ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಕೋಟಿ ಕೋಟಿ ರೂಪಾಯಿ ಹಣ ದರೋಡೆಯಾಗಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಎಟಿಎಂಗೆ ಹಣ ತುಂಬುವ ಸಿಎಂಎಸ್ ಕಂಪನಿಯ ವಾಹನವನ್ನು ಗುರಿ ಮಾಡಿಕೊಂಡು ದರೋಡೆಕೋರರು ಬೃಹತ್ ದರೋಡೆ ನಡೆಸಿದ್ದಾರೆ. ಮಧ್ಯಾಹ್ನದ ವೇಳೆ ನಡೆದ ಈ ಘಟನೆ ನಗರದಲ್ಲಿ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಜೆ.ಪಿ. ನಗರದಲ್ಲಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಹಣ ವಿತರಣೆಗಾಗಿ ಹೊರಟಿದ್ದ ಸಿಎಂಎಸ್ ಕಂಪನಿಯ ವಾಹನ ಜಯನಗರ ಅಶೋಕ ಪಿಲ್ಲರ್ ಬಳಿ ತಲುಪುತ್ತಿದ್ದಾಗ, ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರು ವಾಹನವನ್ನು ಅಡ್ಡಗಟ್ಟಿದ್ದಾರೆ. ಅಧಿಕಾರಿಗಳ ವೇಷ ತಳೆದುಕೊಂಡಿದ್ದ ದರೋಡೆಕೋರರು “ಸೆಂಟ್ರಲ್ ಟ್ಯಾಕ್ಸ್ ಅಧಿಕಾರಿಗಳು, ಹಣದ ಡಾಕ್ಯುಮೆಂಟ್ ಪರಿಶೀಲನೆ ಮಾಡಬೇಕು” ಎಂದು ಹೇಳಿ ಸಿಬ್ಬಂದಿಯನ್ನು ನಂಬಿಸಿದ್ದಾರೆ. ಬಳಿಕ ಸಿಬ್ಬಂದಿಯನ್ನು ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಡೈರಿ ಸರ್ಕಲ್ ಕಡೆಗೆ ಕರೆದೊಯ್ದಿದ್ದಾರೆ.
ಡೈರಿ ಸರ್ಕಲ್ ಬಳಿ ತಲುಪಿದ ನಂತರ, ಸಿಎಂಎಸ್ ಸಿಬ್ಬಂದಿಯನ್ನು ಕಾರಿನಿಂದ ಇಳಿಸಿ, ಕಾರಿನಲ್ಲಿದ್ದ ಮುಟ್ಟನೇ 7 ಕೋಟಿ ರೂಪಾಯಿ ಹಣವನ್ನು ಹೊತ್ತೊಯ್ದು ಪರಾರಿಯಾಗಿದ್ದಾರೆ. ಸಂಪೂರ್ಣವಾಗಿ ಯೋಜಿತ ರೀತಿಯಲ್ಲಿ ನಡೆದ ಈ ದರೋಡೆಗೆ ಕೆಲವೇ ನಿಮಿಷಗಳೇ ಸಾಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಬೆಂಗಳೂರು ನಗರದಲ್ಲಿ ಪ್ರವೇಶ–ನಿಷ್ಕ್ರಮಣ ರಸ್ತೆಗಳ ಮೇಲೆ ಪೊಲೀಸರು ನಾಕಾಬಂಧಿ ಹೇರಿದ್ದು, ಸಂಶಯಾಸ್ಪದ ವಾಹನಗಳ ತಪಾಸಣೆ ಶುರು ಮಾಡಿದ್ದಾರೆ. ಜೊತೆಗೆ ಡೈರಿ ಸರ್ಕಲ್‌ರಿಂದ ಹೊಸೂರು ರಸ್ತೆ ಮತ್ತು ಕೋಲಾರ ಕಡೆಗೆ ಸಾಗುವ ಪ್ರಮುಖ ಮಾರ್ಗಗಳ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ವೇಗಗೊಂಡಿದೆ. ದಕ್ಷಿಣ ವಿಭಾಗದ ಪೊಲೀಸರು ದರೋಡೆಕೋರರಿಗಾಗಿ ಬಲೆ ಬೀಸಿ ವಿಶೇಷ ತಂಡ ರಚಿಸಿದ್ದಾರೆ.
ಈ ದರೋಡೆ ಕುರಿತು ಸಿಎಂಎಸ್ ವಾಹನದ ಚಾಲಕ, ಗನ್‌ಮ್ಯಾನ್ ಹಾಗೂ ಉಳಿದ ಸಿಬ್ಬಂದಿಗಳ ಮೇಲೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಳಸಂಚಿನ ಸಾಧ್ಯತೆಯನ್ನೂ ತಳ್ಳಿ ಹಾಕಲಾಗದೇ, ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ನಗರದಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ಹೊಸ ಚರ್ಚೆ ಆರಂಭಿಸಿದ ಈ ಘಟನೆ, ಆರ್ಥಿಕ ಸಂಸ್ಥೆಗಳ ಭದ್ರತಾ ಕ್ರಮಗಳ ಮೇಲೂ ದೊಡ್ಡ ಪ್ರಶ್ನೆ ಎಬ್ಬಿಸಿದೆ.






