ಬೆಂಗಳೂರು: “ತಮ್ಮ ರಾಜಕೀಯ ಸ್ವಾರ್ಥ ಹಾಗೂ ವೈಯಕ್ತಿಕ ಏಳಿಗೆಗಾಗಿ ಸಮಾಜವನ್ನು ಒಡೆಯುವ ದುಸ್ಸಾಹಸಕ್ಕೆ ಕೈಹಾಕುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ನಾವೆಲ್ಲರೂ ಜಾಗೃತರಾಗಬೇಕಿದೆ. ವೀರಶೈವ ಲಿಂಗಾಯತ ಸಮಾಜದಲ್ಲಿ ಒಳ ಪಂಗಡಗಳನ್ನು ಸೃಷ್ಟಿಸಿ, ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುವವರಿಗೆ ಕಾಲವೇ ತಕ್ಕ ಉತ್ತರ ನೀಡಲಿದೆ,” ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ 24ನೇ ವರ್ಷದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.
“ನಾನು ಸಾರ್ವಜನಿಕ ಜೀವನದಲ್ಲಿ ಅನೇಕ ಧರ್ಮ ಜಾಗೃತಿ ಸಭೆಗಳಲ್ಲಿ ಭಾಗವಹಿಸುತ್ತಾ ಇರುತ್ತೇನೆ. ಆದರೆ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಭಾಗವಹಿಸುವುದು ಮತ್ತು ಅವರ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದುಕೊಳ್ಳುವುದು ನನ್ನಲ್ಲಿ ಅಪಾರ ಆತ್ಮಸ್ಥೈರ್ಯವನ್ನು ತುಂಬುತ್ತದೆ. ಜೀವನದಲ್ಲಿ ಎಂತಹದ್ದೇ ಸವಾಲುಗಳು ಬಂದರೂ, ಅವುಗಳಿಂದ ಓಡಿಹೋಗದೆ ಮೆಟ್ಟಿ ನಿಲ್ಲುವ ಧೈರ್ಯ ಮತ್ತು ಪ್ರೇರಣೆ ನನಗೆ ಜಗದ್ಗುರುಗಳ ದರ್ಶನದಿಂದ ಸಿಗುತ್ತದೆ,” ಎಂದು ಅತ್ಯಂತ ಹೆಮ್ಮೆಯಿಂದ ಹೇಳಿದರು.
ಜಗದ್ಗುರುಗಳ ಮಾರ್ಗದರ್ಶನವು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಲ್ಲ, ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ ಶಕ್ತಿ ಅವರಲ್ಲಿದೆ. ಅವರ ಆಶೀರ್ವಾದವೇ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಅವರು ಮುಕ್ತಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮ ರಕ್ಷಣೆ ಕೇವಲ ಮಠಾಧೀಶರ ಕೆಲಸವಲ್ಲ: ಬಿ.ವೈ.ವಿಜಯೇಂದ್ರ
‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಉಕ್ತಿಯನ್ನು ನೆನಪಿಸಿದ ವಿಜಯೇಂದ್ರ, “ಧರ್ಮದ ಹಾದಿಯಲ್ಲಿ ಸಾಗುವವರನ್ನು ಧರ್ಮವು ಸದಾ ರಕ್ಷಿಸುತ್ತದೆ. ಆದರೆ ಇಂದು 21ನೇ ಶತಮಾನದಲ್ಲಿ ರಾಜಕೀಯ ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯುವ ಕೆಲಸಗಳು ನಡೆಯುತ್ತಿವೆ. ನಾಡಿನಲ್ಲಿ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವ, ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಜವಾಬ್ದಾರಿಯನ್ನು ಕೇವಲ ಜಗದ್ಗುರುಗಳು ಅಥವಾ ಮಠಾಧೀಶರಿಗೆ ಮಾತ್ರ ಸೀಮಿತಗೊಳಿಸಬಾರದು. ಮಠಮಾನ್ಯಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಮತ್ತು ಸಮಾಜವನ್ನು ಮುನ್ನಡೆಸುವ ಕರ್ತವ್ಯ ನಮ್ಮೆಲ್ಲರ ಮೇಲೂ ಇದೆ,” ಎಂದರು.
ಯುವಪೀಳಿಗೆಗೆ ಧರ್ಮ ಮತ್ತು ಸಂಸ್ಕೃತಿಯ ಪರಂಪರೆ ತಲುಪಬೇಕು
ಇಂದಿನ ಸಮಾಜ ಕವಲುದಾರಿಯಲ್ಲಿ ನಿಂತಿದೆ. ಇಂತಹ ಸಂದರ್ಭದಲ್ಲಿ ವೈಯಕ್ತಿಕ ಸ್ವಾರ್ಥವನ್ನು ಬದಿಗಿಟ್ಟು ಮುಂದಿನ ಪೀಳಿಗೆಗೆ ನಮ್ಮ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳು ಹಾಗೂ ಮಠದ ಪರಂಪರೆಯನ್ನು ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ವಿಜಯೇಂದ್ರ ಹೇಳಿದರು.
ವೀರಶೈವ-ಲಿಂಗಾಯತ ಸಮಾಜದ ಹೆಮ್ಮೆಯ ಇತಿಹಾಸ
ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವೀರಶೈವ-ಲಿಂಗಾಯತ ಸಮಾಜ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ಎಸ್. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ಜೆ.ಎಚ್. ಪಟೇಲ್, ಎಸ್.ಆರ್. ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಪ್ರಮುಖ ನಾಯಕರನ್ನು ರಾಜ್ಯಕ್ಕೆ ನೀಡಿರುವ ಹೆಮ್ಮೆ ವೀರಶೈವ-ಲಿಂಗಾಯತ ಸಮಾಜದ್ದಾಗಿದೆ ಎಂದು ಸ್ಮರಿಸಿದರು.
ಸಮಾಜ ಒಡೆಯುವವರಿಗೆ ಖಡಕ್ ಎಚ್ಚರಿಕೆ
ಇತ್ತೀಚಿನ ದಿನಗಳಲ್ಲಿ ಸಮಾಜದ ಒಳಪಂಗಡಗಳ ನಡುವೆ ಅನಗತ್ಯ ಚರ್ಚೆಗಳನ್ನು ಹುಟ್ಟುಹಾಕಿ ವಿಭಜನೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇದು ಕೆಲವರ ರಾಜಕೀಯ ಸ್ವಾರ್ಥದ ಭಾಗವಾಗಿದೆ ಎಂದು ಆರೋಪಿಸಿದರು.
“ರಾಜಕಾರಣ ಒಂದು ಕಡೆ ಇರಲಿ. ಆದರೆ ಸಮಾಜವನ್ನು ಒಡೆಯುವ ಕೆಲಸವನ್ನು ಯಾರೂ ಮಾಡಬಾರದು. ಎಲ್ಲಾ ಒಳಪಂಗಡಗಳನ್ನು ಮರೆತು ವೀರಶೈವ-ಲಿಂಗಾಯತ ಸಮಾಜ ಒಂದಾಗಿ ಸಾಗಿದಾಗ ಮಾತ್ರ ಈ ಸಮಾಜ ಹೆಮ್ಮರವಾಗಿ ಬೆಳೆದು ಇಡೀ ನಾಡಿಗೆ ನೆರಲಾಗುತ್ತದೆ,” ಎಂದು ಎಚ್ಚರಿಸಿದರು.
ಯಡಿಯೂರಪ್ಪರ ಬಗ್ಗೆ ಜನರ ಪ್ರೀತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಅಪಾರ ವಿಶ್ವಾಸವನ್ನು ನೆನಪಿಸಿಕೊಂಡ ವಿಜಯೇಂದ್ರ, ಬೆಳಗಾವಿಯಲ್ಲಿ ನಡೆದ ಒಂದು ಘಟನೆಯನ್ನು ಹಂಚಿಕೊಂಡರು. ಬೆಳಿಗ್ಗೆ ವಾಕಿಂಗ್ ವೇಳೆ ಹಾಲು ವಿತರಿಸುತ್ತಿದ್ದ ಬಡ ವ್ಯಕ್ತಿಯೊಬ್ಬರು ತನ್ನನ್ನು ಗುರುತಿಸಿ, “ನೀವು ಯಡಿಯೂರಪ್ಪನವರ ಮಗ ಅಲ್ಲವೇ?” ಎಂದು ಗೌರವದಿಂದ ಕೈಮುಗಿದು ನಮಸ್ಕರಿಸಿದ ಪ್ರಸಂಗವನ್ನು ವಿವರಿಸಿದ ಅವರು, ಆ ವ್ಯಕ್ತಿಯ ವಿಶ್ವಾಸ ತನ್ನಲ್ಲಿ ಆತ್ಮವಿಶ್ವಾಸದ ಜೊತೆಗೆ ಇನ್ನಷ್ಟು ಜವಾಬ್ದಾರಿಯನ್ನು ಹೆಚ್ಚಿಸಿತು ಎಂದು ಹೇಳಿದರು.
“ಯಡಿಯೂರಪ್ಪನವರು ನಡೆದು ಬಂದ ಹಾದಿಯಲ್ಲೇ ವಿಜಯೇಂದ್ರ ಕೂಡ ಸಾಗುತ್ತಾನೆ ಎಂಬ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯವಾಗಿದೆ,” ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಯಡಿಯೂರಪ್ಪನವರು ರಾಜಕಾರಣದ ಆಲದ ಮರ ಇದ್ದಂತೆ
“ನಾನು ಬಿ. ಎಸ್. ಯಡಿಯೂರಪ್ಪನವರ ಮಗನಾಗಿ ಅವರ ರಾಜಕಾರಣವನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ. ಕರ್ನಾಟಕ ರಾಜಕೀಯದಲ್ಲಿ ಯಡಿಯೂರಪ್ಪನವರು ಒಂದು ಆಲದ ಮರ ಇದ್ದಂತೆ. ಆದರೆ ದುರಂತವೆಂದರೆ, ಇದೇ ಆಲದ ಮರದ ಕೆಳಗೆ ನೆರಳು ಪಡೆದು ಬೆಳೆದ ಕೆಲವು ರಾಜಕೀಯ ಮುಖಂಡರು ಇಂದು ತಾವೇ ದೊಡ್ಡ ಆಲದ ಮರವಾಗಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಇಂತಹ ನಡವಳಿಕೆಗಳು ಸಮಾಜಕ್ಕೆ ತೊಂದರೆ ತರುತ್ತಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ,” ಎಂದು ವಿಜಯೇಂದ್ರ ಹೇಳಿದರು.
ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಸಮಾಜಮುಖಿ ರಾಜಕಾರಣ
ಬಿ.ವೈ. ವಿಜಯೇಂದ್ರ ಅವರು, “ಜಗದ್ಗುರುಗಳು ಹಾಗೂ ನಾಡಿನ ಹರಗುರು ಚರಮೂರ್ತಿಗಳು ಯಡಿಯೂರಪ್ಪನವರ ಮೇಲೆ ಇಟ್ಟಿದ್ದಷ್ಟೇ ವಿಶ್ವಾಸವನ್ನು ನನ್ನ ಮೇಲೂ ಇಟ್ಟಿದ್ದಾರೆ. ರಾಜಕಾರಣದಲ್ಲಿ ತಪ್ಪು-ಒಪ್ಪುಗಳು ಸಹಜ; ನಡೆಯುವವನೇ ಕೆಲವೊಮ್ಮೆ ಎಡವುತ್ತಾನೆ. ಆದರೆ ಸಮಾಜ ಮತ್ತು ಜಗದ್ಗುರುಗಳು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಎಂದಿಗೂ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ. ಮುಂದೊಂದು ದಿನ ಸಮಾಜವೇ ಹೆಮ್ಮೆಯಿಂದ ‘ನಮ್ಮ ವಿಜಯೇಂದ್ರ’ ಎಂದು ಹೇಳುವ ರೀತಿಯಲ್ಲಿ ಸಮಾಜಮುಖಿ ರಾಜಕಾರಣ ಮಾಡುತ್ತೇನೆ,” ಎಂದರು.
“ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಹೆತ್ತ ತಂದೆ-ತಾಯಿ, ಸಮಾಜ ಹಾಗೂ ಆಶೀರ್ವಾದ ನೀಡಿದ ಜಗದ್ಗುರುಗಳನ್ನು ಎಂದಿಗೂ ಮರೆಯುವುದಿಲ್ಲ,” ಎಂದು ತಮ್ಮ ಕೃತಜ್ಞತಾ ಭಾವವನ್ನು ಹಂಚಿಕೊಂಡರು.
ವೇದಿಕೆಯಲ್ಲಿದ್ದ ಉದ್ಯಮಿ ದಯಾನಂದ್ ಅವರ ಸೇವಾ ಮನೋಭಾವವನ್ನು ಉಲ್ಲೇಖಿಸಿದ ಅವರು, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವುದರ ಜೊತೆಗೆ ಸಮಾಜದ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಸೇವೆಯಲ್ಲಿ ತೊಡಗಿರುವುದು ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
ಶ್ರೀ ರಂಭಾಪುರಿ ಜಗದ್ಗುರುಗಳ ಕಾರ್ಯಕ್ಕೆ ಪ್ರಶಂಸೆ
ರಂಭಾಪುರಿ ಜಗದ್ಗುರುಗಳು ನಡೆಸುತ್ತಿರುವ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮಗಳು ಕೇವಲ ವೀರಶೈವ-ಲಿಂಗಾಯತ ಸಮಾಜಕ್ಕಷ್ಟೇ ಅಲ್ಲ, ಸರ್ವ ಸಮಾಜಕ್ಕೂ ಪ್ರೇರಣೆಯಾಗಿವೆ ಎಂದು ವಿಜಯೇಂದ್ರ ಹೇಳಿದರು. ಜಗದ್ಗುರುಗಳ ಮಾರ್ಗದರ್ಶನದಲ್ಲಿ ಧರ್ಮದ ಜಾಗೃತಿ, ಸಂಸ್ಕೃತಿಯ ಸಂರಕ್ಷಣೆ ಹಾಗೂ ಸಮಾಜದ ಸಂಘಟನೆಯ ಕೆಲಸ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
🌾 ರೈತರ ಬದುಕು ಹಸನಾಗಲಿ: ಬರ ನಿವಾರಣೆಗೆ ಶ್ರೀಗಳ ಆಶೀರ್ವಾದ
“ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಅನ್ನದಾತ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಇಷ್ಟಲಿಂಗ ಪೂಜೆ ಮತ್ತು ಧರ್ಮ ಸಭೆಯು ಇಡೀ ಸಮಾಜಕ್ಕೆ ಪ್ರೇರಣೆ ನೀಡಲಿ. ಶ್ರೀಗಳ ಆಶೀರ್ವಾದದಿಂದ ನಾಡಿನಲ್ಲಿ ಉತ್ತಮ ಮಳೆಯಾಗಿ, ಅನ್ನ ನೀಡುವ ರೈತರ ಬದುಕು ಹಸನಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ,” ಎಂದು ಬಿ. ವೈ.ವಿಜಯೇಂದ್ರ ಹೇಳಿದರು.