ಶಿವಮೊಗ್ಗ: “ಮಹಿಳೆ ಸಮಾಜದ ಶಕ್ತಿ ಮತ್ತು ಸಮತೋಲನದ ಪ್ರತೀಕ. ಅವರಿಗೆ ಸಲ್ಲುವ ಗೌರವವೇ ಭಾರತೀಯ ಸಂಸ್ಕೃತಿಯ ಮೂಲಭೂತ ಮೌಲ್ಯ,” ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದ ಆದಿಚುಂಚನಗಿರಿ ಭವನದಲ್ಲಿ ಶಾಶ್ವತಿ ಮಹಿಳಾ ವೇದಿಕೆ ಆಯೋಜಿಸಿದ್ದ ಗರ್ಭಿಣಿಯರ ಸೀಮಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಿದ ಬಳಿಕ ತಮ್ಮ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಕುಟುಂಬದ ಬಲವಾದ ಆಧಾರ ತಾಯಿ ಎಂಬುದನ್ನು ಉಲ್ಲೇಖಿಸಿದರು. ಮುಂದಿನ ಪೀಳಿಗೆಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹಿಳೆಯರು ವಹಿಸುವ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಮಹಿಳೆಯರ ಸಾಮರ್ಥ್ಯಕ್ಕೆ ಪ್ರೋತ್ಸಾಹ ನೀಡುವುದು ಮತ್ತು ಅವರಿಗೆ ಅಗತ್ಯ ಅವಕಾಶಗಳನ್ನು ಒದಗಿಸುವುದು ಸಮಾಜದ ಅಭಿವೃದ್ಧಿಗೆ ಅವಿಭಾಜ್ಯ ಎಂದು ಅವರು ಅಭಿಪ್ರಾಯಪಟ್ಟರು.

“ಮಹಿಳೆ ನಮ್ಮ ಸಮಾಜದ ಶಕ್ತಿ. ಸ್ತ್ರೀಸಾಮರ್ಥ್ಯವೇ ಭಾರತೀಯ ನಾಗರಿಕತೆಯ ಮೂಲ. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ನಮ್ಮ ಸರ್ಕಾರ ಭಾಗ್ಯಲಕ್ಷ್ಮಿ ಸೇರಿದಂತೆ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಬೆಟ್ಟಿ ಬಚಾವೋ, ಬೆಟ್ಟಿ ಪಡಾವೋ’ ಯೋಜನೆಯ ಮೂಲಕ ದೇಶದಾದ್ಯಂತ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣಕ್ಕೆ ಹೊಸ ದಿಕ್ಕು ನೀಡುತ್ತಿದ್ದಾರೆ. ಈ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಶಾಶ್ವತಿ ಮಹಿಳಾ ವೇದಿಕೆಯ ಕೆಲಸ ಶ್ಲಾಘನೀಯ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ, “ನಮ್ಮ ರಾಜ್ಯ ಮತ್ತು ಜಿಲ್ಲೆಯನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಿದ ಬಿಎಸ್‌ವೈ ಅವರಿಗೆ ಸನ್ಮಾನ ಆಯೋಜಿಸಿರುವುದು ಹೆಮ್ಮೆಯ ವಿಷಯ. ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದ ಮೂಲಕ ಶಕ್ತಿ ಮತ್ತು ಆಶೀರ್ವಾದ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ. ಹೆಣ್ಣು ಮಂಗಳದ ಸಂಕೇತ, ತಾಯಿ ಎಲ್ಲರನ್ನು ಸಮಾನವಾಗಿ ಒಗ್ಗೂಡಿಸುವ ಶಕ್ತಿ. ಇಂದಿನ ಹೆಣ್ಣು ನಾನು ಕೂಡ ಸಬಲೀ ಎಂದು ಎಲ್ಲ ಕ್ಷೇತ್ರಗಳಲ್ಲೂ ಕೀರ್ತಿ ಗಳಿಸುತ್ತಿದ್ದಾರೆ. ಕ್ರಿಕೆಟ್ ವಿಶ್ವಕಪ್ ಗೆಲ್ಲುವ ಮಟ್ಟಿಗೆ ಮಹಿಳೆಯರು ಮಿಂಚಿರುವುದು ಅದಕ್ಕೆ ಉದಾಹರಣೆ,” ಎಂದರು. ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುವ ಮಹತ್ವವನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. “ತಾಯಂದಿರು ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ರೂಪಿಸಬೇಕು,” ಎಂಬುದಾಗಿ ಸಲಹೆ ನೀಡಿದರು.

ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ ಆಶೀರ್ವಚನ ಕಾರ್ಯಕ್ರಮಕ್ಕೆ ಧಾರ್ಮಿಕ ಸೊಬಗು ತುಂಬಿತು. ಮಹಿಳಾ ವೇದಿಕೆಯವರು 60ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಡಾ. ಶಾಂತಾ ಸುರೇಂದ್ರ ವಹಿಸಿದ್ದರು. ಪ್ರಮುಖ ಅತಿಥಿಗಳಾಗಿ ಹೆಚ್.ಎಸ್. ಸುಂದರೇಶ್, ಬಳ್ಳೇಕೆರೆ ಸಂತೋಷ್, ಎಸ್.ಎಸ್. ಜ್ಯೋತಿಪ್ರಕಾಶ್, ರಘುರಾಜ್, ನಾದನಮಯಾನಂದನಾಥ ಸ್ವಾಮೀಜಿ, ರಾಜು ತಲ್ಲೂರು, ಶೋಭಾ ವೆಂಕಟರಮಣ, ಜಿ. ರಮೇಶ್ ಗೌಡ, ವಿನೋದಾ ಕುಮಾರ್, ಮೋಹನ್ ರೆಡ್ಡಿ ಮತ್ತು ಚೇತನ್ ಕೃಷ್ಣಮೂರ್ತಿ ಉಪಸ್ಥಿತರಿದ್ದರು.





