ಶಿವಮೊಗ್ಗ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ಪವಿತ್ರವಾದ ಆಯುಧವೆಂದರೆ ಅದು ಪ್ರಜೆಗೆ ಸಂವಿಧಾನ ನೀಡಿರುವ ‘ಮತದಾನದ ಹಕ್ಕು’. ಆದರೆ, ಪ್ರಸ್ತುತ ಜಾರಿಗೆ ಬರುತ್ತಿರುವ SIR (Special Electoral Roll Revision / ತಂತ್ರಜ್ಞಾನ ಆಧಾರಿತ ಮತದಾರರ ಪಟ್ಟಿ ಪರಿಷ್ಕರಣೆ) ನಿಯಮಗಳು ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಬುಡಮೇಲು ಮಾಡುವ ಆತಂಕವನ್ನು ಸೃಷ್ಟಿಸಿವೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ, ಮತದಾರರನ್ನು ವ್ಯವಸ್ಥಿತವಾಗಿ ಪ್ರಕ್ರಿಯೆಯಿಂದ ಹೊರಗಿಡುವ ಈ ‘ಮೂರನೇ ಸುತ್ತಿನ ದಾಳಿ’ಯ ವಿರುದ್ಧ ಕರ್ನಾಟಕ ಈಗ ಪ್ರತಿರೋಧದ ಧ್ವನಿ ಎತ್ತಿದೆ.
‘SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ’ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಎಚ್.ಆರ್. ಬಸವರಾಜಪ್ಪ ಮತ್ತು ವಕೀಲರಾದ ಕೆ.ಪಿ. ಶ್ರೀಪಾಲ್ ಅವರ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಕುರಿತು ಮಹತ್ವದ ಒತ್ತಾಯ ಪತ್ರವೊಂದನ್ನು ಸಲ್ಲಿಸಿದೆ.

SIR ತರುತ್ತಿರುವ ಅನಾಹುತಗಳು ಮತ್ತು ಬದಲಾಗಬೇಕಾದ 5 ಪ್ರಮುಖ ಅಂಶಗಳನ್ನು ಮುಂದಿಟ್ಟಿದೆ
ಪ್ರಸ್ತುತ ಜಾರಿಯಲ್ಲಿರುವ SIR ನಿಯಮಾವಳಿಗಳು ಪಾರದರ್ಶಕತೆಯಿಂದ ಕೂಡಿಲ್ಲ ಮತ್ತು ಸಾಮಾನ್ಯ ಜನರಿಗೆ ಮಾರಕವಾಗಿವೆ. ಭಾರತೀಯ ಚುನಾವಣಾ ಆಯೋಗಕ್ಕೆ (ECI) ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಐದು ಮೂಲಭೂತ ತಿದ್ದುಪಡಿಗಳನ್ನು ಒತ್ತಾಯ ಮಾಡಿದೆ.
1. ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಹೆಸರಿನ ಅವೈಜ್ಞಾನಿಕ ತಂತ್ರಜ್ಞಾನಕ್ಕೆ ಬ್ರೇಕ್
ಮತದಾರರ ಪಟ್ಟಿಯಲ್ಲಿ ತಂತ್ರಜ್ಞಾನದ ಹೆಸರಿನಲ್ಲಿ ತರಲಾಗಿರುವ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ (Logical Discrepancy) ಅತ್ಯಂತ ಅಪಾರದರ್ಶಕ ಮತ್ತು ದುರುದ್ದೇಶಪೂರಿತವಾಗಿದೆ. ಹೆಸರಿನ ಸ್ಪೆಲ್ಲಿಂಗ್‌ನಲ್ಲಿನ ಸಣ್ಣಪುಟ್ಟ ತಪ್ಪುಗಳು, ಹುಟ್ಟಿದ ದಿನಾಂಕದ ವ್ಯತ್ಯಾಸಗಳಂತಹ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಲಕ್ಷಾಂತರ ನಾಗರಿಕರನ್ನು ಮತದಾನದ ಹಕ್ಕಿನಿಂದ ವಂಚಿಸುವುದು ಅಕ್ಷಮ್ಯ ಅಪರಾಧ. ಇದನ್ನು ತಕ್ಷಣವೇ ಕೈಬಿಡಬೇಕು.
2. ಮುಕ್ತ ಮತ್ತು ಹುಡುಕಬಹುದಾದ ಮತದಾರರ ಪಟ್ಟಿ (Computer Readable Format)
ಮತದಾರರ ಪಟ್ಟಿ ಎಂಬುದು ಯಾವುದೇ ರಹಸ್ಯ ದಾಖಲೆಯಲ್ಲ. ಅದು ನಾಗರಿಕರ ಮುಕ್ತ ಆಸ್ತಿ. ಕರಡು ಪಟ್ಟಿ ತಯಾರಾದ ನಂತರ ಪ್ರತಿಯೊಬ್ಬ ನಾಗರಿಕನೂ ತನ್ನ ಹೆಸರನ್ನು ಸುಲಭವಾಗಿ ಹುಡುಕಲು ಅನುಕೂಲವಾಗುವಂತೆ ತಂತ್ರಜ್ಞಾನ ಸ್ನೇಹಿ ಹಾಗೂ ‘ಕಂಪ್ಯೂಟರ್ ರೀಡಬಲ್ ಫಾರ್ಮ್ಯಾಟ್’ನಲ್ಲಿ ಅದನ್ನು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಿಸಬೇಕು.
3. ಕರಡು ಪಟ್ಟಿಯ ಬಹಿರಂಗ ಪ್ರಕಟಣೆ ಮತ್ತು ಪರಿಶೀಲನೆ
ಚುನಾವಣಾ ಆಯೋಗದ ಮ್ಯಾನ್ಯುಯಲ್‌ನಲ್ಲಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಮತ್ತು ನಗರದ ವಾರ್ಡ್ ಮಟ್ಟದಲ್ಲಿ ಕರಡು ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು. ಎಲ್ಲರ ಸಮ್ಮುಖದಲ್ಲಿ, ಮುಕ್ತವಾಗಿ ತಿದ್ದುಪಡಿಗಳನ್ನು ಮಾಡಲು ಅವಕಾಶ ನೀಡಬೇಕು.
4. ಗಡಿಬಿಡಿಯ ಪ್ರಕ್ರಿಯೆಗೆ ಬ್ರೇಕ್ – ಸೂಕ್ತ ಕಾಲಾವಕಾಶದ ಅಗತ್ಯ
ಮತದಾರರ ಪಟ್ಟಿ ಪರಿಷ್ಕರಣೆಯಂತಹ ಗಂಭೀರ ಪ್ರಕ್ರಿಯೆಯನ್ನು ಧಾವಂತದಲ್ಲಿ ನಡೆಸಬಾರದು. ಕರಡು ಪಟ್ಟಿ ಸಿದ್ಧಪಡಿಸಲು ಕನಿಷ್ಠ 1 ವರ್ಷ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅಂತಿಮ ಪಟ್ಟಿ ಪ್ರಕಟಿಸಲು ಕನಿಷ್ಠ 6 ತಿಂಗಳ ಸುದೀರ್ಘ ಕಾಲಾವಕಾಶವನ್ನು ನೀಡಲೇಬೇಕು.
5. ಶೋಷಿತ ಮತ್ತು ವಲಸೆ ಸಮುದಾಯಗಳ ಒಳಗೊಳ್ಳುವಿಕೆ
ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಅಲೆಮಾರಿಗಳು, ಆದಿವಾಸಿಗಳು, ದಲಿತರು ಮತ್ತು ಹಿಂದುಳಿದ ಅಲ್ಪಸಂಖ್ಯಾತರು ಅಧಿಕೃತ ದಾಖಲೆಗಳ ಕೊರತೆಯನ್ನು ಎದುರಿಸುತ್ತಿರುತ್ತಾರೆ. ಇಂತಹ ದುರ್ಬಲ ವರ್ಗದವರು ಪ್ರಜಾಪ್ರಭುತ್ವದ ಪ್ರಕ್ರಿಯೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ವಿಶೇಷ ಮತ್ತು ಸರಳ ಕ್ರಮಗಳನ್ನು ರೂಪಿಸಬೇಕು.

ರಾಜ್ಯ ಸರ್ಕಾರಕ್ಕೆ ರೈತ ಸಂಘದ ನೇರ ಎಚ್ಚರಿಕೆ: ಎಚ್.ಆರ್. ಬಸವರಾಜಪ್ಪ
“ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ, ನ್ಯಾಯಾಲಯಗಳೇ ಅಪರಾಧದ ಪರ ವಕಾಲತ್ತು ವಹಿಸುವಂತಹ ಪರಿಸ್ಥಿತಿ ಇಂದು ದೇಶದಲ್ಲಿ ನಿರ್ಮಾಣವಾಗಿದೆ. ಇಂತಹ ಹೊತ್ತಿನಲ್ಲಿ ರಾಜ್ಯದ ಜನರ ಅಂತಃಸಾಕ್ಷಿ ಮತ್ತು ದಿಟ್ಟ ಪ್ರತಿರೋಧ ಮಾತ್ರ ನಮ್ಮ ಸಂವಿಧಾನವನ್ನು ರಕ್ಷಿಸಬಲ್ಲದು. ಮಾಮೂಲಿ ಕ್ರಮಗಳಿಂದ ಈ ಗಂಡಾಂತರವನ್ನು ಎದುರಿಸಲು ಸಾಧ್ಯವಿಲ್ಲ. ತಂತ್ರಜ್ಞಾನದ ಹೆಸರಿನಲ್ಲಿ ಜಾರಿಗೆ ಬರುತ್ತಿರುವ ‘SIR’ ಕರಾಳ ನೀತಿಯಿಂದ ರಾಜ್ಯದ ಒಬ್ಬನೇ ಒಬ್ಬ ಅರ್ಹ ಮತದಾರನೂ ತನ್ನ ಜನ್ಮಸಿದ್ಧ ಹಕ್ಕನ್ನು ಕಳೆದುಕೊಳ್ಳಲು ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಮುಖ್ಯಮಂತ್ರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕೆಳಗಿನ ಮಾಸ್ಟರ್ ಪ್ಲಾನ್‌ಗಳನ್ನು ಜಾರಿಗೆ ತರಬೇಕು.”
– ಎಚ್.ಆರ್. ಬಸವರಾಜಪ್ಪ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ.
ರಾಜ್ಯದ ಒಬ್ಬನೇ ಒಬ್ಬ ಅರ್ಹ ಮತದಾರನೂ ಹಕ್ಕು ಕಳೆದುಕೊಳ್ಳದಂತೆ ನೋಡಿಕೊಳ್ಳಲು ಕರ್ನಾಟಕ ಸರ್ಕಾರ ತಕ್ಷಣವೇ ಈ ಕೆಳಗಿನ ಕ್ರಮಗಳಿಗೆ ಮುಂದಾಗಬೇಕಿದೆ ಎಂದು ಒಕ್ಕೂಟ ಹೇಳಿದೆ.
- ‘ಚೆಕ್ ಮೇಟ್ ಪಟ್ಟಿ’ (Check-Mate List) ತಯಾರಿ: ರಾಜ್ಯ ಚುನಾವಣಾ ಆಯೋಗದ ಮೂಲಕ ಸ್ಥಳೀಯ ಸಂಸ್ಥೆಗಳಿಗಾಗಿ ಒಂದು ವೈಜ್ಞಾನಿಕ ಹಾಗೂ ಜನಸ್ನೇಹಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕು. ಇದಕ್ಕಾಗಿ ವಿಶೇಷ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ನಡೆಸಿ, ಕರ್ನಾಟಕದ ಹಿತರಕ್ಷಿಸುವ ಪಕ್ಕಾ ‘ಚೆಕ್ ಮೇಟ್’ ಪಟ್ಟಿಯನ್ನು ಸಿದ್ಧಪಡಿಸಬೇಕು.
- ಸ್ಮಾರ್ಟ್ ಕಾರ್ಡ್ ಹಾಗೂ ವಾಸ ಧೃಡೀಕರಣ ಪತ್ರ: ಗ್ರಾಮ ಸಭೆಗಳಲ್ಲಿ ದೃಢೀಕರಿಸಲ್ಪಟ್ಟ ಮತದಾರರಿಗೆ ಅವರ ದಾಖಲೆಗಳ ಸಮೇತ ಸ್ಮಾರ್ಟ್ ಕಾರ್ಡ್ ನೀಡಬೇಕು. ಮೂಲ ದಾಖಲೆಗಳಿಲ್ಲದ ಬಡ ಮತ್ತು ಅಲೆಮಾರಿ ಜನರಿಗೆ ತಕ್ಷಣವೇ ‘ವಾಸ ಧೃಡೀಕರಣ ಪತ್ರ’ವನ್ನು ವಿತರಿಸುವ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು.
- ‘ಮತದಾರರ ನೆರವು ಕೇಂದ್ರ’ಗಳ ಸ್ಥಾಪನೆ: ಪ್ರತಿಯೊಂದು ಗ್ರಾಮ ಪಂಚಾಯಿತಿ ಹಾಗೂ ನಗರದ ವಾರ್ಡ್‌ಗಳಲ್ಲಿ ವಿಶೇಷ ನೆರವು ಕೇಂದ್ರಗಳನ್ನು ತೆರೆಯಬೇಕು. ಜನರಿಗೆ ಅಗತ್ಯವಿರುವ ಮೂಲ ದಾಖಲೆಗಳನ್ನು ಅಧಿಕಾರಿಗಳು ಯಾವುದೇ ಸತಾಯಿಸುವಿಕೆ ಇಲ್ಲದೆ, ತ್ವರಿತವಾಗಿ ನೀಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.
ಇದು ಕೇವಲ ಮತದ ಹಕ್ಕಲ್ಲ, ಪ್ರಜಾಪ್ರಭುತ್ವದ ಉಳಿವು!
ಪ್ರಸ್ತುತ ದೇಶ ಎದುರಿಸುತ್ತಿರುವ ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ಕರ್ನಾಟಕವು ದೇಶಕ್ಕೇ ಮಾದರಿಯಾಗುವಂತಹ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ. ತಂತ್ರಜ್ಞಾನದ ಹೆಸರಿನಲ್ಲಿ ಜನಸಾಮಾನ್ಯರ ಧ್ವನಿಯನ್ನು ಅಡಗಿಸುವ ಇಂತಹ ದುಷ್ಟ ಯೋಜನೆಗಳನ್ನು ತತ್ವದ ಆಧಾರದ ಮೇಲೆ ವಿರೋಧಿಸಿದರೆ ಸಾಲದು; ಅದನ್ನು ಪ್ರಾಯೋಗಿಕವಾಗಿ ತಡೆಯುವ ಶಕ್ತಿ ರಾಜ್ಯ ಸರ್ಕಾರಕ್ಕಿದೆ. ಮಾನ್ಯ ಮುಖ್ಯಮಂತ್ರಿಗಳು ಈ ಗಂಭೀರ ಪರಿಸ್ಥಿತಿಯನ್ನು ಅರಿತು, ಒಕ್ಕೂಟದ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ, ಕರ್ನಾಟಕದ ಪ್ರಜೆಗಳ ಸಾಂವಿಧಾನಿಕ ಹಕ್ಕನ್ನು ಎತ್ತಿಹಿಡಿಯಲಿದ್ದಾರೆ ಎಂಬ ನಿರೀಕ್ಷೆ ಇಡೀ ರಾಜ್ಯದ ಜನತೆಯದ್ದಾಗಿದೆ.
ಈ ಸಂದರ್ಭದಲ್ಲಿ ಡಿ.ಎಸ್.ಎಸ್ ಮೈಸೂರು ವಿಭಾಗೀಯ ಸಂಚಾಲಕರಾದ ಟಿ.ಹೆಚ್ ಹಾಲೇಶಪ್ಪ, ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಟಿ.ಎಂ ಚಂದ್ರಪ್ಪ, ಪ್ರಮುಖ ಮುಖಂಡರಾದ ಹಿಟ್ಟೂರು ರಾಜು ಹಾಗೂ ರಾಜ್ಯ ಮಹಿಳಾ ಸಂಚಾಲಕರಾದ ಭಾಗ್ಯ ರಾಘವೇಂದ್ರ ಅವರು ಉಪಸ್ಥಿತರಿದ್ದರು. ಇವರೊಂದಿಗೆ ಜಿಲ್ಲಾಧ್ಯಕ್ಷರಾದ ಕೆ. ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ ಜಗದೀಶ್, ಜಿಲ್ಲಾ ಉಪಾಧ್ಯಕ್ಷರುಗಳಾದ ಪಿ.ಶೇಖರಪ್ಪ, ಹುಲಿಮಟ್ಟಿ ಜಯಣ್ಣ ಮತ್ತು ಎಂ.ಎಸ್ ತಿಮ್ಮಪ್ಪ ಅವರು ಭಾಗವಹಿಸಿದ್ದರು. ಅಲ್ಲದೆ, ಗ್ರಾಮಾಂತರ ಅಧ್ಯಕ್ಷರಾದ ಕಸಟ್ಟಿ ರುದ್ರೇಶ್, ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾದ ಸಿ.ಚಂದ್ರಪ್ಪ, ಭದ್ರಾವತಿ ತಾಲ್ಲೂಕು ಅಧ್ಯಕ್ಷರಾದ ಜಿ.ಎನ್ ಪಂಚಾಕ್ಷರಿ, ಶಿಕಾರಿಪುರ ತಾಲ್ಲೂಕು ಅಧ್ಯಕ್ಷರಾದ ಪ್ರಮೋದ್ ಸೇರಿದಂತೆ ನೂರಾರು ರೈತರು, ದಲಿತ ಸಂಘಟನೆಯ ಮುಖಂಡರು ಹಾಗೂ ಕಾರ್ಮಿಕ ಮುಖಂಡರು ಹಾಜರಿದ್ದು ಒಕ್ಕೂಟದ ಹೋರಾಟಕ್ಕೆ ಸಾಥ್ ನೀಡಿದರು.






