಬೇಡಿಕೆಗೆ ಜೆಡಿಎಸ್ ಬೆಂಬಲ: ಪ್ರತಿಭಟನಾ ನಿರತ ವಕೀಲರ ಪರ ಕೆ.ಬಿ. ಪ್ರಸನ್ನಕುಮಾರ್ ಸಾಥ್

ಕಂಠೀರವ ಕ್ರೀಡಾಂಗಣದಲ್ಲಿ ಮೊಳಗಿದ ಹೋರಾಟದ ಧ್ವನಿ: ಕ್ರೀಡಾ ಚೈತನ್ಯದೊಂದಿಗೆ ಪ್ರತಿಧ್ವನಿಸಿದ ಹಕ್ಕೊತ್ತಾಯಗಳ ರಣಕಹಳೆ; ಸರ್ಕಾರಿ ನೌಕರರ ಪಾಲಿನ ‘ಧ್ರುವತಾರೆ’ ಸಿ.ಎಸ್. ಷಡಾಕ್ಷರಿ

ಕೇವಲ ಲಾಭದಾಸೆ ಬೇಡ, ಬಡವರ ಪ್ರಗತಿಗಾಗಿ ಬ್ಯಾಂಕುಗಳು ಶ್ರಮಿಸಲಿ: ಸಾಲ ನೀಡಿಕೆಯಲ್ಲಿ ಜವಾಬ್ದಾರಿಯ ಜತೆಗೆ ಸಮಾಜ ಕಟ್ಟುವ ಸಂಸ್ಕಾರವೂ ಬೆಳೆಯಲಿ – ಶ್ರೀ ತರಳಬಾಳು ಜಗದ್ಗುರುಗಳು

ಬಿಜೆಪಿ ಗೆಲುವಿಗೆ ರಾಷ್ಟ್ರೀಯ ಅಧ್ಯಕ್ಷರು ಕೊಟ್ಟ ಆ ‘ಒಂದು’ ಎಚ್ಚರಿಕೆ ಏನು? ಸಿ.ಟಿ.ರವಿ ಬಿಚ್ಚಿಟ್ಟ ಸೀಕ್ರೆಟ್!

‘ದಿಲ್ಲಿ ಕೈ’ಗೆ ಎಟಿಎಂ ಆದ ಕರ್ನಾಟಕ: ಕಾಂಗ್ರೆಸ್ ಸರ್ಕಾರದಿಂದ ಜನತೆಗೆ ವಿಶ್ವಾಸದ್ರೋಹ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ವಾಗ್ದಾಳಿ

Leave a Comment