ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯನ್ನಾದ ‘ವಂದೇ ಮಾತರಂ’ ಗೀತೆಗೆ ನವೆಂಬರ್ 7ರಂದು 150 ವರ್ಷಗಳು ಪೂರೈಸಲಿದೆ. ಈ ಸಂದರ್ಭದಲ್ಲಿ ದೇಶಾದ್ಯಂತ ವೈಭವದಿಂದ ಸಂಭ್ರಮಾಚರಣೆ ನಡೆಯಲಿದೆ.
‘ವಂದೇ ಮಾತರಂ’ ಗೀತೆಯನ್ನು ಪ್ರಸಿದ್ಧ ಲೇಖಕ ಬಂಕಿಮ್ ಚಂದ್ರ ಚಟರ್ಜಿ ಅವರು 1875ರ ಸುಮಾರಿಗೆ ಸಂಸ್ಕೃತದಲ್ಲಿ ರಚಿಸಿದ್ದರು. ನಂತರ 1882ರಲ್ಲಿ ಅವರ ಪ್ರಸಿದ್ಧ ಕಾದಂಬರಿ ಆನಂದ ಮಠದಲ್ಲಿ ಈ ಗೀತೆಯನ್ನು ಪ್ರಕಟಿಸಲಾಯಿತು. ಧೈರ್ಯ, ಏಕತೆ ಹಾಗೂ ದೇಶಾಭಿಮಾನವನ್ನು ಪ್ರತಿಬಿಂಬಿಸುವ ಈ ಗೀತೆ ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯರಲ್ಲಿ ಸ್ವಾತಂತ್ರ್ಯದ ಚೈತನ್ಯ ಮೂಡಿಸಿತು.
ಬ್ರಿಟಿಷರು ತಮ್ಮ ರಾಷ್ಟ್ರಗೀತೆ ‘ಗಾಡ್ ಸೇವ್ ಅವರ್ ಕ್ವೀನ್’ ಅನ್ನು ಭಾರತದ ಜನರಿಗೂ ಬಲವಂತವಾಗಿ ಒಪ್ಪಿಸಲು ಪ್ರಯತ್ನಿಸುತ್ತಿದ್ದರೆ, ಅದಕ್ಕೆ ಪ್ರತಿಯಾಗಿ ‘ವಂದೇ ಮಾತರಂ’ ದೇಶದ ಸ್ವಾಭಿಮಾನ ಮತ್ತು ಆತ್ಮಗೌರವದ ಪ್ರತೀಕವಾಗಿ ಬೆಳೆಯಿತು.
1896ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಈ ಗೀತೆಯನ್ನು ಹಾಡಿದಾಗ, ಅದು ರಾಷ್ಟ್ರವ್ಯಾಪಿ ಖ್ಯಾತಿಯನ್ನೂ ಗೌರವವನ್ನೂ ಗಳಿಸಿತು. ನಂತರ ಕ್ರಾಂತಿಕಾರಿ ಅರಬಿಂದೋ ಘೋಷ್ ಅವರು ಈ ಗೀತೆಯನ್ನು ಇಂಗ್ಲಿಷ್ಗೆ ಅನುವಾದಿಸಿದರು.
1950ರಲ್ಲಿ ಭಾರತ ಸಂವಿಧಾನ ಸಭೆಯಲ್ಲಿ ‘ವಂದೇ ಮಾತರಂ’ ಅನ್ನು ರಾಷ್ಟ್ರಗೀತೆಯಾಗಿ ಅಳವಡಿಸಿಕೊಳ್ಳಲಾಯಿತು. ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಇದಕ್ಕೆ ಅಧಿಕೃತ ರಾಷ್ಟ್ರಗೀತೆಯ ಸ್ಥಾನಮಾನ ನೀಡಿದರು. ‘ವಂದೇ ಮಾತರಂ’ ಇಂದು ‘ಜನ ಗಣ ಮನ’ ರಾಷ್ಟ್ರಗೀತೆಗೆ ಸಮಾನ ಗೌರವವನ್ನು ಹೊಂದಿದೆ.
ಇದೀಗ ಕೇಂದ್ರ ಸರ್ಕಾರವು ನವೆಂಬರ್ 7ರಂದು ಗೀತೆಯ 150ನೇ ವಾರ್ಷಿಕೋತ್ಸವವನ್ನು ರಾಷ್ಟ್ರ ಮಟ್ಟದಲ್ಲಿ ಆಚರಿಸಲು ನಿರ್ಧರಿಸಿದೆ. ವಿವಿಧ ರಾಜ್ಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಾದ್ಯಗೋಷ್ಠಿಗಳು, ವಿದ್ಯಾರ್ಥಿ ಮೆರವಣಿಗೆಗಳು ಹಾಗೂ ಗಾಯನ ಸ್ಪರ್ಧೆಗಳು ನಡೆಯಲಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ ನಾಗರಿಕರನ್ನು ಈ ಸಂಭ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ. “ʼವಂದೇ ಮಾತರಂʼ ಕೇವಲ ಗೀತೆ ಅಲ್ಲ, ಅದು ಭಾರತದ ಆತ್ಮದ ಸಂಕೇತ,” ಎಂದು ಪ್ರಧಾನಿ ಹೇಳಿದ್ದಾರೆ.






