ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ನೀಡಿದ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. “ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು, ಶಾಶ್ವತವಾಗಿ ಯಾರೂ ಇರಲಾಗುವುದಿಲ್ಲ” ಎಂಬ ಅವರ ಹೇಳಿಕೆಯಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ ಎನ್ನುವ ಮಾತುಗಳು ಗಾಳಿಯಲ್ಲಿ ಹರಿದಾಡುತ್ತಿವೆ.
ಕೆಪಿಸಿಸಿ ಅಧ್ಯಕ್ಷನಾಗಿ ಐದೂವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಡಿಕೆಶಿ, ಈಗ ಪದವಿಯಿಂದ ಹಿಂದೆ ಸರಿಯುವ ಸೂಚನೆ ನೀಡಿದ್ದಾರೆ. “ಡಿಸಿಎಂ ಆದ ತಕ್ಷಣವೇ ಅಧ್ಯಕ್ಷ ಸ್ಥಾನ ಬಿಡಬೇಕೆಂದು ನಿರ್ಧರಿಸಿದ್ದೆ. ಆದರೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಮುಂದುವರೆಯಲು ಸೂಚಿಸಿದರು. ಆದರೂ ಶಾಶ್ವತವಾಗಿ ಮುಂದುವರಿಯಲು ಆಗಲ್ಲ, ಹೊಸವರಿಗೆ ಅವಕಾಶ ನೀಡಬೇಕು” ಎಂದು ಅವರು ಸ್ಪಷ್ಟಪಡಿಸಿದರು.

ಇದರಿಂದಾಗಿ ಕಾಂಗ್ರೆಸ್ ಒಳವಲಯದಲ್ಲಿ, ಸದ್ಯ ಸಿಎಂ ಹುದ್ದೆ ಗುರಿಯನ್ನಿಟ್ಟುಕೊಂಡಿರುವ ಡಿಕೆಶಿ, ಅಧ್ಯಕ್ಷ ಸ್ಥಾನವನ್ನು ಶೀಘ್ರದಲ್ಲೇ ಬೇರೆಯವರಿಗೆ ಹಸ್ತಾಂತರಿಸಬಹುದು ಎಂಬ ಊಹಾಪೋಹಗಳು ಮತ್ತೆ ಜೋರಾಗಿವೆ.
ಡಿಕೆಶಿ ತಮ್ಮ ರಾಜಕೀಯ ಗುರಿಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ, “ನಾನು ಎಲ್ಲಿರುತ್ತೇನೋ, ಇರಲ್ವೋ ಅದು ಮುಖ್ಯವಲ್ಲ. 2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು — ಅದೇ ನಮ್ಮ ಉದ್ದೇಶ. ಪವರ್ ಮುಖ್ಯವಲ್ಲ, ಶ್ರಮಕ್ಕೆ ಫಲ ಸಿಗುತ್ತದೆ” ಎಂದು ಹೇಳಿದ್ದಾರೆ. ತಮ್ಮ ಮಾತಿನ ಮೂಲಕ ಅವರು ಪಕ್ಷದ ಭವಿಷ್ಯ, ಮುಂದಿನ ಚುನಾವಣೆ ಮತ್ತು ನಾಯಕತ್ವ ಬದಲಾವಣೆಯ ನಡುವಿನ ಸಮತೋಲನ ಸಾಧಿಸಿರುವುದು ಗಮನಾರ್ಹ.
ಪಕ್ಷದ ಕಚೇರಿ ನಿರ್ಮಾಣ ವಿಷಯದಲ್ಲೂ ಡಿಕೆಶಿ ಕಠಿಣ ಸಂದೇಶ ನೀಡಿದ್ದಾರೆ. “ಯಾವ ಕ್ಷೇತ್ರದಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಡವಿಲ್ಲವೋ, ಅಂಥ ಪ್ರದೇಶದ ನಾಯಕರಿಗೆ ಟಿಕೆಟ್ ಸಿಗುವುದು ಅನುಮಾನ. ಪಕ್ಷದ ಕಚೇರಿ ಎಂದರೆ ದೇವಾಲಯದಂತೆ. ಅದನ್ನು ಮರೆತವರ ಪಟ್ಟಿ ಹೈಕಮಾಂಡ್‌ಗೆ ನೀಡುತ್ತೇನೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ದೆಹಲಿಯ ನಿರ್ಧಾರವನ್ನೇ ತಮ್ಮ ಉತ್ತರವೆಂದು ಹೇಳಿರುವ ಡಿಕೆಶಿ, ಕಾಂಗ್ರೆಸ್‌ನೊಳಗಿನ ಅಸಮಾಧಾನಕ್ಕೆ ನೇರವಾಗಿ ತಾಕದೆ, ಆದರೆ ಸ್ಪಷ್ಟ ಸಂದೇಶ ಕಳುಹಿಸುವ ರೀತಿಯಲ್ಲಿ ಮಾತನಾಡಿದ್ದಾರೆ.
ಡಿಕೆಶಿಯ ಹೇಳಿಕೆಗಳಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಚರ್ಚೆ ಗರಿಗೆದರಿದ್ದು, ಮುಂದಿನ ದಿನಗಳಲ್ಲಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.






