ಮಂಗಳೂರು/ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಕುತೂಹಲ ಹೆಚ್ಚಿಸಿರುವ ಬೆಳವಣಿಗೆಗಳು ಬುಧವಾರ ಮಂಗಳೂರಿನಲ್ಲಿ ಮತ್ತು ದೆಹಲಿಯಲ್ಲಿ ಅಲೆ ಎಬ್ಬಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ನಗುನಗುತ್ತಾ ಮಾತುಕತೆ ನಡೆಸಿದ್ದು, ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿಢೀರ್ ದೆಹಲಿಗೆ ತೆರಳುತ್ತಿರುವುದು ಹೊಸ ಊಹಾಪೋಹಗಳಿಗೆ ಕಾರಣವಾಗಿದೆ.

ನವೆಂಬರ್ 20ರಿಂದ ಸಿಎಂ ಕುರ್ಚಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಆರಂಭವಾದ ಗೊಂದಲದ ಬಳಿಕ ಇದೇ ಮೊದಲ ಬಾರಿ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡಿದರು. ಕಾವೇರಿ ಅತಿಥಿ ಗೃಹದಲ್ಲಿ ಅವರು ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ರಾಜ್ಯ ನಾಯಕತ್ವ, ಡಿಕೆಶಿ ಬೆಂಬಲಿಗರ ಚಟುವಟಿಕೆ ಹಾಗೂ ಬ್ರೇಕ್ ಫಾಸ್ಟ್ ಮೀಟಿಂಗ್ ನಂತರದ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ ಸಾಧ್ಯತೆ ಇದೆ. ಇಬ್ಬರು ನಾಯಕರು ನಗುನಗುತ್ತಾ ಮಾತನಾಡುತ್ತಿರುವ ದೃಶ್ಯಗಳು ವೈರಲ್ ಆಗಿದ್ದು, ಸಿಎಂ ಸಂಪೂರ್ಣ ಆರಾಮದ ಮನೋಭಾವದಲ್ಲಿರುವುದು ಸ್ಪಷ್ಟವಾಗಿತ್ತು.

ಈ ನಡುವೆ ಕೆ.ಸಿ. ವೇಣುಗೋಪಾಲ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ವಿಮಾನ ನಿಲ್ದಾಣದ ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರು “ಡಿ.ಕೆ… ಡಿ.ಕೆ…” ಎಂದು ಭಾರೀ ಘೋಷಣೆ ಕೂಗಿದರು. ಡಿಕೆ ಆಪ್ತ ಮಿಥುನ್ ರೈ ಹಾಗೂ ಅವರ ಬೆಂಬಲಿಗರ ನೇತೃತ್ವದಲ್ಲಿ ನಡೆದ ಈ ಬಣಬಲ ಪ್ರದರ್ಶನದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿ ಆಗಿ ನೇಮಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. ದೊಡ್ಡ ಸಂಖ್ಯೆಯಲ್ಲಿ ಅಚಾನಕ್ ಸೇರಿದ್ದ ಕಾರ್ಯಕರ್ತರ ನೂಕಾಟ–ತಳ್ಳಾಟದಿಂದ ವಿಮಾನ ನಿಲ್ದಾಣದಲ್ಲಿ ಕೆಲವು ಕ್ಷಣ ಗದ್ದಲ ಉಂಟಾಗಿದ್ದು, ವೇಣುಗೋಪಾಲ್ ತಮ್ಮ ವಾಹನದವರೆಗೆ ತಲುಪಲು ಹರಸಾಹಸ ಪಡಬೇಕಾಯಿತು.
ಈ ಸಂದರ್ಭದಲ್ಲಿ ವೇಣುಗೋಪಾಲ್ ಯಾವುದೇ ರಾಜಕೀಯ ಪ್ರತಿಕ್ರಿಯೆ ನೀಡದೇ “ಕೊಣಾಜೆಯಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾಗ್ತೀನಿ” ಎಂದು ಮಾತ್ರ ಹೇಳಿ ರಾಜಕೀಯ ಪ್ರಶ್ನೆಗಳನ್ನು ಸೌಮ್ಯವಾಗಿ ಬದಿಗೊತ್ತಿದರು. ಇದರಿಂದ ಮಂಗಳೂರಿನಲ್ಲಿ ನಡೆದ ಘೋಷಣೆಗಳು ಹೈಕಮಾಂಡ್‌ಗೆ ಸಂದೇಶ ರವಾನಿಸಲು ಯೋಜಿತವಾಗಿತ್ತೇ ಎಂಬ ಚರ್ಚೆ ಮತ್ತಷ್ಟು ಬಲ ಪಡೆದುಕೊಂಡಿದೆ.
ಇನ್ನು ಮಂಗಳೂರಿನ ಉಳ್ಳಾಲದಲ್ಲಿ ಗುರು–ಗಾಂಧಿ ಸಂವಾದ ಶತಮಾನೋತ್ಸವ ಸಮಾವೇಶ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ಇಬ್ಬರೂ ಆಗಮಿಸಿದ್ದಾರೆ. ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಅಂಚಿನಲ್ಲಿ ನಡೆದ ಸಿಟ್ಟು–ಕೆಸಿವಿ ಮಾತುಕತೆ ರಾಜಕೀಯ ಮಹತ್ವ ಹೊಂದಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಧ್ಯಾಹ್ನ ದೆಹಲಿಗೆ ತೆರಳುವ ಮಾಹಿತಿ ಲಭ್ಯವಾಗಿದೆ. ಅವರು ಖಾಸಗಿ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದಾರೆ ಎನ್ನಲಾಗುತ್ತಿದ್ದರೂ, ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಗಳೂ ಹೆಚ್ಚು ಎಂಬ ಪ್ರಶ್ನೆಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ‘ನಾಯಕತ್ವ’ ಕುರಿತ ಚಟುವಟಿಕೆಗಳ ನಡುವೆ ಡಿಕೆಶಿಯ ದೆಹಲಿ ಪ್ರವಾಸ ಮತ್ತಷ್ಟು ಕುತೂಹಲ ಕೆರಳಿಸಿದೆ.
ಒಟ್ಟಿನಲ್ಲಿ, ಮಂಗಳೂರಿನ ಸಿದ್ಧರಾಮಯ್ಯ–ವೇಣುಗೋಪಾಲ್ ನಗುಭರಿತ ಮಾತುಕತೆ, ಡಿಕೆ ಪರ ಘೋಷಣೆ ಹಾಗೂ ಡಿಕೆಶಿಯ ದೆಹಲಿ ಪ್ರವಾಸ—ಈ ಮೂರೂ ಬೆಳವಣಿಗೆಗಳು ರಾಜ್ಯ ರಾಜಕೀಯಕ್ಕೆ ಮತ್ತೆ ಹೊಸ ಬಣ್ಣ ತುಂಬಿವೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ನಲ್ಲಿ ಇನ್ನೂ ಹಲವು ತಿರುವುಗಳು ಕಾಣಿಸುವ ಲಕ್ಷಣಗಳು ಸ್ಪಷ್ಟವಾಗಿವೆ.





