ಮೈಸೂರು: ಕರ್ನಾಟಕ ಕಾಂಗ್ರೆಸ್ಸಿನಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದ್ದು, ಬಿಹಾರ ವಿಧಾನಸಭಾ ಚುನಾವಣೆಯ ನಂತರ ನಾಯಕತ್ವ ಬದಲಾವಣೆ ವಿಚಾರ ವೇಗ ಪಡೆಯುವ ಸಾಧ್ಯತೆಯಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡೆಯನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಿಹಾರ ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುವುದು ಖಚಿತ,” ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಸಮೀಕ್ಷೆಯಲ್ಲಿ ವಿಶೇಷ ಚೇತನ ನೌಕರರನ್ನು ಬಳಸಿಕೊಳ್ಳುತ್ತಿರುವುದು ದುಃಖಕರ ಸಂಗತಿ ಎಂದು ಟೀಕಿಸಿದ ವಿಜಯೇಂದ್ರ, “ಇದು ಸರ್ಕಾರದ ಮಾನವೀಯತೆಯ ಕೊರತೆಯನ್ನು ತೋರಿಸುತ್ತದೆ. ನವೆಂಬರ್‌ನಲ್ಲಿ ಕ್ರಾಂತಿಯಂತಹ ಬೆಳವಣಿಗೆ ಸಂಭವಿಸಬಹುದು,” ಎಂದು ಹೇಳಿದ್ದಾರೆ.
ಕೆಪಿಸಿಸಿಯ ಉಸ್ತುವಾರಿಯಾದ ಕೆ.ಸಿ. ವೇಣುಗೋಪಾಲ್ ಅವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿರುವುದನ್ನು ಉಲ್ಲೇಖಿಸಿ, “ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟಪಡಿಸಿಲ್ಲ. ಈ ವಿಷಯ ಚರ್ಚಿಸಬಾರದು ಎಂದಷ್ಟೇ ಹೇಳಿದ್ದಾರೆ,” ಎಂದು ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ದಸರಾ ಕಾರ್ಯಕ್ರಮದ ಸಂದರ್ಭದಲ್ಲೂ ಸಿಎಂ ಸಿದ್ದರಾಮಯ್ಯ ತಮ್ಮ ಜನಪ್ರಿಯತೆಯನ್ನು ಪ್ರದರ್ಶಿಸುವ ಪ್ರಯತ್ನ ಮಾಡಿದ್ದಾರೆ. ಜನಸಮೂಹದ ಮಧ್ಯೆ ಸಕ್ರಿಯವಾಗಿ ಸಂಚರಿಸಿ, ತಮ್ಮ ನಾಯಕತ್ವದ ಪ್ರಾಬಲ್ಯವನ್ನು ತೋರಿಸಲು ಮುಂದಾಗಿದ್ದರು. ಈ ಕುರಿತು ವ್ಯಂಗ್ಯವಾಡಿದ ಬಿವೈ ವಿಜಯೇಂದ್ರ, “ದಸರಾ ವೇದಿಕೆಯೇ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನದ ವೇದಿಕೆಯಾಯಿತು. ಖರ್ಗೆ ಮತ್ತು ಡಿಕೆಶಿ ಅವರಿಗಿಂತ ಅವರು ತಮ್ಮ ಪ್ರಾಬಲ್ಯವನ್ನು ತೋರಿಸಲು ಯಶಸ್ವಿಯಾಗಿದ್ದಾರೆ. ಜನತೆ ಇದನ್ನೆಲ್ಲಾ ಗಮನಿಸುತ್ತಿದ್ದಾರೆ,” ಎಂದು ಹೇಳಿದರು.
“ಡಿಕೆಶಿ ನಡೆ ಸಿದ್ದರಾಮಯ್ಯ ಕಡೆ, ಸಿದ್ದರಾಮಯ್ಯ ನಡೆ ಡಿಕೆಶಿ ಕಡೆ ಇದೆ. ಆದರೆ ಶಾಸಕರು ಇಬ್ಬರ ಸಹವಾಸವೂ ಬೇಡ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ ಒಳಗೊಳಾಟ ಸದ್ಯದಲ್ಲೇ ಸ್ಪೋಟಿಸಲಿದೆ,” ಎಂದು ಅವರು ಭವಿಷ್ಯ ನುಡಿದರು.
ಇದೇ ವೇಳೆ ಕೊಪ್ಪಳದಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ, “ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಕೆಲವರು ಹೇಳುತ್ತಿರುವುದರಲ್ಲಿ ತಪ್ಪೇನಿಲ್ಲ. ಆದರೆ ಸದ್ಯ ಸಿಎಂ ಸ್ಥಾನ ಖಾಲಿಯಿಲ್ಲ. ಖರ್ಗೆ ಅವರಿಗೆ ಸಿಎಂ ಸ್ಥಾನ ನೀಡಿದರೆ ಸಂತೋಷ, ಆದರೆ ಅವರು ಪ್ರಧಾನಮಂತ್ರಿ ಆಗಬೇಕು” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, “ಕರ್ನಾಟಕ ಕಾಂಗ್ರೆಸ್ ಈಗ ಒಡೆದ ಮನೆ ಆಗಿದೆ” ಎಂದು ಬಿವೈ ವಿಜಯೇಂದ್ರ ಲೇವಡಿ ಮಾಡಿದ್ದಾರೆ.







