ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘಗಳು ಅಥವಾ ಸಂಸ್ಥೆಗಳು ಯಾವುದೇ ಕಾರ್ಯಕ್ರಮ, ಮೆರವಣಿಗೆ ಅಥವಾ ಪಥಸಂಚಲನ ನಡೆಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಈ ತೀರ್ಪು ನೀಡಿದ್ದು, “ಸಂವಿಧಾನ ನೀಡಿರುವ ಮೂಲಭೂತ ಹಕ್ಕನ್ನು ಸರ್ಕಾರದ ಒಂದು ಆದೇಶದ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆದೇಶವು ಮೇಲ್ನೋಟಕ್ಕೆ ಕಾನೂನು ಬಾಹಿರವಾಗಿದೆ” ಎಂದು ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಚಿತ್ತಾಪುರ ಸೇರಿದಂತೆ ರಾಜ್ಯದಾದ್ಯಂತ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಡೆಸಲು ಉದ್ದೇಶಿಸಿದ್ದ ಪಥಸಂಚಲನಗಳಿಗೆ ಉಂಟಾಗಿದ್ದ ತಡೆ ತೆರವಾಗಿದೆ.

ಪ್ರಕರಣದ ಹಿನ್ನೆಲೆ
2013ರ ಬಿಜೆಪಿ ಸರ್ಕಾರದ ಕಾಲದಲ್ಲೇ ಖಾಸಗಿ ಸಂಘಗಳು ಸರ್ಕಾರಿ ಸ್ಥಳ ಬಳಸಲು ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮವಿತ್ತು. ಇದೇ ನಿಯಮವನ್ನು ಆಧಾರವಿಟ್ಟು ಪ್ರಸ್ತುತ ಸರ್ಕಾರ ಹೊಸ ಆದೇಶ ಹೊರಡಿಸಿತ್ತು. ಈ ನಿರ್ಧಾರಕ್ಕೆ ಮುನ್ನ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿಗ್ರಹ ಹೇರುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದರು.
ನಂತರ, ಈ ಆದೇಶವನ್ನು ಮುಂದಿಟ್ಟುಕೊಂಡು ಚಿತ್ತಾಪುರದಲ್ಲಿ ನಡೆಯಬೇಕಿದ್ದ ಆರ್‌ಎಸ್‌ಎಸ್ ಪಥಸಂಚಲನವನ್ನು ನಿರ್ಬಂಧಿಸಲಾಯಿತು. ಇದಕ್ಕೆ ವಿರುದ್ಧವಾಗಿ ಹುಬ್ಬಳ್ಳಿಯ ಪುನಃಶ್ಚೇತನ ಸೇವಾ ಸಂಸ್ಥೆ (NGO) ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತು.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿ, “ಸರ್ಕಾರ 10 ಜನಕ್ಕಿಂತ ಹೆಚ್ಚು ಸೇರುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ. ಇದು ಸಂವಿಧಾನದ ಆರ್ಟಿಕಲ್ 19(1)(a) ಮತ್ತು 19(1)(b) (ಸ್ವಾತಂತ್ರ್ಯ ಮತ್ತು ಸಭೆ ಸೇರುವ ಹಕ್ಕು) ಉಲ್ಲಂಘನೆ. ಸರ್ಕಾರದ ಆದೇಶ ಕಾನೂನುಬಾಹಿರ” ಎಂದು ವಾದಿಸಿದರು.
ಹೈಕೋರ್ಟ್ ಈ ವಾದವನ್ನು ಅಂಗೀಕರಿಸಿ, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಸರ್ಕಾರದ ಪರ ವಕೀಲರು ವಾದ ಮಂಡಿಸಲು ಒಂದು ದಿನದ ಕಾಲಾವಕಾಶ ಕೇಳಿದ್ದಾರೆ.
ಸರ್ಕಾರದ ಆದೇಶದ ಅಂಶಗಳು
ಯಾವುದೇ ಖಾಸಗಿ ಸಂಘ, ಸಂಸ್ಥೆ ಅಥವಾ ಸಂಘಟನೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಕಡ್ಡಾಯ.
ಸರ್ಕಾರಿ/ನಿಗಮ/ಮಂಡಳಿ/ಶಾಲೆ-ಕಾಲೇಜುಗಳು, ಉದ್ಯಾನ, ಮೈದಾನ, ಸಾರ್ವಜನಿಕ ರಸ್ತೆ, ಕೆರೆ ಅಥವಾ ಇತರ ಸರ್ಕಾರಿ ಆಸ್ತಿಗಳನ್ನು ಬಳಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಅಗತ್ಯ.
10ಕ್ಕಿಂತ ಹೆಚ್ಚು ಜನರು ಒಂದೇ ಉದ್ದೇಶಕ್ಕಾಗಿ ಒಟ್ಟಾಗಿ ಸಾಗಿದರೆ ಅದನ್ನು ಮೆರವಣಿಗೆ ಅಥವಾ ರಾಲಿ ಎಂದು ಪರಿಗಣಿಸಲಾಗುವುದು.
ಇಂತಹ ಕಾರ್ಯಕ್ರಮಗಳ ಅನುಮತಿಗಾಗಿ ಮೂರು ದಿನ ಮುಂಚಿತವಾಗಿ ಲಿಖಿತ ಅರ್ಜಿ ಸಲ್ಲಿಸಬೇಕಾಗಿತ್ತು.
ಮುಂದೇನಾಗಬಹುದು?,.ರಾಜ್ಯ ಸರ್ಕಾರದ ಪರವಾಗಿ ವಾದ ಪೂರ್ಣಗೊಂಡ ನಂತರ ಹೈಕೋರ್ಟ್ ಅಂತಿಮ ತೀರ್ಪು ನೀಡಲಿದೆ. ಮಧ್ಯಂತರ ತಡೆ ಮುಂದುವರೆದಿರುವುದರಿಂದ ಆರ್‌ಎಸ್‌ಎಸ್ ಸೇರಿದಂತೆ ಇತರೆ ಸಂಘಟನೆಗಳ ಚಟುವಟಿಕೆಗಳಿಗೆ ತಾತ್ಕಾಲಿಕವಾಗಿ ಮುಕ್ತ ಅವಕಾಶ ದೊರೆತಿದೆ.






