ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಶಿವಮೊಗ್ಗ ರೈಲ್ವೆ ಅಭಿವೃದ್ಧಿಗೆ ಹೊಸ ಮೈಲಿಗಲ್ಲು: ಸಂಸದ ಬಿ.ವೈ. ರಾಘವೇಂದ್ರ

On: August 5, 2026 8:18 PM
Follow Us:
76.01 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷಿ ಯೋಜನೆಗೆ ಇದುವರೆಗೆ 58.82 ಕೋಟಿ ರೂ. ಕಾಮಗಾರಿ ಪೂರ್ಣ
ಪ್ರಸಕ್ತ ಸಾಲಿಗೆ 9.50 ಕೋಟಿ ರೂ. ಅನುದಾನ ಬಿಡುಗಡೆ; ಶೀಘ್ರದಲ್ಲೇ ಶಿವಮೊಗ್ಗದಿಂದಲೇ ಎಕ್ಸ್‌ಪ್ರೆಸ್ ರೈಲುಗಳ ನಿರ್ವಹಣೆಗೆ ಅವಕಾಶ

ನವದೆಹಲಿ, ಆಗಸ್ಟ್ 5: ಮಲೆನಾಡಿನ ರೈಲ್ವೆ ಅಭಿವೃದ್ಧಿಗೆ ಹೊಸ ದಿಕ್ಕು ತೋರಲಿರುವ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಶಿವಮೊಗ್ಗವನ್ನು ಸ್ವತಂತ್ರ ರೈಲ್ವೆ ಕೇಂದ್ರವಾಗಿ ರೂಪಿಸುವ ಕನಸು ನನಸಾಗುವ ಹಂತಕ್ಕೆ ಬಂದಿದೆ. ಕೇಂದ್ರ ಸರ್ಕಾರದ 76.01 ಕೋಟಿ ರೂ. ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯು ವೇಗವಾಗಿ ಪೂರ್ಣಗೊಳ್ಳುತ್ತಿದ್ದು, ಇದುವರೆಗೆ 58.82 ಕೋಟಿ ರೂ. ಮೌಲ್ಯದ ಕಾಮಗಾರಿಗಳು ಪೂರ್ಣಗೊಂಡಿವೆ.

ಪ್ರಸಕ್ತ ಸಂಸತ್ ಅಧಿವೇಶನದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲಿಖಿತ ಉತ್ತರ ನೀಡಿದ್ದು, ಯೋಜನೆಯ ಪ್ರಗತಿ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಆರಂಭಗೊಂಡಿರುವ ಈ ಯೋಜನೆಗೆ ಮಾರ್ಚ್ 31, 2026ರವರೆಗೆ ಒಟ್ಟು 58.82 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಶೇ.77ಕ್ಕೂ ಹೆಚ್ಚು ಹಣಕಾಸು ಪ್ರಗತಿ ಸಾಧಿಸಲಾಗಿದೆ. ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವ ಉದ್ದೇಶದಿಂದ ಪ್ರಸಕ್ತ ಹಣಕಾಸು ವರ್ಷಕ್ಕೆ ಹೆಚ್ಚುವರಿಯಾಗಿ 9.50 ಕೋಟಿ ರೂ. ಅನುದಾನವನ್ನು ಕೇಂದ್ರ ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿದೆ.

ಕೋಟೆಗಂಗೂರು ರೈಲ್ವೆ ನಿಲ್ದಾಣ ಕಟ್ಟಡ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆ. ರೈಲು ಬೋಗಿಗಳ ದುರಸ್ತಿ ಮತ್ತು ನಿರ್ವಹಣೆಗೆ ಅಗತ್ಯವಾಗಿರುವ ‘ಸಿಕ್ ಲೈನ್ ಕವರ್ಡ್ ಶೆಡ್’ ನಿರ್ಮಾಣಕ್ಕಾಗಿ ಅಗತ್ಯ ಪಾಯದ ಕಾಮಗಾರಿಯೂ ಪೂರ್ಣಗೊಂಡಿದೆ.

ಇದರ ಜೊತೆಗೆ 24 ಬೋಗಿಗಳ ರೈಲುಗಳ ತಪಾಸಣೆ ಮತ್ತು ನಿರ್ವಹಣೆಗೆ ಅನುಕೂಲವಾಗುವಂತೆ ಎರಡು ಆಧುನಿಕ ಪಿಟ್ ಲೈನ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಜೊತೆಗೆ ಎರಡು ಸ್ಟೇಬ್ಲಿಂಗ್ ಲೈನ್‌ಗಳು, ಒಂದು ಲೂಪ್ ಲೈನ್ ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾರ್ಯವೂ ಶರವೇಗದಲ್ಲಿ ನಡೆಯುತ್ತಿದೆ.

ಯೋಜನೆಗೆ ಅಗತ್ಯವಿರುವ ಒಟ್ಟು 38 ಎಕರೆ ಭೂಮಿಯಲ್ಲಿ ಈಗಾಗಲೇ 31.3 ಎಕರೆ ಭೂಸ್ವಾಧೀನ ಪೂರ್ಣಗೊಂಡಿದೆ. ಶಂಟಿಂಗ್ ನೆಕ್ ನಿರ್ಮಾಣಕ್ಕೆ ಅಗತ್ಯವಿರುವ ಉಳಿದ 6.7 ಎಕರೆ ಭೂಮಿಯನ್ನು ರಾಜ್ಯ ಸರ್ಕಾರದ ಸಹಕಾರದೊಂದಿಗೆ ಶೀಘ್ರದಲ್ಲೇ ಸ್ವಾಧೀನಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.

ಕೋಟೆಗಂಗೂರು ಕೋಚಿಂಗ್ ಡಿಪೋ ಕಾರ್ಯಾರಂಭವಾದ ಬಳಿಕ ಶಿವಮೊಗ್ಗ ರೈಲ್ವೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಸಂಭವಿಸಲಿದೆ. ಇಲ್ಲಿಯೇ 24 ಬೋಗಿಗಳ ಎಕ್ಸ್‌ಪ್ರೆಸ್ ರೈಲುಗಳ ನಿರ್ವಹಣೆ, ತಪಾಸಣೆ ಮತ್ತು ದುರಸ್ತಿ ಕಾರ್ಯ ನಡೆಸಲು ಸಾಧ್ಯವಾಗಲಿದ್ದು, ಇದುವರೆಗೆ ಬೆಂಗಳೂರು, ಮೈಸೂರು ಮೊದಲಾದ ನಗರಗಳ ಮೇಲಿದ್ದ ಅವಲಂಬನೆ ಕಡಿಮೆಯಾಗಲಿದೆ.

ಇದರಿಂದ ಶಿವಮೊಗ್ಗದಿಂದಲೇ ಹೊಸ ಎಕ್ಸ್‌ಪ್ರೆಸ್ ರೈಲುಗಳು ಹಾಗೂ ವಂದೇ ಭಾರತ್ ರೈಲು ಸೇವೆಗಳನ್ನು ಆರಂಭಿಸಲು ಅನುಕೂಲವಾಗುವ ಸಾಧ್ಯತೆಗಳು ಹೆಚ್ಚಲಿವೆ. ಮಲೆನಾಡಿನ ಜನರ ಬಹುಕಾಲದ ಬೇಡಿಕೆಯಾಗಿದ್ದ ರೈಲ್ವೆ ಮೂಲಸೌಕರ್ಯಕ್ಕೆ ಈ ಯೋಜನೆ ಮಹತ್ವದ ಕೊಡುಗೆಯಾಗಲಿದೆ.

ಇದರ ನಡುವೆಯೇ ಶಿವಮೊಗ್ಗ ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ (SDCCI)ದ ಪ್ರಮುಖರ ನಿಯೋಗವು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿತು.

ಈ ಸಂದರ್ಭದಲ್ಲಿ ಬೈಂದೂರು ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ರೈಲ್ವೆ ಯೋಜನೆಗಳು, ಹೊಸ ಕಾಮಗಾರಿಗಳು ಹಾಗೂ ಬಾಕಿ ಉಳಿದಿರುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಪ್ರದೇಶದ ಕೈಗಾರಿಕಾ ಬೆಳವಣಿಗೆ, ವ್ಯಾಪಾರ ವಹಿವಾಟು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಈ ಯೋಜನೆಗಳು ಅತ್ಯಂತ ಅಗತ್ಯವಾಗಿದ್ದು, ಈಗಾಗಲೇ ಅನುಮೋದನೆ ಪಡೆದ ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ನಿಯೋಗವು ಒತ್ತಾಯಿಸಿತು.

ಯೋಜನೆ ಕುರಿತು ಪ್ರತಿಕ್ರಿಯಿಸಿದ ಸಂಸದ ಬಿ.ವೈ. ರಾಘವೇಂದ್ರ, “ಕೋಟೆಗಂಗೂರು ಕೋಚಿಂಗ್ ಡಿಪೋ ಮಲೆನಾಡಿನ ಜನರ ಹಲವು ದಶಕಗಳ ಕನಸಿನ ಯೋಜನೆಯಾಗಿದೆ. ಈ ಡಿಪೋ ನಿರ್ಮಾಣಗೊಂಡ ನಂತರ ಶಿವಮೊಗ್ಗ ಸ್ವತಂತ್ರ ರೈಲ್ವೆ ಹಬ್ ಆಗಿ ಬೆಳೆಯಲಿದೆ. 24 ಬೋಗಿಗಳ ರೈಲುಗಳ ನಿರ್ವಹಣೆ ಇಲ್ಲಿಯೇ ಸಾಧ್ಯವಾಗುವುದರಿಂದ ಹೊಸ ಎಕ್ಸ್‌ಪ್ರೆಸ್ ರೈಲುಗಳು ಹಾಗೂ ವಂದೇ ಭಾರತ್ ರೈಲು ಸೇವೆಗಳನ್ನು ಶಿವಮೊಗ್ಗದಿಂದಲೇ ಆರಂಭಿಸಲು ಅವಕಾಶ ದೊರೆಯಲಿದೆ. ಇದು ಮಲೆನಾಡಿನ ಸಾರಿಗೆ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಆರಂಭಿಸಲಿದೆ,” ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಸಹಕಾರದಿಂದ ಯೋಜನೆಗೆ ನಿರಂತರ ಅನುದಾನ ದೊರೆಯುತ್ತಿದ್ದು, ಶಿವಮೊಗ್ಗ ಕ್ಷೇತ್ರದ ಜನತೆಗೆ ನೀಡಿದ ಭರವಸೆಯಂತೆ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋವನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾರ್ಯಾರಂಭವಾದ ಬಳಿಕ ಶಿವಮೊಗ್ಗ ಜಿಲ್ಲೆಯ ರೈಲ್ವೆ ಸಂಪರ್ಕ, ಕೈಗಾರಿಕಾ ಅಭಿವೃದ್ಧಿ, ಉದ್ಯೋಗಾವಕಾಶಗಳು ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

K.M.Sathish Gowda

Join WhatsApp

Join Now

Facebook

Join Now

Read more

ಪ್ರಜಾಪ್ರಭುತ್ವದ ಶ್ರೇಷ್ಠತೆಗೆ ಸವಾಲೆಸೆದ ಶ್ರೀ ತರಳಬಾಳು ಜಗದ್ಗುರುಗಳು: ನಾಲ್ವಡಿಯವರ ‘ಜನಹಿತ’ದ ಮಾದರಿ ಇಂದೇಕೆ ಸಾಧ್ಯವಾಗುತ್ತಿಲ್ಲ!?ದಾವಣಗೆರೆಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಅನಾವರಣ: ವ್ಯವಸ್ಥೆಯ ಆತ್ಮಾವಲೋಕನಕ್ಕೆ ತರಳಬಾಳು ಶ್ರೀಗಳ ಕರೆ

ಮೂರು ಸಾವಿರ ಕಂಠಗಳು… ಒಂದೇ ನಾದ… ಬಸವಣ್ಣನವರ ವಚನಗಳಿಗೆ ದಾವಣಗೆರೆ ಸಾಕ್ಷಿ!: ‘ವಚನ ನಾದಲೋಕ’ದಲ್ಲಿ ಎಲ್ಲರೂ ಭಾಗವಹಿಸಿ ಎಂದು ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮನವಿ

‘ಗಲಾಟೆ ಗಣಪತಿ’ಗೆ ತೆರೆ: ಭಯದಿಂದ ಭಕ್ತಿಯ ಸಂಭ್ರಮದತ್ತ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ: ಎಸ್‌ಪಿ ನಿಖಿಲ್ ಬಿ. ಅವರ ಕಾರ್ಯತಂತ್ರದಲ್ಲಿ ತಂತ್ರಜ್ಞಾನಾಧಾರಿತ ಕಣ್ಗಾವಲು: ಶಾಂತಿಯುತ ಮೆರವಣಿಗೆಗೆ ಸಾರ್ವಜನಿಕರ ಮೆಚ್ಚುಗೆ

​ಶ್ರೀ ಜಗದ್ಗುರು ರೇಣುಕಾಚಾರ್ಯರು-ಶರಣರನ್ನು ಬೇರ್ಪಡಿಸುವ ಕುತಂತ್ರ ನಿಲ್ಲಲಿ!: ಒಳಗಿನ ಶತ್ರುಗಳಿಂದಲೇ ಧರ್ಮಕ್ಕೆ ಕಂಟಕ, ಸ್ವಾರ್ಥಿಗಳ ಕಪಟ ನಾಟಕ ಇನ್ಮುಂದೆ ನಡೆಯಲ್ಲ!: ಧರ್ಮದ್ರೋಹಿಗಳಿಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಖಡಕ್ ಎಚ್ಚರಿಕೆ!

ರೈತರೆ, ಸಾಲಕ್ಕೆ ಹೆದರಬೇಡಿ! ಆತ್ಮಹತ್ಯೆ ಮಾಡಿಕೊಳ್ಳಬೇಡಿ; ಎದೆತಟ್ಟಿ ‘ನಾನು ರೈತ’ ಎಂದು ಹೇಳಿ ಹೋರಾಡಿ: ಬರ ಪರಿಹಾರದ ಹೆಸರಿನಲ್ಲಿ ರೈತರನ್ನು ಕಾಯಿಸುವುದೇಕೆ? ಶಾಶ್ವತ ನೀರಾವರಿ ಕಲ್ಪಿಸಿ, ಸಾಲಮನ್ನಾ ಮಾಡಿ: ಸಿಎಂಗೆ ಎಚ್.ಆರ್. ಬಸವರಾಜಪ್ಪ ಒತ್ತಾಯ

​ಧರ್ಮ ಮತ್ತು ಕಾಯಕದ ಹಾದಿಯಲ್ಲಿ ‘ಶಿವನ ಕುಮಾರ’: ವೀರಶೈವ-ಲಿಂಗಾಯತ ವೇದಿಕೆಯಲ್ಲಿ ಸಿಎಂ ಡಿ.ಕೆ.ಶಿ ಭಾವನಾತ್ಮಕ ಧರ್ಮಸಂದೇಶ!: ‘ಜಾಗ ನನ್ನದು, ಕಟ್ಟಡ ನಿಮ್ಮದು’ – ಮಠಗಳಿಗೆ 2 ಎಕರೆ ಜಾಗ ನೀಡುವ ಭರವಸೆ

Leave a Comment