ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸಂಪತ್ತಿಗಿಂತ ಸಂಸ್ಕಾರವೇ ಮನುಷ್ಯನ ನಿಜವಾದ ಸಂಪತ್ತು; ಧರ್ಮಾಚರಣೆ ಯಿಂದಷ್ಟೇ ವ್ಯಕ್ತಿತ್ವಕ್ಕೆ ಗೌರವ ಮತ್ತು ಮೌಲ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

On: July 17, 2026 12:37 AM
Follow Us:

ಬೆಂಗಳೂರು: ಮನುಷ್ಯನ ದೈಹಿಕ ಬೆಳವಣಿಗೆಗೆ ಆಹಾರ ಮತ್ತು ನೀರು ಎಷ್ಟು ಅಗತ್ಯವೋ, ಅದೇ ರೀತಿ ಆತನ ಆಂತರಿಕ ವ್ಯಕ್ತಿತ್ವದ ಬೆಳವಣಿಗೆಗೆ ಧರ್ಮಾಚರಣೆ ಅತ್ಯಗತ್ಯವಾಗಿದೆ. ಸತ್ಯ, ಶುದ್ಧತೆ ಹಾಗೂ ಸದಾಚಾರದ ಆಧಾರದಲ್ಲಿ ಬದುಕಿದಾಗ ಮಾತ್ರ ವ್ಯಕ್ತಿತ್ವಕ್ಕೆ ಭದ್ರ ನೆಲೆ ಸಿಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಅವರು ಗುರುವಾರ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಜನ ಜಾಗೃತಿ ಸಮಾರಂಭ’ದ ಎರಡನೇ ದಿನದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭೌತಿಕ ಸಮೃದ್ಧಿಯೊಂದಿಗೆ ಆಂತರಿಕ ಶುದ್ಧಿಯೂ ಅಗತ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

“ಭೌತಿಕ ಸಂಪತ್ತು ಹೆಚ್ಚಾದಂತೆ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು. ಕಾಲಾನುಸಾರ ಪಠ್ಯಪುಸ್ತಕಗಳು ಬದಲಾಗಬಹುದು, ಆದರೆ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಕೇವಲ ಭೌತಿಕ ಜೀವನದಲ್ಲಿ ಸಮೃದ್ಧಿ ಹೊಂದುವುದಷ್ಟೇ ಸಾಕಾಗುವುದಿಲ್ಲ; ಅದರೊಂದಿಗೆ ನಮ್ಮ ಆಂತರಿಕ ಜೀವನವೂ ಪರಿಶುದ್ಧವಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆಯುತ್ತಿರುವ ಈ ಯುಗದಲ್ಲಿ, ಮನುಷ್ಯನ ಉದಾತ್ತ ಭಾವನೆಗಳು ಹಾಗೂ ನೈತಿಕ ಮೌಲ್ಯಗಳು ಬೆಳೆಯದಿರುವುದೇ ಇಂದಿನ ಜಗತ್ತಿನ ಅಶಾಂತಿಗೆ ಪ್ರಮುಖ ಕಾರಣ.”

“ಜ್ಞಾನವು ಕೇವಲ ಮಾತಿಗೆ ಸೀಮಿತವಾಗದೆ, ಕ್ರಿಯಾತ್ಮಕ ಧರ್ಮಾಚರಣೆಯಾಗಿ ಜೀವನದಲ್ಲಿ ಅನುಷ್ಠಾನಗೊಂಡಾಗ ಮಾತ್ರ ಜಗತ್ತಿನಲ್ಲಿ ಶಾಶ್ವತ ಶಾಂತಿ ನೆಲೆಸಲು ಸಾಧ್ಯ. ಈ ಮಹತ್ವದ ತತ್ವವನ್ನು ಜಗದ್ಗುರು ರೇಣುಕಾಚಾರ್ಯರು ತಮ್ಮ ‘ಸಿದ್ಧಾಂತ ಶಿಖಾಮಣಿ’ ಮಹಾಗ್ರಂಥದಲ್ಲಿ ಅತ್ಯಂತ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ” ಎಂದು ರಂಭಾಪುರಿ ಶ್ರೀಗಳು ತಿಳಿಸಿದರು.

ನನಗಾಗಿ ಬಯಸುವುದು ಜೀವಗುಣ; ಎಲ್ಲರಿಗಾಗಿ ಬಯಸುವುದು ದೇವಗುಣ: ಶ್ರೀಮತಿ ವೀಣಾ ಕಾಶಪ್ಪನವರ್

“ಕೇವಲ ತನಗಾಗಿ ಮಾತ್ರ ಒಳ್ಳೆಯದನ್ನು ಬಯಸುವುದು ಸಾಮಾನ್ಯ ಜೀವಗುಣವಾದರೆ, ಪ್ರಪಂಚದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವುದು ದೇವಗುಣವಾಗಿದೆ. ಸಮಾಜದಲ್ಲಿ ನಮಗೆ ಅಧಿಕಾರ ಮತ್ತು ಅಂತಸ್ತು ಸಿಕ್ಕಿ ನಾವು ಮೇಲೇರಿದಂತೆಲ್ಲಾ, ನಮ್ಮೊಳಗಿನ ನೈತಿಕತೆಯ ಅಂತಸ್ತೂ ಕೂಡ ಎತ್ತರಕ್ಕೆ ಬೆಳೆಯಬೇಕು.”

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ಶ್ರೀಮತಿ ವೀಣಾ ಕಾಶಪ್ಪನವರ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

“ಜಗದ್ಗುರು ರೇಣುಕಾಚಾರ್ಯರು ಮತ್ತು ಬಸವಾದಿ ಶಿವಶರಣರು ಸಮಾಜದಲ್ಲಿ ಇದೇ ಮಹತ್ಕಾರ್ಯವನ್ನು ಮಾಡಿ ತೋರಿಸುವ ಮೂಲಕ ಮಾನವ ಕುಲದ ಬದುಕಿನ ಶ್ರೇಯಸ್ಸಿಗೆ ಶ್ರಮಿಸಿದರು” ಎಂದು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

​ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಅರಿವಿನೊಂದಿಗೆ ಕೂಡಿದ ಆಚಾರವೇ ಬದುಕಿನ ಉನ್ನತಿಗೆ ನಿಜವಾದ ಸೋಪಾನವಾಗಿದೆ. ಮನುಷ್ಯನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ, ಆತನ ಸುಸಂಸ್ಕೃತ ಬದುಕಿಗೆ ಧರ್ಮಾಚರಣೆಯೂ ಅಷ್ಟೇ ಮುಖ್ಯ” ಎಂದು ಹೇಳಿದರು.

ವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ ಹಾಗೂ ಸಿ.ಎಚ್. ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ಗಣ್ಯರಾದ ಕೆ. ಆರ್. ಚನ್ನಬಸಪ್ಪ, ನಟರಾಜ್ ಮತ್ತು ರಮೇಶಪ್ಪ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ರಾಜಾಪುರದ ಡಾ. ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಕುಪ್ಪೂರು ಗದ್ದುಗೆಮಠದ ತೇಜೇಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಶಿವಶಂಕರ ಶಾಸ್ತ್ರಿಗಳಿಂದ ಭಕ್ತಿಗೀತೆಗಳು, ಎಸ್‌.ಜೆ.ಆರ್. ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ಭರತನಾಟ್ಯ ಪ್ರದರ್ಶನಗಳು ನಡೆದವು. ಚಂದ್ರಶೇಖರ ನಾಗರಾಳಮಠ ಸ್ವಾಗತಿಸಿದರು. ಡಾ. ಮಮತಾ ಸಾಲಿಮಠ ಕಾರ್ಯಕ್ರಮವನ್ನು ನಿರೂಪಿಸಿದರು.

ಇದಕ್ಕೂ ಮುನ್ನ ಬೆಳಗಿನ ಶುಭ ಮುಹೂರ್ತದಲ್ಲಿ ಲೋಕಕಲ್ಯಾಣ ಹಾಗೂ ಜಗತ್ತಿನ ಶಾಂತಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಭಕ್ತಿಭಾವದಿಂದ ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿ, ನೆರೆದಿದ್ದ ಸಹಸ್ರಾರು ಭಕ್ತ ಸಮೂಹಕ್ಕೆ ಮಂತ್ರಾಕ್ಷತೆ ನೀಡಿ ಶುಭ ಹಾರೈಸಿದರು.

K.M.Sathish Gowda

Join WhatsApp

Join Now

Facebook

Join Now

Read more

ಸಂಸ್ಕಾರಯುತ ಶಿಕ್ಷಣವೇ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ: ಶ್ರೀ ರಂಭಾಪುರಿ ಜಗದ್ಗುರುಗಳು

ಸಿರಿಗೆರೆಯಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ: ‘ತರಳಬಾಳು’ ನಮ್ಮ ಮಠದ ಸಂವಿಧಾನ!: ಸಮಾಜಮುಖಿ ಆಡಳಿತಕ್ಕೆ ಗುರುಗಳ ಆದರ್ಶ ಅನುಸರಿಸಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ತೂಕಬದ್ಧ ನಡವಳಿಕೆಗೆ ಶ್ರೀ ತರಳಬಾಳು ಜಗದ್ಗುರುಗಳ ಮೆಚ್ಚುಗೆ

ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲ ಎಂಬ ಸಂಕಲ್ಪ ಮಾಡಿಕೊಳ್ಳಿ: ಮಕ್ಕಳಿಗೆ ಸಂಸ್ಕಾರ ನೀಡುವುದೇ ದಂಪತಿಗಳ ದೊಡ್ಡ ಕರ್ತವ್ಯ: ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು

ಗುರುಗಳ ಶ್ರದ್ಧಾಂಜಲಿಗೆ ನಿಜವಾದ ಗೌರವವೆಂದರೆ ದುಶ್ಚಟಗಳಿಂದ ದೂರವಿರುವ ಸಂಕಲ್ಪ: ಬಸವಣ್ಣನವರ ವಚನವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸಿದ ಲಿಂ. ಶ್ರೀ ಶಿವಕುಮಾರ ಮಹಾಸ್ವಾಮೀಜಿ: ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಒಗ್ಗಟ್ಟಿನ ಸಂಕಲ್ಪಕ್ಕೆ ಶಿವಸಂಕಲ್ಪದ ಹೆಜ್ಜೆ! 50 ವರ್ಷ ದಾಂಪತ್ಯ ಪೂರೈಸಿದ ಹಿರಿಯ ದಂಪತಿಗಳಿಗೆ ಗೌರವ: ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ, ಸಮಾಜದೊಳಗೆ ಹೊಸ ಚೈತನ್ಯ ಮೂಡಿಸಿದ ವಿಶ್ವಾಸ್.ಈ ನೇತೃತ್ವ

ಜಗತ್ತಿನಾದ್ಯಂತ ಇರುವ ಹಳೆಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತರಲು ‘ತರಳಬಾಳು ಅಲುಮ್ನಿ ಪೋರ್ಟಲ್’ ಆರಂಭ: ಹಳೆಯ ವಿದ್ಯಾರ್ಥಿಗಳ ಸಾಧನೆಗೆ ಗುರುಗಳ ಶಿಕ್ಷಣ ಸೇವೆಯೇ ಬುನಾದಿ: ಶ್ರೀ ತರಳಬಾಳು ಜಗದ್ಗುರು

Leave a Comment