ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada Season 12) ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಪರಿಸರ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ (Jollywood Studio) ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಂಗಳವಾರ ಬೀಗ ಹಾಕಿದ್ದಾರೆ.
ಬಿಗ್ ಬಾಸ್ ಶೋ ನಡೆಯುತ್ತಿದ್ದ ಈ ಸ್ಟುಡಿಯೋ, ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಮೋರಿಗೆ ಹರಿಬಿಟ್ಟಿದ್ದರೆಂಬ ಆರೋಪದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಇದು ಜಲ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆ ಕಾಯ್ದೆ 1974ರ ಉಲ್ಲಂಘನೆಯಾಗಿದ್ದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸ್ಟುಡಿಯೋಗೆ ನೋಟಿಸ್ ನೀಡಿತ್ತು. ನೋಟಿಸ್‌ನ ನಂತರ ಒಂದು ವಾರ ಕಳೆದರೂ ನಿಯಮ ಪಾಲನೆ ಆಗದ ಕಾರಣ ಸ್ಟುಡಿಯೋ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಸ್ಪರ್ಧಿಗಳನ್ನು ರೆಸಾರ್ಟ್‌ಗೆ ಸ್ಥಳಾಂತರ
ಸ್ಟುಡಿಯೋ ಮುಚ್ಚಲ್ಪಟ್ಟ ಹಿನ್ನೆಲೆಯಲ್ಲಿ ಶೋನಲ್ಲಿದ್ದ 17 ಸ್ಪರ್ಧಿಗಳನ್ನು ಆಯೋಜಕರು ಬಿಡದಿಯ ಖಾಸಗಿ ಈಗಲ್ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಿದ್ದಾರೆ. ಅಲ್ಲಿಗೆ ಸುಮಾರು 12 ರೂಮ್‌ಗಳು ಬುಕ್ ಮಾಡಲಾಗಿದ್ದು, ಪೊಲೀಸ್ ಭದ್ರತೆಯಲ್ಲಿ ಸ್ಥಳಾಂತರ ಕಾರ್ಯ ಪೂರ್ಣಗೊಂಡಿದೆ.
ಕೋರ್ಟ್ ಮೊರೆ ಹೋಗಲಿರುವ ಆಯೋಜಕರು
ಬಿಗ್ ಬಾಸ್ ಆಯೋಜಕರು ಈ ಕ್ರಮವನ್ನು ಪ್ರಶ್ನಿಸಿ ನಾಳೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕೋರ್ಟ್ ತೀರ್ಪಿನ ಆಧಾರದ ಮೇಲೆ ಮುಂದಿನ ಕ್ರಮ ನಿರ್ಧಾರವಾಗಲಿದೆ. ಶೋ ಮತ್ತೆ ಯಾವಾಗ ಆರಂಭವಾಗುತ್ತದೆ ಎಂಬುದರ ಕುರಿತು ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಹಿಂದೆಯೂ ಸ್ಥಗಿತಗೊಂಡಿತ್ತು ಬಿಗ್ ಬಾಸ್ ಶೋ
ಇದಕ್ಕೂ ಮುಂಚೆ 2021ರಲ್ಲಿ ನಡೆದ ಸೀಸನ್ 8 ವೇಳೆ ಕೋವಿಡ್ ಮಹಾಮಾರಿಯ ಪರಿಣಾಮದಿಂದ ಶೋ ಮಧ್ಯದಲ್ಲಿ ನಿಲ್ಲಿಸಬೇಕಾಯಿತು. ಬಳಿಕ ಪರಿಸ್ಥಿತಿ ಸಹಜವಾದಾಗ ಒಂದೂವರೆ ತಿಂಗಳ ಬಳಿಕ ಪುನರಾರಂಭ ಮಾಡಲಾಗಿತ್ತು. ಇದೇ ರೀತಿಯಾಗಿ ಈ ಬಾರಿ ಕೂಡ ಕಾನೂನು ತೊಡಕು ನಿವಾರಣೆ ಬಳಿಕ ಶೋ ಮುಂದುವರಿಯುವ ಸಾಧ್ಯತೆ ಇದೆ.
ಪೊಲೀಸ್ ಹಾಗೂ ಅಧಿಕಾರಿಗಳ ಪ್ರತಿಕ್ರಿಯೆ
ಬೆಂಗಳೂರು ದಕ್ಷಿಣ ಎಸ್‌ಪಿ ಶ್ರೀನಿವಾಸಗೌಡ ಅವರು ಪ್ರತಿಕ್ರಿಯೆ ನೀಡುತ್ತಾ, “ಬಿಗ್ ಬಾಸ್ ಶೋ ನಡೆಸಲು ಸಂಬಂಧಪಟ್ಟ ಇಲಾಖೆಯಿಂದ NOC (ಅನುಮತಿ) ಪಡೆಯಬೇಕಿತ್ತು. ಒಳಾಂಗಣ ಗೇಮ್ ಶೋ ಮಾಡಿದರೂ ಪರವಾನಿಗೆ ಅಗತ್ಯವಿದೆ. ಅವಘಡವಾದರೆ ಕಾನೂನು ಕ್ರಮ ತಪ್ಪದು,”
ಎಂದು ಸ್ಪಷ್ಟಪಡಿಸಿದ್ದಾರೆ.
ಕನ್ನಡ ಪರ ಸಂಘಟನೆಗಳ ಪ್ರತಿಭಟನೆ
ಬಿಡದಿಯಲ್ಲಿ ಕನ್ನಡ ಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಶೋಗೆ ಕಾನೂನು ನಿಯಮ ಪಾಲನೆ ಮಾಡದೆ ಚಿತ್ರೀಕರಣ ನಡೆಸಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಬೆಳಕುಗಳ ಬದಲಿಗೆ ಕತ್ತಲು ಆವರಿಸಿದ್ದು, ಮುಂದಿನ ತೀರ್ಮಾನ ಕೋರ್ಟ್ ತೀರ್ಪಿನ ಮೇಲಿದೆ.
ಸ್ಪರ್ಧಿಗಳ ಪಟ್ಟಿ: ಕಾಕ್ರೋಜ್ ಸುಧಿ, ಮಲ್ಲಮ್ಮ, ಅಶ್ವಿನಿ ಗೌಡ, ಮಾಳು ನಿಪನಾಳ, ಗಿಲ್ಲಿ ನಟ, ಕಾವ್ಯ ಶೈವ, ಮಂಜು ಭಾಷಿಣಿ, ಅಭಿಷೇಕ್, ಸತೀಶ್, ಚಂದ್ರಪ್ರಭ, ರಕ್ಷಿತಾ ಶೆಟ್ಟಿ, ರಾಶಿಕಾ, ಧ್ರುವಂತ್ ಮುಂತಾದವರು ಇದ್ದಾರೆ.







