ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸರ್ಕಾರಿ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಿ; ಕೆಪಿಎಸ್‌ಸಿ ಅಕ್ರಮಗಳಿಗೆ ಕಡಿವಾಣ ಹಾಕಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಡಾ. ಧನಂಜಯ ಸರ್ಜಿ ವಾಗ್ದಾಳಿ

On: August 5, 2026 4:38 PM
Follow Us:

ರಾಜ್ಯದಲ್ಲಿ 2.94 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ • ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರದ ಆರೋಪ • ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಅನ್ಯಾಯ • ಪರೀಕ್ಷಾ ಅಕ್ರಮ ತಡೆಗೆ ಕೇಂದ್ರ ಮಾದರಿಯ ಕಾನೂನು ಜಾರಿಗೆ ಆಗ್ರಹ

ಶಿವಮೊಗ್ಗ, ಆ.5: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 38 ತಿಂಗಳು ಕಳೆದಿದ್ದರೂ ಯುವಜನತೆಗೆ ನೀಡಿದ್ದ ಉದ್ಯೋಗ ಭರವಸೆ ಈಡೇರಿಲ್ಲ. ಸರ್ಕಾರಿ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ನಡೆಸಲಾಗುತ್ತಿರುವ ನೇಮಕಾತಿ ಪರೀಕ್ಷೆಗಳಲ್ಲೂ ಪದೇಪದೇ ಅಕ್ರಮಗಳು ಬೆಳಕಿಗೆ ಬರುತ್ತಿದ್ದು, ಸರ್ಕಾರ ಪಾರದರ್ಶಕ ನೇಮಕಾತಿ ಪ್ರಕ್ರಿಯೆ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನೇಮಕಾತಿ ನೀತಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯವೈಖರಿಯನ್ನು ಟೀಕಿಸಿದರು.

ರಾಜ್ಯದಲ್ಲಿ ಒಟ್ಟು ಸುಮಾರು 7 ಲಕ್ಷ ಸರ್ಕಾರಿ ಹುದ್ದೆಗಳಿದ್ದು, ಅವುಗಳಲ್ಲಿ ಸುಮಾರು 2,94,000 ಹುದ್ದೆಗಳು (ಶೇ.40ರಷ್ಟು) ಇಂದಿಗೂ ಖಾಲಿ ಉಳಿದಿವೆ ಎಂದು ಡಾ. ಸರ್ಜಿ ಹೇಳಿದರು.

ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಮೂರೂವರೆ ವರ್ಷಗಳು ಕಳೆದರೂ ಆ ಭರವಸೆ ಕಾಗದದಲ್ಲೇ ಉಳಿದಿದೆ. ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಸೇವೆಗಳೇ ಕುಂಠಿತವಾಗಿವೆ. ದಶಕಗಳ ಹಿಂದೆ ಇದ್ದ ಜನಸಂಖ್ಯೆಗೆ ಅನುಗುಣವಾಗಿ ಮಂಜೂರಾಗಿದ್ದ ಹುದ್ದೆಗಳನ್ನೇ ಇಂದಿಗೂ ಸಂಪೂರ್ಣವಾಗಿ ಭರ್ತಿ ಮಾಡಿಲ್ಲ. ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದರೂ ಹೊಸ ಹುದ್ದೆಗಳ ಸೃಷ್ಟಿ ಹಾಗೂ ನೇಮಕಾತಿಯಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಅವರು ಆರೋಪಿಸಿದರು.

ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಹೋರಾಟ ನಡೆಸಿದ ಬಳಿಕ ಮಾತ್ರ ಸರ್ಕಾರ ಹುದ್ದೆ ಭರ್ತಿಯ ಘೋಷಣೆ ಮಾಡುತ್ತದೆ. ಆದರೆ ಅದೂ ವಿಳಂಬವಾಗುತ್ತಿದ್ದು, ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿಲ್ಲ ಎಂದು ಟೀಕಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ ಡಾ. ಸರ್ಜಿ, “ಇಂದು KPSC ಎಂದರೆ K–Cash, P–Post, S–Settlement ಎಂಬಂತಾಗಿದೆ. ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರೆಯುವ ಬದಲು ಹಣ ಮತ್ತು ಪ್ರಭಾವಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ” ಎಂದು ಆರೋಪಿಸಿದರು.

ಇತ್ತೀಚೆಗೆ ನಡೆದ ಸುಮಾರು 400 ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಶೇ.60ರಷ್ಟು ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಾಗಲಕೋಟೆಯ ಆರಿಫ್ ಮೊಹಮ್ಮದ್ ಮುಲ್ಲಾ ಹಾಗೂ ವಿಜಯಪುರದ ಸಿಕಂದರ್ ಚೌಧರಿ ಎಂಬ ದಲ್ಲಾಳಿಗಳ ಮೂಲಕ ಲಕ್ಷಾಂತರ ರೂಪಾಯಿ ಹಣದ ವಹಿವಾಟು ನಡೆದಿರುವುದು ಬಹಿರಂಗವಾಗಿದ್ದರೂ, ಸರ್ಕಾರ ಸಮಗ್ರ ತನಿಖೆ ನಡೆಸುವ ಬದಲು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದರು.

ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್), ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE), ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳಲ್ಲಿ ಪದೇಪದೇ ಅಕ್ರಮಗಳು ವರದಿಯಾಗುತ್ತಿವೆ ಎಂದು ಅವರು ಆರೋಪಿಸಿದರು.

ಪರೀಕ್ಷೆಗಳನ್ನು ಮರುಮರು ಮುಂದೂಡುವುದು, ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು, ಮರುಪರೀಕ್ಷೆಗಳ ಆಯೋಜನೆ ಇವೆಲ್ಲವೂ ಅಭ್ಯರ್ಥಿಗಳ ಮಾನಸಿಕ ಒತ್ತಡ ಹೆಚ್ಚಿಸುತ್ತಿವೆ. ವರ್ಷಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಸಾವಿರಾರು ಅಭ್ಯರ್ಥಿಗಳ ಭವಿಷ್ಯ ಸರ್ಕಾರದ ನಿರ್ಲಕ್ಷ್ಯದಿಂದ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.

ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಮೌಲ್ಯಮಾಪನದಲ್ಲಿ ನಿರಂತರ ಅನ್ಯಾಯವಾಗುತ್ತಿದೆ ಎಂದು ಡಾ. ಸರ್ಜಿ ಆರೋಪಿಸಿದರು.

ನಿಯಮಾವಳಿಗಳ ಪ್ರಕಾರ ಆಯ್ಕೆಯಾಗಬೇಕಾದ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಆಯ್ಕೆಯಾಗುತ್ತಿರುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಈ ವಿಚಾರವನ್ನು ತಾವು ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರೂ ಸರ್ಕಾರದಿಂದ ಸಮರ್ಪಕ ಉತ್ತರ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪರೀಕ್ಷಾ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದಾಗ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಪ್ರತಿಕ್ರಿಯೆ ಅಭ್ಯರ್ಥಿಗಳ ನೋವನ್ನು ಲಘುವಾಗಿ ಪರಿಗಣಿಸಿದಂತಿದೆ ಎಂದು ಟೀಕಿಸಿದರು.

“’21 ದಿನ ಉಪವಾಸ ಸತ್ಯಾಗ್ರಹ ಮಾಡಿ, ನಂತರ ರಾಜೀನಾಮೆ ಬಗ್ಗೆ ಯೋಚಿಸುತ್ತೇನೆ’ ಎಂಬ ರೀತಿಯ ಹೇಳಿಕೆಗಳು ಸಚಿವರ ಗರ್ವ ಮತ್ತು ನಿರ್ಲಕ್ಷ್ಯವನ್ನು ತೋರಿಸುತ್ತವೆ” ಎಂದು ಅವರು ಆರೋಪಿಸಿದರು.

ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೂ ಟೀಕಿಸಿದ ಅವರು, ರಾಜ್ಯದ ಅಭ್ಯರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ದೆಹಲಿ ರಾಜಕಾರಣದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ರಾಜ್ಯದ ಯುವಜನರ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಠಿಣ ಕಾನೂನು ಮಾದರಿಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ಡಾ. ಸರ್ಜಿ ಆಗ್ರಹಿಸಿದರು.

ಅಕ್ರಮ ಎಸಗುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ, ₹10 ಕೋಟಿ ದಂಡ ಹಾಗೂ ಚಾರ್ಜ್‌ಶೀಟ್ ಸಲ್ಲಿಸಿದ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವ ಕಟ್ಟುನಿಟ್ಟಿನ ನಿಯಮಗಳನ್ನು ರಾಜ್ಯ ಸರ್ಕಾರವೂ ಅನುಸರಿಸಬೇಕು ಎಂದರು.

ಇನ್ಮುಂದೆಯಾದರೂ ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಿ, ಸರ್ಕಾರ ಈಗಾಗಲೇ ಘೋಷಿಸಿರುವ 70,000 ಸರ್ಕಾರಿ ಹುದ್ದೆಗಳನ್ನು ಯಾವುದೇ ಭ್ರಷ್ಟಾಚಾರ ಅಥವಾ ಅಕ್ರಮಗಳಿಗೆ ಅವಕಾಶ ನೀಡದೆ ಶೀಘ್ರ ಭರ್ತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಕುಗ್ವೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದರ್ಶನ್ ಹಾಗೂ ಅರುಣ್ ಕುಗ್ವೆ, ಮಧುಕರ್, ಬಿಜೆಪಿ ಮಾಧ್ಯಮ ಪ್ರಮುಖರಾದ ಚಂದ್ರಶೇಖರ್, ಮಂಜುನಾಥ್ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಶರತ್ ಕಲ್ಯಾಣ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

SIR: ಮತದಾರರ ಪಟ್ಟಿಯಿಂದ 1.11 ಕೋಟಿ ಹೆಸರು ಡಿಲೀಟ್ ಪ್ರಕ್ರಿಯೆಯಲ್ಲಿ; ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ, ತಪ್ಪಿದ್ದರೆ ಸರಿಪಡಿಸಿ

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಶಿವಮೊಗ್ಗ ರೈಲ್ವೆ ಅಭಿವೃದ್ಧಿಗೆ ಹೊಸ ಮೈಲಿಗಲ್ಲು: ಸಂಸದ ಬಿ.ವೈ. ರಾಘವೇಂದ್ರ

ರಾಜಕೀಯ ಲೆಕ್ಕಾಚಾರ ಬದಲಾವಣೆ;ಲೋಕಸಭೆ ಸ್ಥಾನ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ: ಆಗಸ್ಟ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ?

ನೀಟ್ ಅಕ್ರಮಕ್ಕೆ ಬಲಿಯಾಯ್ತು ಬಡ ರೈತನ ಡಾಕ್ಟರ್ ಆಗುವ ಕನಸು: ಕೇಂದ್ರ ಸರ್ಕಾರದ ಬೇಜವಾಬ್ದಾರಿಗೆ ಶಿಕಾರಿಪುರದ ಪ್ರತಿಭಾವಂತ ವಿದ್ಯಾರ್ಥಿ ಬಲಿ!

​ಮಾತೃ ಆರೋಗ್ಯ ರಕ್ಷಣೆಗೆ ಮೋದಿ ಸರ್ಕಾರದ ಹೆಜ್ಜೆ; ಕರ್ನಾಟಕದಲ್ಲಿ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಸಕಾಲಿಕ ವೈದ್ಯಕೀಯ ಆಸರೆ: ಬಿ.ವೈ.ರಾಘವೇಂದ್ರ

ರಾಜ್ಯದ 28ಕ್ಕೂ ಹೆಚ್ಚು ಜಿಲ್ಲೆಗಳು ತೀವ್ರ ಬರದ ಸಂಕಷ್ಟದಲ್ಲಿ; ರೈತರ ನೆರವಿಗೆ ತಕ್ಷಣ ₹10,000 ಕೋಟಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು: ಬಿ.ವೈ. ವಿಜಯೇಂದ್ರ ಆಗ್ರಹ

Leave a Comment