ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಜಯ ಎನ್‌ಡಿಎ ಮೈತ್ರಿಕೂಟಕ್ಕೆ ದೇಶದ ಜನತೆ ನೀಡಿದ ಅಪಾರ ವಿಶ್ವಾಸದ ಪ್ರತಿಬಿಂಬವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ, ದೂರದರ್ಶಿ ನಾಯಕತ್ವಕ್ಕೆ ಬಿಹಾರದ ಜನತೆ ಮತ್ತೊಮ್ಮೆ ಭಾರೀ ಬಹುಮತದ ಆಶೀರ್ವಾದ ನೀಡಿರುವುದು ಪ್ರಜಾಪ್ರಭುತ್ವದ ವಿಜಯದ ಹಾರ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಜೆ.ಪಿ. ನಡ್ಡಾ ಅವರ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟ ನಡೆಸಿದ ಸಂಘಟಿತ ಹೋರಾಟ, ಕೇಂದ್ರ ಗೃಹ ಸಚಿವ ಅಮಿತ್ ಶಾ ರೂಪಿಸಿದ ನಿಖರ ಕಾರ್ಯತಂತ್ರ, ನಿತೀಶ್ ಕುಮಾರ್ ಅವರ ದಕ್ಷ ಆಡಳಿತ, ಎಲ್ಲ ಈ ಅಂಶಗಳಿಗೆ ಬಿಹಾರದ ಜನತೆ ಭರ್ಜರಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆ ಮೀರಿದ ಐತಿಹಾಸಿಕ ದಾಖಲೆಯ ಬಹುಮತ ನೀಡಿ ಮತ್ತೆ ಎನ್‌ಡಿಎ ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಮತ ಚೋರಿಯ ಅಪಪ್ರಚಾರ ನಡೆಸಿದ ಕಾಂಗ್ರೆಸ್‌ಗೆ ತಕ್ಕ ಶಿಕ್ಷೆ
ಚುನಾವಣೆ ಸಂದರ್ಭದಲ್ಲಿ ಮತಚೋರಿ ಹೆಸರಿನಲ್ಲಿ ಅಪಪ್ರಚಾರ ನಡೆಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಬಿಹಾರದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಅವರು ಟೀಕಿಸಿದರು.
ಬಿಹಾರದ ರಾಜಕೀಯ ಭೂಪಟದಲ್ಲಿ ಕಾಂಗ್ರೆಸ್ ಇದೀಗ ಅಸ್ತಿತ್ವಕ್ಕಾಗಿ ತಿಣುಕಾಡುವ ಪರಿಸ್ಥಿತಿಗೆ ತಳ್ಳಲ್ಪಟ್ಟಿದೆ ಎಂದು ಹೇಳಿದರು.
ಆರ್‌ಜೆಡಿ ಸೇರಿದಂತೆ ಮಹಾಘಟಬಂಧನ್ ಕೂಟದ ವಿರುದ್ಧ ಬಿಹಾರದ ಮತದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪಾಳೆಗಾರಿಕೆ ರಾಜಕೀಯಕ್ಕೆ ಅಂತ್ಯ ಸೂಚಿಸುವಂತಹ ತೀರ್ಪನ್ನು ನೀಡಿದ್ದಾರೆ ಎಂದರು.
ಅಲ್ಪಸಂಖ್ಯಾತ ಓಲೈಕೆ ರಾಜಕಾರಣಕ್ಕೆ ಜನರ ನಿರಾಕರಣೆ
“ಪ್ರಜಾಪ್ರಭುತ್ವದಲ್ಲಿ ಅಪಪ್ರಚಾರಕ್ಕೆ ಜಾಗವಿಲ್ಲ. ಅಲ್ಪಸಂಖ್ಯಾತರ ಹೆಸರಿನಲ್ಲಿ ನಡೆಯುವ ಓಲೈಕೆಯ ಮತಬ್ಯಾಂಕ್ ರಾಜಕಾರಣಕ್ಕೆ ಭವಿಷ್ಯವಿಲ್ಲ ಎಂಬುದನ್ನು ಬಿಹಾರದ ಜನತೆ ಸ್ಪಷ್ಟವಾಗಿ ತೋರಿಸಿದ್ದಾರೆ,” ಎಂದು ವಿಜಯೇಂದ್ರ ಹೇಳಿದರು.
ವಿರೋಧ ಪಕ್ಷಗಳಿಗೆ ಕಠಿಣ ಸಂದೇಶ
ಬಿಹಾರದ ಚುನಾವಣೆ ಫಲಿತಾಂಶ ದೇಶದ ವಿರೋಧ ಪಕ್ಷಗಳಿಗೆ ಗಂಭೀರ ಎಚ್ಚರಿಕೆ.
“ವಿರೋಧ ಪಕ್ಷವಾಗಿ ಜವಾಬ್ದಾರಿಯಿಂದ ವರ್ತಿಸದಿದ್ದರೆ ನಿಮ್ಮನ್ನು ವಿರೋಧ ಪಕ್ಷದ ಸ್ಥಾನದಲ್ಲೂ ಉಳಿಸಲಾಗುವುದಿಲ್ಲ ಎಂಬ ಸಂದೇಶ ಬಿಹಾರದ ಮತದಾರರು ನೀಡಿದ್ದಾರೆ,” ಎಂದು ಅವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್‌ನ ಸರಣಿ ಸೋಲುಗಳ ಮೇಲೆ ಕಿಡಿ
ರಾಹುಲ್ ಗಾಂಧಿ ಮುನ್ನಡೆಸಿದ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ಸರಣಿ ಪತನ ಈಗ ಗಂಭೀರ ರೂಪ ಪಡೆದಿದೆ. ಕಾಂಗ್ರೆಸ್ ಹಡಗು ಸಮುದ್ರದ ಮಧ್ಯೆ ಮುಳುಗುವ ಸ್ಥಿತಿಯಲ್ಲಿದೆ.
ಕರ್ನಾಟಕ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಬಲಹೀನವಾಗಿದೆ ಎಂದು ವಿಜಯೇಂದ್ರ ಟೀಕಿಸಿದರು.
ಕರ್ನಾಟಕ ಕಾಂಗ್ರೆಸ್‌ಗೆ ಸಲಹೆ
“ಕರ್ನಾಟಕ ಸರ್ಕಾರ ಇನ್ನೂ ಜನಪರ ಕೆಲಸಗಳನ್ನು ಬದಿಗಿಟ್ಟು, ರಾಷ್ಟ್ರಭಕ್ತ ಸಂಘಟನೆಗಳ ಬಗ್ಗೆ ಅವಿವೇಕದ ಹೇಳಿಕೆಗಳನ್ನು ನೀಡುವುದರಲ್ಲಿ ತಲ್ಲೀನವಾಗಿದೆ. ಬಿಹಾರದ ಫಲಿತಾಂಶವಾದರೂ ರಾಜ್ಯದ ಕಾಂಗ್ರೆಸ್ಸಿಗರಿಗೆ ಕಣ್ಣ ತೆರೆಸಲಿ. ಉಳಿದಿರುವ ಅವಧಿಯನ್ನಾದರೂ ಜನಪರ ಕೆಲಸಗಳಿಗೆ ಮೀಸಲಿಟ್ಟು ಜನರ ವಿಶ್ವಾಸಕ್ಕೆ ತಕ್ಕ ಪ್ರತಿಫಲ ನೀಡಲಿ,” ಎಂದು ಸಲಹೆ ನೀಡಿದರು.






